ಶಿವನಿಗೆ ಗಣೇಶ ಮತ್ತು ಕಾರ್ತಿಕೇಯ ಇಬ್ಬರಲ್ಲದೆ ಇನ್ನೂ ಆರು ಮಕ್ಕಳಿದ್ದಾರೆ ಎಂದು ನಿಮಗೆ ಸೋಜಿಗವಾಗದೇ ಇರದು. ಮಹಾ ಶಿವರಾತ್ರಿಯ ಈ ಸಂದರ್ಭದಲ್ಲಿ ಆ ಆರು ಜನ ಮಕ್ಕಳ ಕಥೆಗಳನ್ನು ಇಲ್ಲಿ ಓದೋಣ. ವೀರಭದ್ರನ ಜನನದಿಂದ ಹಿಡಿದು ಜಲಂಧರನ ಅಂತ್ಯದವರೆಗೆ, ಪ್ರತಿಯೊಂದು ಕಥೆಯೂ ರೋಚಕವಾಗಿದೆ.

ಈಶ್ವರನನ್ನು ಆರಾಧಿಸುವ ಮಹಾ ಶಿವರಾತ್ರಿಯ ಸಮಯವಿದು. ಶಿವನ ಇಬ್ಬರು ಮಕ್ಕಳ ಬಗ್ಗೆ ನೀವು ಕೇಳಿಯೇ ಇರುತ್ತೀರಿ- ಅವರು ಗಣೇಶ ಹಾಗೂ ಷಣ್ಮುಖ. ಆದರೆ ಶಿವನಿಗೆ ಇವರಿಬ್ಬರೇ ಅಲ್ಲ, ಇನ್ನೂ ಆರು ಮಂದಿ ಮಕ್ಕಳಿದ್ದಾರೆ ಎಂದರೆ ನಂಬುತ್ತೀರಾ? ಹೌದು. ಅವರ ಕತೆಗಳು ಇಲ್ಲಿವೆ. 

ವೀರಭದ್ರ

ದಾಕ್ಷಾಯಿಣಿ ತನ್ನ ತಂದೆ ದಕ್ಷನ ಯಜ್ಞದಲ್ಲಿ ಅಗ್ನಿಗೆ ಹಾರಿ ಆತ್ಮಹತ್ಯೆ ಮಾಡಿಕೊ೦ಡ ವಿಷಯ ಶಿವನಿಗೆ ತಿಳಿಯುತ್ತಲೆ ಆತ ಕ್ರೋಧಾವೇಶದಿಂದ ತನ್ನ ಜಟೆಯನ್ನು ನೆಲಕ್ಕೆ ಹೊಡೆದಾಗ ವೀರಭದ್ರ ಜನಿಸುತ್ತಾನೆ. ಆತ ಶಿವಗಣಗಳ ಸೇನಾಧಿಪತಿಯಾಗಿ ಯಜ್ಞವನ್ನು ನಾಶಮಾಡಿ ಆ ಯಜ್ಞವನ್ನು ಆಯೋಜಿಸಿದ್ದ ದಕ್ಷಬ್ರಹ್ಮನನ್ನು ಕೊಲ್ಲುತ್ತಾನೆ. ಆತನ ತಲೆಯನ್ನು ಕತ್ತರಿಸುತ್ತಾನೆ. ವೀರಭದ್ರನು ಶಿವನ ಅಂಶವೂ ಶಿವನ ಗಣಗಳ ಸೇನಾನಾಯಕನೂ ಆಗಿದ್ದಾನೆ. 

