ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!
ಲಕ್ಷ್ಮೀಯ ಕೃಪೆಯನ್ನು ಪಡೆಯಲು ಎಲ್ಲರೂ ಬಯಸುತ್ತಾರೆ. ಲಕ್ಷ್ಮೀಯು ಚಂಚಲೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಬೇಗನೆ ಚಲಿಸುವ ಸ್ವಾಭಾವದ ದೇವಿ. ಸಂಪತ್ತಿಗೆ ಅಧಿದೇವತೆಯಾಗಿರುವ ಲಕ್ಷ್ಮೀಯನ್ನು ಪೂಜಿಸಿ, ಆರಾಧಿಸಿದಲ್ಲಿ ಅದೃಷ್ಟವನ್ನು ತಂದುಕೊಡುತ್ತಾಳೆ. ಪ್ರಖ್ಯಾತಿ, ಜ್ಞಾನ, ಧೈರ್ಯ-ಶಕ್ತಿ, ವಿಜಯ, ಸಂತಾನ, ಶೌರ್ಯ, ಕನಕ, ಧಾನ್ಯ, ಸಂತೋಷ, ಬುದ್ಧಿಶಕ್ತಿ, ಸೌಂದರ್ಯ, ಆರೋಗ್ಯ, ಧೀರ್ಘಾಯುಷ್ಯ ಹೀಗೆಯೆ ಅನೇಕ ಬಗೆಯ ಸಂಪತ್ತನ್ನು ಕರುಣಿಸುವ ಕರುಣಾಮಯಿ ಲಕ್ಷ್ಮೀದೇವಿ.
ನಾವು ಎಷ್ಟೇ ಕಷ್ಟಪಟ್ಟು ದುಡಿದರೂ ನಮ್ಮ ಸಂಪತ್ತಿಗೆ ಸವಾಲ್ ಗಳು ಎದುರಾಗುತ್ತಲೇ ಇರುತ್ತವೆ. ನಮಗೆ ಕಷ್ಟಗಳು ಬಂತೆಂದರೆ ನಾವು ದೇವರ ಮೊರೆ ಹೋಗುವುದು ಸಹಜ. ಆಯಾ ಕಷ್ಟಗಳ ಪರಿಹಾರಕ್ಕೆ ಆಯಾ ದೇವರ ಮೊರೆ ಹೋಗುವುದು ಸಹಜ. ವಿದ್ಯೆಗೆ ಸರಸ್ವತಿ, ವಿಘ್ನಗಳನ್ನು ನಿವಾರಿಸಲು ಗಣಪತಿಯನ್ನು ಆರಾಧಿಸುತ್ತೇವೆ. ಹಾಗೇಯೆ ಸಂಪತ್ತನ್ನು ಕರುಣಿಸೆಂದು ಲಕ್ಷ್ಮೀಯನ್ನು ಪ್ರಾರ್ಥಿಸುತ್ತೇವೆ. ಲಕ್ಷ್ಮೀಯು ಧನಸಂಪತ್ತಿನ ಅಧಿದೇವತೆ. ಯಾರ ಮೇಲೆ ದೇವಿ ಲಕ್ಷ್ಮೀಯ ಕೃಪೆ ಇರುವುದೋ ಅವರ ಬಳಿ ಸದಾ ಸಿರಿ-ಸಂಪತ್ತು ಇರುತ್ತದೆ ಎನ್ನುವ ಪ್ರತೀತಿ ಇದೆ. ಹಲವರು ಸಂಪತ್ತನ್ನು ಪಡೆಯಲು ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಅನೇಕ ಬಗೆಯ ಪ್ರಯತ್ನಗಳನ್ನು ಮಾಡಿ ಸೋತಿರುತ್ತಾರೆ.
ಆರ್ಥಿಕವಾಗಿ ಮುಂದೆ ಬರಬೇಕೆಂದು ಸದಾ ಪ್ರಯತ್ನದಲ್ಲೇ ತೊಡಗಿಸಿಕೊಂಡು ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದರೂ ಮಾಡುತ್ತಿದ್ದರೂ ಲಕ್ಷ್ಮೀದೇವಿಯ ಕೃಪೆಯಾಗುವುದಿಲ್ಲ. ಅಂಥವರು ಇಲ್ಲಿ ಹೇಳಿರುವ ಉಪಾಯಗಳನ್ನು ಅನುಸರಿಸಿದರೆ. ಧನಪ್ರಾಪ್ತಿ ಆಗುವುದಲ್ಲದೇ ಪ್ರಯತ್ನಕ್ಕೆ ತಕ್ಕ ಫಲ ಲಭಿಸುತ್ತದೆ.
