ನಟಿ ಸುಧಾರಾಣಿ ನಿರ್ಮಾಣದ 'ಘೋಸ್ಟ್ ದಿ ದೆವ್ವ' ಚಿತ್ರದಲ್ಲಿ ಅಲೌಕಿಕ ಘಟನೆಗಳನ್ನು ಚಿತ್ರಿಸಲಾಗಿದೆ. ಶಿವರಾಜ್‌ಕುಮಾರ್ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದಲ್ಲಿ ಸುಧಾರಾಣಿ ಪತ್ರಕರ್ತೆಯಾಗಿ ನಟಿಸಿದ್ದು, ದೆವ್ವದ ಬಂಗಲೆಯಲ್ಲಿ ಭಯಾನಕ ಅನುಭವ ಎದುರಿಸುತ್ತಾರೆ. ಟೀಸರ್‌ನಲ್ಲಿ ರೋಚಕ ದೃಶ್ಯಗಳಿವೆ.
ಭೂತ, ಪ್ರೇತ, ಆತ್ಮಗಳು ನಿಜವಾಗಿಯೂ ಇವೆಯೆ? ಹೌದು ಎನ್ನುವವರು ಎಷ್ಟು ಮಂದಿ ಇದ್ದಾರೋ, ಇವೆಲ್ಲಾ ಭ್ರಮೆ ಎನ್ನುವವರೂ ಅಷ್ಟೇ ಜನರಿದ್ದಾರೆ. ತಮ್ಮ ಅನುಭವಕ್ಕೆ ಬಂದಿರುವ ಹಲವಾರು ಭಯಾನಕ ಘಟನೆಗಳನ್ನು ವಿವರಿಸಿ, ಭೂತದ ಇರುವಿಕೆಯನ್ನು ಸಾರುವವರೂ ಇದ್ದರೆ, ಅವೆಲ್ಲವೂ ನಿಮ್ಮ ಮನಸ್ಸಿನ ಭ್ರಮೆ ಎಂದು ಹೇಳುವವರೂ ಸಿಗುತ್ತಾರೆ. ದೇವರು, ದೆವ್ವ ಎಲ್ಲವೂ ಅವರವರ ನಂಬಿಕೆ, ವಿಶ್ವಾಸದ ಮೇಲೆ ಇದೆ. ಆದರೆ ಸಾಮಾನ್ಯ ಜನರಿಗೆ ನಿಲುಕದ ಅದೆಷ್ಟೋ ಅಲೌಕಿಕ ಘಟನೆಗಳು ನಮ್ಮ ಸುತ್ತಲೂ ನಡೆಯುತ್ತಲೇ ಇರುತ್ತವೆ ಎನ್ನುವುದು ಮಾತ್ರ ದಿಟ. ವಿಜ್ಞಾನಕ್ಕೂ ನಿಲುಕದ, ಯಾವುದೇ ಪ್ರಯೋಗಕ್ಕೂ ಮೀರಿದ ಹಲವಾರು ಘಟನೆಗಳು, ಚಿತ್ರ-ವಿಚಿತ್ರ ಎನಿಸುವ ವಿಷಯಗಳು ಆಗಾಗ್ಗೆ ನಡೆಯುವುದು ಹಲವರಿಗೆ ಅನುಭವಕ್ಕೆ ಬಂದಿದೆ. ಅವರವರ ನಂಬಿಕೆ ಅವರವರದ್ದು. ಆದರೆ ಇದನ್ನು ನಂಬಲಿ ಬಿಡಲಿ ಇಂಥ ಸೀರಿಯಲ್ಗಳು, ಸಿನಿಮಾಗಳು ಬಂದರೆ ಅದನ್ನು ದೊಡ್ಡ ಪ್ರಮಾಣದ ಜನರು ನೋಡುತ್ತಾರೆ ಎನ್ನುವುದು ಸುಳ್ಳಲ್ಲ. ಒಂಥರಾ ಥ್ರಿಲ್ ಎನ್ನುವುದಕ್ಕಾಗಿಯಾದರೂ ಈ ಸಿನಿಮಾ ನೋಡುವವರು ಇರುವುದರಿಂದಲೇ ಇದಾಗಲೇ ಹಲವಾರು ಸಿನಿಮಾಗಳು ಆತ್ಮ, ಭೂತ, ಪ್ರೇತಗಳನ್ನು ಮುಂದಾಸಿಕೊಂಡೇ ಬಂದಿವೆ.
