ದೆವ್ವ ಭೂತಗಳು ನಿಜವಾಗಿಯೂ ಇವೆಯಾ? ಚೆನ್ನೈನಲ್ಲಿ ನಡೆದ ವಿಚಿತ್ರ ಘಟನೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಬರೆದುಕೊಂಡಿದ್ದು, ಅದು ಸಾಕಷ್ಟು ವೈರಲ್ ಆಗಿದೆ.

ಚೆನ್ನೈ: ಜನ್ಮ ಪುನರ್ಜನ್ಮ, ದೆವ್ವ ಭೂತಗಳ ಅಸ್ತಿತ್ವ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕಾಲ ಬದಲಾದರು ದೆವ್ವ ಭೂತಗಳ ಮೇಲೆ ಜನರ ನಂಬಿಕೆ ಮಾತ್ರ ಬದಲಾಗಿಲ್ಲ, ಅದಕ್ಕೆ ಸಂಬಂಧಿಸಿದಂತೆ ನಡೆಯುವ ಕೆಲ ವಿಚಿತ್ರ ಘಟನೆಗಳು ಆ ಘಟನೆಯನ್ನು ನಂಬದೇ ಇರುವುದಕ್ಕೂ ಸಾಧ್ಯವಿಲ್ಲದಂತೆ ಮಾಡುತ್ತವೆ. ಅನೇಕರು ತಮಗಾದ ಈ ವಿಚಿತ್ರ ಅನುಭವಗಳನ್ನು ಅನೇಕರಲ್ಲಿ ಹೇಳಿಕೊಂಡಿದ್ದಾರೆ. ಹಲವು ಪ್ರದೇಶಗಳನ್ನು ದೆವ್ವಗಳಿರುವ ಸ್ಥಳಗಳು ಎಂದು ಜನ ಇಂದಿಗೂ ನಂಬುತ್ತಾರೆ. ಹೀಗಿರುವಾಗ ನೆಗೆಟಿವ್ ಎನರ್ಜಿ ಇಲ್ಲ ಎಂದು ನಂಬುವುದು ಹೇಗೆ ಅಲ್ಲವೇ? ಅದೇ ರೀತಿ ಇಲ್ಲೊಬ್ಬರು ದೆವ್ವಕ್ಕೆ ಸಂಬಂಧಿಸಿದಂತೆ ತಾವು ಕೇಳಿದ ಆಘಾತಕಾರಿ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಆ ಪೋಸ್ಟ್ ಈಗ ಸಖತ್ ವೈರಲ್ ಆಗಿದೆ. 

ನನ್ನ ಹೆಂಡತಿಗೆ ದೆವ್ವ ಹಿಡಿದಿದೆ ಎಂದ ಕಾರು ಕ್ಲೀನರ್
ನಾರಾಯಣನ್‌ ಹರಿಹರನ್ ಎಂಬುವವರು ಈ ವಿಚಾರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬುದು ಇಲ್ಲಿದೆ. ಜನರೇ ಏನೋ ವಿಚಿತ್ರ ಘಟನೆಯೊಂದು ನಡೆದಿದೆ. ನನ್ನ ಕಾರನ್ನು ನಿಯಮಿತವಾಗಿ ಸ್ವಚ್ಛ ಮಾಡುವ ಕಾರು ಕ್ಲೀನರ್ ಒಬ್ಬರು ತಾನು ಒಂದು ತಿಂಗಳ ಸುಧೀರ್ಘ ರಜೆ ತೆಗೆದುಕೊಂಡು ಹೋಗುತ್ತಿದ್ದೇನೆ, ನನಗೆ ತುಂಬಾ ತುರ್ತಾಗಿ ನೇಪಾಳಕ್ಕೆ ಹೋಗಬೇಕು ಎಂದು ಹೇಳಿದ. ನಾನು ಆತನಿಗೆ ಸಹಾಯವಾಗುವಂತೆ ಸ್ವಲ್ಪ ಹಣಕಾಸಿನ ನೆರವು ನೀಡಿದೆ. ಆದರೆ ಆ ಸಮಯದಲ್ಲಿ ಆತ ಹೇಳಿದ ಮಾತುಗಳನ್ನು ಕೇಳಿ ನನಗೆ ವಿಚಿತ್ರ ಎನಿಸಿತು.
ಅವನು, 'ಮೇರೆ ವೈಫ್‌ ಕೋ ಚುಡೈಲ್‌ನೆ ಪಕಡ್‌ ಲೀ' ಅಂದರೆ ನನ್ನ ಹೆಂಡತಿಗೆ ದೆವ್ವ ಹಿಡಿದಿದೆ ಎಂದು ಆತ ಹೇಳಿದ. 

