ನೀವು ಮಾಡೋ ಅಧ್ವಾನಗಳು ಒಂದೆರಡಲ್ಲ. ಅದಕ್ಕೇ ನೋಡಿ ಈಗ ನಿಮ್ಮ ಕೂದಲೇ ನಿಮ್ಮೊಂದಿಗಿರಲು ಮನಸ್ಸಿಲ್ಲದೆ ನೀವು ತಿನ್ನುವ ಆಹಾರಕ್ಕೋ, ಬಾತ್‌ರೂಂನ ಹೊಂಡಕ್ಕೋ ಜಿಗಿಯುತ್ತೇನೆ ಎಂದು ಹೆದರಿಸುವುದು. ಕೂದಲು ನಮ್ಮ ಪಾಲಿಗೆ ಬಂದ ವರವೆಂಬುದು ಅವು ಹಾಳಾಗುವವರೆಗೆ, ಅವನ್ನು ಕಳೆದುಕೊಳ್ಳುವವರೆಗೆ ನಮ್ಮ ಅರಿವಿಗೆ ಬರುವುದೇ ಇಲ್ಲ. ಅವನ್ನು ಕಾಪಾಡಿಕೊಳ್ಳುವ ಯೋಚನೆಯೂ ಸುಳಿಯುವುದಿಲ್ಲ. ಇನ್ನೂ ಅವು ತಲೆಯ ಮೇಲಿರುವಾಗಲೇ ಅಭ್ಯಾಸ ಬದಲಿಸಿ, ಅವನ್ನು ಉಳಿಸಿಕೊಳ್ಳಿ. ಕೆಳ ಬಿದ್ದ ಮೇಲೆ ಅವನ್ನು ದಾನ ಮಾಡಬಹುದೇ ಹೊರತು ಕೂದಲಿನ ವಿಷಯದಲ್ಲಿ ಇನ್ಯಾವ ಒಳ್ಳೆ ಕೆಲಸವನ್ನೂ ಮಾಡಲಾರಿರಿ. 

ಬೀಟ್ರೂಟ್‌ನಿಂದ ಕೂದಲನ್ನು ಕಲರ್ ಮಾಡಿಕೊಳ್ಳುವುದು ಹೀಗೆ!

ಬಿಸಿ ನೀರಿನಿಂದ ಸ್ನಾನ

ಬಿಸಿನೀರಿನ ಸ್ನಾನ ಕೊಡುವ ಮಜವೇ ಬೇರೆ. ಆದರೆ, ಅವು ನಿಮ್ಮ ನೆತ್ತಿಯನ್ನು ಶುಷ್ಕಗೊಳಿಸಿ ಕೂದಲನ್ನೂ ಡ್ರೈ ಆಗಿಸುತ್ತವೆ. ಹಾಗಂಥ ಪೂರ್ತಿ ತಣ್ಣೀರಿನಲ್ಲಿ ಸ್ನಾನ ಮಾಡಬೇಕಾದ ಶಿಕ್ಷೆ ಅನುಭವಿಸಬೇಕಿಲ್ಲ. ಉಗುರುಬೆಚ್ಚಗಿನ ನೀರನ್ನು ತಲೆಸ್ನಾನಕ್ಕೆ ಬಳಸಿ. 

ಕೊಳಕು ಬಾಚಣಿಗೆ

ನಿಮ್ಮ ಬಾಚಣಿಗೆಗಳು ಸ್ನಾನ ಕಂಡು ಅದೆಷ್ಟು ವರ್ಷವಾಯಿತು ಸ್ವಾಮಿ ? ಕೂದಲನ್ನೇನೋ ವಾರಕ್ಕೆ ಎರಡು ದಿನ ಸರಿಯಾಗಿ ಸ್ವಚ್ಛಗೊಳಿಸುತ್ತೀರಿ. ಆದರೆ, ನಂತರದಲ್ಲಿ ವರ್ಷಗಳಿಂದ ಕೊಳೆ ಕೂರಿಸಿಕೊಂಡಿರುವ ಆ ಕೊಳಕು ಬಾಚಣಿಗೆಯಿಂದ ಬಾಚಿದರೆ ಕೂದಲನ್ನು ತೊಳೆದು ಸಿಕ್ಕ ಪ್ರಯೋಜನವಾದರೂ ಏನು? ಹೋದ ವರ್ಷದ ಧೂಳಿನಿಂದ ಹಿಡಿದು ಹೋದ ವಾರದ ನಿಮ್ಮ ಬೆವರು ಕೂಡಾ ಆ ಬ್ರಶ್‌ನೊಳಗೆ ಅಪರಾವತಾರ ತಾಳಿ ಕುಳಿತಿರುತ್ತದೆ. ಹಾಗಾಗಿ, ಪ್ರತಿ ಬಾರಿ ತಲೆಸ್ನಾನ ಮಾಡುವಾಗಲೂ ನಿಮ್ಮ ಬಾಚಣಿಗೆಗೂ ಸ್ನಾನ ಮಾಡಿಸಿ. 

