ಮಹಾ ಶಿವರಾತ್ರಿ ಹತ್ತಿರ ಬಂದಿದೆ. ಭಗವಾನ್ ಶಿವನನ್ನು ಆರಾಧಿಸುವ ಅಸಂಖ್ಯಾತ ಪೂಜಾ ಸ್ಥಳಗಳು ಭಾರತದಲ್ಲಿಯೂ ಇತರ ಕಡೆಗಳಲ್ಲಿಯೂ ಇವೆ. ಅದರಲ್ಲಿ ಕೆಲವು ವಿಚಿತ್ರ ಆಚರಣೆಗಳನ್ನು ಹೊಂದಿರುವ ದೇವಾಲಯಗಳೂ ಇವೆ. ಅಂಥ ಕೆಲವು ದೇವಾಲಯಗಳ ಪರಿಚಯ ಇಲ್ಲಿದೆ.
ಈಶ್ವರನಿಗೆ ಭಾರತ ಮತ್ತು ವಿದೇಶಗಳಲ್ಲಿ ಅಸಂಖ್ಯಾತ ಪೂಜಾ ಸ್ಥಳಗಳಿವೆ. ಆದರೆ ಈ ಪಾತಾಳೇಶ್ವರ ದೇವಾಲಯ ವಿಶಿಷ್ಟ. ಏಕೆಂದರೆ ಇಲ್ಲಿ ಭಕ್ತರು ಅಸಾಮಾನ್ಯ ಆಚರಣೆಯನ್ನು ಅನುಸರಿಸುತ್ತಾರೆ. ಇಲ್ಲಿ ಭಕ್ತರು ಪೊರಕೆಗಳೊಂದಿಗೆ ದೇವರನ್ನು ಕಾಣಲು ಸರತಿ ಸಾಲಿನಲ್ಲಿ ನಿಲ್ಲುತ್ತಾರೆ! ಪೊರಕೆಯ ಜೊತೆಗೆ ನೀರು ಅಥವಾ ಹಸಿ ಹಾಲು, ದತ್ತೂರ ಹೂವುಗಳು ಮತ್ತು ಹಣ್ಣುಗಳು, ಬಿಳಿ ಕಿರೀಟದ ಹೂವು, ಬಿಲ್ವದ ಎಲೆಗಳನ್ನು ಶಿವನಿಗೆ ಅರ್ಪಿಸುತ್ತಾರೆ.
ಅದೇಕೆ ಪೊರಕೆ? ಭಗವಾನ್ ಶಿವನನ್ನು ವೈದ್ಯನಾಥ ಎಂದೂ ಕರೆಯುತ್ತಾರೆ, ಅಂದರೆ ಔಷಧಿಗಳ ಒಡೆಯ. ಆದ್ದರಿಂದ ಶಿವ ಭಕ್ತರು ಕಾಯಿಲೆಯಿಂದ ಗುಣವಾಗಲು ಆತನನ್ನು ಪ್ರಾರ್ಥಿಸುತ್ತಾರೆ. ಇಲ್ಲಿನ ಶಿವ ದೇವರಿಗೆ ಪೊರಕೆಯನ್ನು ಅರ್ಪಿಸಿದರೆ ಚರ್ಮರೋಗಗಳು ನಿವಾರಣೆಯಾಗುತ್ತವೆ ಎಂಬುದು ಭಕ್ತರ ನಂಬಿಕೆ. ಆದ್ದರಿಂದ ಅವರು ಉತ್ತಮ ಆರೋಗ್ಯಕ್ಕಾಗಿ ಶಿವನ ಆಶೀರ್ವಾದವನ್ನು ಪಡೆಯಲು ತಮ್ಮ ಕುಟುಂಬ ಸದಸ್ಯರೊಂದಿಗೆ ಈ ದೇವಾಲಯಕ್ಕೆ ಭೇಟಿ ನೀಡಿ ಪೊರಕೆ ಅರ್ಪಿಸುತ್ತಾರೆ. ಈ ಶಿವನನ್ನು ಪಾತಾಳೇಶ್ವರ, ವೈದ್ಯನಾಥೇಶ್ವರ ಎಂದೂ ಕರೆಯುತ್ತಾರೆ.
