Asianet Suvarna News Asianet Suvarna News

ಭಕ್ತಿಸಾಮ್ರಾಜ್ಯದ ಮಹಾಪ್ರಭು ಶ್ರೀ ಚೈತನ್ಯರು; ಭಗವನ್‌ ಚೈತನ್ಯ ಮಹಾಪ್ರಭು ಜಯಂತಿ!

ನಮ್ಮ ದೇಶದ ಮಹಾನ್‌ ಸಂತರ ಶ್ರೇಣಿಯಲ್ಲಿಯೇ ಭಗವಾನ್‌ ಶ್ರೀ ಚೈತನ್ಯ ಮಹಾಪ್ರಭುಗಳು ಅಗ್ರಗಣ್ಯ ಸ್ಥಾನದಲ್ಲಿರುವ ಆಚಾರ್ಯರು. ಇವರು ಜನಿಸಿದ್ದು ಫಾಲ್ಗುಣಮಾಸದ ಪೌರ್ಣಮಿಯಂದು. (ಕ್ರಿ.ಶ. 1486 ಫೆಬ್ರವರಿ 18) ಅಂದರೆ ಇಂದು ಮಾರ್ಚ್ ಒಂಬತ್ತರಂದು ಅವರ ಈ ವರ್ಷದ ಜಯಂತಿ. 

about chaitanya mahaprabhu Jayanthi 2020
Author
Bangalore, First Published Mar 9, 2020, 9:49 AM IST

ದೇವರ ಕುರಿತು ತಮ್ಮ ಆಳವಾದ ಪ್ರೀತಿಯಿಂದ ಭಕ್ತಿಪೂರ್ವಕವಾಗಿ ಭಜನೆ ಮಾಡುತ್ತಾ ಭಗವಂತನ ನಾಮಸಂಕೀರ್ತನೆಯ ಮಹಾ ಚಳುವಳಿಯನ್ನೇ ಹುಟ್ಟುಹಾಕಿದ ಇವರು ತಮ್ಮ ಶಿಷ್ಯರಿಂದ ಮಹಾಪ್ರಭುಗಳೆಂದು ಗೌರವ ಪಡೆದರು. ಅವರ ಜೀವನ, ಸಾಧನೆಗಳ ಕುರಿತ ಈ ಕಿರುಲೇಖನವನ್ನು ಒಂದು ಕಥೆಯಿಂದ ಮೊದಲು ಮಾಡೋಣ.

ಶ್ರೀ ಚೈತನ್ಯರು ಭಗವಂತನ ಬಗೆಗಿನ ತಮ್ಮ ಪ್ರೇಮಮಯ ಸಂದೇಶವನ್ನು ಸಕಲ ಜನರಿಗೆ ನೀಡುತ್ತಾ ದೇಶಾದ್ಯಂತ ಸಂಚರಿಸುತ್ತಿದ್ದ ಕಾಲ. ವೃಂದಾವನದಿಂದ ಹಿಂದಿರುಗುವಾಗ ವಾರಾಣಸಿಗೆ ಬಂದರು. ತಮ್ಮ ಪ್ರಿಯ ಶಿಷ್ಯರ ಮನೆಯಲ್ಲಿ ತಂಗಿದರು. ಆ ಕಾಲದಲ್ಲಿ ಶ್ರೀ ಪ್ರಕಾಶಾನಂದ ಸರಸ್ವತಿ ಎಂಬ ವಿದ್ವಾಂಸರು ಇಡೀ ವಾರಾಣಸಿಯಲ್ಲಿ ಮಾನ್ಯತೆ ಪಡೆದಿದ್ದರು. ಚೈತನ್ಯರು ಎಲ್ಲಿರುವರೋ ಅಲ್ಲಿ ಅವರ ಸುತ್ತಲೂ ಭಕ್ತಸಮುದಾಯ , ಹಾಡುಗಳ ಸುಶ್ರಾವ್ಯ ಗಾಯನ ,ಭಗವಂತನ ಗುಣಗಾನ.. , ಆ ಸರಳ ಭಕ್ತರಿಗೆ ಪ್ರಭುಗಳು ಸಾಕ್ಷಾತ್‌ ನಾರಾಯಣನೇ ಸರಿ. ಇವೆಲ್ಲ ಪ್ರಕಾಶಾನಂದರ ಕಿವಿ ತಲುಪಿತು. ವೇದಾಂತದ ಮಹಾವಿದ್ವಾಂಸರಾದ ಅವರಿಗೆ ಚೈತನ್ಯರ ಈ ಹೊಸ ಬಗೆಯ ಸಂಕೀರ್ತನ,ಭಕ್ತಿಯ ಆಂದೋಲನ ಇನಿತೂ ಇಷ್ಟವಾಗಲಿಲ್ಲ.ಇವೆಲ್ಲವೂ ವೇದ ವಿರೋಧಿಯಾಗಿ ಕಂಡಿರಬೇಕು ಅವರಿಗೆ.ಅನಕ್ಷರಸ್ಥ ಜನರೂ ನಾಮಸಂಕೀರ್ತನೆಯಿಂದ ಭಗವಂತನನ್ನು ಪಡೆಯಬಹುದಂತೆ!

