Asianet Suvarna News Asianet Suvarna News

ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಚಂದ್ರನು ಜಾತಕದ ಯಾವ ಮನೆಯಲ್ಲಿದ್ದರೆ ಯಾವ್ಯಾವ ಫಲವನ್ನು ನೀಡುತ್ತಾನೆ, ಯಾವ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಂಡರೆ ಉತ್ತಮ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ. ಜ್ಯೋತಿಷ್ಯದಲ್ಲಿ ಉಳಿದ ಗ್ರಹಗತಿಗಳು ಮತ್ತು ಯೋಗಾಯೋಗಗಳು ಕೆಲವೊಂದಿಷ್ಟು ನಿರ್ಣಯವನ್ನು ತೆಗೆದುಕೊಳ್ಳಲು ಅವಶ್ಯಕವಾಗಿರುತ್ತದೆ. ಚಂದ್ರನು ಮನಸ್ಸಿನ ಕಾರಕನಾಗಿರುವ ಗ್ರಹ. ಭಾವನೆಗಳಿಗೆ ಸಂಬಂಧ ಪಟ್ಟವನಾಗಿದ್ದರಿಂದ ಚಂದ್ರನು ಜನ್ಮ ಜಾತಕದಲ್ಲಿ ಯಾವ ಮನೆಯಲ್ಲಿದ್ದಾನೆ ಎಂಬುದನ್ನು ನೋಡಿ ಯಾವ ಫಲವನ್ನು ನೀಡುತ್ತಾನೆಂದು ತಿಳಿಯಬಹುದಾಗಿದೆ.

Moons place in kundali suggests your Professional ups and downs
Author
Bangalore, First Published Apr 20, 2020, 7:37 PM IST
  • Facebook
  • Twitter
  • Whatsapp

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕ ನೋಡುವಾಗ ಗ್ರಹ, ರಾಶಿ, ನಕ್ಷತ್ರಗಳ ಸ್ಥಿತಿ, ಚಲನೆ, ಗ್ರಹಗಳಿರುವ ಸ್ಥಾನ, ಸ್ಥಿತಿ ಎಲ್ಲವೂ ತುಂಬಾ ಮುಖ್ಯವಾಗಿರುತ್ತದೆ. ಇಲ್ಲಿ ಗ್ರಹಗತಿಗಳು ಬಹಳ ಮುಖ್ಯವಾಗುತ್ತದೆ. ಇಲ್ಲಿ ಒಂದೇ ಗ್ರಹ ತನ್ನ ಚಲನೆಯಿಂದ ಕೆಲವರಿಗೆ ಒಳ್ಳೆಯದನ್ನೂ ಮತ್ತೆ ಕೆಲವರಿಗೆ ಕೆಟ್ಟದ್ದನ್ನೂ ಮಾಡಲಿದೆ. ಅದಕ್ಕೇ ಅಲ್ಲವೇ ಗ್ರಹಚಾರ ಅಂತ ಹೇಳುವುದು. ಇಲ್ಲಿ ಈಗ ಚಂದ್ರ ಗ್ರಹದ ಬಗ್ಗೆ ತಿಳಿದುಕೊಳ್ಳೋಣ.

