Nishtha Rawat Success Story: ಕಂಫರ್ಟ್‌ ಜೋನ್‌ನಿಂದ ಹೊರಬಂದು ರಿಸ್ಕ್ ತಗೊಂಡರೆ ಎಂಥಹ ಅದ್ಭುತ ಸಾಧನೆ ಮಾಡಬಹುದು ಎಂಬುದಕ್ಕೆ ಜೈಪುರದ ನಿಷ್ಠಾ ರಾವತ್ ಅವರೇ ಸಾಕ್ಷಿ. ಲಕ್ಷಾಂತರ ರೂಪಾಯಿ ಸಂಬಳದ ಕೆಲಸ ಬಿಟ್ಟು, ಮನೆಯಿಂದಲೇ 'ನೆಹ್ಫಿ' (Nehfi) ಎಂಬ ಫ್ಯಾಷನ್ ಬ್ರ್ಯಾಂಡ್ ಆರಂಭಿಸಿದ ಈಕೆ, ಕೇವಲ 10 ತಿಂಗಳಲ್ಲಿ ತಿಂಗಳಿಗೆ 14 ಲಕ್ಷ ರೂಪಾಯಿ ಆದಾಯ ಗಳಿಸುವ ಮಟ್ಟಕ್ಕೆ ಬೆಳೆದಿದ್ದಾರೆ.

ಜೈಪುರದ ನಿಷ್ಠಾ ರಾವತ್ ಕೆಲಸವನ್ನು ಬಿಟ್ಟು ಅತಿ ಕಡಿಮೆ ಸಮಯದಲ್ಲಿ ಅತ್ಯಂತ ಯಶಸ್ವಿ ಬ್ರ್ಯಾಂಡ್ ಒಂದನ್ನು ಕಟ್ಟಿದ್ದಾರೆ. ಅದರ ಹೆಸರು 'ನೆಹ್ಫಿ' (Nehfi). ಕೇವಲ 10 ತಿಂಗಳ ಅವಧಿಯಲ್ಲಿ ಅವರು ತಮ್ಮ ಈ ಬ್ರ್ಯಾಂಡ್ ಅನ್ನು ತಿಂಗಳಿಗೆ 14 ಲಕ್ಷ ರೂಪಾಯಿ ಆದಾಯ (Revenue) ಗಳಿಸುವ ಮಟ್ಟಕ್ಕೆ ತಲುಪಿಸಿದ್ದಾರೆ. ಸಾಂಪ್ರದಾಯಿಕ ಕಲೆಗಳನ್ನು ಆಧುನಿಕ ವಿನ್ಯಾಸಗಳಿಗೆ ಅಳವಡಿಸಿ, ದೈನಂದಿನ ಬಳಕೆಗೆ ಯೋಗ್ಯವಾದ ಬಟ್ಟೆಗಳನ್ನು ತಯಾರಿಸುವುದು ಈ ಬ್ರ್ಯಾಂಡ್‌ನ ವಿಶೇಷತೆ.