ಈ ದೇವಾಲಯ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಮೊರಾದಾಬಾದ್ ವಿಭಾಗದಲ್ಲಿರುವ ನಗರವಾದ ಬಹ್ಜೋಯ್ ನಗರದ ಪಾಲಿಕೆ ವ್ಯಾಪ್ತಿಯ ಸಾದತ್ಬಾಡಿ ಎಂಬ ಹಳ್ಳಿಯಲ್ಲಿದೆ. ಚರ್ಮ ರೋಗ ಇರುವವರು ಅಥವಾ ಇತರರು ವಿಶೇಷವಾಗಿ ಸೋಮವಾರ ತಮ್ಮ ಪ್ರಾರ್ಥನೆ ಮತ್ತು ಪೊರಕೆಯನ್ನು ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಭಕ್ತರು ಅಕ್ಷರಶಃ ಶಿವಲಿಂಗದ ಮೇಲೆ ಪೊರಕೆಯನ್ನು ಹೊಡೆಯುತ್ತಾರೆ! ಈ ದೇವಾಲಯದಲ್ಲಿ ಮಹಾ ಶಿವರಾತ್ರಿ ಮತ್ತು ಶ್ರಾವಣ ಮಾಸಗಳಲ್ಲಿ ಭಾರಿ ಜನಸಂದಣಿ ಇರುತ್ತದೆ. ಪೊರಕೆ ಕೊಳಕು ಮತ್ತು ಧೂಳನ್ನು ಸ್ವಚ್ಛಗೊಳಿಸುವಂತೆ ಆರೋಗ್ಯವನ್ನು ಕೂಡ ಶುಚಿಗೊಳಿಸುವುದು ಎಂದು ನಂಬುತ್ತಾರೆ.
ಹಾಗಂತ ನಿಮ್ಮ ಮನೆಯಿಂದ ದೇವಸ್ಥಾನಕ್ಕೆ ಪೊರಕೆಯನ್ನು ಒಯ್ಯಬೇಕಿಲ್ಲ. ಪೊರಕೆಗಳು ದೇವಾಲಯದ ಸಂಕೀರ್ಣದಲ್ಲಿ ಮತ್ತು ಸುತ್ತಮುತ್ತ ಲಭ್ಯವಿದೆ. ನೀವು ಪೊರಕೆ ಖರೀದಿಸಿ ಅದನ್ನು ದೇವರಿಗೆ ಅರ್ಪಿಸಬಹುದು. ನಂತರ ದೇವಾಲಯದ ಆಡಳಿತ ಮಂಡಳಿ ಪೊರಕೆಗಳನ್ನು ಮತ್ತೆ ಅಂಗಡಿಗಳಿಗೆ ಮಾರಾಟ ಮಾಡುತ್ತದೆ. ಈ ದೇವಾಲಯಕ್ಕೆ ಭೇಟಿ ನೀಡಿದ ಅನೇಕ ಭಕ್ತರು ತಮ್ಮ ಚರ್ಮದ ಕಾಯಿಲೆಗಳಿಂದ ಮುಕ್ತಿ ಹೊಂದಿರುವುದಾಗಿ ಹೇಳಿಕೊಳ್ಳುತ್ತಾರೆ.