ಚಂದ್ರನು ಮನಸ್ಸು, ಜಲ, ವ್ಯವಹಾರ, ಮಾನಸಿಕ ಶಾಂತಿ ಮುಂತಾದ ವಿಷಯಗಳಿಗೆ ಅಧಿಪತ್ಯವನ್ನು ಹೊಂದಿದ ಗ್ರಹ (ಕಾರಕಗ್ರಹ) ಎಂದು ಹೇಳಲಾಗುತ್ತದೆ. ಜಾತಕದಲ್ಲಿ ಚಂದ್ರ ರಾಶಿಯ ಆಧಾರದ ಮೇಲೆಯೆ ಭವಿಷ್ಯವನ್ನು ಹೇಳಲಾಗುತ್ತದೆ. ಜ್ಯೋತಿಷ್ಯದಲ್ಲಿ ಸೂರ್ಯನನ್ನು ರಾಜನೆಂದು ಪರಿಗಣಿಸಿದರೆ, ಚಂದ್ರನನ್ನು ರಾಣಿಯೆಂದು ಭಾವಿಸುತ್ತಾರೆ. ವಾಸ್ತವಿಕವಾಗಿ ಚಂದ್ರನು ಮನುಷ್ಯನ ಮನಸ್ಸು ಮತ್ತು ಭಾವನೆಯ ಪ್ರತೀಕ. ಚಂದ್ರನ ಮನೆ ಕಟಕ ರಾಶಿ. ವೃಷಭ ರಾಶಿಯಲ್ಲಿಯು ಚಂದ್ರನ ಪ್ರಭಾವ ಅಧಿಕವಾಗಿರುತ್ತದೆ. ಚಂದ್ರನು ಬೇರೆ ಬೇರೆ ಸ್ಥಾನಗಳಲ್ಲಿ ಇದ್ದಾಗ ಅದರ ಪ್ರಭಾವ ನಿಮ್ಮ ಕಾರ್ಯಕ್ಷೇತ್ರದ ಮೇಲೆ ಆಗುವ ಪರಿಣಾಮವನ್ನು ತಿಳಿಯೋಣ.

ಇದನ್ನೂ ಓದಿ: ನಿಮಗೆ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ಒಲಿಯುತ್ತೆ ಅದೃಷ್ಟ!

ಮೊದಲನೆ (ಒಂದನೇ) ಮನೆಯಲ್ಲಿ ಚಂದ್ರನಿದ್ದರೆ
ವ್ಯಕ್ತಿಯ ಜನ್ಮ ಜಾತಕದ ಒಂದನೇ ಮನೆಯಲ್ಲಿ ಚಂದ್ರನಿದ್ದರೆ ಅದು ಪರಾಕ್ರಮ ಮತ್ತು ರಾಜ ವೈಭವವನ್ನು ಸೂಚಿಸುತ್ತದೆ. ಇವರು ಕಲ್ಪನಾಶೀಲರಾಗಿರುತ್ತಾರೆ. ಇಂಥವರು ಅತ್ಯಂತ ಭಾವುಕ ಮತ್ತು ಸಂವೇದನಾಶೀಲರಾಗಿರುವುದಲ್ಲದೆ, ಸುಂದರವಾಗಿರುತ್ತಾರೆ. ಆದರೆ ಚಂಚಲ ಸ್ವಭಾವ ಇವರದ್ದಾಗಿರುತ್ತದೆ. ಸೃಜನಾತ್ಮಕ ಮತ್ತು ರಚನಾತ್ಮಕ ಕೆಲಸಗಳಲ್ಲಿ ವಿಶೇಷ ಅಭಿರುಚಿಯನ್ನು ಹೊಂದಿರುವ ಇವರು ಅದಕ್ಕೆ ತಕ್ಕ ಕಾರ್ಯಕ್ಷೇತ್ರವನ್ನು ಆಯ್ದುಕೊಳ್ಳುವುದು ಉತ್ತಮ. ಕಾರ್ಯ ಕ್ಷೇತ್ರದ ನಿರ್ದಿಷ್ಟ ಸ್ಥಿತಿಯನ್ನು ಅರಿಯಲು ಅನ್ಯಗ್ರಹಗಳ ದೃಷ್ಟಿ ಮತ್ತು ಚಲನೆಯನ್ನು ತಿಳಿಯುವುದು ಅವಶ್ಯಕವಾಗಿರುತ್ತದೆ.