ಅಂಧಕಾಸುರ

ಶಿವನಿಗೆ ಮೂರು ಕಣ್ಣುಗಳಿರುವುದರಿಂದ ‘ತ್ರಿಲೋಚನ’ ಎಂದೂ ಕರೆಯುತ್ತಾರೆ. ಅದರ ಹುಟ್ಟಿನ ಹಿಂದೆ ಒಂದು ಕತೆಯಿದೆ. ಒಂದು ದಿನ ಶಿವ ಧ್ಯಾನ ಮಾಡುತ್ತಿದ್ದಾಗ ಪಾರ್ವತಿ ಹಿಂದಿನಿಂದ ಬಂದು ವಿನೋದದಿಂದ ತನ್ನ ಎರಡು ಕೈಗಳಿಂದ ಅವನ ಕಣ್ಣುಗಳನ್ನು ಮುಚ್ಚಿದಳು. ಶಿವನ ಬಲಗಣ್ಣು ಸೂರ್ಯನನ್ನು ಪ್ರತಿನಿಧಿಸುತ್ತದೆ ಮತ್ತು ಎಡಗಣ್ಣು ಚಂದ್ರನನ್ನು ಪ್ರತಿನಿಧಿಸುತ್ತದೆ. ಅವನ ಕಣ್ಣುಗಳನ್ನು ಮುಚ್ಚಿದ್ದರಿಂದ ಬ್ರಹ್ಮಾಂಡವು ಕತ್ತಲೆಯಲ್ಲಿ ಮುಳುಗಿತು. ತಕ್ಷಣವೇ ಶಿವ ಬೆಂಕಿಯನ್ನು ಹೊರಸೂಸಲು ತನ್ನ ದೈವಿಕ ಶಕ್ತಿಯಿಂದ ತನ್ನ ಹಣೆಯ ಮೇಲೆ ಮೂರನೇ ಕಣ್ಣನ್ನು ಸೃಷ್ಟಿಸಿದ. ಆ ಬೆಂಕಿಯ ಶಾಖ ಪಾರ್ವತಿಯ ಕೈಗಳನ್ನು ಬೆವರುವಂತೆ ಮಾಡಿತು. ಆ ಬೆವರು, ಶಿವ ಮತ್ತು ಪಾರ್ವತಿ ದೇವಿಯರ ಶಕ್ತಿಯೊಂದಿಗೆ ಸೇರಿ, ಅವರ ಮಗುವಾಗಿ ಅಂಧಕ ಎಂದು ಜನಿಸಿತು. ಮುಂದೆ ಈ ಅಂಧಕಾಸುರ ಲೋಕಕಂಟಕನಾದಾಗ ಅವನನ್ನು ಶಿವನೇ ನಾಶ ಮಾಡಿದ.

ಭಸ್ಮಾಸುರ

ಒಮ್ಮೆ ಶಿವನು ಧರಿಸಲು ಭೂತಗಣಗಳು ತಂದ ಭಸ್ಮದಲ್ಲಿ ಒಂದು ಕಲ್ಲು ಅವನಿಗೆ ಸಿಕ್ಕಿತು. ಅದನ್ನು ಶಿವ ಎಸೆದಾಗ ಅದರಿಂದ ಭಸ್ಮಾಸುರ ಎಂಬ ರಾಕ್ಷಸ ಹುಟ್ಟಿಕೊಂಡ. ಇವನನ್ನು ಶಿವ ಮಗನೆಂದು ಸ್ವೀಕರಿಸಿ ಆತನಿಗೆ ತನಗೆ ಪ್ರತಿದಿನ ಭಸ್ಮ ತರುವ ಕೆಲಸ ನೀಡಿದ. ನಂತರ ಪಾರ್ವತಿಯನ್ನು ನೋಡಿ ಭಸ್ಮಾಸುರನ ಮನದಲ್ಲಿ ದುಷ್ಟ ಯೋಚನೆ ಮೂಡಿತು. ಆತ ಶಿವನ ಬಳಿ, “ನಾನು ನನ್ನ ಬಲಗೈಯಿಂದ ಮುಟ್ಟುವ ಎಲ್ಲ ವಸ್ತುಗಳು ತಕ್ಷಣವೇ ಬೂದಿಯಾಗುವ ವರವನ್ನು ನನಗೆ ನೀಡು” ಎಂದು ಕೇಳಿದ. ಶಿವ ಆ ವರವನ್ನು ನೀಡಿದ. ತಕ್ಷಣ ಆ ಉರಿಗೈಯನ್ನು ಶಿವನ ಮೇಲೇ ಇಟ್ಟು ಆತನನ್ನು ಬೂದಿ ಮಾಡಲು ಭಸ್ಮಾಸುರ ಮುಂದಾದ. ಶಿವ ಅಲ್ಲಿಂದ ಪರಾರಿಯಾದ. ನಂತರ ವಿಷ್ಣು ಮೋಹಿನಿ ರೂಪದಲ್ಲಿ ಬಂದು ಭಸ್ಮಾಸುರನನ್ನು ವಧಿಸಿದ.