ಕಾಶಿಯಲ್ಲಿರುವ ಶ್ರೀ ಕಾಲಭೈರವೇಶ್ವರ ದೇವಾಲಯ ಕೂಡ ವಿಶಿಷ್ಟ. ಇದು ಭಗವಾನ್ ಶಿವನ ಅಂಶವಾದ ಕಾಲಭೈರವನಿಗೆ ಸಮರ್ಪಿತ. ಈ ದೇವಾಲಯದಲ್ಲಿ ದೇವರಿಗೆ ಮದ್ಯವನ್ನು ಹರಕೆಯಾಗಿ ನೀಡಲಾಗುತ್ತದೆ. ಇದು ಇಲ್ಲಿ ದೇವರಿಗೆ ಮಾಡುವ ಏಕೈಕ ನೈವೇದ್ಯ. ಇಲ್ಲಿ ನೀವು ದೇವಾಲಯದ ಹೊರಗೆ ದೊಡ್ಡ ಪ್ರಮಾಣದ ಮದ್ಯವನ್ನು ನೋಡಬಹುದು. ಇಲ್ಲಿ ಪಂಡಿತರು ದೇವರಿಗೆ ಮದ್ಯವನ್ನು ಸುರಿಯುತ್ತಾರೆ ಮತ್ತು ನಂತರ ಅವರು ಖಾಲಿ ಬಾಟಲಿಯನ್ನು ಭಕ್ತರಿಗೆ ಪ್ರಸಾದವಾಗಿ ನೀಡುತ್ತಾರೆ.
ಶಿವರಾತ್ರಿ ವಿಶೇಷ: ಬೆಂಗಳೂರಿನ ಪುರಾತನ ಪ್ರಸಿದ್ಧ ಶಿವ ದೇವಾಲಯಗಳ ಲಿಸ್ಟ್ ಇಲ್ಲಿದೆ
ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಕಾಳಹಸ್ತಿ ದೇವಾಲಯ ಕೂಡ ವಿಶಿಷ್ಟವಾದುದು. ಇದು ತಿರುಪತಿ ಬಾಲಾಜಿ ದೇವಸ್ಥಾನದಿಂದ 40 ಕಿ.ಮೀ ದೂರದಲ್ಲಿದೆ. ಶಿವನು ಇಲ್ಲಿ ಜ್ಯೋತಿರ್ಲಿಂಗವಾಗಿ ನೆಲೆಸಿದ. ಈ ದೇವಾಲಯದ ಅರ್ಚಕರು ಶಿವಲಿಂಗವನ್ನು ಮುಟ್ಟುವುದಿಲ್ಲ. ಇಲ್ಲಿರುವ ಶಿವಲಿಂಗವು ಚೌಕಾಕಾರವನ್ನು ಹೊಂದಿದೆ. ಗ್ರಹಣದ ಸಮಯದಲ್ಲಿ ಮುಚ್ಚದ ಏಕೈಕ ದೇವಾಲಯ ಇದಾಗಿದೆ. ಸಾಮಾನ್ಯವಾಗಿ ಇಲ್ಲಿಗೆ ರಾಹು ಮತ್ತು ಕೇತುಗಳಿಗೆ ಪೂಜೆ ಸಲ್ಲಿಸಲು ಭಕ್ತರು ಬರುತ್ತಾರೆ. ಆದ್ದರಿಂದ ಇದನ್ನು "ರಾಹು ದೇವಾಲಯ" ಎಂದೂ ಕರೆಯುತ್ತಾರೆ. ರಾಹು ಮತ್ತು ಕೇತುಗಳು ಗ್ರಹಣಕ್ಕೆ ಕಾರಣವಾದ ಗ್ರಹಗಳಾಗಿವೆ ಮತ್ತು ಅವರನ್ನು ಇಲ್ಲಿ ಪೂಜಿಸಲಾಗುತ್ತದೆ. ಈ ದೇವಾಲಯದ ಮತ್ತೊಂದು ಅದ್ಭುತ ಸಂಗತಿಯೆಂದರೆ, ಶಿವಲಿಂಗದ ದರ್ಶನವನ್ನು ಯಾವಾಗಲೂ ದೀಪದ ಬೆಳಕಿನಲ್ಲಿ ಮಾತ್ರ ವೀಕ್ಷಿಸಲಾಗುತ್ತದೆ.