ದ್ವಿತೀಯದಲ್ಲಿ ಚಂದ್ರನಿದ್ದರೆ
ಜಾತಕದ ಎರಡನೇ ಮನೆಯಲ್ಲಿ ಚಂದ್ರನಿದ್ದರೆ ಅಲ್ಲಿ ಲಕ್ಷ್ಮೀಯು ಸದಾ ವಾಸವಾಗಿರುತ್ತಾಳೆ. ಧನ-ಧಾನ್ಯಗಳ ವೃದ್ಧಿಯಾಗಲಿದೆ. ಇಂಥ ಜಾತಕದವರ ಕಣ್ಣು ತುಂಬಾ ಸುಂದರವಾಗಿರುತ್ತದೆ. ಇವರ ಮನೆಯಲ್ಲಿ ಲಕ್ಷ್ಮೀಯು ತಾನೇ ಬಂದು ಸಂತೋಷದಿಂದ ಇರುತ್ತಾಳೆ ಎಂದು ಹೇಳಲಾಗುತ್ತದೆ. ಈ ಜಾತಕದವರು ವಿದೇಶಕ್ಕೆ ಸಂಬಂಧಪಟ್ಟ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ, ಒಳಿತಾಗುವುದು. ವಿದೇಶಕ್ಕೆ ಹೋಗುವ ಯೋಗವಿದ್ದಲ್ಲಿ ಯಶಸ್ಸು ಖಚಿತ, ಯಾವುದಾದರೂ ಎನ್‌ಜಿಒ ಜೊತೆಗೆ ಕೆಲಸ ನಿರ್ವಹಿಸಿದರೂ ಉತ್ತಮವೆಂದು ಹೇಳಲಾಗಿದೆ.

ಮೂರನೇ ಮನೆಯಲ್ಲಿ ಚಂದ್ರನಿದ್ದರೆ
ಇಂಥವರು ತನ್ನ ಪರಾಕ್ರಮದಿಂದ ಮಾತ್ರವೇ ಧನ ಸಂಪತ್ತನ್ನು ಗಳಿಸುತ್ತಾರೆ. ಸೋದರ ಮತ್ತು ಸಂಬಂಧಿಗಳಿಂದ ಹೆಚ್ಚು ಸುಖವನ್ನು ಪಡೆಯುವುದಲ್ಲದೆ, ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ. ಸಮಾಜದಲ್ಲಿ ಗೌರವ, ಕಲಾತ್ಮಕ ಗುಣಗಳು ಇವರಲ್ಲಿದ್ದು, ಏನಾದರೂ ಹೊಸತನ್ನು ಮಾಡಲು ಬಯಸುತ್ತಾರೆ. ಯೋಜನೆಗಳನ್ನು ಮಾಡುವುದು ಇವರಿಗೆ ಸುಲಭದ ಕೆಲಸವಾಗಿದ್ದರಿಂದ ಪ್ಲಾನಿಂಗ್‌ಗೆ ಸಂಬಂಧಪಟ್ಟ ಕಾರ್ಯ ಇವರಿಗೆ ಒಳ್ಳೆಯದು.

ಇದನ್ನೂ ಓದಿ: ವಿಷ್ಣುವನ್ನು ಪ್ರಸನ್ನಗೊಳಿಸುವ ಪವಿತ್ರ ವೈಶಾಖ ಮಾಸ

ಚತುರ್ಥದಲ್ಲಿರುವ ಚಂದ್ರನ ಫಲ
ನಾಲ್ಕನೇ ಮನೆಯಲ್ಲಿರುವ ಚಂದ್ರನಿದ್ದರೆ ಪುತ್ರ, ಸ್ತ್ರೀ, ಧನ ಮತ್ತು ವಿದ್ವಾಂಸರಾಗುವ ಎಲ್ಲ ಸಾಧ್ಯತೆಗಳಿವೆ. ಸ್ವಭಾವದಲ್ಲಿ ದಯಾಳು, ಪರೋಪಕಾರಿ ಮತ್ತು ಭಾವುಕರಾಗಿರುತ್ತಾರೆ. ಈ ಜಾತಕದವರು ಎಲ್ಲರ ಪ್ರಶಂಸೆಗೂ ಪಾತ್ರರಾಗುತ್ತಾರೆ. ಇವರು ಮಂತ್ರಿಯಾಗಬಹುದು ಅಥವಾ ಸರ್ಕಾರಿ ಉದ್ಯೋಗವನ್ನು ಮಾಡಬಹುದು. ಇವರು ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ.

