ಯುಗಾದಿಯ ದಿನ ಪಂಚಾಂಗ ಶ್ರವಣ ಮಾಡುವ ವಾಡಿಕೆ ಇದೆ. ಇದೊಂದು ಸಂಪ್ರದಾಯದಂತೆ ನಡೆದು ಬಂದಿದೆ. ಇಷ್ಟಕ್ಕೂ ಯುಗಾದಿಯ ದಿನ ಪಂಚಾಂಗ ಶ್ರವಣ ಏಕೆ ಮಾಡಬೇಕು?
ನಮ್ಮ ಜಗತ್ತು(Universe) ಸದಾ ಚಲನಶೀಲ. ಕಾಲವೆಂಬುದು ಓಡುತ್ತಲೇ ಇರುತ್ತದೆ. ಅದರ ಆಧಾರದಲ್ಲಿಯೇ ಜಗತ್ತು ನಡೆಯುತ್ತಿದೆ. ಹೀಗೆ ಕಾಲಗಣನೆಗೆ ಸೂರ್ಯ(Sun)ನ ಚಲನೆ, ಭೂಮಿ, ಚಂದ್ರರ ಚಲನೆ, ಗ್ರಹಗಳ(Planets) ಚಲನೆ ಎಲ್ಲವೂ ಒಳಪಡುತ್ತವೆ. ಹೀಗೆ ಈ ಎಲ್ಲ ಜಗತ್ ಸೃಷ್ಟಿಯ ಮೂಲಗಳ ಚಲನೆಯ ಆಧಾರದ ಮೇಲೆ ಪಂಚಾಂಗ(Panchanga) ರಚಿಸಲಾಗುತ್ತದೆ. ಇವುಗಳ ಚಲನೆಯ ಆಧಾರದ ಮೇಲೆಯೇ ತಿಥಿ, ವಾರ, ನಕ್ಷತ್ರ, ಯೋಗ, ಕರ್ಣ ಮುಂತಾದವುಗಳನ್ನು ಹೇಳಲು ಸಾಧ್ಯವಾಗುವುದು. ಪಂಚಾಂಗವು ಈ ಐದು ವಿಷಯಗಳನ್ನೂ ಒಳಗೊಂಡಿರುತ್ತದೆ.
ನಾವು ಬಳಸುವ ರೋಮನ್ ಕ್ಯಾಲೆಂಡರ್ ಹುಟ್ಟಿದ್ದು ಕ್ರಿಸ್ತ ಪೂರ್ವ 753ರಲ್ಲಿ. ಆದರೆ, ಅದಕ್ಕಿಂತ ಹತ್ತು ಸಾವಿರ ವರ್ಷಗಳ ಹಿಂದಿನಿಂದಲೇ ಪಂಚಾಂಗವು ಕಾಲಗಣನೆಗಾಗಿ ಬಳಕೆಯಾಗುತ್ತಾ ಬಂದಿದೆ. ನಮ್ಮ ಪೂರ್ವಿಕರಲ್ಲಿ ಅದೆಂಥಾ ಅದ್ಭುತ ಖಗೋಳಶಾಸ್ತ್ರಜ್ಞರಿದ್ದರು ಎಂಬುದನ್ನು ಪಂಚಾಂಗ ಒಂದರಿಂದಲೇ ತಿಳಿಯಬಹುದಾಗಿದೆ.
ಯುಗಾದಿ(Ugadi)ಯ ದಿನ ಈ ಪಂಚಾಂಗ ಪಠಣ ಹಾಗೂ ಶ್ರವಣದಿಂದ ಅಧಿಕ ಲಾಭವಿದೆ ಎಂಬ ನಂಬಿಕೆ ಇದೆ. ಅಂದು ಪಂಚಾಂಗ ಶ್ರವಣ ಮಾಡುವುದರಿಂದ ಸುಖ, ಐಶ್ವರ್ಯ, ಯಶಸ್ಸು(Success) ಹೆಚ್ಚುತ್ತದೆ ಎನ್ನಲಾಗುತ್ತದೆ. ಹಾಗಾಗಿ ಪಂಚಾಂಗ ಶ್ರವಣವು ಮಹಾಭಾರತ ಕಾಲದಿಂದಲೂ ಸಂಪ್ರದಾಯವಾಗಿ ನಡೆದು ಬಂದಿದೆ. ಬಹಳಷ್ಟು ಕಡೆ ದೇವಾಲಯಗಳಲ್ಲಿ ಯುಗಾದಿಯ ಬೆಳಗ್ಗೆ ಹಾಗೂ ಸಂಜೆ ಸಾಮೂಹಿಕವಾಗಿ ಪಂಚಾಂಗ ಪಠಣ ಕಾರ್ಯಕ್ರಮಗಳು ನಡೆಯುತ್ತವೆ. ಇಷ್ಟಕ್ಕೂ ಯುಗಾದಿಯ ದಿನ ನಾವೇಕೆ ಪಂಚಾಂಗ ಶ್ರವಣ ಮಾಡುತ್ತೇವೆ ಗೊತ್ತಾ?
