ಚೈತ್ರ ಶುದ್ಧ ಪಾಡ್ಯದ ಸೂರ್ಯೋದಯ ಸಮಯಕ್ಕೆ ಬ್ರಹ್ಮ ವಿಶ್ವವನ್ನು ಸೃಷ್ಟಿಸಿದನೆಂದೂ, ಸತ್ಯ ಯುಗ ಅಂದೇ ಆರಂಭವಾಯಿತೆಂದೂ, ರಾವಣನನ್ನು ಸಂಹರಿಸಿ ವಿಜಯಿಯಾಗಿ ಹಿಂದಿರುಗಿದ ಶ್ರೀರಾಮನ ಪಟ್ಟಾಭಿಷೇಕ ಇದೇ ದಿನ ಆಯಿತೆಂದೂ ಪ್ರತೀತಿಯಿದೆ. ಹಾಗೆಯೇ ಸೂರ್ಯನ ಮೊದಲ ಕಿರಣ ಭುವಿಯನ್ನು ಸ್ಪರ್ಶಿಸಿದ ದಿನವೆಂತಲೂ ನಂಬಲಾಗುತ್ತದೆ. ಹೀಗಾಗಿ ಇದು ಯುಗಾದಿ.

ಚಿಗುರಿದ ಗಿಡ, ಮರ, ಲತೆಗಳು, ಹಚ್ಚ ಹಸಿರು ಸೀರೆಯುಟ್ಟು ಮದುವಣಗಿತ್ತಿಯಂತೆ ಕಂಗೊಳಿಸುವ ಪ್ರಕೃತಿ, ತೂಗಾಡುವ ಬಣ್ಣ ಬಣ್ಣದ ಹೂಗಳಿಂದ ತುಂಬಿ ತುಳುಕುವ ಉದ್ಯಾನ, ತೋಟಗಳು, ಸುಗಂಧಭರಿತ ಆಹ್ಲಾದಕರ ಗಾಳಿ, ಕಂಪು ಬೀರುವ ಹೂವಿನ ಮಕರಂದಕ್ಕೆ ಮುತ್ತಿಡೋ ದುಂಬಿಗಳು, ಚಿಟ್ಟೆಗಳ ನರ್ತನ, ಹೂದೋಟದ ತುಂಬ ಕಲರವದಲ್ಲಿ ತಲ್ಲೀನವಾಗಿರುವ ಅದೆಲ್ಲಿಂದಲೋ ವಲಸೆ ಬಂದ ಬಣ್ಣ ಬಣ್ಣದ ಹಕ್ಕಿಗಳು... ಇವೆಲ್ಲವುಗಳ ಜೊತೆ ಮೈಮನದಲ್ಲಿ ನವೋಲ್ಲಾಸ, ನವ ಚೈತನ್ಯದ ಸಂಚಲನ ಮೂಡಿಸಿ ಕಚಗುಳಿಯ ಅನುಭವವಾಗುತ್ತಿದ್ದರೆ ನೂತನ ವರ್ಷಾರಂಭವಾಗುತ್ತಿದೆ ಎಂತಲೇ ಅರ್ಥ.

ಶುಭಕೃತ್ ಸಂವತ್ಸರ ಫಲಗಳೇನು, ಶುಭಪ್ರದವಾದ ಈ ವರ್ಷದ ವಿಶೇಷತೆ ಏನು ?