ಪಂಚಮದಲ್ಲಿರುವ ಚಂದ್ರ
ಚಂದ್ರ ಐದನೇ ಮನೆಯಲ್ಲಿದ್ದರೆ ಅಂಥವರು ಸರ್ಕಾರಿ ಕ್ಷೇತ್ರಕ್ಕೆ ಸಂಬಂಧಪಟ್ಟ ಇಲ್ಲವೇ ಉಚ್ಚ ಪದವಿಯನ್ನು ಹೊಂದಬಹುದಾಗಿದೆ. ಈ ಜಾತಕದವರು ರಾಜನಂತೆ ಸಮಾಜದಲ್ಲಿ ತಮ್ಮ ಪ್ರಭುತ್ವವನ್ನು ಸಾಧಿಸುತ್ತಾರೆ. ಕಡಿಮೆ ಮಾತನಾಡುವ, ಹೆಚ್ಚು ಕೆಲಸಮಾಡುವ ಗುಣ ಇವರದ್ದಾಗಿರುತ್ತದೆ. ಮಹಿಳೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಲ್ಲದೆ, ಮಹತ್ವದ ವಿಚಾರಗಳಲ್ಲಿ ತೀರ್ಮಾನವನ್ನು ತೆಗೆದುಕೊಳ್ಳುವವರಾಗಿರುತ್ತಾರೆ.

ಇದನ್ನೂ ಓದಿ: ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

ಆರನೇ ಮನೆಯಲ್ಲಿ ಚಂದ್ರನಿದ್ದರೆ ಅಶುಭ
ಆರನೇ ಮನೆಯಲ್ಲಿರುವ ಚಂದ್ರ ಉತ್ತಮ ಫಲವನ್ನು ನೀಡಲು ಅಸಮರ್ಥನಾಗಿರುತ್ತಾನೆ. ಇದು ರೋಗ, ಋಣ, ಶತೃತ್ವ ಮತ್ತು ಕಲಹದ ಮನೆ. ಈ ಮನೆಯಲ್ಲಿ ಚಂದ್ರನಿದ್ದರೆ ಅಂಥವರು ಸೇವಕರಂತೆ ಕೆಲಸ ಮಾಡುತ್ತಾರೆ. ಇವರಿಗೆ ಕೆಲಸದಲ್ಲಿ ತೃಪ್ತಿ ಇರುವುದಿಲ್ಲ. ಉದ್ಯೋಗವನ್ನು ಆಗಾಗ ಬದಲಿಸುವ ಸಂದರ್ಭ ಬಂದೊದಗುತ್ತದೆ. ಯಾವುದೇ ವಿಷಯದಲ್ಲೂ ನಿರ್ಣಯವನ್ನು ತೆಗೆದುಕೊಳ್ಳಲು ಅಂಜುತ್ತಾರೆ. ತಮ್ಮ ಶತ್ರುಗಳು ಯಾರೆಂಬುದನ್ನು ಸುಲಭವಾಗಿ ಗುರುತಿಸುತ್ತಾರೆ.

ಏಳನೇ ಮನೆಯ ಪ್ರಭಾವವೇನು?
ಸಪ್ತಮದಲ್ಲಿ ಚಂದ್ರನಿದ್ದ ಜಾತಕದವರು ದಿನಸಿ ಅಂಗಡಿ, ಹೈನುಗಾರಿಕೆ, ಮಸಾಲೋತ್ಪನ್ನ ಮತ್ತು ಧಾನ್ಯಗಳ ವ್ಯಾಪಾರವನ್ನು ಮಾಡಬಹುದು. ಹೋಟೆಲ್, ಬೇಕರಿ, ಇನ್ಶುರೆನ್ಸ್ ಅಥವಾ ಕಮಿಷನ್ ಏಜೆಂಟ್ ಕೆಲಸವನ್ನು ಮಾಡಿದರೆ ಲಾಭವನ್ನು ಗಳಿಸುತ್ತಾರೆ. ಒಂದೇ ಕೆಲಸದಲ್ಲಿ ಹೆಚ್ಚು ದಿನ ಇರಲು ಇವರು ಬಯಸುವುದಿಲ್ಲ. ಸಪ್ತಮದಲ್ಲಿರುವ ಚಂದ್ರ ವಿದೇಶ ಪ್ರಯಾಣವನ್ನು ಸೂಚಿಸುತ್ತಾನೆ.