ಇದೀಗ ಅದೇ ಸಾಲಿಗೆ ಸೇರ್ತಿರೋದು ಘೋಸ್ಟ್ ದಿ ದೆವ್ವ ಸಿನಿಮಾ (Ghost the Devva movie). ಸ್ಯಾಂಡಲ್ವುಡ್ ನಟಿ ಸುಧಾರಾಣಿ ಅವರು, ಮೊದಲ ಬಾರಿ ನಿರ್ಮಾಪಕಿಯಾಗಿದ್ದಾರೆ. ಸಿನಿಮಾದಲ್ಲಿ ಸುಮಾರು 45 ವರ್ಷಗಳ ಕಾಲ ಅಭಿನಯಿಸಿರುವ ಸುಧಾರಾಣಿ ಅವರು ಸೀರಿಯಲ್ಗೂ ಎಂಟ್ರಿ ಕೊಟ್ಟಾಗಿದೆ. ಶ್ರೀರಸ್ತು ಶುಭಮಸ್ತುವಿನಲ್ಲಿ ತುಳಸಿಯಾಗಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಇದರ ಮಧ್ಯೆ ಇದೀಗ ಘೋಸ್ಟ್ ದಿ ದೆವ್ವ ಅನ್ನುವ ಒಂದು ಚಿಕ್ಕ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ತಾವೂ ನಟಿಸಿದ್ದಾರೆ. ಪ್ರಮುಖ ಪಾತ್ರದಲ್ಲಿಯೆ ಅಭಿನಯಿಸಿದ್ದಾರೆ. ಘೋಸ್ಟ್ ದಿ ದೆವ್ವ ಅನ್ನು ಚಿತ್ರವನ್ನು ನಿರ್ಮಿಸಿಸಿದ್ದಾರೆ. ಇಂಗ್ಲೆಮಡ್ನಲ್ಲಿ ಈ ಸಿನಿಮಾದ ಪ್ರೀಮಿಯರ್ ಇದೆ. ಇದಾಗಲೇ ಪೋಸ್ಟರ್ ರಿಲೀಸ್ ಕೂಡ ಆಗಿದ್ದು, ಶಿವರಾಜ್ ಕುಮಾರ್ ಇದರ ಬಗ್ಗೆ ಈಚೆಗೆ ಮಾತನಾಡಿದ್ದರು. ಇಡೀ ಸಿನಿಮಾ ತಂಡಕ್ಕೆ ಗುಡ್ ಲಕ್ ಹೇಳಿದ್ದರು. ತಮ್ಮ ಸಿನಿಮಾ ಜೀವನದಲ್ಲಿ ನಟಿ ಸುಧಾರಾಣಿ ಎಷ್ಟು ಮಹತ್ವ ಅನ್ನೋದನ್ನು ತಿಳಿಸಿದ್ದಾರೆ. ತಮ್ಮ ಮತ್ತು ಸುಧಾರಾಣಿ ಅವರ ಬಾಂಡಿಂಗ್ ಹೇಗಿದೆ ಅನ್ನೋದನ್ನೂ ಅಷ್ಟೆ ಮುಕ್ತವಾಗಿಯೇ ಹೇಳಿದ್ದರು.
