Asianet Suvarna News Asianet Suvarna News

ಕಲ್ಕಿ ಸಿನಿಮಾ ನೋಡೋಕೆ ಮೊದಲು ಇದು ಗೊತ್ತಿರಲಿ- ಯಾರಿವನು ಕಲ್ಕಿ? ಅವನು ಬರೋಕೆ ಇನ್ನೆಷ್ಟು ವರ್ಷ?

ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ಕಲ್ಕಿ 2898 AD ಫಿಲಂ ತೆರೆಗಪ್ಪಳಿಸಿದೆ. ಈ ಚಿತ್ರ ಗಮನ ಸೆಳೆಯಲು ಕಾರಣವಾದದ್ದು ಕಲ್ಕಿ ಎಂಬ ಹೆಸರಿನಿಂದ. ಆದರೆ ನಿಜಕ್ಕೂ ನಮ್ಮ ಹಿಂದೂ ಪುರಾಣಗಳಲ್ಲಿ ಬರುವ ಕಲ್ಕಿ ಅವತಾರ ಯಾರು? ಆತ ಯಾವಾಗ ಬರುತ್ತಾನೆ?

 

Kalki 2898 AD Movie Who is Kalki and when he comes in Kaliyuga?
Author
First Published Jun 28, 2024, 11:48 AM IST

ಕಲ್ಕಿ 2898 AD ಫಿಲಂ ಸಿನಿಮಾ ಸೆಟ್ಟೇರಿದಾಗಿನಿಂದ ಸದ್ದು ಮಾಡುತ್ತಿದೆ. ಕಲ್ಕಿ 2898 ಎಡಿ ಅಂದರೆ ಏನು? ಇದಕ್ಕೂ ಹಿಂದೂ ಪುರಾಣಗಳ ಕಲ್ಕಿ ಅವತಾರಕ್ಕೂ ಇರುವ ಸಂಬಂಧವೇನು ಎಂಬ ಕುತೂಹಲ ನಿಮಗಿರಬಹುದು. ಹಿಂದೂ ಪುರಾಣಗಳಲ್ಲಿ ಕಲ್ಕಿ ಪಾತ್ರ ಬರುತ್ತದೆ ಎಂಬುದು ಸಹ ನಿಮಗೆ ತಿಳಿದಿರಬಹುದು. ಆದರೆ ಇದು ಯಾರು, ಆತ ಯಾಕೆ ಬರುತ್ತಾನೆ, ಆತ ಬರುವುದಕ್ಕೆ ಇನ್ನೆಷ್ಟು ವರ್ಷಗಳಿವೆ ಎಂಬುದೆಲ್ಲ ನಿಮಗೆ ಗೊತ್ತಿರಲಾರದು. 

ಕಲ್ಕಿ ಅವತಾರ ಮಹಾವಿಷ್ಣುವಿನ ಕೊನೆಯ ಅವತಾರ ಎಂದು ನಂಬಲಾಗಿದೆ. ಭೂಮಿಯಲ್ಲಿ ಕಲಿಯುಗದಲ್ಲಿ ಪಾಪ ಕರ್ಮಗಳು ಹೆಚ್ಚಾಗಿ ಅಧರ್ಮ ತಾಂಡವವಾಡುವಾಗ ವಿಷ್ಣು ಕಲ್ಕಿ ಅವತಾರ ಎತ್ತಿ ದುಷ್ಟರನ್ನು ನಾಶ ಮಾಡಿ ಕಲಿಯುಗ ಅಂತ್ಯ ಮಾಡುತ್ತಾನೆ ಎಂದು ನಂಬಲಾಗಿದೆ. ಕಲ್ಕಿಯನ್ನು ದುಷ್ಟರ ಸಂಹಾರ ಅಂತಲೂ ಭಾವಿಸಬಹುದು. ಕಲ್ಕಿ ಅವತಾರ ಎಂದರೆ  ಅಧರ್ಮ ನಾಶ ಮಾಡುವ ಅವತಾರ. ಕಲ್ಕಿ ಅವತಾರವು ವಿಷ್ಣುವಿನ 10ನೇಯ ಹಾಗೂ ಕೊನೆಯ ಅವತಾರ ಎಂದು ನಂಬಲಾಗಿದೆ. ಹಿಂದೂ ಧರ್ಮದ ಪ್ರಕಾರ ಕೂಡ ಕಲ್ಕಿ ಬಿಳಿಯ ಕುದರೆಯ ಮೇಲೆ ಬರ್ತಾನೆ. ಕುದರೆ ಆತನ ವಾಹನವಾಗಿರುತ್ತದೆ. ಆ ಕುದರೆಯ ಹೆಸರು ದೇವದತ್ತ.