ಎಂಟನೇ ಮನೆಯಲ್ಲಿದ್ದರೆ ನಷ್ಟ
ಅಷ್ಟಮ ಸ್ಥಾನದಲ್ಲಿರುವ ಚಂದ್ರ ಚಿಂತೆಯನ್ನು ಮತ್ತು ವ್ಯವಹಾರದಲ್ಲಿ ನಷ್ಟವನ್ನು ಸೂಚಿಸುತ್ತಾನೆ. ಈ ಜಾತಕದವರು ಉದ್ಯೋಗವನ್ನು ಮಾಡುವುದು ಒಳಿತು. ಅಷ್ಟಮದಲ್ಲಿ ಚಂದ್ರನಿದ್ದರೆ ನಕಾರಾತ್ಮಕವನ್ನೇ ಸೂಚಿತ್ತಾನೆಂದು ಹೇಳಿದ್ದರೂ ಜ್ಯೋತಿಷ್ಯದ ಕೆಲವು ವಿಶೇಷ ಗ್ರಂಥಗಳಲ್ಲಿ ಸಕಾರಾತ್ಮಕತೆಯ ಬಗ್ಗೆಯೂ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ಸಂಶೋಧನೆಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಇವರು ತೊಡಗಿಕೊಂಡರೆ ಒಳಿತು. ಕಟಕ ಲಗ್ನವಾಗಿದ್ದು, ಅಷ್ಟಮದಲ್ಲಿ ಚಂದ್ರನಿದ್ದರೆ ವಿದೇಶಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ಲಾಭವನ್ನು ಪಡೆಯುತ್ತಾರೆ. ಮತ್ತು ಇಂಥವರು ಉತ್ತಮ ಟ್ರಾವೆಲ್ ಗೈಡ್ ಆಗಬಹುದಾಗಿದೆ. 

ನವಮದಲ್ಲಿರುವ ಚಂದ್ರನ ಫಲ
ಒಂಭತ್ತನೇ ಮನೆಯಲ್ಲಿ ಚಂದ್ರನಿದ್ದರೆ ಈ ಜಾತಕದವರು ಭಾಗ್ಯದ ನಿರ್ಮಾತೃ, ಲೋಕಪ್ರಿಯರು, ಧಾರ್ಮಿಕ, ವಿದ್ವಾಂಸರು ಮತ್ತು ಸಾಹಸಿಗಳಾಗಿರುತ್ತಾರೆ. ಭಾಗ್ಯವಂತರು ಆದರೂ ಭಾಗ್ಯವು ಇವರ ಬಳಿ ತಾನಾಗೇ ಬರುವುದಿಲ್ಲ ಇವರ ಭಾಗ್ಯವನ್ನು ಇವರೇ ಸೃಷ್ಟಿಸಿಕೊಳ್ಳಬೇಕು. ವ್ಯಾಪಾರದಲ್ಲಿ ಸಫಲತೆಯನ್ನು ಕಂಡುಕೊಳ್ಳುವುದರ ಮೂಲಕ ಭಾಗ್ಯವಂತರಾಗಬಹುದು. ಈ ಜಾತಕದವರು ವ್ಯಾಪಾರದಲ್ಲಿ ಯಶಸ್ಸನ್ನು ಗಳಿಸಬಹುದಾಗಿದೆ.