ಸುಂದರವಾಗಿ ತಮಿಳು ಮಾತನಾಡಲು ಶುರು ಮಾಡಿದ್ದ ನೇಪಾಳಿ ಪತ್ನಿ
ಆತನ ಪತ್ನಿಗೆ ಹುಷಾರಿಲ್ಲ ಎಂಬುದು ನನಗೆ ಗೊತ್ತಿತ್ತು. ಆಕೆಯ ಹೃದಯದಲ್ಲಿ ರಂಧ್ರವಿತ್ತು. ಆದರೆ ವೈದ್ಯಕೀಯ ಕಾರಣದಿಂದ ಆಕೆ ಹುಷಾರು ತಪ್ಪಿದ್ದಲ್ಲ ಎಂದು ಆತ ಹೇಳುತ್ತಿದ್ದ. ಏಕೆಂದರೆ ತಮಿಳಿನ ಗಂಧಗಾಳಿ ಇಲ್ಲದ ಆಕೆ ನಿರರ್ಗಳವಾಗಿ ಮೂಲತಃ ತಮಿಳು ಭಾಷಿಕರಂತೆ ತಮಿಳು ಮಾತನಾಡುತ್ತಿದ್ದಳು. ಹಾಗಂತ ಆಕೆ ಕೆಲವು ಪದಗಳನ್ನು ಮಾತನಾಡುತ್ತಿದ್ದಿದ್ದಲ್ಲ, ಸಂಪೂರ್ಣ ವಾಕ್ಯವನ್ನೇ ಬಹಳ ಸ್ಪುಟವಾಗಿ ಆಕೆ ಮಾತನಾಡುತ್ತಿದ್ದಳು. ತನ್ನ ಸ್ವಂತ ಮಾತೃಭಾಷೆಯೇನೋ ಎಂಬಂತೆ ಆಕೆ ತಮಿಳು ಮಾತನಾಡುತ್ತಿದ್ದಳು. ವಿಚಿತ್ರ ಎಂದರೆ ಆಕೆ ಎಂದೂ ಕೂಡ ತಮಿಳು ಕಲಿತವಳಲ್ಲ, ಅಲ್ಲದೇ ಆಕೆ ತಮಿಳಿಗರ ಸಂಪರ್ಕ ಇಲ್ಲದ ನೇಪಾಳಿಗರ ವಾಸಿಸುವ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಹೀಗಾಗಿ ಆಕೆಗೆ ತಮಿಳಿನ ಸಂಪರ್ಕ ಇದ್ದರೂ ಮೂಲ ನಿವಾಸಿಗಳಂತೆ ಆಕೆ ತಮಿಳು ಮಾತನಾಡುವುದು ಸಾಧ್ಯವೇ ಇಲ್ಲ, ಮೊದಲಿಗೆ ಆಕೆಯ ಪತಿ ಆಕೆಯನ್ನು ವೈದ್ಯರ ಬಳಿಗೂ ಕರೆದೊಯ್ದಿದ್ದರು. ಆದರೆ ಅವರು ಈ ಪ್ರಕರಣಕ್ಕೆ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಕೈ ಬಿಟ್ಟರಂತೆ. 

