ಕೊರೋನಾ ನಮ್ಮೊಳಗಿನ ಸೃಜನಶೀಲತೆಯನ್ನು ಜಾಗೃತಗೊಳಿಸಿದೆ. ಆಫೀಸ್ ಕೆಲಸವೂ ಮನೆಗೇ ಶಿಫ್ಟ್ ಆದ ಕಾರಣ ಸಾಕಷ್ಟು ಸಮಯ ಸಿಗುತ್ತಿದೆ.ಈ ಸಮಯವನ್ನು ಕಳೆಯಲು ಅನೇಕರು ತಮ್ಮ ಹಳೆಯ ಹವ್ಯಾಸಗಳಿಗೆ ಮರುಜೀವ ನೀಡುತ್ತಿದ್ರೆ, ಮತ್ತೆ ಕೆಲವರು ಹೊಸ ವಿಷಯಗಳನ್ನು ಕಲಿಯುವತ್ತ ಆಸಕ್ತಿ ತೋರುತ್ತಿದ್ದಾರೆ.ಮನೆಯ ಇಂಟೀರಿಯರ್‍ಗೆ ಹೊಸ ಕಳೆ ತುಂಬುವ ಕೆಲಸದಲ್ಲಿ ಕೆಲವರು ಕ್ರಿಯಾಶೀಲರಾಗಿದ್ರೆ,ಇನ್ನೂ ಕೆಲವರು ಸೆಲ್ಫ್ ಕೇರ್ ಬಗ್ಗೆ ಗಮನ ಹರಿಸುತ್ತಿದ್ದಾರೆ. ಇನ್ನು ಅಡುಗೆಮನೆ ಕಡೆಗೆ ತಲೆ ಹಾಕದವರು ಕೂಡ ಹೊಸ ರೆಸಿಪಿಗಳನ್ನು ಟ್ರೈ ಮಾಡಿ ರುಚಿ ನೋಡೋ ಜೊತೆ ಸೋಷಿಯಲ್ ಮೀಡಿಯಾಗಳಲ್ಲೂ ಅದರ ಫೋಟೋಗಳನ್ನು ಪೋಸ್ಟ್ ಮಾಡಿ ನೋಡುಗರ ಹೊಟ್ಟೆ ಉರಿಸುತ್ತಿದ್ದಾರೆ.

ಈ ಎಲ್ಲದರ ನಡುವೆ ಬ್ಯೂಟಿ ಕಾನ್ಷಿಯಸ್ ಹುಡುಗೀರ ಪಾಡು ಕೇಳೋದೆ ಬೇಡ. ಪಾರ್ಲರ್‍ಗೆ ಹೋಗೋಕೆ ಏನೋ ಭಯ. ಹಾಗಂತ ಕೂದಲು, ತ್ವಚೆ, ಉಗುರು ಸೇರಿದಂತೆ ಸೌಂದರ್ಯವನ್ನು ಬಿಂಬಿಸುವ ದೇಹದ ಪ್ರತಿ ಅಂಗದ ಬಗ್ಗೆ ಕಾಳಜಿ ತೆಗೆದುಕೊಳ್ಳದಿರೋಕೆ ಆಗುತ್ತಾ? ಹೀಗಾಗಿ ಇಂಟರ್ನೆಟ್‍ನಲ್ಲಿ ಸರ್ಚ್ ಹೊಡೆದು, ಅವರಿವರು ಹೇಳಿದ ಒಂದಿಷ್ಟು ಟಿಪ್ಸ್ ಪಾಲಿಸೋ ಜೊತೆ ಮನೆಯಲ್ಲೇ ವಿನೂತನ ವಿಧಾನಗಳನ್ನು ಕಂಡುಕೊಂಡು ಪ್ರಯೋಗಿಸಿ ನೋಡುತ್ತಿದ್ದಾರೆ. ನೀವು ಕೂಡ ಇಂಥ ಪ್ರಯೋಗಶೀಲ ಮನೋಭಾವದವರಾಗಿದ್ದು, ನೈಸರ್ಗಿಕ ವಿಧಾನಗಳ ಬಗ್ಗೆ ಆಸಕ್ತಿ ಹೊಂದಿದ್ರೆ, ಆರ್ಟಿಫಿಶಿಯಲ್ ನೇಲ್ ಕಲರ್ ಬದಲು ಸರಳವಾಗಿ ನೈಸರ್ಗಿಕ ನೇಲ್ ಪೇಯಿಂಟ್ ಹೇಗೆ ಸಿದ್ಧಪಡಿಸಬಹುದು ಎಂಬುದನ್ನು ಇಲ್ಲಿ ನೀಡಿದ್ದೇವೆ. ಮರೆಯದೆ ಟ್ರೈ ಮಾಡಿ ನೋಡಿ.

