ಧ್ಯಾನ ಮಾಡುವುದು ಒಂದು ತಪಸ್ಸು ಇದ್ದ ಹಾಗೆ. ಅಷ್ಟು ಸುಲಭವಾಗಿ ಧ್ಯಾನ ಸ್ಥಿತಿ ಎಲ್ಲರಿಗೂ ಸಿದ್ಧಿಸುವುದಿಲ್ಲ. ಈ ಸ್ಥಿತಿಯಲ್ಲಿ ಮನಃಶಾಂತಿ ಸಿಗಬೇಕೆಂದರೆ ಬಹಳ ಪರಿಶ್ರಮ ಬೇಕು. ಅದಕ್ಕಾಗಿ ಸಮಯ ಮೀಸಲಿಡಬೇಕು. ಮಿಗಿಲಾಗಿ ಶ್ರದ್ಧೆ ಹಾಗೂ ಏಕಾಗ್ರತೆ ಇರಬೇಕಾಗುತ್ತದೆ. ಇನ್ನು ಧ್ಯಾನಕ್ಕೂ ನಮ್ಮ ಗ್ರಹಗಳಿಗೂ ಸಂಬಂಧವಿದೆ ಎಂಬುದು ನಿಮಗೆ ತಿಳಿದಿದೆಯೇ? 

ಹೌದು. ಕೆಲವೊಂದು ಧ್ಯಾನ ಪ್ರಕ್ರಿಯೆಗಳನ್ನು ಮಾಡುವುದರಿಂದ ಗ್ರಹಗತಿಗಳು ಬದಲಾವಣೆಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಧ್ಯಾನ ಮಾಡುವುದರಿಂದ ಅನೇಕ ವಿಧವಾದ ಉಪಯೋಗಗಳನ್ನು ಪಡೆಯಬಹುದು. ಏಕಾಗ್ರತೆಗೆ, ಉತ್ತಮ ಆರೋಗ್ಯಕ್ಕೆ, ಒತ್ತಡವನ್ನು ನಿಯಂತ್ರಿಸಿ ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳಲು, ಹಾರ್ಮೋನ್‌ಗಳನ್ನು ನಿಯಂತ್ರಣದಲ್ಲಿಡಲು ಇನ್ನೂ ಅನೇಕ ಲಾಭಗಳನ್ನು ಗಳಿಸಿಕೊಳ್ಳಬಹುದು. 

ಇದನ್ನು ಓದಿ: ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಒತ್ತಡದಲ್ಲೇ ದಿನಗಳನ್ನು ನಾವು ಕಳೆದಿರುತ್ತೇವೆ. ಆರೋಗ್ಯ ಸಮಸ್ಯೆಗಳು ಬಹುವಾಗಿ ಕಾಡುತ್ತಿರುತ್ತವೆ. ಆದರೆ, ಜ್ಯೋತಿಷ್ಯದ ಪ್ರಕಾರ ಧ್ಯಾನ ಮಾಡುವುದರಿಂದ ನಮ್ಮ ಜಾತಕದ ಗ್ರಹಗಳ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬ ಖುಷಿಯ ಸಂಗತಿಯನ್ನು ತಿಳಿಯಬೇಕು. ಗ್ರಹಕ್ಕೆ ಅನುಸಾರವಾಗಿ ಧ್ಯಾನ ಮಾಡುವ ಕೆಲವು ವಿಧಾನಗಳನ್ನು ಅನುಸರಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ.