ವೃತ್ತಿಜೀವನ ಮತ್ತು ಆರಂಭ

ನಿಷ್ಠಾ ರಾವತ್ ಕಾಮರ್ಸ್‌ನಲ್ಲಿ ಪದವಿ ಮುಗಿಸಿದ ನಂತರ ಜೈಪುರದ INIFD ಯಲ್ಲಿ ಫ್ಯಾಶನ್ ಡಿಸೈನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಸುಮಾರು ನಾಲ್ಕು ವರ್ಷಗಳ ಕಾಲ ವಿವಿಧ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡಿದರು. ಆದರೆ ಅವರ ಮನಸ್ಸಿನಲ್ಲಿ ಯಾವಾಗಲೂ ಸ್ವಂತ ಉದ್ಯಮ ಆರಂಭಿಸುವ ಹಂಬಲವಿತ್ತು. ಮದುವೆಯ ನಂತರ ಪೂರ್ಣ ಸಮಯದ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿ ಪರಿಣಮಿಸಿತು. ಇದನ್ನೇ ಅವರು ಒಂದು ಅವಕಾಶವಾಗಿ ಬಳಸಿಕೊಂಡರು. ಹೊಸ ಕೆಲಸ ಹುಡುಕುವ ಬದಲು ರಿಸ್ಕ್ ತೆಗೆದುಕೊಂಡು ಸೆಪ್ಟೆಂಬರ್ 2023 ರಲ್ಲಿ ತಮ್ಮ ಸ್ವಂತ ಬ್ರ್ಯಾಂಡ್ 'ನೆಹ್ಫಿ'ಗೆ ಅಡಿಪಾಯ ಹಾಕಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು, "ನಾನು ಯಾವಾಗಲೂ ಸ್ವಂತ ಬ್ರ್ಯಾಂಡ್ ನಿರ್ಮಿಸಲು ಬಯಸಿದ್ದೆ. ಕೆಲಸ ಬಿಟ್ಟಿದ್ದರಿಂದಲೇ ನನ್ನ ಕನಸಿನ ಮೇಲೆ ಕೆಲಸ ಮಾಡಲು ನನಗೆ ಸಮಯ ಸಿಕ್ಕಿತು" ಎಂದು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಸಂಶೋಧನೆ

ಮಾರುಕಟ್ಟೆಯನ್ನು ಅಧ್ಯಯನ ಮಾಡುವಾಗ ನಿಷ್ಠಾ ಒಂದು ವಿಷಯ ಗಮನಿಸಿದರು. ಮಹಿಳೆಯರ ಉಡುಪುಗಳು ಎರಡು ವಿಭಾಗಗಳಲ್ಲಿ ವಿಭಜನೆಯಾಗಿದ್ದವು. ಒಂದು ಕಡೆ ಹಬ್ಬಗಳಿಗೆ ಧರಿಸುವ ಭಾರೀ ಅಲಂಕಾರದ ಎಥ್ನಿಕ್ ಉಡುಪುಗಳು ಮತ್ತು ಮತ್ತೊಂದು ಕಡೆ ಟ್ರೆಂಡಿ ಪಾಶ್ಚಿಮಾತ್ಯ ಉಡುಪುಗಳು. ನಿಷ್ಠಾ ಅವರು 22 ವರ್ಷದ ಯುವತಿಯಿಂದ 40 ವರ್ಷದ ಮಹಿಳೆಯವರೆಗೆ ಯಾರು ಬೇಕಾದರೂ ಆರಾಮವಾಗಿ ಧರಿಸಬಹುದಾದ ಸಂಗ್ರಹವನ್ನು ಸಿದ್ಧಪಡಿಸಲು ಬಯಸಿದ್ದರು. ಜೈಪುರದ ಸಾಂಪ್ರದಾಯಿಕ ಕರಕುಶಲತೆಯನ್ನು ಬಳಸಿ ಆಫೀಸ್, ಪ್ರಯಾಣ ಅಥವಾ ಕ್ಯಾಶುಯಲ್ ಆಗಿ ಹೊರಗೆ ಹೋಗುವಾಗ ಧರಿಸಲು ಸುಲಭವಾಗುವ ಉಡುಪುಗಳನ್ನು ಅವರು ವಿನ್ಯಾಸಗೊಳಿಸಿದರು.

