Ram Navami 2023: ಭೇಟಿ ನೀಡಲೇಬೇಕಾದ ರಾಮಾಯಣ ತಾಣಗಳು
ರಾಮಾಯಣ ಕತೆಯಲ್ಲಿ ಬರುವ ಹಲವಾರು ತಾಣಗಳು ಭಾರತದಲ್ಲಿವೆ ಎಂದು ನಿಮಗೆ ತಿಳಿದಿದೆಯೇ? ಭಾರತದ ದಕ್ಷಿಣ ಭಾಗದಿಂದ ಉತ್ತರ ಭಾಗದವರೆಗೆ, ಶ್ರೀಲಂಕಾ ಸೇರಿದಂತೆ ಹಲವೆಡೆ ತ್ರೇತಾಯುಗದಲ್ಲೇ ರಾಮ ಸವೆಸಿದ ದಾರಿಗಳನ್ನು ನೋಡಿದರೆ ಆಶ್ಚರ್ಯವೆನಿಸುತ್ತದೆ.
ಭಾರತವು ಸಂಸ್ಕೃತಿ, ಧರ್ಮ, ಅನೇಕ ಸಂಪ್ರದಾಯಗಳು ಮತ್ತು ಅಸಂಖ್ಯಾತ ದೇವರು ಮತ್ತು ದೇವತೆಗಳ ನಾಡು. ಪ್ರಪಂಚದ ಅತ್ಯಂತ ಹಳೆಯ ದೇಶಗಳಲ್ಲಿ ಇದು ಕೂಡ ಒಂದು. ನಮ್ಮ ಬೇರುಗಳ ಬಗ್ಗೆ ನಮಗೆ ಅರಿವು ಮೂಡಿಸುವ ಹಲವಾರು ಪವಿತ್ರ ಪುಸ್ತಕಗಳು ಮತ್ತು ಧರ್ಮಗ್ರಂಥಗಳನ್ನು ನಾವು ಹೊಂದಿದ್ದೇವೆ.
ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳ ವಿಷಯಕ್ಕೆ ಬಂದರೆ, ಭಾರತದಲ್ಲಿ ಶತಮಾನಗಳಿಂದ ಹೇಳಲಾಗುವ ಹಲವಾರು ಕಥೆಗಳಿವೆ. ನಮ್ಮಲ್ಲಿ ಕೆಲವರು ನಮ್ಮ ಪವಿತ್ರ ಪುಸ್ತಕಗಳನ್ನು ಓದದಿದ್ದರೂ, ಭಾರತೀಯ ಇತಿಹಾಸದ ಕೆಲವು ದೊಡ್ಡ ಘಟನೆಗಳು ನಡೆದ ಸ್ಥಳಗಳ ಪ್ರಸ್ತುತತೆ ನಮಗೆ ಇನ್ನೂ ತಿಳಿದಿದೆ. ಅವುಗಳನ್ನು ಕೇಳುವುದೇ ಒಂದು ಸಾಹಸವೆನಿಸಿದರೂ, ನೈಜ ಘಟನೆಗಳು ನಡೆದ ಸ್ಥಳಗಳಿಗೆ ಭೇಟಿ ನೀಡುವುದನ್ನು ಕಲ್ಪಿಸಿಕೊಳ್ಳಿ. ಬಹುಶಃ, ಅದು ಸಾಕಷ್ಟು ರೋಚಕವಾಗಿರುತ್ತದೆ!
ವಿಷ್ಣುವಿನ ಅವತಾರವಾದ ರಾಮನು ಓಡಾಡಿದ ಸ್ಥಳಗಳಲ್ಲೆಲ್ಲ ನಾವೂ ಕೂಡಾ ಓಡಾಡುವ ಅನುಭವ ಅದಮ್ಯವಾಗಿರುತ್ತದೆ. ನೀವು ಭೇಟಿ ನೀಡಲೇಬೇಕಾದ ರಾಮಯಣದ ಕೆಲ ಪ್ರಮುಖ ತಾಣಗಳಿವು.