ಅನಗತ್ಯ ಕೂದಲಿನ ಚಿಂತೆಯಾ?

ಮೆಹಂದಿ ನೇಲ್ ಪಾಲಿಶ್
ಬೇಕಾಗಿರುವ ಸಾಮಗ್ರಿಗಳು 
ಮೆಹಂದಿ ಪೌಡರ್- 2  ಟೇಬಲ್ ಚಮಚ, ಬೆಲ್ಲ-50ಗ್ರಾಂ, ಲವಂಗ-20ಗ್ರಾಂ
ತಯಾರಿಸೋ ವಿಧಾನ
-ಬೆಲ್ಲವನ್ನು ಪುಡಿ ಮಾಡಿ ಒಂದು ಬೌಲ್‍ನಲ್ಲಿ ಹಾಕಿ. ಬೌಲ್‍ನ ಮಧ್ಯ ಭಾಗದಲ್ಲಿರುವ ಬೆಲ್ಲವನ್ನು ಸರಿಸಿ ಸ್ವಲ್ಪ ಜಾಗ ಮಾಡಿ ಅಲ್ಲಿ ಲವಂಗಗಳನ್ನು ಇರಿಸಿ.
-ಸ್ಟೌವ್ ಆನ್ ಮಾಡಿ ದೋಸೆ ಹಂಚನ್ನಿಡಿ. ಅದರ ಮೇಲೆ ಬೆಲ್ಲ ಹಾಗೂ ಲವಂಗವಿರುವ ಬೌಲ್ ಇರಿಸಿ ಅದನ್ನು ಪ್ಲೇಟ್‍ನಿಂದ ಮುಚ್ಚಿ.10 ನಿಮಿಷಗಳ ಬಳಿಕ ಬೌಲ್‍ನಿಂದ ಹಬೆ ಹೊರಗೆ ಬರುತ್ತಿರೋದು ಕಾಣಿಸುತ್ತದೆ.ಇದು ಬೆಲ್ಲ ಕರಗಿ ನೀರಾಗಿರೋದ್ರ ಸೂಚನೆ.ಈಗ ಬೌಲ್ ಅನ್ನು ಸ್ಟೌವ್‍ನಿಂದ ಕೆಳಗಿಳಿಸಿ.
-ಈಗ ಕರಗಿರುವ ಬೆಲ್ಲದ ಪಾಕಕ್ಕೆ ಮೆಹಂದಿ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತಣ್ಣಗಾಗಲು ಬಿಡಿ. 
-ಹಳೆಯ ನೇಲ್ ಪಾಲಿಷ್ ಬ್ರಷ್ ಇದ್ದರೆ ಅದನ್ನು ಕ್ಲೀನ್ ಮಾಡಿ ಈ ಮಿಶ್ರಣದಲ್ಲಿ ಅದ್ದಿ ಉಗುರುಗಳಿಗೆ ಹಚ್ಚಿ. ಈಯರ್ ಬಡ್ಸ್ ಬಳಸಿ ಕೂಡ ಈ ನೈಸರ್ಗಿಕ ನೇಲ್ ಪೇಯಿಂಟ್ ಅನ್ನು ಉಗುರುಗಳಿಗೆ ಹಚ್ಚಬಹುದು.
-ದೀರ್ಘಕಾಲದ ತನಕ ಈ ನೇಲ್ ಪೇಯಿಂಟ್ ನಿಮ್ಮ ಉಗುರುಗಳಲ್ಲಿ ನಿಲ್ಲುತ್ತದೆ. 

ಎಂತೆಂಥಾ ಮಾಸ್ಕುಗಳು ಬಂದಿವೆ ಗೊತ್ತಾ!

