14 ವರ್ಷ ವನವಾಸದಲ್ಲಿದ್ದ ಅವಧಿಯಲ್ಲಿ ಸೀತೆ ಒಂದೇ ಸೀರೆಯುಟ್ಟಿದ್ದಳಂತೆ! ಅದ್ಯಾಕೆ? ರಾಮಾಯಣದ ಈ ಒಂದು ಅಪರೂಪದ ಕತೆ ಇಲ್ಲಿದೆ. ಜಾನಪದಲ್ಲಿ, ಜನಮಾನಸದಲ್ಲಿ ಈ ಕತೆ ಹಾಸುಹೊಕ್ಕಾಗಿದೆ.  ಜೊತೆಗೆ ಲಂಕೆಯಲ್ಲಿ ರಾವಣನ ಬಂಧನದಲ್ಲಿದ್ದಾಗ ಇಂದ್ರ ನೀಡಿದ ಪಾಯಸದಿಂದ ಸೀತೆ, ರಾಮ ಮತ್ತು ಲಕ್ಷ್ಮಣರು ಹಸಿವು ಮತ್ತು ಬಾಯಾರಿಕೆಯಿಂದ ಮುಕ್ತರಾದರು.

ರಾಮಾಯಣದಲ್ಲಿ ರಾಮ ಲಕ್ಷ್ಮಣರ ಜೊತೆ ಹೊರಟ ಸೀತಾದೇವಿ 14 ವರ್ಷ ವನವಾಸವನ್ನು ಒಂದೇ ಸೀರೆಯಲ್ಲಿ ಕಳೆದಳು! ಅದು ಕೊಳೆಯಾಗುವುದು, ಹರಿಯುವುದು, ಬಣ್ಣ ಮಾಸುವುದು, ಈ ತರಹ ಏನೂ ಆಗಲಿಲ್ಲವೇ? ಇದು ಹೇಗೆ ಸಾಧ್ಯವಾಯಿತು? ಇದಕ್ಕೆ ಕಾರಣ ಪತಿವ್ರತಾ ಶಿರೋಮಣಿಯಾದ ಅನಸೂಯ ದೇವಿ ನೀಡಿದ ಸೀರೆಯ ಕೊಡುಗೆ. ರಾಮ ಸೀತೆಯರು ವನವಾಸಕ್ಕೆ ಹೊರಟ ಆರಂಭದಲ್ಲಿ ಋಷಿಮುನಿಗಳ ಆಶ್ರಮಕ್ಕೆ ಹೋಗಿ ಋಷಿಗಳಿಂದ ಉಪದೇಶ, ಆಶೀರ್ವಾದ ಪಡೆದು ಬರುತ್ತಿದ್ದರು.ಹೀಗೆ ಹೋಗುವಾಗ ಅತ್ರಿ ಮಹಾ ಮುನಿಗಳ ಆಶ್ರಮಕ್ಕೆ ಭೇಟಿ ಕೊಟ್ಟರು. ಅತ್ರಿ ಅವರ ಪತ್ನಿ ಮಹಾಸತಿ ಅನಸೂಯಾದೇವಿ ಇವರನ್ನು ಆದರದಿಂದ ಸ್ವಾಗತಿಸಿ ಉಪಚರಿಸಿದರು. ಅಲ್ಲಿಂದ ಹೊರಡುವಾಗ ಆಶೀರ್ವದಿಸಿ ಸೀತೆಗಾಗಿ ಅಮೂಲ್ಯವಾದ ಸೀರೆಯನ್ನು ಕೊಟ್ಟರು. ಆ ಸೀರೆ ವಿಶೇಷತೆ ಎಂದರೆ, ಅದು ದೈವೀಶಕ್ತಿಯುಳ್ಳ, ದಿವ್ಯವಾದ ಸೀರೆಯಾಗಿತ್ತು. ಎಷ್ಟೇ ವರ್ಷಗಳು ಉಟ್ಟರೂ, ಕೊಳೆಯಾಗುವುದು,ಹರಿಯುವುದು, ಮುದುರಿ ಮಾಸುವುದು, ಮೈಲಿಗೆ, ಯಾವುದು ಆಗುವಂಥದಲ್ಲ. ಮಹಾಸತಿ ಹರಸಿ ಕೊಟ್ಟ ಒಂದೇ ಸೀರೆಯಲ್ಲಿ ಸೀತಾಮಾತೆ 14 ವರ್ಷ ವನವಾಸ ಕಳೆದದಳು. 

