ಆಚಾರ್ಯ ಚಾಣಕ್ಯರ ಪ್ರಕಾರ, ಕೆಲವು ಜನರು ಹಾವಿಗಿಂತಲೂ ಅಪಾಯಕಾರಿ. ಹಾವಿಗೆ ಎರಡೇ ಹಲ್ಲಿನಲ್ಲಿ ಮಾತ್ರ ವಿಷವಿರುತ್ತದೆ. ಆದರೆ ದುರ್ಜರ ಮೈತುಂಬ ವಿಷ ಇರುತ್ತದೆ ಎನ್ನುತ್ತಾನೆ ಆತ. ಹಾಗಾದರೆ ಯಾರು ಅಂಥವರು?
ಆಚಾರ್ಯ ಚಾಣಕ್ಯರು ಭಾರತ ಕಂಡ ದೊಡ್ಡ ವಿದ್ವಾಂಸ, ಮೇಧಾವಿ, ರಾಜನೀತಿಜ್ಞ, ಆಡಳಿತಗಾರ- ಎಲ್ಲವೂ. ಚಂದ್ರಗುಪ್ತ ಮೌರ್ಯನ ಮಹಾಸಾಮ್ರಾಜ್ಯವನ್ನು ಸ್ಥಾಪಿಸುವ ಹಿಂದೆ ಈತನ ಯೋಗದಾನವಿದೆ. ಈತ ಸುಲಭವಾಗಿ ಯಾರನ್ನೂ ನಂಬುತ್ತಿರಲಿಲ್ಲ. ಆತ ಹೇಳುವಂತೆ ಪ್ರತೀ ವ್ಯಕ್ತಿಯೂ ತನ್ನ ಸುತ್ತಲಿನ ಜನರ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಕೆಲವೊಮ್ಮೆ ಕೆಲವರು ನಿಮ್ಮ ಯಶಸ್ಸಿಗೆ ಅಡೆತಡೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಇನ್ನು ಕೆಲವರು ನಿಮ್ಮ ಆಪ್ತರಂತೆ ನಟಿಸಿದ್ದು, ನಿಮ್ಮ ಉಸಿರು ನಿಂತುಹೋದರೆ ಚೆನ್ನಾಗಿತ್ತು ಎಂದು ಭಾವಿಸಬಹುದು. ಆದ್ದರಿಂದ ಜೀವನದಲ್ಲಿ ಕೆಲವು ಬಗೆಯ ಜನಗಳ ಬಗ್ಗೆ ಜಾಗರೂಕರಾಗಿರಬೇಕು. ಅಂಥವರು ಯಾರು ಅಂತ ನೋಡೋಣ.
ರಾಜ
ಅಚ್ಚರಿಪಡಬೇಡಿ, ಇದು ನಿಜ. ರಾಜನು ನಂಬಲು ಅರ್ಹನಲ್ಲ. ಅವನ ತಲೆ ಯಾವಾಗ ತಿರುಗುವುದೋ ಹೇಳಲು ಸಾಧ್ಯವಿಲ್ಲ. ಅವನದು ಹಿತ್ತಾಳೆ ಕಿವಿಯಾಗಿದ್ದರೆ, ಸ್ವಂತ ಬುದ್ಧಿ ಇಲ್ಲದಿದ್ದರೆ ಇನ್ನೂ ಡೇಂಜರ್. ಇಂದು ಆಪ್ತ ಎಂದು ಕರೆದ ವ್ಯಕ್ತಿಯನ್ನು ನಾಳೆ ಆತ ಗಲ್ಲಿಗೇರಿಸಬಹುದು. ಹೀಗಾಗಿ ರಾಜನ ಬಳಿ ಹೆಚ್ಚಿನ ಅಪ್ತತೆಯೂ ಬೇಡ, ವಿರಸವೂ ಬೇಡ.