ಇದನ್ನೂ ಓದಿ: ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು
ಲಕ್ಷ್ಮೀ ಮನೆಯಲ್ಲಿ ನೆಲೆಸಬೇಕೆಂದರೆ
ಸ್ತ್ರೀಯರನ್ನು ಗೌರವದಿಂದ ಕಾಣಬೇಕು. ಮಹಿಳೆಯು ಲಕ್ಷ್ಮೀಯ ರೂಪವಾಗಿರುತ್ತಾರೆ. ಅವರನ್ನು ಆದರಿಸುವುದರಿಂದ ಒಳಿತಾಗುವುದು. ಯಾವ ಮನೆಯಲ್ಲಿ ಮಹಿಳೆಯರಿಗೆ ಗೌರವ ಸಿಗುವುದಿಲ್ಲವೋ ಅಂಥ ಮನೆಗೆ ಲಕ್ಷ್ಮೀ ಪ್ರವೇಶಿಸುವುದಿಲ್ಲ. ಸದಾ ವಾದ –ವಿವಾದ, ಜಗಳ, ಗಲಾಟೆಯಾಗುತ್ತಿರುವ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ. ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಯಾಗುತ್ತಿದ್ದರೆ ಅದಕ್ಕೆ ಮನೆಯ ವಾಸ್ತುವೂ ಕಾರಣವಿರಬಹುದು. ಮನೆಯಲ್ಲಿ ಜಗಳ, ಅಶಾಂತಿ, ದುಡ್ಡು ನಿಲ್ಲದೇ ಇರುವುದು, ಮಾನಸಿಕ ನೆಮ್ಮದಿ ಇಲ್ಲದಿರುವುದಕ್ಕೆ ವಾಸ್ತು ದೋಷ ನಿವಾರಣೆ ಮಾಡಿಕೊಂಡಲ್ಲಿ ಸುಖ ಶಾಂತಿಯ ಜೊತೆಗೆ ಲಕ್ಷ್ಮೀಯು ಸದಾ ನೆಲೆಸಿರುತ್ತಾಳೆ. ಶುಕ್ರವಾರವನ್ನು ಲಕ್ಷ್ಮೀಯ ವಾರವೆಂದೇ ಹೇಳಲಾಗುತ್ತದೆ. ಲಕ್ಷ್ಮೀಯ ದಿನವಾದ ಶುಕ್ರವಾರದಂದು ಪೂಜೆ, ವ್ರತಾದಿಗಳನ್ನು ಶ್ರದ್ಧೆಯಿಂದ ಮಾಡುವುದರಿಂದ ದೇವಿಯು ಪ್ರಸನ್ನಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ನವಿಲು ಗರಿ ತಂದಿಡಿ
ಜ್ಯೋತಿಷ್ಯದಲ್ಲಿ ಹೇಳಿರುವಂತೆ, ಜಾತಕದಲ್ಲಿ ಶುಕ್ರ ಗ್ರಹವು ಉಚ್ಛನಾಗಿದ್ದರೆ ಅಂಥವರಿಗೆ ಆರ್ಥಿಕ ಸಮಸ್ಯೆ ಕಾಡುವುದಿಲ್ಲ. ಶುಕ್ರ ಗ್ರಹದ ಕೃಪೆ ನಿಮಗೆ ಆಗಬೇಕಾದರೆ ನಿಮ್ಮ ಮನೆಯಲ್ಲಿ ನವಿಲು ಗರಿಯನ್ನು ತಂದಿಡುವುದರಿಂದ ಉತ್ತಮ ಬದಲಾವಣೆಯನ್ನು ಕಾಣಬಹುದಾಗಿದೆ. ಲಕ್ಷ್ಮೀಯು ನಿಮ್ಮ ಮನೆಯಲ್ಲಿ ವಾಸ ಮಾಡಬೇಕೆಂದರೆ ಮನೆಯನ್ನು ಶುಚಿಯಾಗಿಟ್ಟಿರ ಬೇಕು. ಯಾವ ಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲವೋ ಅಂಥವರ ಮನೆಗೆ ಲಕ್ಷ್ಮೀದೇವಿ ಪ್ರವೇಶಿಸುವುದಿಲ್ಲ. ದೀಪಾವಳಿ ಸಂದರ್ಭದಲ್ಲಿ ಮನೆಯನ್ನು ಸಾರಿಸಿ ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ, ಇದರ ಮುಖ್ಯ ಉದ್ದೇಶವೇ ಲಕ್ಷ್ಮೀಯು ನಮ್ಮ ಮನೆಗೆ ಬಂದು ಇಲ್ಲಿಯೇ ನೆಲೆಸಲಿ ಎಂಬ ಕಾರಣಕ್ಕೆ ಆಗಿದೆ.