ಅಯ್ಯಪ್ಪ

ಭಸ್ಮಾಸುರನು ಶಿವನನ್ನು ಬೆನ್ನಟ್ಟುತ್ತಿದ್ದಾಗ ಭಗವಾನ್ ವಿಷ್ಣುವು ಶಿವನನ್ನು ರಾಕ್ಷಸನಿಂದ ರಕ್ಷಿಸಲು ನಿರ್ಧರಿಸಿ ಮೋಹಿನಿ ಎಂಬ ಸುಂದರ ಮಹಿಳೆಯಾಗಿ ಬಂದು ಭಸ್ಮಾಸುರನ ಮುಂದೆ ಕಾಣಿಸಿಕೊಂಡ. ಅವಳ ಮೋಡಿಮಾಡುವ ಸೌಂದರ್ಯಕ್ಕೆ ಮರುಳಾಗಿ, ಆಕೆ ಕುಣಿದಂತೆ ಕುಣಿದ ಭಸ್ಮಾಸುರ ತನ್ನ ತಲೆಯ ಮೇಲೆ ತಾನೇ ಕೈಯಿಟ್ಟುಕೊಂಡು ಭಸ್ಮವಾಗಿ ಹೋದ. ನಂತರ ಈ ಮೋಹಿನಿಯನ್ನು ನೋಡಿ ಶಿವ ಆಕೆಗೆ ಮರುಳಾದ. ಆಕೆಯನ್ನು ಕೂಡಿದ. ಇವರಿಬ್ಬರ ಸಂಸರ್ಗದಿಂದ ಅಯ್ಯಪ್ಪ ಅಥವಾ ಮಣಿಕಂಠ ಜನಿಸಿದ. ಈತ ಕೇರಳದ ಪಂದಳ ರಾಜನಿಗೆ ದೊರೆತು, ಬಳಿಕ ಶಬರಿಮಲೆಯಲ್ಲಿ ನೆಲೆಸಿದ. 

Maha Shivratri 2025: ಈ ದೇವಾಲಯದಲ್ಲಿ ಶಿವನಿಗೆ ಪೊರಕೆಯೇ ಹರಕೆ!