ಚೈತ್ರ ಶುದ್ಧ ಪಾಡ್ಯ ಬಂತೆಂದರೆ ಏನೆಲ್ಲಾ ಸಂಭ್ರಮ! ಹೊಸ ಭರವಸೆ, ಯಶಸ್ಸನ್ನು ಎದುರು ನೋಡುವ, ಕನಸುಗಳು ಚಿಗುರುವ ಕಾಲ. ನಿಸರ್ಗ ಮೈತುಂಬಿಕೊಂಡ ಸಮಯ. ಕರ್ನಾಟಕ, ಆಂಧ್ರ, ತೆಲಂಗಣ, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಹೊಸವರ್ಷ. ಕರ್ನಾಟಕದಲ್ಲಿ ಈ ಹಬ್ಬ ‘ಯುಗಾದಿ’ ಎಂದು ಕರೆಯಲ್ಪಟ್ಟರೆ, ಮಹಾರಾಷ್ಟ್ರದಲ್ಲಿ ‘ಗುಡಿ ಪಾಡ್ವ’, ಆಂಧ್ರ, ತೆಲಂಗಾಣ, ತಮಿಳುನಾಡಲ್ಲಿ ಇದು ‘ಹೊಸವರ್ಷ’ ಎಂದೇ ಜನಜನಿತ. ಈ ಭಾಗಗಳಲ್ಲಿ ಆಚರಿಸಲ್ಪಡುವುದು ಚಂದ್ರನ ಚಲನೆಯನ್ನಾಧರಿಸಿ ಆಚರಿಸುವ ಯುಗಾದಿ ಅರ್ಥಾತ್‌ ಚಂದ್ರಮಾನ ಯುಗಾದಿ. ಮರಾಠಿಗರಿಗೆ ಇದು ‘ಗುಡಿ ಪಾಡ್ವ’. ಗುಡಿ ಅಂದರೆ ಬ್ರಹ್ಮಧ್ವಜ ಎಂಬ ಅರ್ಥವೂ ಇದೆ. ಬಿದಿರಿನ ಕೋಲೊಂದಕ್ಕೆ, ಅರಿಶಿಣ, ಕುಂಕುಮ ಬಳಿದು, ಹೂವು ಮೂಡಿದ ಬೇವಿನ ತೊಪ್ಪಲು, ಮಾವಿನೆಲೆ, ಹಸಿರು ರವಿಕೆ ಬಟ್ಟೆಕಟ್ಟಿ, ಸುಣ್ಣ, ಗಂಧ ಹಚ್ಚಿ, ಮನೆ ಬಾಗಿಲಲ್ಲಿ ನಿಲ್ಲಿಸಲಾಗುತ್ತದೆ. ಇದು ವಿಯಜದ ಸಂಕೇತ ಕೂಡ.

ಯುಗಾದಿ ಹಬ್ಬದ ಹಿನ್ನೆಲೆ

ಯುಗಾದಿಗೆ (Add Ugadi Wishes 202) ತನ್ನದೇ ಆದ ಐತಿಹಾಸಿಕ, ಪೌರಾಣಿಕ ಹಿನ್ನೆಲೆಯಿದೆ. ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಶಬ್ದಗಳಿಂದ ಯುಗಾದಿ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷ ‘ಆರಂಭ’ ಎಂದೇ ಇದರರ್ಥ. ಇದೇ ದಿನ ಅಂದರೆ, ಚೈತ್ರಶುದ್ಧ ಪಾಡ್ಯದ ಸೂರ್ಯೋದಯ ಸಮಯಕ್ಕೆ ಬ್ರಹ್ಮ ವಿಶ್ವವನ್ನು ಸೃಷ್ಟಿಸಿದನೆಂದೂ, ಸತ್ಯ ಯುಗ ಅಂದೇ ಆರಂಭವಾಯಿತೆಂದೂ, ರಾವಣನನ್ನು ಸಂಹರಿಸಿ ವಿಜಯಿಯಾಗಿ ಹಿಂದಿರುಗಿದ ಶ್ರೀರಾಮನ ಪಟ್ಟಾಭಿಷೇಕದ ದಿನವೆಂದೂ ಪುರಾಣವಿದೆ. ಸೂರ್ಯನ ಮೊದಲ ಕಿರಣ ಭುವಿಯನ್ನು ಸ್ಪರ್ಶಿಸಿದ ದಿನವೆಂತಲೂ ಪ್ರತೀತಿ ಇದೆ. ಇದು ರಾಮನು ವಾಲಿಯನ್ನು ವಧಿಸಿದ ದಿನವೆಂದೂ, ಮಹಾ ವಿಷ್ಣು ಮತ್ಸ್ಯಾವತಾರ ತಾಳಿದ ದಿನವೆಂದೂ ಹೇಳುತ್ತದೆ ಪುರಾಣ. ಅಂದೇ ಶಾಲಿವಾಹನ ಶಕೆ ಆರಂಭಗೊಂಡಿತೆಂಬ ಒಂದು ಕತೆಯೂ ಇದೆ.

