Asianet Suvarna News Asianet Suvarna News

Draupadi Murmu: ದಸರಾ ಮಹೋತ್ಸವ ಉದ್ಘಾಟನೆಗೆ ರಾಷ್ಟ್ರಪತಿ ಇದೇ ಮೊದಲು ಆಗಮನ

ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ರಾಜ್ಯ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿದೆ. ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸುತ್ತಿರುವುದು ಇದೇ ಮೊದಲು. 

inauguration of mysuru dasara by president draupadi murmu this time gvd
Author
First Published Sep 11, 2022, 9:27 AM IST

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಸೆ.11): ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ರಾಜ್ಯ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿದೆ. ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸುತ್ತಿರುವುದು ಇದೇ ಮೊದಲು. ಆದರೆ ದಸರೆಯ ಕೊನೆಯ ದಿನ ನಡೆಯುವ ಜಂಬೂಸವಾರಿ ಉದ್ಘಾಟನೆಗೆ 1992 ರಲ್ಲಿ ರಾಷ್ಟ್ರಪತಿ ಡಾ. ಶಂಕರ್‌ ದಯಾಳ್‌ ಶರ್ಮ ಬಂದಿದ್ದರು. ಅತಿ ಗಣ್ಯರು ಬಂದಲ್ಲಿ ಬಂದೋಬಸ್ತ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕಾಗಿ ಇದನ್ನು ನಂತರದ ವರ್ಷಗಳಲ್ಲಿ ಕೈ ಬಿಡಲಾಯಿತು.

ದಸರೆ ಉದ್ಘಾಟನೆಗೂ ರಾಜ್ಯಪಾಲರು 1989 ರಲ್ಲಿ ಎಸ್‌.ಆರ್‌.ಬೊಮ್ಮಾಯಿ ಸರ್ಕಾರ ಉರುಳಿದ್ದರಿಂದ ಆ ವರ್ಷ ದಸರಾ ಮಹೋತ್ಸವವನ್ನು ಉದ್ಘಾಟಿಸಿದ್ದು ಅಂದಿನ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯ ಅವರು. ಉದ್ಘಾಟನೆಯಲ್ಲಿ ಪಾಲ್ಗೊಂಡ ಮೊದಲ ಸಿಎಂ ಎಚ್‌.ಡಿ. ದೇವೇಗೌಡ ದಸರಾ ಉದ್ಘಾಟನೆಯಲ್ಲಿ ಮೊದಲೆಲ್ಲಾ ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿರಲಿಲ್ಲ. ಆದರೆ 1995 ರಲ್ಲಿ ಮೊದಲ ಬಾರಿಗೆ ಅಂದಿನ ಮುಖ್ಯಮಂತ್ರಿಎಚ್‌.ಡಿ. ದೇವೇಗೌಡರು ಭಾಗವಹಿಸಿದ್ದರು. 

ಪ್ರತಿ ವರ್ಷ ಬರಲು ಆರಂಭಿಸಿದ್ದು ಯಡಿಯೂರಪ್ಪ: ಪ್ರತಿ ವರ್ಷ ಭಾಗವಹಿಸುವ ಪರಂಪರೆ ಆರಂಭಿಸಿದ್ದು ಬಿ.ಎಸ್‌. ಯಡಿಯೂರಪ್ಪ ಮೊದಲೆಲ್ಲಾ ದಸರೆ ಉದ್ಘಾಟನೆಗೆ ಮುಖ್ಯಮಂತ್ರಿಗಳು ಬರುತ್ತಿರಲಿಲ್ಲ. ಆದರೆ 2008 ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ದೇವೇಗೌಡರ ನಂತರ ಭಾಗವಹಿಸಿದ್ದಲ್ಲದೇ 2009, 2010- ಹೀಗೆ ಸತತ ಮೂರು ವರ್ಷ ಭಾಗವಹಿಸಿದ್ದರು. ನಂತರ ಸಿಎಂಗಳಾದ ಡಿ.ವಿ. ಸದಾನಂದಗೌಡ- 2011, ಜಗದೀಶ್‌ ಶೆಟ್ಟರ್‌- 2012 ಈ ಸಂಪ್ರದಾಯ ಪಾಲಿಸಿದರು. 