ಧರ್ಮಸ್ಥಳ ಅಣ್ಣಪ್ಪ ದೈವದ ಬಗ್ಗೆ ನಿಮಗೆ ತಿಳಿದಿರದ ಇಂಟ್ರೆಸ್ಟಿಂಗ್ ವಿಚಾರಗಳಿವು..!

ಇದೇಕೋ ಅತಿಯಾಯಿತುಎನಿಸಿರಬೇಕು ಅವರಿಗೆ.ತಮ್ಮ ಗುಂಪಿನಲ್ಲಿ ಈ ಕುರಿತು ಮಾತಾಡುವಾಗ ಶ್ರೀ ಚೈತನ್ಯರ ಬಗೆಗೆ ಹಗುರವಾಗಿ ಅಪಹಾಸ್ಯದ ನುಡಿಗಳನ್ನು ಆಡಿದರು.ಉನ್ಮತ್ತ ಭಾವದಲ್ಲಿ ಹಾಡಿ ಕುಣಿಯುವ ಇಂಥ ಜನರು ವೇದವನ್ನು ಅರಿತವರಲ್ಲ ಎಂದು ಸರಸ್ವತಿಯವರ ವಾದ. ಅದನ್ನಾಲಿಸಿದ ಅಲ್ಲೇ ಇದ್ದ ಚೈತನ್ಯರ ಶಿಷ್ಯನಿಗೆ ತುಂಬಾ ಬೇಸರವಾಯಿತು.ಆತ ಶ್ರೀ ಚೈತನ್ಯರ ಬಳಿ ಬಂದು ತನ್ನ ಮನಸ್ಸಿಗಾದ ನೋವನ್ನು ಹೇಳಿಕೊಂಡ. ಚೈತನ್ಯರು ಸುಮ್ಮನೆ ನಕ್ಕರು.

 

ಚೈತನ್ಯರ ಭಕ್ತರಿಗೆ ಸಮಾಧಾನವಾಗಲಿಲ್ಲ. ಮಹಾಪ್ರಭುಗಳ ಒಪ್ಪಿಗೆ ಪಡೆದು ಒಂದು ದೊಡ್ಡ ಸಭೆಯನ್ನು ಏರ್ಪಡಿಸಿದರು. ಆ ಸಭೆಗೆ ಕಾಶಿಯ ಸಮಸ್ತ ಸಾಧು,ಸನ್ಯಾಸಿಗಳನ್ನೂ ಆಮಂತ್ರಿಸಲಾಗಿತ್ತು. ಅವರೆಲ್ಲ ಬಂದು ಆಸೀನರಾದ ಬಳಿಕ ಚೈತನ್ಯರು ಬಂದರು.ಸನ್ಯಾಸಿಗಳಿಗೆ ಅತ್ಯಂತ ವಿನಯದಿಂದ ಕೈ ಮುಗಿದು ಸಭೆಯಲ್ಲಿ ಆ ಸನ್ಯಾಸಿಗಳ ಕೆಳಸಾಲಿನಲ್ಲಿ ಕುಳಿತರು. ಸಾಧುಗಳು ಆಶ್ಚರ್ಯಚಕಿತರಾದರು. ಪ್ರಕಾಶಾನಂದ ಸರಸ್ವತಿಯವರು ಹೀಗೇಕೆ ಮಾಡುತ್ತಿದ್ದೀರಿ? ಬನ್ನಿ,ನಮ್ಮ ಜೊತೆ ಬಂದು ಕುಳಿತುಕೊಳ್ಳಿ ಎಂದು ಆಹ್ವಾನಿಸಿದರು. ಚೈತನ್ಯರು ವಿನಮ್ರತೆಯಿಂದ ಎಲ್ಲಾದರೂ ಉಂಟೆ?ನನ್ನಂಥ ಕ್ಷುದ್ರ ವ್ಯಕ್ತಿ ತಮ್ಮ ಸಾಲಿನಲ್ಲಿ ಕೂಡಲಾದೀತೇ?ಇಲ್ಲಿ ಅನುಕೂಲವಾಗಿದೆಎಂದು ನುಡಿದರು. ತದನಂತರ ಪ್ರಕಾಶಾನಂದ ಸರಸ್ವತಿಯವರು ತಾವೇ ಎದ್ದು ಬಂದು ಅನುನಯದಿಂದ ಚೈತನ್ಯರ ಕೈ ಹಿಡಿದು ತಮ್ಮೆಲ್ಲರ ಜೊತೆ ಕೂರಿಸಿಕೊಂಡರು. ಅವರು ಕೇಳಿದರು:

ತಾವು ಶ್ರೀ ಕೇಶವಭಾರತಿಯವರ ಪ್ರಿಯ ಶಿಷ್ಯರು. ವೇದಾಧ್ಯಯನ,ಅಧ್ಯಾಪನ ಬಿಟ್ಟು ಹೀಗೆ ಗಾನ,ನರ್ತನಗಳಲ್ಲಿ ತೊಡಗುವುದು ಸರಿಯೇ?ನೃತ್ಯ,ಸಂಗೀತ,ಸಂಕೀರ್ತನೆ ಇವೆಲ್ಲ ಭಾವುಕರ ಲೋಕವಿಷಯಗಳು,ಸನ್ಯಾಸಿಗೆ ಉಚಿತವಲ್ಲ,ಅಲ್ಲವೇ?

ಶ್ರೀ ಚೈತನ್ಯರು ಅವರಿಗೆ ತಲೆಬಾಗಿ ಉತ್ತರಿಸಿದರು: ನೀವು ಹೇಳುತ್ತಿರುವುದು ಅಕ್ಷರಶಃ ಸರಿಯಾಗಿದೆ. ಆದರೆ ನನ್ನ ಕಥೆಯೇ ಬೇರೆ. ನನಗೆ ವೇದಾಧ್ಯಯನ ತಲೆಗೆ ಹತ್ತಲಿಲ್ಲ. ಸಾಕಷ್ಟುನೋಡಿಯಾದ ಮೇಲೆ ಪೂಜ್ಯ ಗುರುಗಳು ನನ್ನನ್ನು ಪಕ್ಕಕ್ಕೆ ಕರೆದು ನೀನೊಬ್ಬ ಕಡು ಮೂರ್ಖ ಎಂದು ಹೇಳಿದರು.ವೇದಾಧ್ಯಯನ ನನ್ನಿಂದ ಸಾಧ್ಯವೇ ಇಲ್ಲ ಎಂದು ಅವರಿಗೆ ಮನವರಿಕೆ ಆಗಿಬಿಟ್ಟಿತ್ತು.ನನ್ನಂಥ ಪಾಮರರಿಗೆ ಇನ್ನೇನು ಹಾದಿ ಎಂದು ಕಾಲಿಗೆ ಬಿದ್ದು ಕೇಳಿದ್ದಕ್ಕೆ ಅವರು ’ಶ್ರೀ ಕೃಷ್ಣ ನಾಮವನ್ನು ಜಪಿಸು,ಅಷ್ಟೇ ಸಾಕು,ವೇದಗಳು ನಿನಗಲ್ಲ’ ಎಂದು ಸ್ಪಷ್ಟವಾಗಿ ಹೇಳಿಬಿಟ್ಟರು.

ಆದಿಶಕ್ತಿಯ ಅವತಾರ ಶಕ್ತಿ ದೇವಿಯ ಪವಿತ್ರ ಶಕ್ತಿ ಪೀಠಗಳು

ಸನ್ಯಾಸಿಗಣ ಚೈತನ್ಯರ ವಿವರಣೆಯನ್ನು ಕೌತುಕದಿಂದ ಆಲಿಸುತ್ತಿತ್ತು. ಚೈತನ್ಯರ ವೇದಜ್ಞಾನ ಮಿತವಾದುದೆಂದು ಒಳಗೊಳಗೇ ಸಂತೋಷವಾಗಿರಲೂ ಸಾಕು. ಚೈತನ್ಯರು ಮುಂದುವರಿಸಿದರು:

ನನ್ನ ಗುರುಗಳು ನನಗೆ ಹೀಗೆ ಹೇಳಿದರು:’ನಿನಗೆ ಶಾಸ್ತ್ರಗಳ ಗೊಡವೆ ಬೇಡ.ನಾಮಜಪದಿಂದಲೇ ಕೃಷ್ಣನನ್ನು ಪಡೆಯಲು ಸಾಧ್ಯವಿದೆ. ಅದನ್ನೇ ಸಾಧಿಸು,ನಡೆ,ಕಲಿಯುಗದಲ್ಲಿ ಇನ್ನಾವ ಹಾದಿಯೂ ಇಲ್ಲ,ಇಲ್ಲ,ಇಲ್ಲ’, ಇಷ್ಟುಹೇಳಿದ ಮೇಲೆ ಗುರುಆಜ್ಞೆ ಮೀರಲು0ಟೆ?ಹರಿನಾಮ ಜಪಿಸುತ್ತಾ ಹುಚ್ಚನಾಗಿಬಿಟ್ಟೆ- ಮೈ ಮರೆತು ನಗುವೆ ,ಹಾಡುವೆ,ಕುಣಿಯುವೆ. ಇದೆಂಥ ಸ್ಥಿತಿ ತಂದುಬಿಟ್ಟಿರಿ ಎಂದು ಗುರುಗಳ ಬಳಿ ಸಿಟ್ಟು,ದುಃಖದಿಂದ ಹೋದರೆ ಅವರು ಕಣ್ಣಲ್ಲಿ ನೀರು ತಂದುಕೊಂಡು ಎಂಥ ಭಾಗ್ಯಶಾಲಿ ನೀನು!ನಿನ್ನ ಪ್ರೀತಿಯಿಂದ ಹರಿಯನ್ನೇ ಪಡೆದುಕೊಂಡೆಯಲ್ಲ,ಹುಚ್ಚಲ್ಲ ಇದು ಮಗೂ ,ಇದು ಹುಚ್ಚೇ ಆದರೆ ಅದು ಹೆಚ್ಚಾಗಲಿ ಬಿಡು ಎಂದು ಹೇಳಿದರು. ಸನ್ಯಾಸಿಗಳೇ,ನನ್ನ ಕಥೆ ಹೀಗಿದೆ

