ಶಿವ ಭಕ್ತರು ಹಾಗೂ ವಿಷ್ಣು ಭಕ್ತರ ನಡುವೆ ಹಲವಾರು ಬಗೆಯ ಕಲಹಗಳು ಈ ಹಿಂದೆ ನಡೆದಿವೆ. ಆದರೆ ಶಿವ- ವಿಷ್ಣು ನೇರವಾಗಿ ಸಂಘರ್ಷಕ್ಕೆ ಇಳಿದ ಕತೆಗಳು ವಿರಳ. ಅಂತಹ ಒಂದು ಅಪರೂಪದ ಕತೆ ಇಲ್ಲಿದೆ.
ಶಿವ ಹಾಗೂ ವಿಷ್ಣುವನ್ನು ಭಕ್ತರು ಒಂದೇ ಎಂಬಂತೆ ನೋಡುತ್ತಾರೆ. ʼಹರಿಹರʼ ಎಂದು ಪೂಜಿಸುತ್ತಾರೆ. ಶಿವಭಕ್ತರು ಹಾಗು ವಿಷ್ಣುಭಕ್ತರು ಹೋರಾಡಿದ ಸಂದರ್ಭಗಳು ಪ್ರಾಚೀನ ಭಾರತದಲ್ಲಿ ಇವೆಯಾದರೂ, ಶಿವ- ವಿಷ್ಣು ಹೋರಾಡಿದ ಘಟನೆಗಳು ಪುರಾಣದಲ್ಲಿ ಕಾಣಿಸುವುದು ವಿರಳ. ಆದರೆ ಅಂತ ಒಂದು ಕಥೆ ಕೃಷ್ಣ ಯಜುರ್ವೇದದ ಭಾಗವಾಗಿರುವ ತೈತ್ತಿರೀಯ ಸಂಹಿತೆ ಮತ್ತು ಶುಕ್ಲ ಯಜುರ್ವೇದದ ಶತಪಥ ಬ್ರಾಹ್ಮಣ ಮತ್ತು ಅಥರ್ವವೇದದ ಗೋಪಥ ಬ್ರಾಹ್ಮಣದಲ್ಲಿ ಇದೆ.
ಶಿವನ ಪತ್ನಿ ದೇವಿ ಸತಿ (ದಾಕ್ಷಾಯಿಣಿ) ತನ್ನ ತಂದೆ ದಕ್ಷ ಶಿವನನ್ನು ಅವಮಾನಿಸಲು ನಡೆಸಿದ ನಿರೀಶ್ವರ ಯಾಗಕ್ಕೆ ಹೋಗಿ, ಅಲ್ಲಿ ತನಗೆ ಅವಮಾನವಾದುದನ್ನು ಸಹಿಸಲಾಗದೆ ಅಲ್ಲೇ ಯೋಗಾಗ್ನಿಯಲ್ಲಿ ದೇಹನಾಶ ಮಾಡಿಕೊಂಡಳು. ಈ ಸುದ್ದಿ ಭಗವಾನ್ ಶಿವನಿಗೆ ತಲುಪಿತು. ಅವನು ಕ್ರೋಧದಿಂದ ಕೆಂಡವಾದನು. ಸಿಟ್ಟಿನಿಂದ ತನ್ನ ಜಟಾಜೂಟದ ಒಂದು ಹಿಡಿಯನ್ನು ಕಿತ್ತು ಕೋಪದಿಂದ ನೆಲಕ್ಕಪ್ಪಳಿಸಿದನು. ಆಗ ಅಲ್ಲಿ ವೀರಭದ್ರ ಮತ್ತು ಭದ್ರಕಾಳಿ ಹೊರಹೊಮ್ಮಿದರು. ಶಿವನು ದಕ್ಷನ ಯಾಗವನ್ನು ನಾಶಮಾಡಲು ವೀರಭದ್ರನಿಗೆ ಆದೇಶಿಸಿದನು. ವೀರಭದ್ರ ಆ ಆದೇಶ ಪಾಲಿಸಲು ಶಿವನ ಗಣಗಳೊಂದಿಗೆ ದಕ್ಷ ಯಾಗದತ್ತ ಬಂದನು.