Mysuru: ಸೆ.19 ರಂದು ಮಂಡ್ಯದಲ್ಲಿ ಬೃಹತ್‌ ರೈತ ಸಮಾವೇಶ: ಬಡಗಲಪುರ ನಾಗೇಂದ್ರ

ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 2013 ರಿಂದ 2017ರವರೆಗೆ ಸತತ ಐದು ದಸರಾ ಉದ್ಘಾಟನೆ ಹಾಗೂ ಜಂಬೂ ಸವಾರಿಯಲ್ಲಿ ಭಾಗವಹಿಸಿ, ದಾಖಲೆ ಮೆರೆದರು. 2018 ರಲ್ಲಿ ಎಚ್‌.ಡಿ. ಕುಮಾರಸ್ವಾಮಿ, 2019, 2020 ರಲ್ಲಿ ಮತ್ತೆ ಬಿ.ಎಸ್‌. ಯಡಿಯೂರಪ್ಪ ಅವರು ಸತತ ಎರಡು ಬಾರಿ ಭಾಗವಹಿಸಿ, ಐದು ಬಾರಿ ಭಾಗವಹಿಸಿ, ಸಿದ್ದರಾಮಯ್ಯಅವರ ದಾಖಲೆ ಸರಿಗಟ್ಟಿದರು.

ಮೊದಲೆಲ್ಲಾ ಉಸ್ತುವಾರಿ ಸಚಿವರು, ನಂತರ ಗಣ್ಯರಿಗೆ ಆಹ್ವಾನ: ‘ರಾಜಧನ’ ರದ್ದಾದ ಹಿನ್ನೆಲೆಯಲ್ಲಿ ಮೈಸೂರು ಅರಸರು ಸಾರ್ವಜನಿಕ ದಸರಾ ಆಚರಣೆ ನಿಲ್ಲಿಸಿದ ನಂತರ ಸರ್ಕಾರವೇ ‘ನಾಡಹಬ್ಬ’ ಹೆಸರಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆ ಆರಂಭಿಸಿತು. ದಸರಾ ಮಹೋತ್ಸವದ ಕೊನೆಯ ದಿನ ಅಂದರೆ ವಿಜಯದಶಮಿಯಂದು ನಡೆಯುವ ‘ಜಂಬೂಸವಾರಿ’ಯನ್ನು ಮುಖ್ಯಮಂತ್ರಿ, ‘ಪಂಜಿನ ಕವಾಯತ’ನ್ನು ರಾಜ್ಯಪಾಲರು ಉದ್ಘಾಟಿಸುವುದು ನಡೆದುಕೊಂಡು ಬಂದಿರುವ ಸಂಪ್ರದಾಯ.

1990 ರಲ್ಲಿ ಉಸ್ತುವಾರಿ ಸಚಿವರಾಗಿದ್ದ ಎಂ. ರಾಜಶೇಖರಮೂರ್ತಿ, 1991 ರಲ್ಲಿ ಕೆ.ಎಸ್‌. ನಾಗರತ್ನಮ್ಮ, 1992 ರಲ್ಲಿ ಟಿ.ಎನ್‌. ನರಸಿಂಹಮೂರ್ತಿ ಉದ್ಘಾಟಿಸಿದ್ದರು. ಹೀಗೆ ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಉದ್ಘಾಟಿಸುತ್ತಿದ್ದರು. 1993 ರಲ್ಲಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಭೂಕಂಪ ಸಂಭಸಿತ್ತು. ಆಗ ದಸರೆ ಬೇಡ ಎಂಬ ಕೂಗು ಕೇಳಿ ಬಂದಿತ್ತು. ಅಂದಿನ ಸಿಎಂ ವೀರಪ್ಪ ಮೊಯ್ಲಿ ಅವರು ಕನ್ನಡದ ವರನಟ ಡಾ.ರಾಜ್‌ಕುಮಾರ್‌ ಅವರನ್ನೇ ಆ ವರ್ಷ ಉದ್ಘಾಟಕರಾಗಿ ಆಹ್ವಾನಿಸುವ ಮೂಲಕ ವಿರೋಧವನ್ನು ತಣ್ಣಗಾಗಿಸಿದ್ದರು. ‘ಒಲೆ ಹತ್ತಿ ಉರಿದೊಡನಿಲ್ಲಬಹುದು. ಧರೆ ಹತ್ತಿ ಉರಿದೊಡೆ ನಿಲ್ಲಬಹುದೇ..?’ ಎಂದು ಡಾ,.ರಾಜ್‌ಕುಮಾರ್‌ ಅವರು ಸಂದರ್ಭೋಚಿತವಾಗಿ ಮಾತನಾಡಿದ್ದರು.