ಈ ವೇಳೆಗೆ ಚೈತನ್ಯರನ್ನು ಪ್ರಶ್ನಿಸುವವರ ಗತ್ತು,ಗದ್ದಲವೆಲ್ಲ ಇಳಿದುಹೋಗಿತ್ತು.ವೇದಪುರುಷನನ್ನೇ ಕಂಡುಕೊಂಡವರಿಗೆ ವೇದದ ಅಗತ್ಯ ಉಳಿದೀತೇ - ಎಂದು ಅರಿತುಕೊಂಡು ಚೈತನ್ಯರಿಗೆ ಶರಣು ಬಂದರು. ಮಹಾಪ್ರಭುಗಳು ಅವರಿಗೆ ಹರಿನಾಮವನ್ನು ಕೊಟ್ಟರು, ಅವರನ್ನೂ ’ಹುಚ್ಚ’ರನ್ನಾಗಿ ಮಾಡಿಬಿಟ್ಟರು!

***************

ಆಗಲೇ ಹೇಳಿದಂತೆ ಹದಿನೈದನೇ ಶತಮಾನದ ಅಂತ್ಯದ ಹೊತ್ತಿಗೆ ಒಂದು ಫಾಲ್ಗುಣ ಹುಣ್ಣಿಮೆಯ ರಾತ್ರಿ ಬಂಗಾಳದ ನವದ್ವೀಪನಗರದ ಶ್ರೀಧಾಮ ಮಾಯಾಪುರದಲ್ಲಿ ಚೈತನ್ಯರು ಜನಿಸಿದರು. ತಂದೆ ಜಗನ್ನಾಥ ಮಿಶ್ರಾ ಪಂಡಿತರು,ತಾಯಿ ಶಚೀದೇವಿ ನಿರ್ಮಲ ಸ್ವಭಾವದ ಸಾತ್ವಿಕ ಸ್ತ್ರೀ. ಚೈತನ್ಯರು ಈ ತಂದೆ ತಾಯಿಯರ ಹತ್ತನೇ ಮಗು.ಇಟ್ಟಹೆಸರು ವಿಶ್ವ0ಭರ. ಗೌರ ವರ್ಣದವನಾದುದರಿಂದ ಗೌರಾಂಗ,ಬೇವಿನಮರದ ಕೆಳಗೆ ಹುಟ್ಟಿದ್ದರಿಂದ ನಿಮಾಯಿ - ಹೀಗೆ ಇನ್ನೆರಡು ಹೆಸರುಗಳೂ ಇದ್ದವು ಬಾಲಕನಿಗೆ. ತೊಟ್ಟಿಲಲ್ಲಿ ಮಲಗಿದವನು ಅತ್ತಾಗ ಹರಿನಾಮ ಹಾಡಿದರೆ ಸಾಕು, ಶಿಶು ಶಾಂತವಾಗುತ್ತಿತ್ತು. ಸ್ವಲ್ಪ ದೊಡ್ಡವರಾದ ಮೇಲೂ ಅಷ್ಟೇ, ಚೈತನ್ಯರು ಆಗಾಗ ಒಂದೇ ಸಮನೆ ಅಳುತ್ತಿದ್ದರು. ’ಹರಿಬೋಲ್‌ ’ಅಂದರೆ ಅಳು ನಿಲ್ಲಿಸುತ್ತಿದ್ದರು. ಅದರಿಂದಾಗಿ ಅವರ ಮನೆಯಲ್ಲಿ ಸದಾ ಹರಿಬೋಲ್‌ ಘೋಷ ಹೊಮ್ಮುತ್ತಲೇ ಇರುತ್ತಿತ್ತು. ಮುಂದೆ ತಾನು ಮಾಡಲಿರುವ ಕಾರ್ಯಕ್ಕೆ ಆಗಿನಿಂದಲೇ ಅವರು ಸಿದ್ಧತೆ ನಡೆಸಿದ್ದರು ಎಂದರೆ ತಪ್ಪಾಗಲಾರದು. ಅವರ ಬಾಲ್ಯದಲ್ಲಿ ಅಸಾಧಾರಣ ಎನಿಸುವಂಥ ಅನೇಕ ಸಂದರ್ಭಗಳು , ಕೀಟಲೆಯಾಗಿ ಮೇಲು ನೋಟಕ್ಕೆ ಕಂಡರೂ ಆಳವಾಗಿ ಯೋಚಿಸಿದರೆ ವಿಶೇಷಾರ್ಥ ಉಳ್ಳ ಘಟನೆಗಳು ನಡೆದವು.ಮುಖ್ಯವಾದ ಮಾತೆಂದರೆ ಅತಿ ಮುಗ್ಧ ಅನಿಸಿದರೂ ಅಸಾಮಾನ್ಯ ಪ್ರತಿಭೆ ಉಳ್ಳವರಾಗಿದ್ದರು.

