ಚಾಣಕ್ಯ ನೀತಿಯಲ್ಲಿ ಪತಿ-ಪತ್ನಿಯರ ಪಾಪ-ಪುಣ್ಯ ಫಲಗಳ ಬಗ್ಗೆ ತಿಳಿಸಲಾಗಿದೆ. ಹೆಂಡತಿಯ ಪಾಪ ಗಂಡನಿಗೆ, ಗಂಡನ ಪುಣ್ಯ ಹೆಂಡತಿಗೆ ಎಂಬುದು ಇದರ ಸಾರ. ಜೊತೆಗೆ, ರಾಜ- ಪ್ರಜೆ, ಗುರು-ಶಿಷ್ಯರ ನಡುವಿನ ಪಾಪ- ಪುಣ್ಯದ ಲೆಕ್ಕಾಚಾರವನ್ನೂ ಇಲ್ಲಿ ತಿಳಿಸಲಾಗಿದೆ.

ಎರಡು ಸಾವಿರ ವರ್ಷಗಳ ಹಿಂದೆ ಬದುಕಿದ್ದ, ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯವನ್ನು ಕಟ್ಟಲು ಸಹಾಯ ಮಾಡಿದ ಆಚಾರ್ಯ ಚಾಣಕ್ಯ ಬರೆದ ನೀತಿಸೂತ್ರಗಳು ಇಂದಿಗೂ ಕೂಡ ಪ್ರಸ್ತುತ. ಮಿತ್ರ- ಶತ್ರು ಸಂಬಂಧ, ಕುಟುಂಬ, ಭೇದಭಾವ, ಪತಿ- ಪತ್ನಿ ಸಂಬಂಧ, ರಾಜನ ಕರ್ತವ್ಯ, ಜನರ ಹಕ್ಕುಗಳು, ಶತ್ರುಬಾಧೆ ಇತ್ಯಾದಿಗಳ ಕುರಿತು ಹೇಳಿರುವ ಚಾಣಕ್ಯನ ಮಾತುಗಳನ್ನು ಸದಾ ನೆನಪಿನಲ್ಲಿಟ್ಟುಕೊಂಡು ಮುನ್ನಡೆದರೆ ಅವು ಜೀವನದ ಪ್ರತಿ ಹೆಜ್ಜೆಯಲ್ಲೂ ದಾರಿ ದೀಪವಾಗುತ್ತದೆ. ಅಂಥ ಹಲವಾರು ಮುತ್ತಿನಂಥ ಮಾತುಗಳನ್ನು ನಾವು ಇಲ್ಲಿ ನೋಡಬಹುದು. 

ಪಾಪ ಪುಣ್ಯ

ಹೆಂಡತಿ ಮಾಡಿದ ಪಾಪವನ್ನು ಗಂಡ ಹೊರಬೇಕಾಗುತ್ತದೆ. ಆದರೆ ಹೆಂಡತಿಗೆ ಗಂಡನ ಪಾಪದಲ್ಲಿ ಪಾಲಿಲ್ಲ! ಗಂಡನ ಪುಣ್ಯದಲ್ಲಿ ಹೆಂಡತಿಗೆ ಪಾಲು ಇದೆ, ಆದರೆ ಹೆಂಡತಿಯ ಪುಣ್ಯದಲ್ಲಿ ಗಂಡನಿಗೆ ಯಾವುದೇ ಪಾಲು ಇಲ್ಲ! ರಾಜನು ತನ್ನ ಪ್ರಜೆಗಳ ಪಾಪಗಳನ್ನು ಅನುಭವಿಸುತ್ತಾನೆ. ರಾಜನ ಆಸ್ಥಾನದಲ್ಲಿ ಕೆಲಸ ಮಾಡುವ ಪುರೋಹಿತನು ರಾಜನ ಪಾಪಗಳನ್ನು ಅನುಭವಿಸುತ್ತಾನೆ. ಪ್ರಜೆಗಳು ರಾಜ ಮಾಡಿದ ಪಾಪದ ಫಲವನ್ನು ಉಣ್ಣಬೇಕಾಗುತ್ತದೆ. ಇನ್ನು ಗುರುಗಳು ತಮ್ಮ ಶಿಷ್ಯರ ಪಾಪಗಳನ್ನು ಅನುಭವಿಸುತ್ತಾರೆ. ಇದರ್ಥ ಇಷ್ಟೇ- ಯಾರೂ ಪಾಪವನ್ನು ಮಾಡಬಾರದು. 