ಟೈಟ್ ಹೇರ್‌ಸ್ಟೈಲ್

ಕೂದಲನ್ನು ಗಟ್ಟಿಯಾಗಿ ಎಳೆದು ಕಟ್ಟಿದರೆ ಹಾಯೆನಿಸುತ್ತದೆ ನಿಜ. ಆದರೆ ಅವುಗಳು ಅದೆಷ್ಟು ಟ್ರೋಮಾ ಅನುಭವಿಸಬೇಡ? ಅಷ್ಟು ಸಾಲದೆಂಬಂತೆ ಆ ಎಲಾಸ್ಟಿಕ್ ಬ್ಯಾಂಡ್‌ಗಳಿಂದ ಕೂದಲಿನ ಕತ್ತಿಗೆ ನೇಣು ಬಿಗಿದಿರುತ್ತೀರಿ. ಒಂದೆರಡು ದಿನದ ಕತೆಯಲ್ಲದೆ ಇದು ವರ್ಷ ಪೂರ್ತಿ ಮುಂದುವರಿದರೆ ಆ ಕೂದಲು ನಾಜಿ ಕ್ಯಾಂಪ್‌ನಲ್ಲಿದ್ದು ಬಂದ ಅಸ್ಥಿಪಂಜರದ ನಾಗರಿಕನಂತಾಗದೆ ದಷ್ಟಪುಷ್ಠವಾಗಿ ತಿಂದುಂಡು ಬದುಕಿದವರಂತಿರಲು ಸಾಧ್ಯವೇ? ಕೂದಲಿಗೆ ತುರುಬು, ಲೂಸಾದ ಕ್ಲಿಪ್ ಹಾಕುವುದು, ಹೇರ್‌ಬ್ಯಾಂಡ್‌ಗಳನ್ನು ಬಳಸಿ. ಎಳೆದು ಬಿಗಿಯಾಗಿ ಉಸಿರುಗಟ್ಟಿಸುವ ಬ್ಯಾಂಡ್‌ಗಳನ್ನಲ್ಲ. 

ನಿಮ್ಮ ಮನೆಯಲ್ಲೊಂದು ಬೋಳುಗುಂಡ ಇದ್ಯಾ? ಕೂದಲು ಉದುರುವುದಕ್ಕೆ ಕಾರಣಗಳಿವು

ಸನ್‌ಗ್ಲಾಸ್

ಅರೆ ಕಣ್ಣಿಗೆ ಸನ್‌ಗ್ಲಾಸ್ ಹಾಕಿಕೊಂಡರೆ ಕೂದಲಿಗೆಂತ ಹೊಟ್ಟೆಕಿಚ್ಚು ಬಂದಿದ್ದು ಎಂದು ನೀವು ಕೇಳಬಹುದು. ಆದರೆ, ಕಣ್ಣಿನ ಮೇಲಿರಬೇಕಾದ್ದು ಕೇವಲ ಅಲ್ಲಿ ಇರುವುದಿಲ್ವಲ್ಲಾ ಸ್ವಾಮಿ, ಅದು ತಲೆಯೇರಿ ಕುಳಿತುಕೊಳ್ಳುತ್ತದಲ್ಲ? ಇದೇ ರೂಟೀನ್ ಆದರೆ ಎದುರಿನ ಕೂದಲುಗಳು ಏಳೆದೆಳೆದು ದೌರ್ಜನ್ಯಕ್ಕೊಳಗಾಗಿ ನಿಮ್ಮ ಹಣೆ ದೊಡ್ಡದಾಗುವುದರಲ್ಲಿ ಆಶ್ಚರ್ಯವಿಲ್ಲ. 