ಚೈತನ್ಯರು ಎಷ್ಟುಪ್ರತಿಭಾವಂತರೆಂದರೆ ಹದಿನಾರನೇ ವಯಸ್ಸಿಗೇ ಅವರು ತಮ್ಮ ಊರಿನಲ್ಲಿ ಚತುಷ್ಪಾಠಿ (ಹಳ್ಳಿಯ ಶಾಲೆ) ಆರಂಭಿಸಿದರು! ಅವರ ಪಾಠದಲ್ಲಿ ಶ್ರೀಕೃಷ್ಣ ಮತ್ತೆ ಮತ್ತೆ ಅವತರಿಸುತ್ತಿದ್ದ ಎಂದು ಬೇರೆ ಹೇಳಬೇಕಿಲ್ಲ. ಅವರ ಶಿಷ್ಯ ಶ್ರೀಲ ಜೀವ ಗೋಸ್ವಾಮಿಯವರು ಮಹಾಪ್ರಭುಗಳ ಪ್ರೀತ್ಯರ್ಥವಾಗಿ ’ಹರಿ ನಾಮಾಮೃತ ವ್ಯಾಕರಣ’ ರಚಿಸಿದರು. ಅದರಲ್ಲಿ ವ್ಯಾಕರಣದ ನಿಯಮಗಳನ್ನು ಭಗವಂತನ ದಿವ್ಯನಾಮ ಬಳಸಿ ವಿವರಿಸಲಾಗಿದೆ! ನವದ್ವೀಪದಲ್ಲಿ ಅವರು ನಾಮಸಂಕೀರ್ತನೆಯ ಮೂಲಕ ಲೋಕಶಿಕ್ಷಣವನ್ನೂ ಆರಂಭಿಸಿದರು. ಕಲಿಯುಗದಲ್ಲಿ ಯಜ್ಞಯಾಗಗಳನ್ನು ಕ್ರಮಬದ್ಧವಾಗಿ ಮಾಡುವುದು ಕಷ್ಟ,ಅಂಥ ಸಮರ್ಥ ಬ್ರಾಹ್ಮಣರು ದೊರೆಯುವುದು ಅದಕ್ಕಿಂತ ಹೆಚ್ಚು ಕಷ್ಟ. ಆದರೆ ದೇವರು ಪ್ರೇಮಮಯಿ,ಅವನು ನಾಮಜಪಕ್ಕೆ ಒಲಿಯುತ್ತಾನೆ. ಅದೇ ಯಜ್ಞ ಎಂದು ಚೈತನ್ಯರು ಹೇಳಿದರು.ಆದರೆ ಅವರನ್ನು ಒಪ್ಪದ ಸಂಪ್ರದಾಯವಾದಿಗಳು, ಅಸೂಯಾತತ್ಪರರು ಸಾಕಷ್ಟುಜನರಿದ್ದರು.ಅಂಥವರು ಒಡ್ಡಿದ ಸಮಸ್ಯೆಗಳನ್ನು ಮಹಾಪ್ರಭುಗಳು ಶಾಂತಚಿತ್ತರಾಗಿಯೇ ಎದುರಿಸಿದರು. ಅವರ ಪ್ರೇಮಮಯ ಭಕ್ತಿ ಆ ಎಲ್ಲ ಸಂಕಷ್ಟಗಳಿಂದ ಅವರನ್ನು ಪಾರುಮಾಡಿತು. ಅವರ ಜೀವನ ಚರಿತ್ರೆಯಲ್ಲಿ ಅಂಥ ಅನೇಕ ಪ್ರಸಂಗಗಳಿವೆ. ವಾರಾಣಸಿಯ ವಿದ್ವಾಂಸರ ವಾದಗಳನ್ನು ವಿಶಿಷ್ಟವಾಗಿ, ವಿನೋದಪೂರ್ಣವಾಗಿ ವಿಚ್ಛಿನ್ನಗೊಳಿಸಿ ವಿನಯದಿಂದಲೇ ವಿಜೇತರಾದ ಅವರ ಜೀವನದ ಒಂದು ಪ್ರಸಂಗ ಆಗಲೇ ವಿವರಿಸಿದೆ.