ಆಂಧ್ರದ ತಿರುಪತಿಗೆ ಪ್ರತಿಸ್ಪರ್ಧಿಯಾಗಿ ನಿಂತ ತೆಲಂಗಾಣದ ಯದಾದ್ರಿ
ಪಂಚಾಂಗ ಶ್ರವಣದ ಕಾರಣ
ಯುಗಾದಿ ಎಂದರೆ ಯುಗದ ಆದಿ. ಬ್ರಹ್ಮ(Lord Brahma)ನು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ದಿನ. ಒಂದು ಯುಗಾದಿಯಿಂದ ಮತ್ತೊಂದು ಯುಗಾದಿಗೆ ಭೂಮಿಯು ಸೂರ್ಯನ ಸುತ್ತ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ. ಇದನ್ನು ವಿಜ್ಞಾನ ಕೂಡಾ ಅನುಮೋದಿಸುತ್ತದೆ. ಹಾಗಾಗಿಯೇ ಯುಗಾದಿಗೆ ನಾವು ಹೊಸ ವರ್ಷ ಎಂದು ಆಚರಿಸುವುದು. ನಮ್ಮ ಒಂದು ವರ್ಷವೆಂದರೆ ಬ್ರಹ್ಮನಿಗೆ ಒಂದು ದಿನ.
ಚೈತ್ರ ಅಮಾವಾಸ್ಯೆಯಂದು ಕೂಡಿ ಬರಲಿದೆ ವಿಶೇಷ ಯೋಗ!
ಸಾಮಾನ್ಯವಾಗಿ ದಿನಾರಂಭ ಮಾಡುವಾಗ ಆ ದಿನ ಹವಾಮಾನ ಹೇಗಿರಲಿದೆ, ಎಲ್ಲೆಲ್ಲೆ ಏನು ಸದ್ದು ಗದ್ದಲಗಳಿವೆ, ಯಾವ ರೋಡಿನಲ್ಲಿ ಟ್ರಾಫಿಕ್ ಹೆಚ್ಚು, ಯಾವ ರೋಡಿನಲ್ಲಿ ಪ್ರತಿಭಟನೆ ನಡೆಯುತ್ತಿದೆ ಮುಂತಾದ ಎಲ್ಲ ವಿಷಯಗಳನ್ನೂ ತಿಳಿದುಕೊಳ್ಳುವುದರಿಂದ ನಾವು ಆ ದಿನವನ್ನು ಚೆನ್ನಾಗಿ ಯೋಜಿಸಲು ಸಾಧ್ಯವಾಗುತ್ತದೆ. ಎಲ್ಲ ಅಡೆತಡೆಗಳನ್ನು ದೂರವಿಟ್ಟು ನಮ್ಮ ಕೆಲಸ ಕಾರ್ಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂತೆಯೇ ವರ್ಷಾರಂಭದಲ್ಲಿ ಪಂಚಾಂಗ ಶ್ರವಣ ಮಾಡುವುದರಿಂದ ಇಡೀ ವರ್ಷದ ಮುನ್ಸೂಚನೆ(prediction) ಸಿಕ್ಕಂತಾಗುತ್ತದೆ. ಏಕೆಂದರೆ ಮೊದಲೇ ಹೇಳಿದಂತೆ ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ, ಕರ್ಣದ ಬಗ್ಗೆ ಹೇಳಲಾಗಿರುತ್ತದೆ. ಯಾವ ತಿಥಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು, ಯಾವ ವಾರ, ನಕ್ಷತ್ರದಲ್ಲಿ ಏನು ಮಾಡಿದರೆ ಯಶಸ್ಸು ಲಭಿಸುತ್ತದೆ, ಯಾರಿಗೆ ಯಾವ ಯೋಗವಿದೆ ಎಲ್ಲವೂ ವಿವರವಾಗಿರುತ್ತದೆ. ಇವೆಲ್ಲವನ್ನೂ ಸುತ್ತಲಿನ ಗ್ರಹಗಳು ಹಾಗೂ ನಕ್ಷತ್ರಗಳ ಆಧಾರದಲ್ಲಿಯೇ ಲೆಕ್ಕ ಹಾಕಲಾಗಿರುತ್ತದೆ. ಅದರ ಆಧಾರದ ಮೇಲೆ ನಾವು ನಮ್ಮ ಮುಂದಿನ ದಿನಗಳು ಸುಲಲಿತವಾಗಿ ಸಾಗುವಂತೆ ಯೋಜನೆ ರೂಪಿಸಿಕೊಳ್ಳಬಹುದು.
ಪಂಚಾಂಗದಲ್ಲಿ ಆ ವರ್ಷದ ಮಳೆ ಬೆಳೆಗಳ ಬಗ್ಗೆ, ಮಾಸಫಲಗಳ ಬಗ್ಗೆ, ರಾಶಿಫಲ ಇತ್ಯಾದಿಗಳ ಬಗ್ಗೆ ತಿಳಿಸಲಾಗಿರುತ್ತದೆ. ಹೀಗೆ ಈ ಎಲ್ಲವನ್ನೂ ಮುಂಚೆಯೇ ತಿಳಿದಿದ್ದಾಗ ಅದಕ್ಕನುಗುಣವಾಗಿ ವರ್ಷದ ವ್ಯವಹಾರ ವಹಿವಾಟುಗಳ ಯೋಜನೆ ರೂಪಿಸಿಕೊಳ್ಳಬಹುದು. ಹೀಗಾಗಿ, ವರ್ಷಾರಂಭದಲ್ಲಿ ಪಂಚಾಂಗ ಓದುವ ಅಭ್ಯಾಸ ಶುಭವಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.