ನಂತರ ರಾವಣ ಮೋಸದಿಂದ ಸೀತೆಯನ್ನು ಅಪಹರಿಸಿ ಲಂಕಾ ನಗರಕ್ಕೆ ಹೊತ್ತು ತಂದು ಬಂಧನದಲ್ಲಿಟ್ಟ. ಸೀತೆಯ ಕಾವಲಿಗೆ ‘ತ್ರಿಜಟೆ’ ಎಂಬ ರಾಕ್ಷಸಿಯನ್ನು ಇಟ್ಟನು. ತ್ರಿಜಟೆ ಸೀತೆಯನ್ನು ಮಗಳಂತೆ ನೋಡಿಕೊಂಡಳು. ಸೀತೆ ರಾವಣನಿಂದ ಅಪಹರಿಸಲ್ಪಟ್ಟಾಗಿನಿಂದಲೂ, ಹನಿ ನೀರನ್ನಾಗಲಿ ಒಂದು ಹಣ್ಣನ್ನಾಗಲಿ ಸೇವಿಸಿರಲಿಲ್ಲ. ತ್ರಿಜಟೆ ಅವಳಿಗೆ ಆಹಾರ ಕೊಡಲು ಬಂದಾಗ ಸೀತೆ ಹೇಳಿದಳು- ನಾನು ಬಿಡುಗಡೆಯಾಗುವ ತನಕ ಏನನ್ನೂ ಸೇವಿಸುವುದಿಲ್ಲ ಎಂದು ಶಪಥ ಮಾಡಿದಳು. ಅದೇ ರೀತಿ ಉಪವಾಸ ಇರುತ್ತಾ ದಿನಗಳು ಕಳೆದವು. ಸೀತೆ ಎಲ್ಲರಂತೆ ಸಾಮಾನ್ಯ ಸ್ತ್ರೀಯಾಗಿ ಭೂಮಿಗೆ ಬಂದವಳು. ಮನುಷ್ಯರಂತೆ ಬಾಯಾರಿಕೆ, ಹಸಿವು, ಆಗುತ್ತದೆ. ಆದರೆ ಆಹಾರ ನೀರು ಸೇವಿಸದೆ ದಿನೇ ದಿನೇ ಕೃಶವಾಗುತ್ತಿದ್ದಳು. ದೇವಲೋಕದಲ್ಲಿದ್ದ ದೇವತೆಗಳಿಗೆ ಆತಂಕವಾಯಿತು. ಮುಂದೆ ಏನು ಗತಿ ಎಂದು. ಎಲ್ಲಾ ದೇವತೆಗಳು ಸಮಾಲೋಚನೆ ನಡೆಸಿ ಇಂದ್ರನ ಬಳಿ ಇದ್ದ ಪಾಯಸವನ್ನು ಕೊಡಬೇಕೆಂದು ತೀರ್ಮಾನಿಸಿದರು. ಅದರಂತೆ ಇಂದ್ರನು ತನ್ನಲ್ಲಿದ್ದ ಅತ್ಯಮೂಲ್ಯವಾದ ಅಮೃತದ ಪಾಯಸವನ್ನು ಸೀತೆಗೆ ಕೊಡಲು ಬ್ರಹ್ಮನಿಂದ ಅನುಮತಿ ಪಡೆದು ಹೊರಟನು.

ಲಂಕೆಗೆ ಬಂದು ಸೀತಾಮಾತೆಗೆ, ದೇವಿ ಈ ಪಾಯಸವನ್ನು ಸ್ವೀಕರಿಸಿ. ನೀವು ಹಸಿವು, ಬಾಯಾರಿಕೆ, ಆಯಾಸ, ಬಳಲಿಕೆ, ಇವಗಳಿಂದ ಮುಕ್ತರಾಗಿರುವಿರಿ. ಇದು ಯಜ್ಞ ಯಾಗಾದಿಗಳ ಹವೀಸ್ಸಿನಿಂದ ತಯಾರಾದ ಅಮೃತದ ಪಾಯಸ ಎಂದು ಪಾಯಸ ತುಂಬಿದ ಚಿನ್ನದ ಬಟ್ಟಲನ್ನು ಸೀತೆಗೆ ಕೊಟ್ಟು ತೆಗೆದುಕೊಳ್ಳುವಂತೆ ಪ್ರಾರ್ಥಿಸಿದನು. ಸೀತೆ ಪಾಯಸದ ಬಟ್ಟಲಿಂದ ದೂರ ಸರಿದು ಇದನ್ನು ರಾವಣ ತನ್ನ ಮಾಯದಿಂದ ಸೃಷ್ಟಿಸಿ ಕಳಿಸಿರಬಹುದು ಎಂದು ಯೋಚಿಸಿದಳು. 