ಗಂಡನ ಮೇಲೆ ಸೇಡಿಗಾಗಿ ಮಾರಿಯಾದಳಾ ಈ ಮಾರಿಕಾಂಬೆ!!

ನಾಮಸಂಕೀರ್ತನ ಒಂದು ಚಳುವಳಿಯಂತೆ ಹಬ್ಬತೊಡಗಿತು.ಶ್ರೀಲ ನಿತ್ಯಾನಂದ ಪ್ರಭು,ಠಾಕುರ ಹರಿದಾಸ,ಅದ್ವೈತಪ್ರಭು,ಶ್ರೀನಿವಾಸ ಠಾಕುರ ಮುಂತಾಗಿ ಅನೇಕರು ಚೈತನ್ಯರ ಜೊತೆ ಕೈಜೋಡಿಸಿದರು. ಲೌಕಿಕ ಭೋಗಕ್ಕಿಂತ ಭಕ್ತಿಯೋಗ ಹಿತಕರ,ಆತ್ಮೋದ್ಧಾರದ ಸರಳ ಸುಂದರ ಮಾರ್ಗ ಎಂದು ಇವರೆಲ್ಲ ಸಮುದಾಯಕ್ಕೆ ತೋರಿಸಿಕೊಟ್ಟರು. ಕೆಟ್ಟಚಟಗಳಿಂದ ದೂರವಾಗಿ ಪರಿಶುದ್ಧವಾಗಿ ಬಾಳುವಂತೆ ಬೋಧಿಸಿದರು. ಇಪ್ಪತ್ತನಾಲ್ಕನೆಯ ವಯಸ್ಸಿನಲ್ಲಿ ಚೈತನ್ಯರು ವಿಧ್ಯುಕ್ತವಾಗಿ ಸನ್ಯಾಸ ಸ್ವೀಕರಿಸಿದರು. ಸನ್ಯಾಸಧರ್ಮವನ್ನು ಅವರು ಕಟ್ಟುನಿಟ್ಟಾಗಿ ಪಾಲಿಸಿದರು. ಆರು ಗೋಸ್ವಾಮಿಗಳು ಹಾಗೂ ಇನ್ನೂ ಕೆಲವು ಶಿಷ್ಯರನ್ನು ಸಂಕೀರ್ತನ ಪ್ರಚಾರಕ್ಕೆ ಪ್ರಭುಗಳು ನಿಯೋಜಿಸಿದರು. ಸ್ವತಃ ಚೈತನ್ಯರು ದಕ್ಷಿಣ ಭಾರತದಲ್ಲೂ, ಮಹಾರಾಷ್ಟ್ರ ಹಾಗೂ ಇನ್ನಿತರ ಅನೇಕ ಪ್ರದೇಶಗಳಲ್ಲೂ ಸಂಚರಿಸಿ ಹರಿನಾಮ ಸುಧೆ ಹರಿಸಿದರು. ತಾಯಿ ಬಯಸಿದಂತೆ ಪುರಿಯನ್ನು ತಮ್ಮ ಕಾರ್ಯಗಳ ಕೇಂದ್ರವನ್ನಾಗಿ ಮಾಡಿಕೊಂಡರು. ಆ ಪುಣ್ಯಕ್ಷೇತ್ರದಲ್ಲಿ ಆರಂಭದಲ್ಲಿ ಅವರು ಅನೇಕ ವಿರೋಧಗಳನ್ನು ಎದುರಿಸಬೇಕಾಯಿತು. ದೇವರೊಂದಿಗೆ ಮಾನವನ ಸಂಬಂಧ ಶಾಶ್ವತವಾದುದು,ಭಕ್ತಿಪೂರ್ಣ ಸೇವೆಯಿಂದ ಪರಮಾತ್ಮನ ಪ್ರೀತಿ ಪಡೆಯುವ ಪ್ರಯತ್ನ ನಮ್ಮದಾಗಬೇಕು ಎಂಬ ಪ್ರಾಯೋಗಿಕ ಪರಿಹಾರವನ್ನು ಪ್ರಪಂಚಕ್ಕೆ ನೀಡಿದ ಪೂಜ್ಯರು ಮಹಾಪ್ರಭುಗಳು. ವರ್ಣಭೇದ ಸಾಮಾಜಿಕ ಅಪರಾಧ ,ವಾಸ್ತವವಾಗಿ ಅಧ್ಯಾತ್ಮದ ಅತ್ಯುನ್ನತ ಅನುಭವಕ್ಕೆ ಅಂಥ ಅಡೆತಡೆಗಳೇ ಇಲ್ಲ ಎಂದು ಎಲ್ಲೆಡೆ ಎಲ್ಲರನ್ನೂ ದೇವರ ಮಮತೆಯ ಮಡಿಲಿಗೆ ಮನದುಂಬಿ ಆಹ್ವಾನಿಸಿದರು. ಸತ್ಸಂಗ , ಹರಿ ಸಂದೇಶ ಶ್ರವಣ ಮತ್ತು ಹರಿಸಮರ್ಪಣ ಭಕ್ತರ ಸಾಧನಾಮಾರ್ಗದ ಮೂರು ಮುಖ್ಯ ಸಂಗತಿಗಳೆಂದು ಅವರು ತೋರಿಸಿಕೊಟ್ಟರು.ಭಾಗವತದ ಪಠಣ ಇನ್ನೊಂದು ಮುಖ್ಯ ಉಪಾಯ. ಜಗನ್ನಾಥನ ಅನುಗ್ರಹ, ಜಗದ್ವಿಖ್ಯಾತಿ ಎರಡೂ ಲಭಿಸಿತು ಅವರಿಗೆ.