ದುರಹಂಕಾರಿ, ಸ್ವಾರ್ಥಿ
ಚಾಣಕ್ಯ ನೀತಿಯ ಪ್ರಕಾರ, ದುರಹಂಕಾರಿ ಮತ್ತು ಸ್ವಾರ್ಥಿ ಜನರಿಂದ ದೂರವಿರಬೇಕು. ಅಂತಹ ಜನರು ವಿಶ್ವಾಸಾರ್ಹರಲ್ಲ. ತಮ್ಮ ಉದ್ದೇಶವನ್ನು ಸಾಧಿಸಿದ ನಂತರ ಮೋಸ ಮಾಡಲು ಹಿಂಜರಿಯುವುದಿಲ್ಲ. ಸ್ವಾರ್ಥಿಗಳು ಕಣ್ಣೆದುರಿಗೇ ನಿಮಗೆ ದ್ರೋಹ ಬಗೆಯುವರು. ದುರಹಂಕಾರಿಗಳು ನಿಮ್ಮ ಸಂತೋಷವನ್ನು ಪರಿಗಣಿಸುವುದಿಲ್ಲ. ಆದ್ದರಿಂದ, ಅಂತಹ ಜನರಿಂದ ದೂರವಿರುವುದು ಪ್ರಯೋಜನಕಾರಿ.
ಸದಾ ಹೊಗಳುವವರು
ಆಚಾರ್ಯ ಚಾಣಕ್ಯನು, ನಿಮ್ಮನ್ನು ಯಾವಾಗಲೂ ಹೊಗಳುವ ಜನರ ಬಗ್ಗೆ ಜಾಗರೂಕರಾಗಿರಲು ಕೇಳಿಕೊಂಡಿದ್ದಾನೆ. ನಿಜ, ಪ್ರತಿಯೊಬ್ಬರೂ ಅವರ ಹೊಗಳಿಕೆಯನ್ನು ಕೇಳಲು ಇಷ್ಟಪಡುತ್ತಾರೆ, ಎಲ್ಲರೂ ಜನರು ತಮ್ಮನ್ನು ಹೊಗಳಬೇಕೆಂದು ಬಯಸುತ್ತಾರೆ. ಆದರೆ ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ಹೊಗಳುವವರಿಂದ ಸುತ್ತುವರೆದಿರುವ ವ್ಯಕ್ತಿಯು ವಾಸ್ತವದಿಂದ ದೂರ ಹೋಗುತ್ತಾನೆ. ಇದು ಯಶಸ್ಸಿನ ಹಾದಿಯಲ್ಲಿ ಒಂದು ಅಡಚಣೆ. ಆದ್ದರಿಂದ, ಹೊಗಳುವವರ ಬಗ್ಗೆ ಜಾಗರೂಕರಾಗಿರುವುದು ಉತ್ತಮ.
ಕ್ರೋಧತಪ್ತರು
ಸದಾ ಕೋಪಗೊಳ್ಳುವವರು, ಅಥವಾ ಕಿರಿಕಿರಿಯುಂಟುಮಾಡುವ ಜನರಿಂದ ದೂರವಿರಬೇಕು. ಅಂತಹ ಜನರು ಕೋಪಗೊಂಡಾಗ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸವನ್ನು ಹೆಚ್ಚಾಗಿ ಮರೆತುಬಿಡುತ್ತಾರೆ. ಇದರಿಂದಾಗಿ ನೀವು ನಿಮ್ಮ ಜೀವನದುದ್ದಕ್ಕೂ ನಷ್ಟವನ್ನು ಅನುಭವಿಸಬೇಕಾಗಬಹುದು. ಕೋಪದಿಂದ ಕೊಯ್ದುಕೊಂಡ ಮೂಗು ಸರಿ ಹೋದಾಗ ಮರಳಿ ಬರುವುದಿಲ್ಲ ಎಂಬುದು ನಿಮಗೆ ಗೊತ್ತಿದೆ.