ಇದನ್ನೂ ಓದಿ: ನಿಮಗೆ ಈ ಭಾಗಗಳಲ್ಲಿ ಮಚ್ಚೆ ಇದ್ದರೆ ಒಲಿಯುತ್ತೆ ಅದೃಷ್ಟ!
ತುಳಸಿ ಗಿಡದಲ್ಲಿ ಲಕ್ಷ್ಮೀ ವಾಸ
ತುಳಸಿ ಗಿಡದಲ್ಲಿ ಲಕ್ಷ್ಮೀ ವಾಸವಿರುತ್ತಾಳೆ ಎಂಬ ನಂಬಿಕೆ ಇದೆ. ತುಳಸಿ ಗಿಡದ ಸುತ್ತಮುತ್ತ ಸಾರಿಸಿ, ರಂಗವಲ್ಲಿಯನ್ನು ಹಾಕಿ, ನಂತರ ಶುಚಿಯಾಗಿ ತುಳಸಿ ದೇವಿಗೆ ನೀರೆರೆದು, ದೀಪ ಬೆಳಗಿಸಬೇಕು. ಆನಂತರ ಮನಸ್ಸಿನ ಇಚ್ಛೆಯನ್ನು ಕೇಳಿಕೊಂಡರೆ, ಆ ಪ್ರಾರ್ಥನೆಯನ್ನು ಆಲಿಸಿ ಲಕ್ಷ್ಮೀದೇವಿಯು ಬೇಡಿಕೊಂಡಿದ್ದನ್ನು ಈಡೇರಿಸುತ್ತಾಳೆ.
ದೇವರ ಮನೆಯಲ್ಲಿ ಲಕ್ಷ್ಮೀ ಮತ್ತು ಗಣೇಶನ ಬೆಳ್ಳಿಯ ವಿಗ್ರಹವನ್ನು ಇಟ್ಟು ದಿನವೂ ಪೂಜಿಸುವುದರಿಂದ ಒಳಿತಾಗುತ್ತದೆ.
108 ನಾಮಗಳನ್ನು ಜಪಿಸಿ
ಲಕ್ಷ್ಮೀಯನ್ನು ದಿನವೂ ಪೂಜಿಸುವುದರ ಜೊತೆಗೆ ವಿಶೇಷವಾಗಿ ಅಕ್ಟೋಬರ್ ತಿಂಗಳಿನಲ್ಲಿ ಹೆಚ್ಚು ಆರಾಧಿಸುತ್ತಾರೆ. ದೇವಿಯ 108 ನಾಮಗಳನ್ನು ಜಪಿಸಿ, ಆಕೆಯ ಸ್ತುತಿ ಮಾಡಿದಲ್ಲಿ ಒಲಿಯುವುದು ಖಂಡಿತ. ಲಕ್ಷ್ಮೀಯನ್ನು ಆರಾಧಿಸಲು ಹಲವಾರು ಸ್ತೋತ್ರಗಳಿವೆ, ಕೆಲವು ಪ್ರಸಿದ್ಧ ಸ್ತುತಿಗಳೆಂದರೆ ಶ್ರೀ ಮಹಾಲಕ್ಷ್ಮೀ ಅಷ್ಟಕಮ್, ಶ್ರೀ ಲಕ್ಷ್ಮೀ ಸಹಸ್ರನಾಮ ಸ್ತೋತ್ರಮ್, ಶ್ರೀ ಸ್ತುತಿ, ಶ್ರೀ ಚಟುಶ್ಲೋಕಿ, ಶ್ರೀ ಕನಕಧಾರಾ ಸ್ತುತಿ, ಶ್ರೀ ಲಕ್ಷ್ಮೀ ಶ್ಲೋಕ, ಶ್ರೀ ಸೂಕ್ತ ಮುಂತಾದ ದೇವಿ ಸ್ತುತಿಗಳನ್ನು ಪಠಿಸಿದರೆ ದೇವಿಯು ಪ್ರಸನ್ನಳಾಗುತ್ತಾಳೆ ಎಂಬ ಉಲ್ಲೇಖವಿದೆ.
ಇದನ್ನೂ ಓದಿ: ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!