ಮೆಹಂದಿ ಟೋಪಿ
ಬೇಕಾಗುವ ಸಾಮಗ್ರಿಗಳು
ಮೆಹಂದಿ ಪುಡಿ-4 ಟೇಬಲ್ ಚಮಚ, ಕಾಫಿ ಡಿಕಾಕ್ಷನ್-100 ಮಿ.ಲೀ.
ತಯಾರಿಸೋ ವಿಧಾನ
ಮೆಹಂದಿ ಪುಡಿಗೆ ಕಾಫಿ ಡಿಕಾಕ್ಷನ್ ಸೇರಿಸಿ ದಪ್ಪವಾದ ಮಿಶ್ರಣ ಮಾಡಿಕೊಳ್ಳಿ.ಇದನ್ನು ಕಾಟನ್ ಸಹಾಯದಿಂದ ಉಗುರುಗಳಿಗೆ ಹಚ್ಚಿ. ಅರ್ಧ ಗಂಟೆ ಅಥವಾ ಮೆಹಂದಿ ಸಂಪೂರ್ಣವಾಗಿ ಒಣಗಿದ ಬಳಿಕ ತೊಳೆಯಿರಿ. ಈಗ ಉಗುರುಗಳಿಗೆ ಮೆಹಂದಿಯ ಸೈಸರ್ಗಿಕ ಬಣ್ಣ ಬಂದಿರುತ್ತದೆ.ಈ ಬಣ್ಣ ಹೆಚ್ಚು ಗಾಢವಾಗಬೇಕೆಂದ್ರೆ ಮೆಹಂದಿ ಜಾಸ್ತಿ ಹೊತ್ತು ಉಗುರುಗಳ ಮೇಲಿರಬೇಕು. ಕೆಲವರು ಇದನ್ನು ಟೋಪಿಯಂತೆ ಬೆರಳಿನ ತಲೆಯ ಭಾಗಕ್ಕೆ ಹಚ್ಚುತ್ತಾರೆ. ಇದ್ರಿಂದ ಉಗುರಿನ ಜೊತೆ ಅದರ ಸುತ್ತಮುತ್ತಲಿನ ಚರ್ಮಕ್ಕೆ ಕೂಡ ಮೆಹಂದಿ ರಂಗು ಬರುತ್ತೆ.

ಬಳಸಿದ ಟೀ ಬ್ಯಾಗ್ ಎಸೆಯಬೇಡಿ

ಪ್ರಯೋಜನವೇನು?
ನೇಲ್ ಪಾಲಿಶ್ ಉಗುರುಗಳ ಅಂದವನ್ನು ಹೆಚ್ಚಿಸುತ್ತೆ ನಿಜ. ಆದ್ರೆ ಅದೇ ನೇಲ್ ಪಾಲಿಶ್ ಉಗುರುಗಳಿಂದ ಸ್ವಲ್ಪ ಸ್ವಲ್ಪವೇ ಎದ್ದು ಮರೆಯಾಗಲು ಪ್ರಾರಂಭಿಸಿದ್ರೆ ಬೆರಳುಗಳು ಅಂದ ಕಳೆದುಕೊಳ್ಳುತ್ತವೆ. ಈಗಂತೂ ಪದೇಪದೆ ಕೈಗಳನ್ನು ತೊಳೆದುಕೊಳ್ಳಬೇಕಾದ ಅನಿವಾರ್ಯತೆಯಿರುವ ಕಾರಣ ಉಗುರುಗಳ ಮೇಲೆ ನೇಲ್ ಪಾಲಿಶ್ ಆಯುಷ್ಯ ಇನ್ನೂ ತಗ್ಗಿದೆ. ಹಚ್ಚಿದ 3-4 ದಿನಕ್ಕೇ ಸಿಪ್ಪೆ ಎದ್ದು ಬರಲು ಪ್ರಾರಂಭಿಸುತ್ತೆ. ಆದ್ರೆ ಈ ನೈಸರ್ಗಿಕ ಮೆಹಂದಿ ನೇಲ್ ಪಾಲಿಶ್ ಕನಿಷ್ಠ 2 ವಾರಗಳ ತನಕವಾದ್ರೂ ಉಳಿಯುತ್ತೆ. ಬಣ್ಣ ಬಣ್ಣದ ಆರ್ಟಿಫಿಯಲ್ ನೇಲ್ ಪಾಲಿಶ್‍ಗಳು ಆಕರ್ಷಕವಾಗಿ ಕಂಡರೂ ಅವು ಉಗುರಿನ ನೈಸರ್ಗಿಕ ಬಣ್ಣಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚು. ಬೆಲ್ಲ, ಲವಂಗಗಳು ಹಾಗೂ ಮೆಹಂದಿ ಉಗುರುಗಳಿಗೆ ಯಾವುದೇ ಸೋಂಕು ಉಂಟಾಗದಂತೆ ತಡೆಯುವ ಜೊತೆ ಅವುಗಳನ್ನು ಆರೋಗ್ಯವಾಗಿಡಲು ನೆರವು ನೀಡುತ್ತವೆ.