ಅಲ್ಲಿಂದ ಕಲಾವಿದರು- ಸಾಹಿತಿಗಳನ್ನು ಕರೆಸುವ ಸಂಪ್ರದಾಯ ಆರಂಭವಾಯಿತು. 1994 ರಲ್ಲಿ ರೆಬೆಲ್‌ಸ್ಟಾರ್‌ ಅಂಬರೀಶ್‌, 1995 ರಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್‌. ಅನಂತಮೂರ್ತಿ ಉದ್ಘಾಟಿಸಿದ್ದರು. 1997 ರಲ್ಲಿ ಖ್ಯಾತ ಕವಿ ಡಾ.ಜಿ.ಎಸ್‌. ಶಿವರುದ್ರಪ್ಪ, 1998ರಲ್ಲಿ ಪ್ರಖ್ಯಾತ ಸಂಗೀತಗಾರರಾದ ಡಾ.ಗಂಗೂಬಾಯಿ ಹಾನಗಲ್‌, 1999 ರಲ್ಲಿ ಸಾಹಿತಿ ಪ್ರೊ.ದೇಜಗೌ, 2000 ರಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್‌. ಜೋಯಿಸ್‌, 2001ರಲ್ಲಿ ಪಂಚಭಾಷಾ ಅಭಿನೇತ್ರಿ ಬಿ. ಸರೋಜಾದೇವಿ ಉದ್ಘಾಟಿಸಿದ್ದರು. 2002 ರಲ್ಲಿ ಖ್ಯಾತ ವಿಜ್ಞಾನಿ ಪ್ರೊ.ಸಿಎನ್‌ಆರ್‌ ರಾವ್‌ ಅವರನ್ನು ಆಹ್ವಾನಿಸಲಾಗಿತ್ತು. ಅವರು ಗೈರಾಗಿದ್ದರು. 2004 ರಲ್ಲಿ ವಿಚಾರವಾದಿ ಡಾ.ಎಚ್‌. ನರಸಿಂಹಯ್ಯ, 2005 ರಲ್ಲಿ ಪ್ರಗತಿಪರ ಸಾಹಿತಿ ಬರಗೂರು ರಾಮಚಂದ್ರಪ್ಪ, 2006 ರಲ್ಲಿ ಸಾಹಿ,ತಿ ಜಿ. ನಾರಾಯಣ ಉದ್ಘಾಟಿಸಿದ್ದರು.

ಧರ್ಮಾಧಿಕಾರಿಗಳ ಪರಂಪರೆ: 2007ರಲ್ಲಿ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ , 2008 ರಲ್ಲಿ ಸಿದ್ಧಗಂಗೆಯ ಡಾ. ಶಿವಕುಮಾರ ಸ್ವಾಮೀಜಿ, 2009 ರಲ್ಲಿ ಆರ್ಚ್‌ ಆಫ್‌ ಲಿವಿಂಗ್‌ನ ಶ್ರೀ ರವಿಶಂಕರ್‌ ಗುರೂಜಿ, 2010 ರಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, 2011ರಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶ್ವರತೀರ್ಥ ಸ್ವಾಮೀಜಿ, 2012 ರಲ್ಲಿ ಬಿಜಾಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಉದ್ಘಾಟಿಸಿದ್ದರು.

ಮತ್ತೆ ಸಾಹಿತಿಗಳು: ಸಿದ್ದರಾಮಯ್ಯಅವರು ಸಿಎಂ ಆದ ನಂತರ 2013ರಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, 2014 ರಲ್ಲಿ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ. ಗಿರೀಶ್‌ ಕಾರ್ನಾಡ್‌ ಅವರನ್ನು ಆಹ್ವಾನಿಸಲಾಗಿತ್ತು. ರೈತರ ಸರಣಿ ಆತ್ಮಹತ್ಯೆ ಹಿನ್ನೆಲೆಯಲ್ಲಿ 2015 ರಲ್ಲಿ ಎಚ್‌.ಡಿ. ಕೋಟೆ ತಾಲೂಕು ಮಲಾರ ಕಾಲೋನಿಯ ರೈತ ಪುಟ್ಟಯ್ಯ ಅವರಿಂದ ಉದ್ಘಾಟಿಸಲಾಯಿತು. 2016 ರಲ್ಲಿ ಚೆಂಬೆಳಕಿನ ಕವಿ ಡಾ.ಚನ್ನವೀರ ಕಣವಿ, 2017 ರಲ್ಲಿ ನಿತ್ಯೋತ್ಸವ ಕವಿ ಪ್ರೊ.ಕೆ.ಎಸ್‌. ನಿಸಾರ್‌ ಅಹಮದ್‌ ಅವರು ಉದ್ಘಾಟಿಸಿದರು. 2018 ರಲ್ಲಿ ಇಸ್ಫೋಸಿಸ್‌ ಫೌಂಡೇಷನ್‌ ಸಂಸ್ಥಾಪಕಿ ಡಾ.ಸುಧಾ ಮೂರ್ತಿ, 2019 ಕಲ್ಲಿ ಖ್ಯಾತ ಕಾದಂಬರಿಕಾರ ಡಾ.ಎಸ್‌.ಎಲ್‌. ಭೈರಪ್ಪ ಉದ್ಘಾಟಿಸಿದ್ದರ್ರು. 2020 ರಲ್ಲಿ ಕೊರೋನಾ ಹಿನ್ನೆಲೆಯಲ್ಲಿ ವೈದ್ಯರೂ ಆದ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಅವರಿಂದ ಉದ್ಘಾಟಿಸಲಾಗಿತ್ತು.