ಹೀಟ್ ಬಳಕೆ

ಕೂದಲನ್ನು ಶಾಂಪೂ, ಕಂಡೀಶನರ್ ಬಳಸಿ ತೊಳೆದ ಬಲಿಕ ಅವುಗಳಲ್ಲಿ ನ್ಯೂಟ್ರಿಯೆಂಟ್ಸ್ ತುಂಬಿರುತ್ತದೆ. ಆದರೆ, ಅದರ ಮೇಲೆ ಎಲೆಕ್ಟ್ರಿಕ್ ಹೀಟ್ ಬಳಸಿದರೆ ನ್ಯೂಟ್ರಿಯೆಂಟ್ಸ್ ನಷ್ಟವಾಗಿ ಕೂದಲು ಕಳಾಹೀನವಾಗುತ್ತದೆ. ಮರುದಿನ ತಲೆಕೂದಲಿಗೆ ಸ್ನಾನವಿಲ್ಲದೆ ಮತ್ತೊಮ್ಮೆ ಹೀಟ್ ಬಳಸಿದರಂತೂ ಅವುಗಳ ತೊಳಲಾಟ ಕೇಳಲಾಗುವುದಿಲ್ಲ. ಮತ್ತೆಂದೂ ಸರಿಪಡಿಸಲಾಗದ ಹಾನಿ ಮಾಡುವಿರಿ. 

ಕೂದಲು ಬಿಳಿಯಾಗುವುದಿಲ್ಲ, ಬಿಳಿಯಾಗಿ ಹುಟ್ಟುತ್ತದೆ

ಒದ್ದೆ ಕೂದಲನ್ನು ಬಾಚುವುದು

ಒದ್ದೆಯಿದ್ದಾಗ ನಿಮ್ಮ ಕೂದಲು ಸಡಿಲವಾಗಿರುತ್ತದೆ. ಹೀಗಾಗಿ, ಆಗ ಬಾಚಣಿಗೆಯಿಂದ ಬೀಸೆಳೆದರೆ ಅವು ಬುಡಸಮೇತ ಕಿತ್ತು ನೆಲಕ್ಕುದುರುತ್ತವೆ. ತಲೆಸ್ನಾನಕ್ಕೆ ಮುನ್ನ ತಲೆ ಬಾಚಿಕೊಂಡು, ಬಳಿಕ ಕೂದಲು ಒಣಗುವವರೆಗೆ ಕಾಯುವುದು ಮುಖ್ಯ. ಒಣಗಿದ ನಂತರ ಕೂದಲನ್ನು ಬಾಚಿಕೊಳ್ಳಿ.

ಅತಿಯಾಗಿ ತೊಳೆಯುವುದು

ಅತಿಯಾದ ಶಾಂಪೂ ಬಳಕೆ ಹಾಗೂ ಪ್ರತಿ ದಿನ ತಲೆಸ್ನಾನ ಮಾಡುವುದರಿಂದ ನೈಸರ್ಗಿಕವಾಗಿ ಕೂದಲಿನ ಪೋಷಣೆಗೆ ಉತ್ಪತ್ತಿಯಾಗುವ ತೇವಾಂಶ ಮರೆಯಾಗುತ್ತದೆ. ಇದರಿಂದ ನೆತ್ತಿ ಒಣವಾಗಿ ಕೂದಲು ಕಳಾಹೀನವಾಗುತ್ತದೆ ಹಾಗೂ ಉದುರುವಿಕೆಯೂ ಹೆಚ್ಚುತ್ತದೆ. ವಾರಕ್ಕೆ ಎರಡು ಬಾರಿ ತಲೆಸ್ನಾನ ಮಾಡುವ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಕೂದಲ ವಿನ್ಯಾಸ ಹಾಗೂ ವಿಧಕ್ಕೆ ಸರಿಹೊಂದುವ ಶಾಂಪೂ ಹಾಗೂ ಕಂಡೀಶನರನ್ನು ಮಾತ್ರ ಬಳಸಿ. 

ಬಾಲ್ಡಿ ಪ್ಲಾಬ್ಲಂಗೆ ಬೈ ಹೇಳಲು ಪುರುಷರೇನು ಮಾಡ್ಬೇಕು?