ಅಲ್ಲಿಸೇರಿದ್ದ ದೇವತೆಗಳು ಮತ್ತು ದೈತ್ಯರು ಗಣಗಳ ವಿರುದ್ಧ ಹೋರಾಡಲು ಸಿದ್ಧರಾದರು. ಇಂದ್ರನು ತನ್ನ ಆನೆ ಐರಾವತದ ಮೇಲೆ, ಇತರ ದೇವರುಗಳು ಸಹ ತಮ್ಮ ವಾಹನಗಳನ್ನು ಹತ್ತಿ ಯುದ್ಧಕ್ಕೆ ಬಂದರು. ಗಣಗಳು ಮತ್ತು ವೀರಭದ್ರರು ಉಗ್ರವಾಗಿ ಹೋರಾಡಿ ಅವರನ್ನು ಬೇರೆ ಬೇರೆ ದಿಕ್ಕುಗಳಲ್ಲಿ ಓಡಿಸಿದರು. ನಂತರ ವಿಷ್ಣು ಯುದ್ಧಭೂಮಿಯನ್ನು ಪ್ರವೇಶಿಸಿದನು. ಅವನನ್ನು ನೋಡಿದ ವೀರಭದ್ರನು ಅವನಿಗೆ ಮೊದಲು ನಮಸ್ಕರಿಸಿ ಹೇಳಿದ- "ನೀನು ದಕ್ಷನ ಪರವಾಗಿ ಹೋರಾಡಲು ಇಲ್ಲಿಗೆ ಏಕೆ ಬಂದಿರುವೆ? ಅವನು ಮಾಡಿದ್ದನ್ನು ನೋಡಿರುವೆಯಲ್ಲ? ಶಿವನನ್ನು ಈತ ನಿಂದಿಸಿದ್ದಾನೆ. ಹೀಗಿರುವಾಗ ಅವನ ಪರವಾಗಿ ನೀನು ವಿಜಯಶಾಲಿಯಾಗಬೇಕೆಂದು ನೀನು ಹೇಗೆ ನಿರೀಕ್ಷಿಸುವೆ? ನನ್ನ ಪಾಲಿಗೆ ನೀನು ಶಿವನಂತೆಯೇ ಇದ್ದೀಯ. ಆದರೆ ನೀನು ನನ್ನೆದರು ಹೋರಾಡಲೇಬೇಕೆಂದಿದ್ದರೆ, ನಾನು ಕಠಿಣವಾಗಿ ಹೋರಾಡದೆ ನಿರ್ವಾಹವಿಲ್ಲ" ಎಂದು ಹೇಳಿದನು.
ವಿಷ್ಣುವು ವೀರಭದ್ರನ ಮಾತುಗಳಿಗೆ ಮುಗುಳ್ನಕ್ಕು, ‘ದಕ್ಷನು ಯಜ್ಞಕ್ಕೆ ಹಾಜರಾಗಲು ನನ್ನನ್ನು ಪದೇ ಪದೇ ಕೇಳಿಕೊಂಡನು. ಶಿವನಂತೆಯೇ ನಾನು ಕೂಡ ನನ್ನ ಭಕ್ತರಿಗೆ ಅಧೀನನಾಗಿದ್ದೇನೆ. ನಾನು ನಿನ್ನನ್ನು ತಡೆಯುತ್ತೇನೆ ಅಥವಾ ನೀನು ನನ್ನನ್ನು ತಡೆಯಬೇಕು.’ ವೀರಭದ್ರನು ವಿಷ್ಣುವಿಗೆ ನಮಸ್ಕರಿಸಿ, ‘ಶಿವನಂತೆಯೇ ನೀನೂ ಸಹ. ನಾವೆಲ್ಲರೂ ನಿನ್ನ ಮತ್ತು ಶಿವನ ಸೇವಕರು’ ಎಂದು ಹೇಳಿದನು. ವಿಷ್ಣು ಮುಗುಳ್ನಗುತ್ತಾ, ‘ನನ್ನೊಂದಿಗೆ ಹಿಂಜರಿಕೆಯಿಲ್ಲದೆ ಹೋರಾಡು. ನಿನ್ನ ಬಾಣಗಳಿಂದ ನಾನು ತೃಪ್ತನಾದಾಗ, ನನ್ನ ವೈಕುಂಠಕ್ಕೆ ಹೋಗುತ್ತೇನೆ." ಎಂದನು.
Mahabharat Story: ಮಹಾಭಾರತದಲ್ಲಿ ದ್ರೌಪದಿಗೆ ಒಬ್ಬ ಮಗಳಿದ್ದದ್ದು ನಿಮಗೆ ಗೊತ್ತೇ?
ಹೀಗೆ ಯುದ್ಧವು ಶುರುವಾಯಿತು. ವಿಷ್ಣು ಮತ್ತು ವೀರಭದ್ರ ಸ್ವಲ್ಪ ಸಮಯದವರೆಗೆ ಹೋರಾಡಿದರು. ವೀರಭದ್ರನು ತನ್ನ ವಜ್ರದಿಂದ ಹೊಡೆದನು. ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಆಕ್ರಮಣ ಮಾಡಿದನು. ವೀರಭದ್ರನು ಚಕ್ರವನ್ನು ನುಂಗಿದನು. ವಿಷ್ಣುವು ಆತನ ಬಾಯಿಯನ್ನು ಒತ್ತಿ ಚಕ್ರವನ್ನು ಉಗುಳುವಂತೆ ಮಾಡಿದನು. ಶಿವನ ಅಂಶವಾದ ಈತನನ್ನು ಎದುರಿಸುವುದು ತರವಲ್ಲ ಎಂದು ವಿಷ್ಣುವಿಗೆ ಅರ್ಥವಾಯಿತು. ನಂತರ ಆತ ವೀರಭದ್ರನನ್ನು ಅನುಗ್ರಹಿಸಿ ವೈಕುಂಠಕ್ಕೆ ಹೊರಟುಹೋದನು. ಹೀಗೆ ಇವರಿಬ್ಬರ ನಡುವಿನ ಹೋರಾಟ ಕೊನೆಗೊಂಡಿತು. ವೀರಭದ್ರನು ಶಿವನ ಅಂಶಾವತಾರಿಯೇ ಅದುದರಿಂದ, ಶಿವನೊಂದಿಗೇ ವಿಷ್ಣುವು ಹೋರಾಡಿದಂತಾಯಿತು. ಇಬ್ಬರೂ ಸಮ ಶಕ್ತಿವಂತರು ಎಂಬುದೂ ಗೊತ್ತಾಯಿತು.
