ಸುಖ-ಸಂಪತ್ತು-ಸಮೃದ್ಧಿಯು ಅಕ್ಷಯವಾಗುವ ಸುದಿನವೇ ಅಕ್ಷಯ ತೃತೀಯ. ಹೊಸ ಕೆಲಸಗಳನ್ನು ಈ ದಿನ ಪ್ರಾರಂಭಿಸಿದರೆ ಉತ್ತಮವೆಂದು ಹೇಳುತ್ತಾರೆ. ಅಕ್ಷಯ ತೃತೀಯವೆಂದರೆ ಗಂಗಾದೇವಿ ಸ್ವರ್ಗದಿಂದ ಭೂವಿಗಿಳಿದ ಸುಸಂದರ್ಭ ಮತ್ತು ಬಸವೇಶ್ವರ, ಪರಶುರಾಮರ ಜನ್ಮದಿನವೂ ಇಂದೇ ಆಗಿದೆ. ಈ ದಿನ ಶ್ರೀ ವಿಷ್ಣುವನ್ನು ಪೂಜಿಸಿದರೆ ಮೋಕ್ಷಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಅದರಲ್ಲೂ ಭೂಮಿ ಮತ್ತು ಚಿನ್ನವನ್ನು ಈ ದಿನ ಕೊಂಡರೆ ಅಕ್ಷಯವಾಗುತ್ತದೆ ಎಂದು ಹೇಳುತ್ತಾರೆ. ಈ ಬಾರಿ ಅಕ್ಷಯ ತೃತೀಯ ಏಪ್ರಿಲ್ 26ರಂದು ಬಂದಿದೆ. ಹಾಗಾದರೆ ಬಂಗಾರವನ್ನು ಕೊಳ್ಳಲೇಬೇಕೇ? ಈ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ಬಾರಿ ಜಗತ್ತೆ ತತ್ತರಿಸುವಂತ ಮಹಾಮಾರಿ ಕರೋನಾ ಸಾಂಕ್ರಾಮಿಕ ಕಾಯಿಲೆಯಿಂದ ಎಂದಿನಂತೆ ಈ ಹಬ್ಬವನ್ನು ಆಚರಿಸಲು, ಚಿನ್ನಾಭರಣವನ್ನು ಖರೀದಿಸಲು ಜನರು ಸಾಲುಗಟ್ಟಿ ನಿಲ್ಲುವುದು ಸಾಧ್ಯವಿಲ್ಲವಾಗಿದೆ. ಹೀಗಾಗಿ ಚಿನ್ನದ ಅಂಗಡಿಗಳು, ದೊಡ್ಡ ದೊಡ್ಡ ಜ್ಯವೆಲ್ಲರಿ ಶಾಪ್‌ಗಳು ತೆರೆಯಲು ಅವಕಾಶ ಇಲ್ಲ. ಆದರೆ, ಅವರೂ ಇದಕ್ಕೊಂದು ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ. ಆನ್‌ಲೈನ್‌ನಲ್ಲಿ ಚಿನ್ನ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗೆ ಖರೀದಿ ಮಾಡಿದಾಗ ನೀವು ಚಿನ್ನವನ್ನು ಕೈಯ್ಯಾರೇ (ಪ್ರತ್ಯಕ್ಷವಾಗಿ) ಕೊಂಡುಕೊಳ್ಳಲು ಆಗದಿದ್ದರೂ ವಾಸ್ತವಿಕ ಕೊಂಡುಕೊಳ್ಳುವಿಕೆ ಇದರಲ್ಲಾಗುತ್ತದೆ. ಹೀಗಾಗಿ ಚಿನ್ನವನ್ನು ಖರೀದಿಸಿದ್ದೇನೆ ಎಂಬ ಸಮಾಧಾನದಿಂದ ನೀವು ಹಬ್ಬ ಮಾಡಬಹುದು. 

ಇದನ್ನು ಓದಿ: ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು

ಆದರೆ, ಈ ರೀತಿ ಆನ್‌ಲೈನ್ ಮೂಲಕ ಖರೀದಿ ಮಾಡಲು ಆಗದಿದ್ದವರು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ, ಚಿನ್ನಾಭರಣ ಖರೀದಿಸಲು ಆಗದಿದ್ದರೆ ಏನಂತೆ ಇದಕ್ಕೆ ಪರ್ಯಾಯ ಮಾರ್ಗಗಳು ಇವೆ. ಅಕ್ಷಯ ತೃತೀಯದಂದು ಈ ರೀತಿ ಮಾಡಿ, ಧನಸಂಪತ್ತನ್ನು ಅಕ್ಷಯವಾಗಿಸಿಕೊಳ್ಳಿ. 

ಚಿನ್ನ ಖರೀದಿಸಲಾಗದಿದ್ದರೂ ಇಲ್ಲಿದೆ ಉಪಾಯ
ಅಕ್ಷಯ ತೃತೀಯದಂದು ಮನೆಗೆ ಚಿನ್ನ ಖರೀದಿ ಮಾಡಿ ತರುವುದರಿಂದ ಲಕ್ಷ್ಮೀ ಕೃಪೆಯಾಗಿ ಚಿನ್ನ ಅಕ್ಷಯವಾಗುತ್ತದೆ ಎಂಬ ನಂಬಿಕೆ. ಆದರೆ, ಚಿನ್ನ ಖರೀದಿಸುವ ಸಾಮರ್ಥ್ಯ ಹೊಂದಿರದವರಿಗೆ ಕೆಲವು ಉಪಾಯಗಳನ್ನು ಇಲ್ಲಿ ಹೇಳಿದೆ. ಇಂದು ಈ ಕೆಲಸಗಳನ್ನು ಮಾಡಿದರೆ ಲಕ್ಷ್ಮೀಯ ಕೃಪೆ ನಿಮಗಾಗುತ್ತದೆ.