ವಿಷ್ಣು ಕಲ್ಕಿ ಅವತಾರ ತಾಳುವುದು ಯಾವಾಗ? ಕಲಿಯುಗ ಅಂತ್ಯದ ಸಮಯ ಯಾವಾಗ? ಕಲ್ಕಿ ಕಲಿಯುಗವನ್ನು ಅಂತ್ಯಗೊಳಿಸಿ ಸತ್ಯಯುಗದ ಸ್ಥಾಪನೆಗೆ ಮುಂದಾಗುತ್ತಾನಂತೆ. ಸಂಸ್ಕೃತದಲ್ಲಿ ಕಲ್ಕಾ ಎಂಬ ಪದಕ್ಕೆ ಕೊಳಕು, ಕೊಳೆ ಎಂಬ ಅರ್ಥ. ಇಲ್ಲಿ ಕೊಳೆ ಅಂದರೆ ಅಧರ್ಮ, ಕೆಟ್ಟತನ ಎಂದು ಅರ್ಥ. ಕಲಿಯುಗದ ಅಂತ್ಯದಲ್ಲಿ ಪ್ರಪಂಚವು ಅತ್ಯಂತ ಕಠೋರ ಘಟನೆಗಳಿಗೆ, ಅಮಾನವೀಯ ಕೃತ್ಯಗಳಿಗೆ ಒಳಗಾಗುತ್ತದೆ. ಸತ್ಯ ನಾಶವಾಗುತ್ತದೆ. ದುಷ್ಟರು ಮೆರೆಯುತ್ತಾರೆ. ಇದನ್ನು ನಾಶ ಮಾಡಲು ವಿಷ್ಣು ಕಲ್ಕಿ ಅವತಾರ ತಾಳುತ್ತಾನೆ. ಹಲವಾರು ಪುರಾಣ ಗ್ರಂಥಗಳು ಕಲ್ಕಿಯ ಆಗಮನ ಮತ್ತು ಆಗಮನದ ಅವಧಿಯನ್ನು ಉಲ್ಲೇಖಿಸಿವೆ. 

ವಿಷ್ಣು ಪುರಾಣವು ಕಲ್ಕಿಯ ಮೊದಲ ಉಲ್ಲೇಖವನ್ನು ಮಾಡಿದೆ ಎಂದು ನಂಬಲಾಗಿದೆ. ಕಲಿಯುಗ ಕ್ರಿ. ಪೂ 3102ರಲ್ಲಿ ಆರಂಭವಾಯಿತು ಎಂದು ನಂಬಲಾಗಿದ್ದು, ಇದು 4,32,000 ವರ್ಷಗಳ ವರೆಗೂ ಮುಂದುವರೆಯುತ್ತದಂತೆ. ಆದರೆ ಅದಕ್ಕೂ ಮೊದಲೇ ವಿಷ್ಣು ಕಲ್ಕಿ ಅವತಾರದಲ್ಲಿ ಈ ಯುಗವನ್ನು ನಾಶ ಮಾಡಿ ಸತ್ಯಯುಗ ಸ್ಥಾಪಿಸುತ್ತಾನೆ ಎಂದು ಹೇಳಲಾಗುತ್ತದೆ. ಆತ ಅಚ್ಚ ಬಿಳಿ ಕುದುರೆಯ ಮೇಲೆ ಕುಳಿತು ಸ್ವರ್ಣ ಖಚಿತ ಖಡ್ಗ ಝಳಪಿಸುತ್ತಾ ಆಗಮಿಸುತ್ತಾನೆ ಎನ್ನಲಾಗುತ್ತದೆ. 

ವಿಶ್ಚದ ಎಲ್ಲಾ ಧರ್ಮದಲ್ಲೂ ಕಲಿಯುಗದ ಅಂತ್ಯದ ಉಲ್ಲೇಖ, ಬೌದ್ಧಧರ್ಮದಲ್ಲಿ ಕಲ್ಕಿಯ ಜನನ!

