Mysore Dasara 2022: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆಗೆ ದಿನಾಂಕ ನಿಗದಿ
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಖಾಸಗಿ ದರ್ಬಾರ್ ಹಾಲ್‌ನಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯವು ಇದೇ ಸೆ.20ರಂದು ಸಂಪ್ರದಾಯದಂತೆ ನಡೆಯಲಿದೆ.
ಬಿ. ಶೇಖರ್ ಗೋಪಿನಾಥಂ
ಮೈಸೂರು (ಸೆ.14): ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆಯ ಖಾಸಗಿ ದರ್ಬಾರ್ ಹಾಲ್‌ನಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸಲಿದ್ದು, ಇದಕ್ಕಾಗಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯವು ಇದೇ ಸೆ.20ರಂದು ಸಂಪ್ರದಾಯದಂತೆ ನಡೆಯಲಿದೆ. ಮೊದಲು ಸಿಂಹಾಸನದ ಬಿಡಿ ಭಾಗಗಳನ್ನು ಖಜಾನೆಯಿಂದ ಹೊರ ತೆಗೆದು ಪೂಜೆ ಸಲ್ಲಿಸಿ, ನಂತರ ಅಧಿಕಾರಿಗಳ ಸಮ್ಮುಖದಲ್ಲಿ ಪೊಲೀಸರ ಬಿಗಿ ಭದ್ರತೆಯಲ್ಲಿ ಮರದ ಕಾಲಾವಧಿ ಕಟ್ಟಿಅದರ ಆಧಾರದ ಮೇಲೆ ನಿಂತು ಸಿಂಹಾಸನವನ್ನು ಖಾಸಗಿ ದರ್ಬಾರ್ ಹಾಲ್‌ನಲ್ಲಿ ಜೋಡಿಸಲಾಗುತ್ತದೆ.
ಸಂಪ್ರದಾಯದಂತೆ ಮೈಸೂರು ತಾಲೂಕಿನ ಗೆಜ್ಜಗಳ್ಳಿ ಗ್ರಾಮದ ವೀರಶೈವರು ಮಡಿ ಬಟ್ಟೆತೊಟ್ಟು ದೇವರಿಗೆ ಕೈಮುಗಿದು, ಸಿಂಹಾಸನದ 6 ಭಾಗಗಳನ್ನು ತಂದು ಅಂಬಾವಿಲಾಸ ರತ್ನಗಂಬಳಿಯ ಮೇಲೆ 15 ಅಡಿ ಅಗಲ ಮತ್ತು ಉದ್ದವಿರುವ ಜಾಗದಲ್ಲಿ ಕೂರ್ಮಾವತಾರ ಆಸನವನ್ನು ಜೋಡಿಸಿ, ಕಾಲುಗಳನ್ನು ಅಳವಡಿಸುವರು. ನಂತರ ಪುರೋಹಿತರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಬಿಳಿ ಬಟ್ಟೆಯಿಂದ ಮುಚ್ಚುತ್ತಾರೆ. ಈ ವೇಳೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅವರ ಖುದ್ದು ಮಾರ್ಗದರ್ಶನದಲ್ಲಿ ಸಿಂಹಾಸನದ ಜೋಡಣೆ ಕಾರ್ಯವು ಜರುಗಲಿದೆ.
Draupadi Murmu: ದಸರಾ ಮಹೋತ್ಸವ ಉದ್ಘಾಟನೆಗೆ ರಾಷ್ಟ್ರಪತಿ ಇದೇ ಮೊದಲು ಆಗಮನ
ಯದುವೀರ ಖಾಸಗಿ ದರ್ಬಾರ್: ಸೆ.26 ರಿಂದ ಅ.5 ರವರೆಗೆ ದಸರಾ ಮಹೋತ್ಸವ ವೇಳೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನಖಚಿತ ಸಿಂಹಾಸನದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ದಸರೆ ಮುಗಿದ ನಂತರ ಸಂಪ್ರದಾಯದಂತೆ ಗೆಜ್ಜಗಳ್ಳಿ ವೀರಶೈವರೇ ಈ ಸಿಂಹಾಸನದ ಬಿಡಿಭಾಗಗಳನ್ನು ವಿಸರ್ಜಿಸಿ, ಮೂಲ ಸ್ಥಾನಕ್ಕೆ ತೆಗೆದುಕೊಂಡು ಹೋಗಿ ಇರಿಸುತ್ತಾರೆ. ಸಿಂಹಾಸನ ಇರಿಸಲಾಗಿರುವ ಖಾಸಗಿ ದರ್ಬಾರ್ ಹಾಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಅಳವಡಿಸಲಾಗುತ್ತದೆ.
Mysuru Dasara 2022 : ಗಜಪಡೆಗಳಿಗೆ ಸಿಡಿಮದ್ದು ತಾಲೀಮಿನ ಹೈಲೈಟ್ಸ್
ವಿವಿಧ ದಿನಾಂಕಗಳಂದು ಅರಮನೆಗೆ ಪ್ರವೇಶ ನಿರ್ಬಂಧ: ಮೈಸೂರು ರಾಜವಂಶಸ್ಥರು ಮೈಸೂರು ಅರಮನೆಯಲ್ಲಿ ದಸರಾ- 2022ರ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ನಡೆಸುವುದರಿಂದ ಈ ಕೆಳಕಂಡಂತೆ ಅರಮನೆ ಒಳಾವರಣವನ್ನು ವೀಕ್ಷಣೆ ಮಾಡುವ ಪ್ರವಾಸಿಗರಿಗೆ ಮೈಸೂರು ಅರಮನೆ ಮಂಡಳಿ ನಿರ್ಬಂಧಿಸಿದೆ. ಸಿಂಹಾಸನ ಜೋಡಣೆ ಪ್ರಯುಕ್ತ ಸೆ.20ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಖಾಸಗಿ ದರ್ಬಾರ್‌ನಲ್ಲಿ ರಾಜವಂಶಸ್ಥರ ಪೂಜಾ ಕೈಂಕರ್ಯದ ಪ್ರಯುಕ್ತ ಸೆ.26ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಪ್ರವೇಶ ಇರುವುದಿಲ್ಲ. ಹಾಗೆಯೇ, ಆಯುಧ ಪೂಜೆ ಪ್ರಯುಕ್ತ ಅ.4ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ, ವಿಜಯದಶಮಿಯ ಪ್ರಯುಕ್ತ ಅ.5 ರಂದು ಸಂಪೂರ್ಣ ದಿನ ಪ್ರವೇಶ ಇರುವುದಿಲ್ಲ. ಅಲ್ಲದೆ, ಸಿಂಹಾಸನ ವಿಸರ್ಜನೆ ಪ್ರಯುಕ್ತ ಅ.20ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಅರಮನೆಗೆ ಪ್ರವೇಶ ಇರುವುದಿಲ್ಲ ಎಂದು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಹ್ಮಣ್ಯ ತಿಳಿಸಿದ್ದಾರೆ.