ದೇವೇಂದ್ರನಿಗೆ ಸೀತೆಯ ಅನುಮಾನ ಅರ್ಥವಾಯಿತು ಮಾತೆ ನಿಮ್ಮ ಅನುಮಾನ ಸಹಜವಾದದು. ಆದರೆ ಧರ್ಮ ಮಾರ್ಗದಲ್ಲಿರುವ ಶ್ರೀರಾಮ ಹಾಗೂ ಮಾತೆಗೆ ಸಹಾಯವಾಗಲೆಂದು ಈ ಪಾಯಸವನ್ನು ತಂದಿರುವೆ. ಇದರಲ್ಲಿ ಯಾವ ಮಾಯೆಯೂ ಇಲ್ಲ. ನಾನು ದೇವೇಂದ್ರ ಎಂದು ತನ್ನ ಆಭರಣಗಳು, ಆಯುಧ, ವಸ್ತ್ರಗಳ ವಿಶೇಷತೆಗಳನ್ನು ವಿವರಿಸಿ, ತನ್ನ ಚಹರೆಯನ್ನು ತಿಳಿಸಿದ. ನಾನು ಭೂಮಿ ಮೇಲೆ ನಿಲ್ಲುವುದಿಲ್ಲ, ನನ್ನ ಕಣ್ಣಿನ ರೆಪ್ಪೆ ಬಡಿಯುವುದಿಲ್ಲ, ಬೆವರುವುದಿಲ್ಲ ಎಂದೆಲ್ಲ ತಿಳಿಸಿದ.

ಸತ್ತ ಮೇಲೆ ಆತ್ಮ ಎಲ್ಲಿ ಹೋಗುತ್ತೆ? ಪುನರ್ಜನ್ಮಕ್ಕೆ ಎಷ್ಟು ಸಮಯ ಬೇಕು? ಗರುಡ ಪುರಾಣದಲ್ಲಿದೆ ರಹಸ್ಯ

ಸೀತೆಯ ಅನುಮಾನ ಪರಿಹಾರವಾಗಿ ,ಇಂದ್ರ ತಂದ ಪಾಯಸವನ್ನು ತೆಗೆದು ಕೊಂಡು ಮೊದಲು ದೇವತೆಗಳಿಗೆ, ನಂತರ ಪಿತೃಗಳಿಗೆ ಅರ್ಪಿಸಿದಳು. ಆನಂತರ ಪತಿ ಶ್ರೀರಾಮನಿಗೆ, ಮಗನಂತಿರುವ ಲಕ್ಷ್ಮಣನಿಗೆ ಅರ್ಪಿಸಿ, ದೇವರಾಜ ಇಂದ್ರನೇ ಈ ಪಾಯಸವನ್ನು ನಾನು ಸೇವಿಸಿದರೆ ನನ್ನ ಪತಿ ಹಾಗೂ ಮೈದನನಿಗೂ ಸಲ್ಲಬೇಕು. ನನ್ನ ಹಾಗೆ ಅವರಿಗೂ ಹಸಿವು ನೀರಡಿಕೆ ಆಗಬಾರದು ಎಂದಳು. ಇದನ್ನು ಕೇಳಿದ ಇಂದ್ರನು ನಿಮ್ಮ ಇಚ್ಛೆಯಂತೆ ಆಗಲಿ ಮಾತೇ ಎಂದು ಹರಸಿದನು. ಸೀತೆ ಭಕ್ತಿಯಿಂದ ದೇವತೆಗಳನ್ನು ಪ್ರಾರ್ಥಿಸಿ ಪಾಯಸ ಸೇವಿಸಿ ಹಸಿವು ಬಾಯಾರಿಕೆ, ಆಯಾಸಗಳಿಂದ ಮುಕ್ತಳಾದಳು. ಇದೇ ರೀತಿ ಕಾಡಿನಲ್ಲಿದ್ದ ರಾಮ ಲಕ್ಷ್ಮಣರು ಹಸಿವು ಬಾಯಾರಿಕೆಯಿಂದ ಮುಕ್ತರಾದರು. ಈ ರೀತಿಯಾಗಿ ದೇವೇಂದ್ರ ಕೊಟ್ಟ ಪಾಯಸ ಸೇವಿಸಿ ವನವಾಸದಲ್ಲಿದ್ದ ಸೀತೆ ರಾಮ ಲಕ್ಷ್ಮಣರು ಹಸಿವು, ಆಯಾಸ ನೀರಡಿಕೆಯಿಂದ ಮುಕ್ತರಾಗಿದ್ದರು. ಮುಂದೆ ರಾಮ ರಾವಣರ ಯುದ್ಧ ಮುಗಿದು, ವಿಜಯಶಾಲಿಯಾದ ರಾಮನು ಸೀತಾ ಲಕ್ಷ್ಮಣ ಸಮೇತ ತೇಜೋವಂತರಾಗಿ ಅಯೋಧ್ಯೆಗೆ ಮರಳಿದರು.

ಗರುಡ ಪುರಾಣದ ಪ್ರಕಾರ ಹೀಗೆ ಮಾಡಿದರೆ ಆಯುಷ್ಯ ಜಾಸ್ತಿ ಆಗುತ್ತೆ