ಕಲಿಯುಗದ ಅಂತ್ಯದಲ್ಲಿ ಭಗವಾನ್ ವಿಷ್ಣುವಿನ ಅವತಾರ ಅಥವಾ ಅವತಾರವು ಭೂಮಿಗೆ ಆಗಮಿಸುತ್ತದೆ ಎಂದು ಶ್ರೀಮದ್ ಭಾಗವತದಲ್ಲಿ ಹೇಳಲಾಗಿದೆ. ಹಿಂದೂ ಧರ್ಮದಲ್ಲಿ ಸತ್ಯ ಯುಗ, ತ್ರೇತಾ ಯುಗ, ದ್ವಾಪರ ಯುಗ ಮತ್ತು ಕಲಿಯುಗ ಎಂಬ ನಾಲ್ಕು ಯುಗಗಳಿವೆ ಎಂದು ನಂಬಲಾಗಿದೆ. ಈ ನಾಲ್ಕು ಚಕ್ರಗಳು ನಮ್ಮ ಕ್ಯಾಲೆಂಡರ್ ತಿಂಗಳುಗಳಂತೆಯೇ ತಿರುಗುತ್ತವೆ. ಪ್ರಸ್ತುತ ಯುಗವು ಕಲಿಯುಗ. ಕುರುಕ್ಷೇತ್ರ ಯುದ್ಧದಿಂದ ನಾವು ಈಗಾಗಲೇ 5000 ವರ್ಷಗಳನ್ನು ದಾಟಿದ್ದೇವೆ ಎಂದು ನಂಬಲಾಗಿದೆ. ಅಂದರೆ ಇನ್ನೂ 427000 ವರ್ಷಗಳು ಉಳಿದಿವೆ. ಶ್ರೀಮದ್ ಭಾಗವತದಲ್ಲಿ ಕಲ್ಕಿಯು ಕಲಿಯುಗದ ಕೊನೆಯಲ್ಲಿ ಆಗಮಿಸುತ್ತಾನೆ ಎಂದು ಹೇಳಲಾಗಿದೆ.

ಭಗವಾನ್ ಕಲ್ಕಿಯ ತಂದೆ ವಿಷ್ಣು ಯಾಸ ಎಂದು ಕೂಡ ಹೇಳಲಾಗುತ್ತದೆ. ಅವರ ತಂದೆ ಕಲಿತ ಬ್ರಾಹ್ಮಣ. ಶ್ರೀಮದ್ ಭಾಗವತದಲ್ಲಿ, ವಿಷ್ಣು ಯಾಸನ ಮನೆಯಲ್ಲಿ ಭಗವಂತ ಕಲ್ಕಿ ಕಾಣಿಸಿಕೊಳ್ಳುತ್ತಾನೆ ಎಂದು ಹೇಳಲಾಗಿದೆ.

ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಕಲ್ಕಿ ಧಾಮ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ದೇವಾಲಯವನ್ನು ವಿಶ್ವದ ಅತ್ಯಂತ ವಿಶೇಷವಾದ ದೇವಾಲಯವೆಂದು ಪರಿಗಣಿಸಲಾಗಿದೆ. ಏಕೆಂದರೆ ಇದು ದೇವರ ದೇವಾಲಯವನ್ನು ಅವನ ಅವತಾರಕ್ಕಿಂತ ಮೊದಲು ಸ್ಥಾಪಿಸಿದ ಧಾಮ. ಈ ದೇವಾಲಯದ ಹತ್ತು ಗರ್ಭಗುಡಿಗಳು ವಿಷ್ಣುವಿನ ಹತ್ತು ಅವತಾರಗಳನ್ನು ಪ್ರತಿನಿಧಿಸುತ್ತವೆ. ಕಲ್ಕಿ ಧಾಮ್ ದೇವಾಲಯವನ್ನು ಐದು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಪೂರ್ಣಗೊಳ್ಳಲು ಐದು ವರ್ಷ ತೆಗೆದುಕೊಳ್ಳಲಿದೆ.

ನಿಂತ ಲಕ್ಷ್ಮಿ ದೇವಿ ವಿಗ್ರಹ ಮನೆಯಲ್ಲಿಟ್ರೆ ಬಡತನವನ್ನ ನೀವೇ ಆಹ್ವಾನಿಸಿದಂತೆ!
 

Latest Videos
Follow Us:
Download App:
  • android
  • ios