ಚಿಕ್ಕ ವಯಸ್ಸಲ್ಲೇ ಅಂಥ ರೋಲ್ಗಳು ತುಂಬಾ ಪರಿಣಾಮ ಬೀರಿತು: ಸುಧಾರಾಣಿ ಓಪನ್ ಮಾತು
ಇದೀಗ ಈ ಚಿತ್ರದ ಕುರಿತು ಜನರಲ್ಲಿ ಇಂಟರೆಸ್ಟ್ ಮೂಡಿಸುವ ಸಲುವಾಗಿ ಘೋಸ್ಟ್ ದಿ ದೆವ್ವ ಸಿನಿಮಾದ ಚಿಕ್ಕದೊಂದು ತುಣುಕನ್ನು ಅವರು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಈ ಚಿತ್ರದಲ್ಲಿ ಜರ್ನಲಿಸ್ಟ್ ಆಗಿ ನಟಿಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ. ಇಲ್ಲೊಂದು ದೆವ್ವದ ಮನೆ ಇದೆಯಂತೆ ಗೊತ್ತಾ ಎನ್ನುತ್ತಲೇ ಆ ಬಂಗಲೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನು ಹೆಡ್ಫೋನ್ ಹಾಕಿಕೊಂಡು ಕೇಳಿ ಎಂದೂ ನಟಿ ಹೇಳಿದ್ದಾರೆ. ಸಾಮಾನ್ಯವಾಗಿ ಭೂತದ ಚಿತ್ರಗಳಲ್ಲಿ ಯಾವ ರೀತಿಯ ಸೌಂಡ್ ಎಫೆಕ್ಟ್ ಇರುತ್ತದೆಯೋ ಅದನ್ನು ಮಾಡಲಾಗಿದೆ. ಅದರಲ್ಲಿ ಕಾಲಿಡುತ್ತಿದ್ದಂತೆಯೇ ಯಾರೋ, ಏನು ಮೇಡಮ್ ಜರ್ನಲಿಸ್ಟ್ ಆಗಿ ಇದನ್ನೆಲ್ಲಾ ನಂಬ್ತೀರಾ ಎಂದು ಪ್ರಶ್ನಿಸಿದ್ದಾರೆ.
ಅಷ್ಟರಲ್ಲಿ ಸುಧಾರಾಣಿ ಅತ್ತ ನೋಡುತ್ತಿದ್ದಂತೆಯೇ ಗಾಬರಿಗೊಂಡಿದ್ದಾರೆ. ಅಲ್ಲಿ ತಮ್ಮದೇ ಫೋಟೋಗೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದಂಥ ಫೋಟೋ ಗೋಡೆ ಮೇಲೆ ನೇತು ಹಾಕಿರುವುದನ್ನು ನೋಡಿ ಅವರು ದಿಗಿಲುಗೊಂಡಿದ್ದಾರೆ. ಮುಂದೇನಾಗುತ್ತದೆ, ಇದೇನಿದು ಸಿನಿಮಾ ಎನ್ನುವುದನ್ನು ನೋಡಿದ ಮೇಲಷ್ಟೇ ತಿಳಿಯಬೇಕಿದೆ. ಸುಧಾರಾಣಿ ಅವರನ್ನ ಮೊದಲ ಬಾರಿಗೆ ಈ ರೀತಿಯ ಅವತಾರದಲ್ಲಿ ನೋಡುತ್ತಿದ್ದೇನೆ. ಸಿನಿಮಾ ಚೆನ್ನಾಗಿದೆ. ಇದು ಒಂದು ಸೈಕಾಲಜಿಕಲ್ ಸಿನಿಮಾ ಇದು ಅನಿಸುತ್ತದೆ. ಚಿತ್ರದ ಪೋಸ್ಟರ್ ಕೂಡ ಚೆನ್ನಾಗಿದೆ. ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ಅಂತಲೇ ಶಿವರಾಜ್ ಕುಮಾರ್ ಹೇಳುವ ಮೂಲಕ, ಈ ಸಿನಿಮಾದ ಬಗ್ಗೆ ಇನ್ನಷ್ಟು ಕುತೂಹಲ ಕೆರಳುವಂತೆ ಮಾಡಿದ್ದಾರೆ.
'ಹಾಲಲ್ಲಾದರೂ ಹಾಕು' ಶೂಟಿಂಗ್ನಲ್ಲಿ ರಾಜ್ ಆ ನೋಟ ಬೀರಿದಾಗ ನಡೆದಿತ್ತು ಪವಾಡ: ಸುಧಾರಾಣಿ ಅನುಭವ ಕೇಳಿ...