ವಿಭಿನ್ನ ರೀತಿಯ ಆಚರಣೆ

ಉಳಿದೆಲ್ಲ ಹಬ್ಬಗಳಿಗಿಂತ ಯುಗಾದಿ ಆಚರಣೆ ಕೊಂಚ ಬೇರೆ. ಹೊಸ ವರ್ಷದ ಹಬ್ಬವೆಂದರೆ (Add Ugadi Wishes 202) ಹೊಸತನ ಇರಲೇಬೇಕಲ್ಲವೇ? ಮನೆ ಮುಂಬಾಗಿಲು ತಳಿರು ತೋರಣಗಳಿಂದ ಅಲಂಕರಿಸುತ್ತಾರೆ. ಮುಖ್ಯವಾಗಿ ಹಸಿರು ಮಾವಿನೆಲೆ, ಬೇವಿನೆಲೆ ಮತ್ತು ವಿವಿಧ ಪುಷ್ಪಗಳ ತೋರಣ ಕಟ್ಟಲಾಗುತ್ತದೆ. ಕೆಲವು ಹಳ್ಳಿಗಳಲ್ಲಿ ವಾರಕ್ಕೆ ಮೊದಲೇ ತೋರಣ ಕಟ್ಟುವ ಪದ್ಧತಿಯೂ ಉಂಟು. ಎತ್ತರದ ಮರಗಳಿಗೆ ಜೋಕಾಲಿ ಕಟ್ಟಿಉಯ್ಯಾಲೆಯಾಡುವುದೂ ಯುಗಾದಿ ಸಂಭ್ರಮಗಳಲ್ಲೊಂದು.

ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದೇಕೆ?

ಯುಗಾದಿಯ ದಿನ ಬೆಳ್ಳಂಬೆಳಿಗ್ಗೆ, ಮನೆ ಮಂದಿಗೆಲ್ಲ ಅಭ್ಯಂಜನ ಸ್ನಾನ ಮಾಡಿ, ನವ ವಸ್ತ್ರ ಧರಿಸಿ ಹೊಸ ವರ್ಷ ಸ್ವಾಗತಿಸುವ ಸಂಭ್ರಮ. ಬಳಿಕ ಮನೆ ದೇವರ ಪೂಜೆ. ಮಾವಿನ ಎಲೆಗಳನ್ನು ದೇವರ ಮನೆಯ ಕಲಶದಲ್ಲಿ ಅದ್ದಿ, ಮನೆಯ ಮೂಲೆ ಮೂಲೆಗೂ ನೀರನ್ನು ಸಿಂಪಡಿಸಿ, ಮನೆಯ ಶುಚೀಕರಣ ಮಾಡಲಾಗುತ್ತದೆ. ಬೇಯಿಸಿದ ಕಡಲೆ ಕಾಳುಗಳ ಪ್ರಸಾದ ವಿನಿಮಯವಾಗುತ್ತದೆ. ಹಿರಿಯರನ್ನು ನಮಸ್ಕರಿಸಿ, ಆಶೀರ್ವಾದ ಪಡೆಯುವಾಗ ಕಿರಿಯರಲ್ಲಿ ಧನ್ಯತಾಭಾವ. ವರ್ಷವಿಡೀ ನೋವು, ನಲಿವನ್ನು ಸಮನಾಗಿ ಸ್ವೀಕರಿಸೋಣ ಎನ್ನುತ್ತಾ ಬೇವು ಬೆಲ್ಲ ಹಂಚಿ ನಲಿಯುವುದು ಯುಗಾದಿ ಆಚರಣೆಯ ಅವಿಭಾಜ್ಯ ಅಂಗ.

ಯುಗಾದಿ ಸಮಭಾವದಿಂದ ಸುಖ, ದುಃಖಗಳನ್ನೂ ಸ್ವೀಕರಿಸಬೇಕೆಂಬುದನ್ನು ಬೇವು-ಬೆಲ್ಲ ಹಂಚಿಕೆಯ ಮೂಲಕ ಸಾಂಕೇತಿಕವಾಗಿ ಹೇಳಿಕೊಡುತ್ತದೆ.

ಶತಾಯುರ್‌ ವಜ್ರ ದೇಹಾಯ

ಸರ್ವ ಸಂಪತ್ಕರಾಯಚ

ಸರ್ವಾರಿಷ್ಟವಿನಾಶಾಯ

ನಿಂಬಕಂ ದಳ ಭಕ್ಷಣಂ

ಎಂದು ಹೇಳುತ್ತಾ ಬೇವು, ಬೆಲ್ಲವನ್ನು ತಿನ್ನಬೇಕು ಎನ್ನುತ್ತದೆ ಶಾಸ್ತ್ರ. ಅಂದರೆ, ಈ ಬೇವು ಬೆಲ್ಲ ಪ್ರಾಶನದಿಂದ, ನೂರು ವರ್ಷ ಆಯಸ್ಸು, ವಜ್ರದಂತ ದೇಹ, ಸಂಪತ್ತು ದೊರಕಿ, ಕೆಡಕುಗಳ ನಿವಾರಣೆಯಾಗುವುದು ಎಂದರ್ಥ.