ಭಗವಂತನೊಂದಿಗೆ ಶಾಶ್ವತವಾಗಿ ಸಂಬಂಧ ಇಟ್ಟುಕೊಳ್ಳುವುದು, ಅವನೊಂದಿಗೆ ಅನುದಿನದ ಅನುಸಂಧಾನ ಹಾಗೂ ಅವನ ಬಗೆಗೆ ಎಂದೂ ಕುಗ್ಗದ,ಎಂದೆಂದಿಗೂ ಹಿಗ್ಗುವ ಪ್ರೀತಿಯ ಮಧುರ ಭಾವನೆ - ಇವೇ ಮುಖ್ಯ, ಇವೇ ಸತ್ಯ ,ಇದನ್ನು ಹೊರತುಪಡಿಸಿ ವೇದಗಳಲ್ಲಿ ಹೇಳುವ ವಿಷಯಗಳು ಅನಗತ್ಯ,ಅಪ್ರಸ್ತುತ ಎಂದು ಅವರು ತಿಳಿದರು. ತಮ್ಮ ಹಿಂಬಾಲಕರಿಗೆ ಅವರು ಕೊಟ್ಟುದು ದೇವರ ಕುರಿತು ಎಣೆಯಿಲ್ಲದ ಪ್ರೀತಿಯನ್ನು . ನಾಮಸಂಕೀರ್ತನ ಆ ಪ್ರೇಮಸಂಪತ್ತನ್ನು ಸಂಪಾದಿಸುವ ಕ್ರಿಯಾಯೋಗ. ಕಾಲದ ಪ್ರಭಾವದಿಂದ ಈ ಭಕ್ತಿಮಾರ್ಗದಲ್ಲಿ ಕರೀಮುಸುಕು,ಗಾಢ ಅಂಧಕಾರ ಕವಿದಿತ್ತು. ಚೈತನ್ಯರು ಆ ಪಥದ ಕತ್ತಲು ಸರಿಸಿದರು,ಬೆಳಕು ಹರಿಸಿದರು. ಅವರು ಭಗವಂತನ ಅವತಾರವೆಂದು ಭಕ್ತಭಾಗವತರು ಭಾವಿಸಿದರೆ, ಭಗವಾನರೆಂದು ಬಾಗಿದರೆ ಬೆರಗಾಗುವದೇನಿದೆ?

ಶ್ರೀ ಚೈತನ್ಯರು ಬದುಕಿದ್ದು ನಲವತ್ತೆಂಟು ವರ್ಷಗಳು ಮಾತ್ರ. ಆ ಅಷ್ಟೂ ವರ್ಷಗಳ ಕಾಲ ಚೈತನ್ಯರು ಹರಿಸಂದೇಶ ಪ್ರಚುರ ಪಡಿಸಿದರು,ಪ್ರಚಾರ ಮಾಡಿದರು. ಅವರ ಅಂತ್ಯ ಅತ್ಯಂತ ನಿಗೂಢಕರವಾಗಿದೆ. ಪುರಿಯ ಟೋಟ ಗೋಪಿನಾಥನ ದೇವಾಲಯದಲ್ಲಿ ಸಂಕೀರ್ತನ ಮಾಡುತ್ತ ಮಾಡುತ್ತಲೇ ಅಲ್ಲಿಂದ ಅತ್ಯಾಶ್ಚರ್ಯಕರವಾಗಿ ಕಣ್ಮರೆಯಾದರು. ಅಲ್ಲಿಯ ಕೃಷನಲ್ಲಿ ಅವರು ಐಕ್ಯರಾದರು ಎಂಬ ನಂಬುಗೆ ಇದೆ.