ಮತ್ತೊಮ್ಮೆ ರಾಜಕಾರಣಿಗಳು: 2021ರ ದಸರೆಯನ್ನು ರಾಜ್ಯದ ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ಮುಖ್ಯಮಂತ್ರಿಎಸ್‌.ಎಂ. ಕೃಷ್ಣ ಅವರು ಉದ್ಘಾಟಿಸಿದರು. ಅರಮನೆಗೆ ಗಜಪಡೆ ಸ್ವಾಗತಕ್ಕೆ ಸಿಎಂ ಮೊಯ್ಲಿ ಬಂದಿದ್ದರು. ಈಗ ದಸರೆ ಉದ್ಘಾಟನೆಗೆ ಮುಖ್ಯಮಂತ್ರಿಗಳು ಬರುವುದು ಸಂಪ್ರದಾಯ. ದಸರೆಗೆ ಬರುವ ಆನೆಗಳನ್ನು ಅರಮನೆಗೆ ಸ್ವಾಗತಿಸಲು 1993 ರಲ್ಲಿ ಅಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರೇ ಬಂದಿದ್ದರು.

ತಂದೆ- ಮಕ್ಕಳ ಜೋಡಿ: ದೇವೇಗೌಡ- ಕುಮಾರಸ್ವಾಮಿ, ಎಸ್‌.ಆರ್‌. ಬೊಮ್ಮಾಯಿ- ಬಸವರಾಜ ಬೊಮ್ಮಾಯಿ- ಹೀಗೆ ತಂದೆ- ಮಕ್ಕಳು ಜಂಬೂ ಸವಾರಿಯನ್ನು ಉದ್ಘಾಟಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಎಸ್‌.ಆರ್‌. ಬೊಮ್ಮಾಯಿ ಅವರು ಕೂಡ ಮುಖ್ಯಮಂತ್ರಿಯಾಗಿ 1988 ರಲ್ಲಿ ಜಂಬೂ ಸವಾರಿ ಉದ್ಘಾಟಿಸಿದ್ದರು. ಎಚ್‌.ಡಿ. ದೇವೇಗೌಡರು ಮುಖ್ಯಮಂತ್ರಿಯಾಗಿ 1995ರ ಜಂಬೂ ಸವಾರಿ ಉದ್ಘಾಟಿಸಿದ್ದರೆ ಅವರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 2006, 2018ರ ದಸರೆ ಉದ್ಘಾಟಿಸಿದ್ದರು. ಬೊಮ್ಮಾಯಿ ಅವರ ಪುತ್ರ ಬಸವರಾಜ ಬೊಮ್ಮಾಯಿ ಅವರು 2021ರ ಜಂಬೂ ಸವಾರಿ ಉದ್ಘಾಟಿಸಿದ್ದರು. ಈ ಬಾರಿಯೂ ಉದ್ಘಾಟಿಸಲಿದ್ದಾರೆ.

ಜಿಮ್ ಮಾಡಿದ್ದಕ್ಕೆ ಪುನೀತ್‌ಗೆ ಹೃದಯಾಘಾತವಾಗಿದ್ದಲ್ಲ: ಡಾ.ಮಂಜುನಾಥ್

ಎರಡು ಬಾರಿ ರಾಜ್ಯಪಾಲರಿಂದಲೂ ಜಂಬೂಸವಾರಿ ಉದ್ಘಾಟನೆ
- 1988 ರಲ್ಲಿ ಎಸ್‌.ಆರ್‌. ಬೊಮ್ಮಾಯಿ ನೇತೃತ್ವದ ಜನತಾ ಪಕ್ಷದ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು. ಆಗ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯ ಜಂಬೂಸವಾರಿ ಉದ್ಘಾಟಿಸಿದ್ದರು.

- 2007 ರಲ್ಲಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌- ಬಿಜೆಪಿ ಸರ್ಕಾರ ಪತನವಾಗಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಯಿತು. ಆಗ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್‌ ಜಂಬೂ ಸವಾರಿ ಉದ್ಘಾಟಿಸಿದ್ದರು.

Follow Us:
Download App:
  • android
  • ios