ದಶಮದಲ್ಲಿ ಚಂದ್ರನಿದ್ದರೆ ಪ್ರಶಂಸೆ
ಹತ್ತನೇ ಮನೆಯಲ್ಲಿ ಚಂದ್ರನಿದ್ದರೆ ಈ ಜಾತಕದವರು ಸಮಾಜದಲ್ಲಿ  ಮತ್ತು ಕಾರ್ಯಸ್ಥಳದಲ್ಲಿ  ಪ್ರಶಂಸೆ ಪಡೆಯುತ್ತಾರೆ. ವಾಕ್ ಶಕ್ತಿಯಿಂದ ವ್ಯಾಪಾರದಲ್ಲಿ ವೃದ್ಧಿ ಹೊಂದಬಹುದು. ಮಾತೇ ಬಂಡವಾಳವಾಗಿರುವಂಥ ಯಾವುದೇ ಕೆಲಸವನ್ನು ಇವರು ಮಾಡಬಹುದು. ಇದರಿಂದ ಪದವಿ ಮತ್ತು ಪ್ರತಿಷ್ಠೆ ಎರಡನ್ನೂ ಪಡೆಯುತ್ತಾರೆ. ವ್ಯಾಪರ, ವ್ಯವಸಾಯ , ಉದ್ಯೋಗ ಎಲ್ಲದರಲ್ಲೂ ಕೌಶಲ್ಯವನ್ನು ಪ್ರದರ್ಶಿಸುತ್ತಾರೆ ಅಲ್ಲದೇ ಇವರ ಕೆಲಸ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷವಾಗಿ ಜನರಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಜಾತಕದವರಿಗೆ ಸರ್ಕಾರದಿಂದ ಹಣ ಲಭಿಸುತ್ತದೆ. ವಿದೇಶ ಪ್ರಯಾಣದ ಯೋಗವು ಒದಗಿಬರುವ ಸಾಧ್ಯತೆ ಇದೆ.

ಇದನ್ನೂ ಓದಿ: ಹುಟ್ಟಿದಬ್ಬದ ಸಂಭ್ರಮ ಅಂತ ಎಣ್ಣೆ ಪಾರ್ಟಿ ಮಾಡೋ ಮುನ್ನ ಓದಿ

ಏಕಾದಶಾದಲ್ಲಿದ್ದರೆ ಚಂಚಲ
ಹನ್ನೊಂದನೇ ಮನೆಯಲ್ಲಿ ಚಂದ್ರನಿದ್ದರೆ ಇವರು ಚಂಚಲ ಸ್ವಾಭಾವದವರಾಗಿರುತ್ತಾರೆ. ಯೋಚನೆಯಲ್ಲಿಯೇ ಮುಳುಗಿರುತ್ತಾರೆ. ಪ್ಲಾನಿಂಗ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದು, ಅದಕ್ಕೆ ತಕ್ಕ ಲಾಭವನ್ನು ಪಡೆಯುತ್ತಾರೆ. ಲಾಭವಿಲ್ಲದ ಯಾವ ಕೆಲಸವನ್ನು ಇವರು ಮಾಡಲು ಇಚ್ಛಿಸುವುದಿಲ್ಲ. ವಿದೇಶ ಅಥವಾ ಬೇರೆ ಬೇರೆ ಸ್ಥಳದಲ್ಲಿ ವಾಸಿಸಲು ಇಚ್ಛಿಸುತ್ತಾರೆ. ಐಷಾರಾಮಿ ಜೀವನವನ್ನು ಪಡೆಯುತ್ತಾರೆ.

ದ್ವಾದಶದಲ್ಲಿರುವ ಚಂದ್ರ
ಹನ್ನೆರಡನೇ ಮನೆಯಲ್ಲಿರುವ ಚಂದ್ರ ವ್ಯಯವನ್ನು ಸೂಚಿಸುತ್ತಾನೆ. ಚಂದ್ರ ಮನಸ್ಸಿಗೆ ಕಾರಕ ಆದ್ದರಿಂದ ಹನ್ನೆರಡನೇ ಮನೆಯಲ್ಲಿ ಚಂದ್ರನಿದ್ದ ಜಾತಕದವರು ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಾವಾಗಲೂ ಚಿಂತಿತರಾಗಿರುತ್ತಾರೆ. ಇವರಿಗೆ ಶತ್ರುಗಳು ಅಧಿಕ. ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಜಾತಕದವರು ವಿದೇಶದಲ್ಲಿ ನೆಲೆಸಿ ಕಾರ್ಯನಿರ್ಹಿಸಿದಲ್ಲಿ ಯಶಸ್ಸು ಲಭಿಸುತ್ತದೆ. ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡಬಹುದಾಗಿದೆ.

Follow Us:
Download App:
  • android
  • ios