ಕೆಟ್ಟ ಸಹವಾಸದವರು
ನೀವು ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ, ಯಾವುದೇ ಕೆಟ್ಟ ವ್ಯಸನಕ್ಕೆ ಒಳಗಾಗಿರುವ ಜನರ ಬಗ್ಗೆ ಜಾಗರೂಕರಾಗಿರಿ. ಅಂದರೆ, ಕೆಟ್ಟ ಅಭ್ಯಾಸಗಳನ್ನು ಹೊಂದಿರುವ ಅಥವಾ ಕೆಟ್ಟ ಸಹವಾಸದಲ್ಲಿರುವ ಜನರಿಂದ ದೂರವಿರುವುದು ಪ್ರಯೋಜನಕಾರಿ. ಇವರು ದ್ರವ್ಯಲಾಭಕ್ಕಾಗಿ ನಿಮ್ಮನ್ನು ಬಳಸಿಕೊಳ್ಳಬಹುದು. ಒಂದು ದಿನ ನೀವು ಕೊಡಲು ನಿರಾಕರಿಸಿದಾಗ ನಿಮ್ಮನ್ನು ಘಾತಿಸಬಹುದು.
ಚಾಣಕ್ಯನ ಪ್ರಕಾರ ಈ ವಿಷಯದಲ್ಲಿ ನಾಚಿಕೆ ಬೇಡ, ದೊಡ್ಡ ನಷ್ಟವಾಗುತ್ತೆ
ಸುಳ್ಳು ಹೇಳುವ ವ್ಯಕ್ತಿ
ಚಾಣಕ್ಯ ನೀತಿಯ ಪ್ರಕಾರ, ಸುಳ್ಳು ಹೇಳುವ ಜನರ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು. ಏಕೆಂದರೆ ಅವರ ಸುಳ್ಳುಗಳು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಸ್ನೇಹಿತರು ಮತ್ತು ಸಂಬಂಧಿಕರು ಸುಳ್ಳು ಹೇಳುವ ಅಭ್ಯಾಸ ಹೊಂದಿರುವ ವ್ಯಕ್ತಿಯ ಮಾತುಗಳನ್ನು ನಂಬುವುದನ್ನು ನಿಲ್ಲಿಸುತ್ತಾರೆ. ಅತಿಯಾಗಿ ಮಾತನಾಡುವವರೂ ಕೂಡ ಅಪಾಯಕಾರಿ. ಇವರು ಮಾತಿನ ಭರದಲ್ಲಿ ಸುಳ್ಳುಗಳನ್ನು ಹೊಸೆಯುವ ಅಭ್ಯಾಸಕ್ಕೆ ತುತ್ತಾಗುತ್ತಾರೆ.
ಚಾಡಿಕೋರ
ಸುಳ್ಳು ಹೇಳುವವರಿಗೂ ಚಾಡಿಕೋರರಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ಚಾಡಿಕೋರರು ನಿಮಗೆ ಕೆಡುಕನ್ನು ಉಂಟುಮಾಡುವ ದುರುದ್ದೇಶದಿಂದಲೇ ನಿಮ್ಮ ಬಗ್ಗೆ ಇನ್ಯಾರಿಗೋ ಸುಳ್ಳು ಹೇಳುತ್ತಾರೆ. ಹಾಗೇ ನಿಮ್ಮ ಆಪ್ತರ ಬಗ್ಗೆ ಬಂದು ನಿಮ್ಮ ಬಳಿ ಚಾಡಿ ಹೇಳಿ ನಿಮ್ಮ ಸ್ನೇಹವನ್ನು ಕೆಡಿಸಲು ಯತ್ನಿಸುತ್ತಾರೆ.
ನಾಸ್ಟ್ರಾಡಾಮಸ್ ಪ್ರಕಾರ ಈ 6 ರಾಶಿಯವರು ಅದೃಷ್ಟವಂತರು ಹಣದ ಸುರಿಮಳೆ, ಕೋಟ್ಯಾಧಿಪತಿ ಭಾಗ್ಯ