ಚಿತ್ರಕೂಟ(Chitrakoot)
ನೀವು ಪವಿತ್ರ ಗ್ರಂಥ ರಾಮಾಯಣವನ್ನು ಓದಿದ್ದರೂ ಅಥವಾ ಓದದಿದ್ದರೂ ಪರವಾಗಿಲ್ಲ, ನೀವು ಭರತ್ ಮಿಲಾಪ್ ಬಗ್ಗೆ ಕೇಳಿರಬೇಕು. ಇದರಲ್ಲಿ ರಾಮನ ಕಿರಿಯ ಸಹೋದರ ಭರತನು ತಮ್ಮ ತಂದೆ ರಾಜ ದಶರಥನ ನಿಧನದ ಬಗ್ಗೆ ತಿಳಿಸಲು ವನವಾಸದಲ್ಲಿದ್ದ ರಾಮನನ್ನು ಭೇಟಿ ಮಾಡುತ್ತಾನೆ. ಆತ ತನ್ನ ಅಣ್ಣನನ್ನು ಕಾಡನ್ನು ತೊರೆದು ಅಯೋಧ್ಯೆಗೆ ಹಿಂತಿರುಗುವಂತೆ ವಿನಂತಿಸಿದ ಸ್ಥಳ ಚಿತ್ರಕೂಟ. ರಾಮಾಯಣದಲ್ಲಿ ಈ ಅಧ್ಯಾಯ ಹಾಗೂ ಸ್ಥಳವು ಸಾಕಷ್ಟು ಮಹತ್ವದ್ದಾಗಿದೆ.
ಭಗವಾನ್ ರಾಮನು ಭರತನೊಂದಿಗೆ ಹಿಂತಿರುಗಲಿಲ್ಲ, ಬದಲಿಗೆ ಅವನು ಪತ್ನಿ ಸೀತೆ ಮತ್ತು ಕಿರಿಯ ಸಹೋದರ ಲಕ್ಷ್ಮಣನೊಂದಿಗೆ ಸುಮಾರು 10-12 ವರ್ಷಗಳನ್ನು ಈ ನಗರದಲ್ಲಿ ಕಳೆದನು. ನಗರವು ಇನ್ನೂ ಉತ್ತರ ಪ್ರದೇಶದಲ್ಲಿದೆ ಮತ್ತು ಅದ್ಭುತವಾದ ದೇವಾಲಯಗಳಿಂದ ತುಂಬಿದೆ.
ಅಯೋಧ್ಯೆ(Ayodhya)
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದೊಂದಿಗೆ, ಈ ಪುರಾತನ ನಗರವು ಭೇಟಿ ನೀಡಲು ಇನ್ನಷ್ಟು ರೋಮಾಂಚನಕಾರಿಯಾಗಿದೆ. ಇದು ಉತ್ತರ ಪ್ರದೇಶದಲ್ಲಿ ನೆಲೆಗೊಂಡಿರುವ ಭಗವಾನ್ ರಾಮನ ಜನ್ಮಸ್ಥಳವಾಗಿದೆ. ಅಯೋಧ್ಯೆಯು ಸಾಕೇತ್ ಅಥವಾ ರಾಮ ಜನ್ಮಭೂಮಿ ಎಂದೂ ಕರೆಯಲ್ಪಡುವ ವಿಶ್ವದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ನೀವು ಭಗವಾನ್ ರಾಮನ ಭಕ್ತರಾಗಿದ್ದರೆ, ಅಯೋಧ್ಯೆಗಿಂತ ಅವನೊಂದಿಗೆ ಹೆಚ್ಚು ಸಂಪರ್ಕವನ್ನು ಅನುಭವಿಸುವ ಇನ್ನೊಂದು ಸ್ಥಳವು ಭೂಮಿಯ ಮೇಲೆ ಸಿಗುವುದಿಲ್ಲ!
Ram navami 2023: ಈ ರಾಶಿಗಳಿಗೆ ರಾಮನ ಆಶೀರ್ವಾದದಿಂದ ಧನಯೋಗ
ಪಂಚವಟಿ(Panchavati)
ಈಗ ನಾಸಿಕ್ ಎಂದು ಕರೆಯಲ್ಪಡುವ ಇದು ರಾಮಾಯಣದ ಅತ್ಯಂತ ಮಹತ್ವದ ಘಟನೆಗೆ ಸಾಕ್ಷಿಯಾದ ಸ್ಥಳವಾಗಿದೆ. ಪಂಚವಟಿಯಲ್ಲಿ ಲಕ್ಷ್ಮಣನು ಶೂರ್ಪನಖಾಳ ಮೂಗನ್ನು ಕತ್ತರಿಸಿದನು. ಇದೇ ರಾವಣ ಸೀತಾದೇವಿಯನ್ನು ಅಪಹರಿಸಲು ಕಾರಣವಾಯಿತು. ಇದರ ಹೊರತಾಗಿ, ಮಹಾರಾಷ್ಟ್ರದಲ್ಲಿರುವ ನಾಸಿಕ್ ರಾಮ ಕಲಾ ಮಂದಿರಕ್ಕೆ ನೆಲೆಯಾಗಿದೆ, ಇದು ಭಾರತದಲ್ಲಿ ಹೆಚ್ಚು ಭೇಟಿ ನೀಡುವ ರಾಮಮಂದಿರಗಳಲ್ಲಿ ಒಂದಾಗಿದೆ.