ಗ್ರಹಕ್ಕೆ ಅನುಸಾರವಾಗಿ ಧ್ಯಾನ ಮಾಡುವ ವಿಧಾನ

ಸೂರ್ಯ: ತ್ರಾಟಕ್ ಧ್ಯಾನವನ್ನು ಮಾಡಬೇಕು. (ತ್ರಾಟಕ್ ಎಂದರೆ ಯಾವುದಾದರೂ ವಸ್ತುವನ್ನು ತದೇಕ ಚಿತ್ತದಿಂದ ಕಣ್ಣು ಮಿಟುಕಿಸದೇ ನೋಡುತ್ತಿರುವುದು) ಇದರಿಂದ ಚಂಚಲತೆ ದೂರವಾಗುತ್ತದೆ. ಕಣ್ಣು ಮತ್ತು ಧ್ವನಿಯ ತೇಜಸ್ಸು ವೃದ್ಧಿಸುತ್ತದೆ. ಸೂರ್ಯೋದಯದ ವೇಳೆ ಸೂರ್ಯನಿಗೆ ಅಭಿಮುಖವಾಗಿ, ನೇರವಾಗಿ ಕುಳಿತುಕೊಳ್ಳಬೇಕು. ಪ್ರಶಾಂತ ಮನಸ್ಸಿನಿಂದ ಸೂರ್ಯನನ್ನು ನೋಡುತ್ತಿರಬೇಕು. ಕಣ್ಣುಗಳನ್ನು ಮುಚ್ಚಬಾರದು. ಸತತ ಪ್ರಯತ್ನದಿಂದ ಮಾತ್ರ ಇದು ಸಾಧ್ಯ. 

ಇದನ್ನು ಓದಿ: ನಿಮಗೆ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ಒಲಿಯುತ್ತೆ ಅದೃಷ್ಟ!

ಚಂದ್ರ: ಮನಸ್ಸು ಮತ್ತು ಭಾವನೆಗೆ ಅಧಿಪತಿಯೇ ಚಂದ್ರ ಗ್ರಹ. ಏಕಾಗ್ರತೆಯನ್ನು ಪಡೆಯಲು ಮತ್ತು ಭಾವನೆಗಳ ನಿಯಂತ್ರಣಕ್ಕೆ ಚಂದ್ರನಿಗೆ ಸಂಬಂಧಿಸಿದ ಧ್ಯಾನವನ್ನು ಮಾಡಬೇಕು. ಚಂದ್ರನ ಬೆಳಕಿನಲ್ಲಿ ಕುಳಿತು ಏಕಾಗ್ರತೆಯಿಂದ ಹಿಮ ಪರ್ವತದಲ್ಲಿ ಕುಳಿತ ಶಿವನನ್ನು ಧ್ಯಾನಿಸಬೇಕು. ಹೀಗೆ ಮಾಡುವುದರಿಂದ ಸ್ಕಿಜೋಫ್ರೇನಿಯಾ (ಮನೋವ್ಯಾಧಿ)ವನ್ನು ಗುಣಪಡಿಸುವಲ್ಲಿ ಸಹಾಯಕವೆಂದು ಹೇಳಲಾಗಿದೆ. ಈ ರೀತಿ ಧ್ಯಾನ ಮಾಡುವ ಮುಂಚೆ ಹತ್ತು ನಿಮಿಷ ಧೀರ್ಘವಾಗಿ ಉಸಿರಾಟ ಕ್ರಿಯೆಯನ್ನು ಮಾಡಬೇಕು.

ಮಂಗಳ: ಆತ್ಮವಿಶ್ವಾಸ ವೃದ್ಧಿಗೆ, ಧೈರ್ಯ, ಲೋ ಬ್ಲಡ್ ಪ್ರೆಶರ್ ನಿಯಂತ್ರಣಕ್ಕೆ. ಒಂದು ಕಾಗದದ ಮೇಲೆ ಒಂದೂವರೆ ಇಂಚಿನಷ್ಟು ದೊಡ್ಡ ತಿಲಕವನ್ನು (ಕುಂಕುಮ, ಜೇನುತುಪ್ಪ ಅಥವಾ ಮಲ್ಲಿಗೆ ಎಣ್ಣೆಯಿಂದ) ಇಟ್ಟು, ಅದನ್ನು ಎರಡು ಅಡಿ ದೂರದಲ್ಲಿಡಬೇಕು. ಕೆಂಪು ವಸ್ತ್ರವನ್ನು ಧರಿಸಿ, ಕೆಂಪು ತಿಲಕದ ಮೇಲೆ ದೃಷ್ಟಿನೆಟ್ಟಿರಬೇಕು. ಈ ರೀತಿ ಮಾಡುವಾಗ ಧೀರ್ಘವಾಗಿ ಉಸಿರಾಡುತ್ತಿರಬೇಕು.