ಮಸೀದಿಗೆ ಕರೆದೊಯ್ದಿದ್ದ ಪತಿ
ನಂತರ ಆಕೆಯ ಪತಿ ಆಕೆಯನ್ನು ದೆವ್ವ ಬಿಡಿಸಲು ಸಮೀಪದ ಮಸೀದಿಗೂ ಕರೆದೊಯ್ದಿದ್ದಾರೆ. ಕಳೆದ ಎರಡು ತಿಂಗಳ ಕಾಲ ಅಲ್ಲೂ ಕೂಡ ಈಕೆಯ ಅನಾರೋಗ್ಯವನ್ನು ಹೊಗಲಾಡಿಸುವ ಪ್ರಯತ್ನ ಮಾಡಿದ್ದಾರೆ ಆದರೆ ಯಾವುದು ಫಲ ಕೊಟ್ಟಿಲ್ಲ, ಅಲ್ಲದೇ ಕಳೆದೆರಡು ತಿಂಗಳಲ್ಲಿ ಈಕೆ ಮತ್ತಷ್ಟು ಹೆಚ್ಚು ಹೆಚ್ಚು ತಮಿಳು ಮಾತನಾಡುತ್ತಿದ್ದಾಳೆ. ಅಲ್ಲದೇ ಆಕೆಗೆ ಎರಡು ತಿಂಗಳ ಕಾಲ ಚಿಕಿತ್ಸೆ ನೀಡಿದ ಮಸೀದಿಯ ಇಮಾಮ್ ಆಕೆಯನ್ನು ಕೂಡಲೇ ಆಕೆಯ ಊರಿಗೆ ಕರೆದುಕೊಂಡು ಹೋಗು, ಒಂದು ವೇಳೆ ಆಕೆ ಇಲ್ಲೇ ಇದ್ದರೆ ಬದುಕುಳಿಯುವುದು ಅಸಾಧ್ಯ ಎಂದು ಬಿಟ್ಟರಂತೆ ಹೀಗಾಗಿ ಆತ ಊರಿಗೆ ಹೊರಟಿದ್ದಾನೆ. ಆದರೆ ಆತನ ಮಾತು ಕೇಳಿ ಏನೂ ನಡೆಯುತ್ತಿದೆ ಎಂದು ಶಾಕ್‌ಗೆ ಒಳಗಾಗಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಇಂದು ಮುಂಜಾನೆ ಅವರು ಈ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸಖತ್ ವೈರಲ್ ಆಗಿದೆ. ಒಂದು ಲಕ್ಷಕ್ಕೂ ಅಧಿಕ ಜನ ಈ ಪೋಸ್ಟನ್ನು ವೀಕ್ಷಿಸಿದ್ದಾರೆ. 

ಇದಕ್ಕೆ ಒಬ್ಬರು ಪ್ರತಿಕ್ರಿಯಿಸಿದ್ದು, ಶಾಸ್ತ್ರಗಳಲ್ಲಿ, ನಾವು ಇಂತಹ ಜನರಿಗೆ ಜಾತಿಸ್ಮರ ಎಂದು ಕರೆಯುತ್ತೇವೆ, ಅಲ್ಲಿ ಅಪರೂಪದ ವ್ಯಕ್ತಿಯು ಹಿಂದಿನ ಜನ್ಮದ ನೆನಪುಗಳನ್ನು ಹೊಂದಿರುತ್ತಾನೆ. ಆಗ ಅವರಿಗೆ ಹಿಂದಿನ ಜನ್ಮದ ಭಾಷೆ ತಿಳಿದಿರುತ್ತದೆ. ಇದಕ್ಕೆ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬೇಕು, ಆದರೆ ಶ್ರೀಮದ್ ಭಾಗವತದ ಜಡ ಭಾರತ ಚರಿತ್ರೆಯನ್ನು ಕೇಳುವುದು ಕೂಡ ಇದಕ್ಕೆ ಪರಿಹಾರ ಒದಗಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.

Scroll to load tweet…