ಜನಕಪುರ(Janakpur)
ಜಾನಕಿ ಎಂದೂ ಕರೆಯಲ್ಪಡುವ ಸೀತಾ ದೇವಿಯು ಜನಕಪುರದಲ್ಲಿ ಜನಿಸಿದಳು. ಅವಳು ರಾಜ ಜನಕನ ಮಗಳು. ಈ ಸ್ಥಳವು ಸೀತೆಯ ಜನ್ಮಸ್ಥಳ ಎಂಬುದಷ್ಟೇ ಅಲ್ಲ, ಇಲ್ಲಿಯೇ ಶ್ರೀರಾಮನು ಅವಳೊಂದಿಗೆ ವಿವಾಹವಾದನು ಎಂಬುದು ಹೆಚ್ಚು ಮಹತ್ವದ ವಿಷಯವಾಗಿದೆ. ನಗರವು ಪ್ರಸ್ತುತ ನೇಪಾಳದ ಕಠ್ಮಂಡುವಿನ ಆಗ್ನೇಯದಲ್ಲಿದೆ, ಭಾರತದ ಗಡಿಯಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿದೆ. ನೀವು ಈ ಸ್ಥಳವನ್ನು ತಲುಪಿದಾಗ, ಸೀತಾಮರ್ಹಿಗೂ ಭೇಟಿ ನೀಡಿ!
Ram Navami Date 2023; ಈ ದಿನ ವೈಶಿಷ್ಟ್ಯತೆಯ ಬಗ್ಗೆ ನೀವು ತಿಳಿಯಬೇಕಾದುದೆಲ್ಲವೂ ಇಲ್ಲಿದೆ..
ರಾಮೇಶ್ವರಂ(Rameshwaram)
ರಾಮೇಶ್ವರಂ ಅನ್ನು ಭಾರತದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಬಹುದು. ರಾಮೇಶ್ವರಂನ ಸೌಂದರ್ಯವನ್ನು ವೀಕ್ಷಿಸಲು ಮತ್ತು ಅದರ ಪ್ರಶಾಂತತೆಯನ್ನು ಅನುಭವಿಸಲು ಅನೇಕರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಸ್ಥಳವು ಸಾಕಷ್ಟು ಐತಿಹಾಸಿಕವಾಗಿದೆ. ಏಕೆಂದರೆ ರಾಮೇಶ್ವರಂ- ಸೀತಾ ದೇವಿಯನ್ನು ರಕ್ಷಿಸಲು ರಾವಣನ ಲಂಕಾವನ್ನು ತಲುಪಲು ವಾನರಸೇನೆಯು ರಾಮಸೇತು ಸೇತುವೆಯನ್ನು ನಿರ್ಮಿಸಲು ಪ್ರಾರಂಭಿಸಿದ ಸ್ಥಳವಾಗಿದೆ. ಈ ಸ್ಥಳದ ಪ್ರಸ್ತುತತೆಯೂ ಸಹ ಸೀತೆ ಲಂಕಾದಿಂದ ಹಿಂದಿರುಗಿದ ನಂತರ ರಾಮನಿಗಾಗಿ ಒಡಮೂಡಿದ ಶಿವಲಿಂಗಕ್ಕೆ ಕಾರಣವಾಗಿದೆ.
ಪ್ರಯಾಗ(Prayagraj)
ಈ ಹಿಂದೆ ಐತಿಹಾಸಿಕ ನಗರವನ್ನು ಅಲಹಾಬಾದ್ ಎಂದು ಕರೆಯಲಾಗುತ್ತಿತ್ತು ಆದರೆ 2018ರಲ್ಲಿ ಉತ್ತರ ಪ್ರದೇಶದ ಪ್ರಸ್ತುತ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರಯಾಗ್‌ರಾಜ್ ಎಂದು ಮರುನಾಮಕರಣ ಮಾಡಿದರು. ಉತ್ತರ ಪ್ರದೇಶದ ಅತಿದೊಡ್ಡ ನಗರಗಳಲ್ಲಿ ಇದು ಒಂದಾಗಿದ್ದು, ಇದನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ಇಲ್ಲಿ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ತಮ್ಮ ವನವಾಸ ಅವಧಿ ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ವಿಶ್ರಾಂತಿ ಪಡೆದರು.