ವಿಶೇಷ ಖಾದ್ಯಗಳು

ಹಬ್ಬ ಹರಿದನಗಳಲ್ಲಿ ತಯಾರಿಸುವ ತಿಂಡಿ ತಿನಿಸುಗಳ ಹೊರತಾಗಿ, ಯುಗಾದಿಗೆ ಕರ್ನಾಟಕದಲ್ಲಿ ಹೋಳಿಗೆ ಅಂದಿನ ವಿಶೇಷ ಖಾದ್ಯವಾಗಿ ತಯಾರುಗೊಳ್ಳುತ್ತದೆ. ಬೆಲ್ಲದ ಪಾನಕ, ಶಾವಿಗೆ ಕೂಡ ಅಂದಿನ ಸ್ಪೆಷಲ್ ಮಹಾರಾಷ್ಟ್ರದಲ್ಲಿ ಹೋಳಿಗೆಯನ್ನೇ ಹೋಲುವ ಪೂರಣ್‌ ಪೋಳಿ ತಯಾರಿಸುತ್ತಾರೆ. ಹೂರಣದ ಹೋಳಿಗೆ ಇಲ್ಲಿ, ‘ಹ’ ಕಾರ ‘ಪ’ ಕಾರವಾಗಿ ಹೊಸ ಹೆಸರು ಪಡೆದಿದೆ.

ಆಂಧ್ರ, ತೆಲಂಗಾಣದಲ್ಲಿ ಬೇವು- ಬೆಲ್ಲ, ಮಾವಿನ ಕಾಯಿ, ಉಪ್ಪು, ಮೆಣಸು, ಹುಣಸೆ ಹಣ್ಣುಗಳ ಮಿಶ್ರಣ ಮಾಡಿ ‘ಪಚ್ಚಡಿ’ ತಯಾರಿಸುತ್ತಾರೆ. ಈ ಆರೂ ಪದಾರ್ಥಗಳು ಆರು ಗುಣಗಳನ್ನು ಸಾರುತ್ತವೆ ಎಂಬುದು ಅಲ್ಲಿನ ನಂಬುಗೆ. ಬೆಲ್ಲ ಸುಖ-ಸಂತೋಷಕ್ಕೆ, ಬೇವು ದುಃಖ ಮತ್ತು ನೋವನ್ನು ಸಹಜತೆಯಿಂದ ಸ್ವೀಕರಿಸಲು, ಮಾವು -ಉತ್ಸಾಹಕ್ಕೆ, ಕಾಳುಮೆಣಸು ಕೋಪ ನಿಗ್ರಹಕ್ಕೆ, ಉಪ್ಪು- ನಮ್ರತಾ ಭಾವಕ್ಕೆ, ಹುಣಸೆ - ಸ್ವೀಕರಣಾ ಭಾವದ ಸಂಕೇತ. ಹಲವು ಪ್ರಾಂತ್ಯಗಳಲ್ಲಿ, ಹೊಸ ಮಾವಿನ ಮಿಡಿಯ ಉಪ್ಪಿನ ಕಾಯಿ ತಯರಿಸುವುದೂ ಇದೆ.

ಕೆಲವು ಪ್ರದೇಶಗಳಲ್ಲಿ ಪಾರಂಪರಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ. ಕೋಲಾಟ, ಕಬಡ್ಡಿ, ಚಿನ್ನಿ ದಾಂಡು, ಜಿಗಿದಾಟ, ಕಾಲ್ಚೆಂಡು ಎಲ್ಲರೂ ಭಾಗವಹಿಸುವಂತ ಆಟಗಳು. ಹೆಂಗಸರು ಅಂಗಳದಲ್ಲಿ ಪಗಡೆ, ಅಳಗುಳಿಮಣೆ ಆಟದಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಜನಪದ ಗೀತೆಗಳು, ಹಾಡು ಕುಣಿತ ಮನರಂಜಿಸುತ್ತವೆ. ಪ್ರತಿ ಜೀವದಲ್ಲಿ ಹೊಸ ಚೈತನ್ಯ ತುಂಬುವ ಯುಗಾದಿ ವರ್ಷವೂ ಬರುತ್ತಿರುತ್ತೆ. ಸುಖ-ದುಃಖಗಳನ್ನು ಸಮಾನ ಭಾವದಿಂದ ಸ್ವೀಕರಿಸುತ್ತ ಮುನ್ನಡೆಯಬೇಕೆಂಬುದೇ ಹಬ್ಬದ ಆಶಯ.