’ಚೈತನ್ಯ ಚರಿತಾಮೃತ’ ಮಹಾಪ್ರಭುಗಳ ಕುರಿತು ಕೃಷ್ಣದಾಸ ಕವಿರಾಜ ಗೋಸ್ವಾಮಿಯವರು ಬರೆದ ಜೀವನ ಚರಿತ್ರೆ. ಕೃಷ್ಣದಾಸರು ಕುಟುಂಬದ ಮನಸ್ತಾಪದಿಂದ ಬೇಸತ್ತು ವೃ0ದಾವನಕ್ಕೆ ತೆರಳಿದಾಗ ಹಣ್ಣು ಹಣ್ಣು ಮುದುಕರು.ಅಲ್ಲಿ ಅವರಿಗೆ ಚೈತನ್ಯ ಪರಂಪರೆಯ ಪ್ರಮುಖ ಗೋಸ್ವಾಮಿಗಳ ಭೆಟ್ಟಿಯಾಯಿತು. ಅವರೆಲ್ಲರ ಆಗ್ರಹದಂತೆ ಕವಿರಾಜರು ಚೈತನ್ಯ ಚರಿತಾಮೃತ ಬರೆದರು. ಅವರ ಆ ವಯೋಮಾನದಲ್ಲಿ ಇದೊಂದು ಪವಾಡ ಸದೃಶ ಘಟನೆಯೇ ಸರಿ. ಇದನ್ನು ಮಹಾಪ್ರಭುಗಳ ಜೀವಿತದ ಕುರಿತ ಆಧಾರಕೃತಿ ಎಂದು ಹೇಳಲಾಗುತ್ತದೆ.

ಜೀವನಾದ್ಯಂತ ಅಷ್ಟೊಂದು ಕಡೆ ಸಂಚರಿಸಿ ಜನಸಾಮಾನ್ಯರಿಗೆ ಉಪದೇಶಿಸಿ ಉದ್ಧರಿಸಿದ ಚೈತನ್ಯರು ಆ ಎಲ್ಲ ನುಡಿಗಳ ಸಾರ ಸರ್ವಸ್ವವನ್ನೂ ಕೇವಲ ಎಂಟು ಶ್ಲೋಕಗಳಲ್ಲಿ ಸಂಗ್ರಹಿಸಿ ನೀಡಿದ್ದಾರೆ. ಅದು ಶಿಕ್ಷಾಷ್ಟಕ ಎಂದು ಪ್ರಸಿದ್ಧವಾಗಿದೆ.ಶ್ರೀ ಕೃಷ್ಣನಲ್ಲಿ ಸಂಪೂರ್ಣ ಶರಣಾಗತಿಯನ್ನು ಅದು ಬೋಧಿಸುತ್ತದೆ.ಗೀತೆಯಲ್ಲಿ ಭಗವಾನ್‌ ಶ್ರೀಕೃಷ್ಣ ಹೇಳಿದುದಕ್ಕೂ,ಶತಮಾನಗಳ ಬಳಿಕ ಪ್ರಭು ಚೈತನ್ಯರು ನೀಡಿದ ಉಪದೇಶಗಳಿಗೂ ಯಾವುದೇ ಅಂತರವಿಲ್ಲ. ಅಷ್ಟೇ ಅಲ್ಲ,ಅವು ಇಂದಿಗೂ ಪ್ರಸ್ತುತವಾಗಿವೆ. ಭಗವಂತನೇ ಭಕ್ತನಿಗೆ ಸದಾಕಾಲದ ಆಸರೆ. ಅವನಿಗೆ ಶರಣಾಗಬೇಕೆಂಬುದೇ ಅಂತಿಮ ಸತ್ಯ. ಅದೇ ಆದಿ ಸತ್ಯ! ಜೀವಿಗಳಿಗೆ ಎಲ್ಲ ಅನುಗ್ರಹಗಳನ್ನೂ ನೀಡಬಲ್ಲದ್ದು ನಿನ್ನ ಪವಿತ್ರ ನಾಮವೊಂದೇ. ಭಗವಂತನ ಎಲ್ಲ ಆಧ್ಯಾತ್ಮಿಕ ಶಕ್ತಿಯೂ ಅವನ ನಾಮದಲ್ಲಿದೆ. ಅದನ್ನು ಸ್ಮರಿಸುತ್ತಾ ಅವನನ್ನು ಸುಲಭವಾಗಿ ಸಮೀಪಿಸಬಹುದು. ಈಗ ಅದನ್ನೊಮ್ಮೆ ಸ್ಮರಿಸುತ್ತಾ ಈ ಕಿರುಲೇಖನಕ್ಕೆ ಮಂಗಳ ಹಾಡೋಣ:

ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ

ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ

Follow Us:
Download App:
  • android
  • ios