ಸವಾಲುಗಳು ಮತ್ತು ಯಶಸ್ಸು

ಈ ಸ್ಟಾರ್ಟ್ಅಪ್ ಯಾವುದೇ ದೊಡ್ಡ ಫ್ಯಾಕ್ಟರಿಯಿಂದ ಆರಂಭವಾಗಲಿಲ್ಲ, ಬದಲಿಗೆ ನಿಷ್ಠಾ ಅವರ ಮನೆಯಿಂದಲೇ ಶುರುವಾಯಿತು. ಆರಂಭದ ಮೂರು ತಿಂಗಳು ಅವರು ಸ್ಥಳೀಯ ದರ್ಜಿಗಳ ಸಹಾಯದಿಂದ ಬಟ್ಟೆ ಹೊಲಿಸುತ್ತಿದ್ದರು. ವಿನ್ಯಾಸ, ಬ್ರ್ಯಾಂಡಿಂಗ್ ಮತ್ತು ಗ್ರಾಹಕ ಸೇವೆಯನ್ನು ಅವರೇ ಸ್ವತಃ ನಿರ್ವಹಿಸುತ್ತಿದ್ದರು. ಈ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಒಂದು ಉಡುಪಿನ ವಿಡಿಯೋ ವೈರಲ್ ಆಯಿತು. ರಾತ್ರೋರಾತ್ರಿ ಆರ್ಡರ್‌ಗಳ ಮಹಾಪೂರವೇ ಹರಿಯಿತು. ಬೇಡಿಕೆ ಹೆಚ್ಚಾದ ಕಾರಣ ಡೆಲಿವರಿ ಸಮಯದಲ್ಲಿ ವ್ಯತ್ಯಾಸವಾಯಿತು. ಆದರೆ ಗುಣಮಟ್ಟ ಮತ್ತು ಸೇವೆಯಲ್ಲಿ ರಾಜಿ ಮಾಡಿಕೊಳ್ಳದ ನಿಷ್ಠಾ, ಸುಮಾರು 1 ಲಕ್ಷ ರೂಪಾಯಿಗೂ ಹೆಚ್ಚಿನ ಆರ್ಡರ್‌ಗಳನ್ನು ಗ್ರಾಹಕರಿಗೆ ರಿಫಂಡ್ ಮಾಡಿದರು. ಈ ಅನುಭವದಿಂದ ಪಾಠ ಕಲಿತ ಅವರು, 16 ಜನರ ತಂಡದೊಂದಿಗೆ ಸ್ವಂತ ಮ್ಯಾನುಫ್ಯಾಕ್ಚರಿಂಗ್ ಯುನಿಟ್ ಅನ್ನು ಸ್ಥಾಪಿಸಿದರು.

ಇಂದಿನ ಸಾಧನೆ

ಅಂದಿನಿಂದ ನಿಷ್ಠಾ ಹಿಂದೆ ತಿರುಗಿ ನೋಡಿಲ್ಲ. ಇಂದು ಈ ಬ್ರ್ಯಾಂಡ್‌ನ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 10,000 ಫಾಲೋವರ್ಸ್‌ಗಳಿದ್ದಾರೆ ಮತ್ತು 5,800 ಕ್ಕೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸಿದ್ದಾರೆ. 1,299 ರಿಂದ 2,499 ರೂಪಾಯಿಗಳ ಕೈಗೆಟುಕುವ ದರದಲ್ಲಿ ಲಭ್ಯವಿರುವ ಈ ಬ್ರ್ಯಾಂಡ್, ಕೇವಲ 10 ತಿಂಗಳಲ್ಲಿ ತಿಂಗಳಿಗೆ 14 ಲಕ್ಷ ರೂಪಾಯಿ ಆದಾಯದ ಗುರಿ ತಲುಪಿದೆ. ಪ್ರಸ್ತುತ ವೆಬ್‌ಸೈಟ್ ಮತ್ತು ವಾಟ್ಸಾಪ್ ಮೂಲಕ ಆರ್ಡರ್ ಪಡೆಯುತ್ತಿರುವ ಈ ಬ್ರ್ಯಾಂಡ್, ಶೀಘ್ರದಲ್ಲೇ ಜೈಪುರ ಮತ್ತು ರಾಯ್‌ಪುರದಲ್ಲಿ ಆಫ್‌ಲೈನ್ ಸ್ಟೋರ್‌ಗಳನ್ನು ತೆರೆಯಲು ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಗೆ ವಿಸ್ತರಿಸಲು ಯೋಜಿಸುತ್ತಿದೆ.