ದುಃಖ- ಸುಖ

ಪ್ರಪಂಚದ ಯಾವುದೇ ಮನೆಯಲ್ಲಿ ದುಃಖ ಇಲ್ಲದಿರಲು ಸಾಧ್ಯವಿಲ್ಲ. ಯಾವುದೇ ಕುಟುಂಬವು ಕಳಂಕ, ರೋಗ ಮತ್ತು ದುಃಖದಿಂದ ದೂರ ಇರಲು ಸಾಧ್ಯವಿಲ್ಲ. ಸುಖ- ದುಃಖ ಎಂಬುದು ಬದುಕಿನ ಪ್ರಮುಖ ಭಾಗಗಳು. ಒಬ್ಬನ ಸುಖ ಪಕ್ಕದ ಮನೆಯವನ ದುಃಖ ಆಗಿರಬಹುದು. ಪಕ್ಕದ ಮನೆಯವನ ದುಃಖ ನಿಮಗೆ ಸುಖ ಅನಿಸಬಹುದು. ಆದರೆ ಸರ್ವರಿಗೂ ಸುಖಕರವಾದ ಬದುಕನ್ನು ಬದುಕುವವನು ಮಾತ್ರ ಸ್ವರ್ಗಕ್ಕೆ ಹೋಗುತ್ತಾನೆ. 

ಕೀರ್ತಿ- ಅಪಕೀರ್ತಿ 

ಒಬ್ಬ ಮನುಷ್ಯನ ನಡವಳಿಕೆಗಳು ಆತನ ಮತ್ತು ಕುಟುಂಬದ, ದೇಶದ ಕೀರ್ತಿಯನ್ನು ಹೆಚ್ಚಿಸುತ್ತದೆ. ಆತನ ಉತ್ತಮ ನಡವಳಿಕೆಗಳೇ ವ್ಯಕ್ತಿ ಮೇಲೆ ಜನರ ಪ್ರೀತಿ ಹೆಚ್ಚಿಸಲು ಕಾರಣವಾಗುತ್ತದೆ. ರಾಜನು ಉತ್ತಮ ಗುಣದವನಾಗಿದ್ದರೆ ಪ್ರಜೆಗಳ ಪ್ರೀತಿ, ಯಜಮಾನನು ಉತ್ತಮನಾಗಿದ್ದರೆ ಕುಟುಂಬದ ಪ್ರೀತಿ ಸಿಗುತ್ತದೆ.

ಕಾಮ ವಿಕಾರ

ಹುಟ್ಟಿನಿಂದ ಕುರುಡರಾದವರಿಗೆ ದೃಷ್ಟಿ ಬರುವುದಿಲ್ಲ. ಅದೇ ರೀತಿ ಕಾಮಕ್ಕೆ ಒಳಗಾದವರು ವಿವೇಕಪೂರ್ಣವಾಗ ನೋಡಲಾರರು. ದುರಹಂಕಾರಿಯಾದ ವ್ಯಕ್ತಿಯು ತಾನು ಕೆಟ್ಟದ್ದನ್ನು ಮಾಡುತ್ತಿದ್ದೇನೆ ಎಂದು ಎಂದಿಗೂ ಭಾವಿಸುವುದಿಲ್ಲ. ಹಣದ ಹಿಂದೆ ಇರುವವರು ತಮ್ಮ ಕಾರ್ಯಗಳಲ್ಲಿ ಯಾವುದೇ ಪಾಪವನ್ನು ಕಾಣುವುದಿಲ್ಲ