ಅಶೋಕ ಸುಂದರಿ

ಶಿವ ಮತ್ತು ಪಾರ್ವತಿ ಸುಂದರವಾದ ನಂದನವನದಲ್ಲಿ ವಿಹರಿಸುತ್ತಿದ್ದಾಗ ಅವರು ಬಯಸಿದ ವೃಕ್ಷ ಕಲ್ಪವೃಕ್ಷವನ್ನು ಕಂಡರು. ದುಷ್ಟ ಶಕ್ತಿಗಳ ವಿರುದ್ಧ ಹೋರಾಡಲು ಶಿವನು ಕೈಲಾಸ ಪರ್ವತದಿಂದ ಆಎ ಹೋದಾಗ ಪಾರ್ವತಿಗೆ ಆಗಾಗ್ಗೆ ಒಂಟಿತನ ಕಾಡುತ್ತಿತ್ತು. ಆದ್ದರಿಂದ, ಅವಳು ಕಲ್ಪವೃಕ್ಷದಿಂದ ಮಗಳನ್ನು ಬಯಸಿದಳು. ಆಕೆಯ ಆಸೆ ಈಡೇರಿತು. ಪಾರ್ವತಿ ಆಕೆಗೆ ಅಶೋಕ ಸುಂದರಿ ಎಂದು ಹೆಸರಿಸಿದಳು. ಶಿವನು ಗಣೇಶನ ಶಿರಚ್ಛೇದ ಮಾಡಿದಾಗ, ಅಲ್ಲಿದ್ದ ಅಶೋಕ ಸುಂದರಿ ತಂದೆಯ ಕೃತ್ಯಕ್ಕೆ ಹೆದರಿ ಉಪ್ಪಿನ ಮೂಟೆಯ ಹಿಂದೆ ಅಡಗಿಕೊಂಡಳು. ನಂತರ ಆಕೆಯ ತಂದೆ ಅವಳನ್ನು ಸಮಾಧಾನಪಡಿಸಿ ಸಹಜ ಸ್ಥಿತಿಗೆ ತಂದ. ಹೀಗಾಗಿ ಅಶೋಕ ಸುಂದರಿಯ ಹೆಸರು ಉಪ್ಪಿನೊಂದಿಗೆ ಸೇರಿಕೊಂಡಿದೆ ಎಂದು ಹೇಳಲಾಗುತ್ತದೆ.

ಜಲಂಧರ

ಜಲಂಧರನು ಒಬ್ಬ ರಾಕ್ಷಸ. ಶಿವನ ಹಣೆಗಣ್ಣಿನ ಬೆಂಕಿಯೇ ಸಮುದ್ರದಲ್ಲಿ ಘನೀಭೂತವಾಗಿ ಬಿದ್ದುದರಿಂದ ಈತ ಹುಟ್ಟಿದ. ಹುಟ್ಟಿದೊಡನೆ ಬ್ರಹ್ಮಾಂಡ ಒಡೆಯುವಂತಾಗಿ ನೋಡಬಂದ ಬ್ರಹ್ಮನ ಕಣ್ಣಲ್ಲಿ ನೀರಿಳಿಯಿತಂತೆ, ಆದ್ದರಿಂದ ಜಲಂಧರನೆಂದು ಈತನಿಗೆ ಹೆಸರಾಯಿತಂತೆ. ಜಲಂಧರ ತನ್ನ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ಶಸ್ತ್ರದಿಂದ ಸಾಯದ ವರವನ್ನು ಪಡೆದು ತನ್ನ ಸತಿಯಾದ ಬೃಂದೆಯೊಡನೆ ಹರಿವಿರಿಂಚಿಗಳಿಂದಲೂ ಸೇವೆ ಪಡೆಯುತ್ತಿದ್ದ. ಸುರಲೋಕಕ್ಕೆ ದಾಳಿಯಿಟ್ಟು ಇಂದ್ರನನ್ನು ಸೋಲಿಸಿ ಓಡಿಸಿದ್ದ. ಇಂದ್ರನನ್ನು ರಕ್ಷಿಸಲು ಬಂದ ವಿಷ್ಣುವೂ ಜಲಂಧರನ ಬಂಧಿಯಾದನಂತೆ. ದೇವತೆಗಳೆಲ್ಲ ಶಿವನ ಮೊರೆಹೋಗಲು ಆತ ಜಲಂಧರನನ್ನು ಸಂಹರಿಸಲು ಬೃಂದೆಯ ಪಾತಿವ್ರತ್ಯ ಭಂಗವೊಂದೇ ದಾರಿಯೆಂದಾಗ ವಿಷ್ಣು ಜಲಂಧರನ ವೇಷದಲ್ಲಿ ಹೋಗಿ ಅವಳನ್ನು ಭೋಗಿಸಿದನಂತೆ. ಅತ್ತ ಶಿವ ಜಲಂಧರನನ್ನು ಕೊಂದ. 

ಮೃತ್ಯು ಭಯವನ್ನು ದೂರ ಮಾಡಲು ಶಿವನ ಈ ಮಂತ್ರಗಳನ್ನು ಪಠಿಸಿ