ಬುಧ: ಅಲರ್ಜಿಗಳಿಗೆ, ವಾಕ್ ಶುದ್ಧಿಗೆ (ಮಾತನಾಡುವಾಗ ತೊಂದರೆಯಾಗುತ್ತಿದ್ದರೆ) ಹಸಿರು ಇರುವ ಕಡೆ ನಡೆದಾಡಬೇಕು. ಜೊತೆಗೆ ಹಸಿರು ವಸ್ತ್ರವನ್ನು ಧರಿಸಿ, ಹಸಿರಿನ ಮೇಲೆ ಕುಳಿತು ಹಸಿರು ಮರಗಳನ್ನು ಏಕಾಗ್ರತೆಯಿಂದ ನೋಡುತ್ತಿರಬೇಕು. ಮೂರನೇ ಕಣ್ಣಿಂದ (ಆಜ್ಞಾ ಚಕ್ರ)ದಿಂದ ನೋಡಲು ಪ್ರಯತ್ನಿಸಬೇಕು.

ಗುರು: ಬಾಳೆವನದಲ್ಲಿ ವಾಸವಿರುವ ಗುರುವನ್ನು ಆರಾಧಿಸಿ ಫಲವನ್ನು ಪಡೆಯಲು ಹಳದಿ ವಸ್ತ್ರವನ್ನು ಧರಿಸಿ, ಹಳದಿ ಆಸನದ ಮೇಲೆ ಕುಳಿತು ಧ್ಯಾನವನ್ನು ಮಾಡಬೇಕು. ಗುರು ತೀಕ್ಷ್ಣ ಬುದ್ಧಿಯ ಧಾತಾರನಾಗಿದ್ದಾನೆ.

ಶುಕ್ರ: ಕಮಲದ ಹೂವಿನ ಮೇಲೆ ಕುಳಿತು, ಕೈಯಲ್ಲಿ ಕಮಲವನ್ನು ಹಿಡಿದಿರುವ ದೇವಿಯನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಧ್ಯಾನವನ್ನು ಮಾಡಬೇಕು. ಕಮಲವು ಅಂತ್ಯವಿಲ್ಲದ ಶಕ್ತಿ, ಶಾಂತತೆ ಮತ್ತು ಮಾನಸಿಕ ಸಮತೋಲನವನ್ನು ಪ್ರತಿಪಾದಿಸುತ್ತದೆ.

ಇದನ್ನು ಓದಿ: ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಶನಿ: ತಿಳಿ ನೀಲಿ ಬಣ್ಣದಲ್ಲಿ ದುಂಡಾಕಾರದಲ್ಲಿ ಒಂದು ಹಾಳೆಯ ಮೇಲೆ ಬರೆದು ಎರಡು ಅಡಿ ದೂರದಲ್ಲಿಟ್ಟು, ಶ್ವೇತ ವರ್ಣದ ಆಸನದಲ್ಲಿ ಕುಳಿತು ಧ್ಯಾನ ಮಾಡಬೇಕು. ಮತ್ತು ಸೂರ್ಯ ಗ್ರಹ ಮಾಡಬಹುದಾದ ತ್ರಾಟಕ್ ಧ್ಯಾನವನ್ನು ಶನಿ ಗ್ರಹಕ್ಕೂ ಮಾಡಬಹುದಾಗಿದೆ.

ಈ ಮೇಲೆ ಹೇಳಿದಂತೆ ದಿನಕ್ಕೆ ಎರಡು ಬಾರಿ, ಪ್ರಾತಃಕಾಲದಲ್ಲಿ ಮತ್ತು ಸಂಧ್ಯಾಕಾಲದಲ್ಲಿ ಐದು ನಿಮಿಷ ಧ್ಯಾನ ಮಾಡಿದರೆ ಇದರಿಂದಾಗುವ ಲಾಭವನ್ನು ಕಂಡುಕೊಳ್ಳಬಹುದಾಗಿದೆ. ಧ್ಯಾನದಿಂದಾಗುವ ಪರಿಣಾಮವನ್ನು ತಿಳಿಯಲು ಸಮಯ ಬೇಕಾಗುತ್ತದೆ. ಮನಸ್ಸಿಟ್ಟು ಧ್ಯಾನ ಮಾಡಿದರೆ ಪ್ರಯೋಜನಗಳನ್ನು ಪಡೆದು ನೆಮ್ಮದಿಯ ಜೀವನವನ್ನು ನಡೆಸಬಹುದಾಗಿದೆ.

"