ಆಸೆ- ದುರಾಸೆ

ಒಬ್ಬ ವ್ಯಕ್ತಿಯನ್ನು ಹೇಗೆ ತೃಪ್ತಿಪಡಿಸಬೇಕು ಎಂಬುದನ್ನು ಚಾಣಕ್ಯನ ನೀತಿ ತಿಳಿಸಿದೆ. ದುರಾಸೆಯ ಮನುಷ್ಯನನ್ನು ಉಡುಗೊರೆಯಿಂದ ತೃಪ್ತಿಪಡಿಸಬೇಕು. ಮಡಿಸಿದ ಕೈಗಳಿಂದ ಕಠಿಣ ವ್ಯಕ್ತಿಯನ್ನು ತೃಪ್ತಿಪಡಿಸಿ. ಮೂರ್ಖನಿಗೆ ಗೌರವ ಕೊಟ್ಟು ತೃಪ್ತಿಪಡಿಸು. ಸತ್ಯವನ್ನು ಹೇಳುವ ಮೂಲಕ ವಿದ್ವಾಂಸರನ್ನು ತೃಪ್ತಿಪಡಿಸಿ.

ಸೌಂದರ್ಯ ಯಾವುದು?

ಕೈಯ ಸೌಂದರ್ಯವು ಆಭರಣದಿಂದಲ್ಲ, ದಾನದಿಂದ ಸಿಂಗರಿಸಿ. ಶುಚಿತ್ವ ಬರುವುದು ಶ್ರೀಗಂಧದ ಲೇಪನದಿಂದ ಅಲ್ಲ, ನೀರಿನಲ್ಲಿ ಸ್ನಾನ ಮಾಡುವುದರಿಂದ. ಒಬ್ಬ ವ್ಯಕ್ತಿ ತೃಪ್ತನಾಗುವುದು ಆಹಾರ ಕೊಡುವುದರಿಂದಲ್ಲ ಬದಲಾಗಿ ಗೌರವ ಕೊಡುವುದರಿಂದ. ಮೋಕ್ಷವು ತನ್ನನ್ನು ತಾನು ಅಲಂಕರಿಸುವುದರಿಂದ ಬರುವುದಿಲ್ಲ, ಆದರೆ ಆಧ್ಯಾತ್ಮಿಕ ಜ್ಞಾನವನ್ನು ಜಾಗೃತಗೊಳಿಸುವುದರಿಂದ ಬರುತ್ತದೆ.

ಮಹಾಭಾರತ ಯುದ್ಧದ ಬಗ್ಗೆ ಈ 8 ಜನರಿಗೆ ಮೊದಲೇ ತಿಳಿದಿತ್ತಂತೆ! 

ಪುಣ್ಯಕ್ಕೆ ನಾಶವಿಲ್ಲ

ಎಲ್ಲಾ ದಾನ ಮತ್ತು ತಪಸ್ಸು ತಕ್ಷಣದ ಲಾಭವನ್ನು ಹೊಂದಿದೆ. ಆದರೆ ಅರ್ಹರಿಗೆ ನೀಡುವ ದಾನ ಮತ್ತು ಎಲ್ಲಾ ಜೀವಿಗಳಿಗೆ ನೀಡಿದ ರಕ್ಷಣೆ, ಅದರ ಪುಣ್ಯವು ಎಂದಿಗೂ ನಾಶವಾಗುವುದಿಲ್ಲ. ಪ್ರತಿ ಕ್ಷಣವೂ ಮುಖ್ಯ. ಸಮಯವನ್ನು ವ್ಯರ್ಥ ಮಾಡುವವರು, ಗುರಿಯನ್ನು ಸಾಧಿಸಲು ಕಷ್ಟ ಎದುರಿಸಬೇಕಾಗುತ್ತದೆ. ಪ್ರತಿ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಉತ್ತಮ ಗುಣ. ಸಮಯ ನಿರ್ವಹಣೆಯ ಮಾರ್ಗವನ್ನು ಅರ್ಥಮಾಡಿಕೊಂಡ ವ್ಯಕ್ತಿಗೆ ಗುರಿ ಸಾಧನೆ ಕಷ್ಟವಲ್ಲ.

ಶಿವ ಮತ್ತು ವಿಷ್ಣು ಪರಸ್ಪರ ಹೋರಾಡಿದ ಕತೆ ನಿಮಗೆ ಗೊತ್ತಿದೆಯೇ?