ಈ ರೀತಿ ಪೂಜಿಸಿ
ಅಕ್ಷಯ ತೃತೀಯಂದು ವಿಧಿಪೂರ್ವಕ ಶ್ರದ್ಧೆಯಿಂದ ಲಕ್ಷ್ಮೀಯನ್ನು ಪೂಜಿಸಬೇಕು. ಇದಕ್ಕೆ ಪ್ರಾತಃಕಾಲದಲ್ಲಿ ಎದ್ದು ಸ್ನಾನ ಮಾಡಿ ಶುಚಿರ್ಭೂತರಾಗಿ ಹಳದಿ ವಸ್ತ್ರವನ್ನು ಧರಿಸಬೇಕು. ದೇವರ ಕೋಣೆಯಲ್ಲಿ ಲಕ್ಷ್ಮೀ ಮತ್ತು ವಿಷ್ಣುವಿನ ಚಿತ್ರವನ್ನು ಇಡಬೇಕು. ನಂತರ ಭಕ್ತಿಯಿಂದ ಹೂ-ಹಣ್ಣುಗಳನ್ನಿಟ್ಟು ಪೂಜಿಸಬೇಕು. ಲಕ್ಷ್ಮೀ ಮತ್ತು ವಿಷ್ಣುವಿನ ಬಳಿ ಮನಸ್ಸಿನ ಇಚ್ಛೆಯನ್ನು ಪೂರೈಸುವಂತೆ ಪ್ರಾರ್ಥಿಸಬೇಕು.

ಇದನ್ನು ಓದಿ: ನಿಮಗೆ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ಒಲಿಯುತ್ತೆ ಅದೃಷ್ಟ

ಈ ಮಂತ್ರವನ್ನು ಜಪಿಸಿ, ಅಷ್ಟೇ ಪುಣ್ಯ ಬರತ್ತೆ
ಅನ್ನಪೂರ್ಣೆಯ ಓಂ ಅನ್ನಪೂರ್ಣಾಯಾ ನಮಃ ಎಂಬ ಮಂತ್ರ  ಜಪಿಸಿದರೆ ಒಳ್ಳೆಯದಾಗುತ್ತದೆ. ದೇವಿ ಅನ್ನಪೂರ್ಣೆಯ ಮೂಲಮಂತ್ರ ಇದಾಗಿದ್ದು. ಸಕಲ ಸಂಪತ್ತು, ಧನ-ಧಾನ್ಯ ,ಆಯುರಾರೋಗ್ಯವನ್ನು ಪಾಲಿಸುವ ಶಕ್ತಿ ಈ ಮಂತ್ರಕ್ಕಿದೆ. ಪವಿತ್ರವಾದ ಈ ಮಂತ್ರವನ್ನು ಅಕ್ಷಯ ತೃತೀಯದಂದು ಜಪಿಸಬೇಕು. ಆಗ ನಿಮಗೆ ಚಿನ್ನವನ್ನು ಖರೀದಿಸಿದಷ್ಟೇ ಫಲಪ್ರಾಪ್ತಿಯಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. 

ಕನಕಧಾರಾ ಸ್ತುತಿ
ಮಹಾಲಕ್ಷ್ಮೀಯನ್ನು ವರ್ಣಿಸಿ, ಶಂಕರಾಚಾರ್ಯರು ಬರೆದ ಸ್ತೋತ್ರ ಇದಾಗಿದ್ದು. ಕನಕವನ್ನು ಧರಿಸಿರುವ ದೇವಿ ಎಂಬ ಅರ್ಥಕೊಡುವ ಈ ಸ್ತುತಿಯನ್ನು ಅಕ್ಷಯ ತೃತೀಯದಂದು ಜಪಿಸಿದರೆ, ಮಹಾಲಕ್ಷ್ಮೀ ಪ್ರಸನ್ನಳಾಗುತ್ತಾಳೆಂಬ ನಂಬಿಕೆ ಇದೆ. ಅಕ್ಷಯ ತೃತೀಯದಂದು ಮಹಾವಿಷ್ಣು, ಕುಬೇರ ಮತ್ತು ಗಣಪತಿಯನ್ನು ಸಹ ಆರಾಧಿಸುತ್ತಾರೆ. ಭಕ್ತಿಯಿಂದ ದೇವರ ಆರಾಧನೆ ಮಾಡಿದರೆ ಒಳಿತಾಗುವುದು.

ಇದನ್ನು ಓದಿ: ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ದಾನ ಮಾಡಿ, ಪುಣ್ಯ ಕಟ್ಕೊಳ್ಳಿ
ದಾನ ಮಾಡುವುದರಿಂದ ಒಳಿತಾಗುವುದು ಖಂಡಿತ. ಆದರೆ, ಈ ದಿನ ಮಾಡುವ ದಾನಕ್ಕೆ ವಿಶೇಷ ಪುಣ್ಯ ಪ್ರಾಪ್ತಿಯಾಗುತ್ತದೆ. ಮನೆಯಲ್ಲಿ ಧನ-ಧಾನ್ಯ ಅಕ್ಷಯವಾಗುತ್ತದೆ. ಬಡವರಿಗೆ ಅನ್ನದಾನ ಮಾಡಿದರೆ ಅನ್ನಪೂರ್ಣೆ ಹರಸುತ್ತಾಳೆ. ಇದೂ ಒಂದು ರೀತಿಯಲ್ಲಿ ಸಂಪತ್ತು ನಿಮ್ಮ ಮನೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.