ನಿಮ್ಮ ಮನೆಯಲ್ಲೊಂದು ಬೋಳುಗುಂಡ ಇದ್ಯಾ? ಕೂದಲು ಉದುರುವುದಕ್ಕೆ ಕಾರಣಗಳಿವು
ಕೆಲ ಮಕ್ಕಳಿಗೆ ಹುಟ್ಟುವಾಗಲೇ ತಲೆ ತುಂಬಾ ಕೂದಲಿರುತ್ತದೆ. ಮತ್ತೆ ಕೆಲವಕ್ಕೆ ಕುಳಿತುಕೊಂಡು ಎಣಿಸಬಹುದು, ಅಷ್ಟೇ ಕೂದಲಿರುವುದು. ಒಂದೊಂದು ಮಗುವಿನ ಕೂದಲ ಬೆಳವಣಿಗೆ ಒಂದೊಂದು ತೆರನಾಗಿರುತ್ತದೆ. ಆದರೆ ಎಷ್ಟೇ ಕೂದಲಿದ್ದರೂ, ಮಗುವಿನ ತಲೆಕೂದಲು ಉದುರುವುದು ಮಾತ್ರ ಹೊಸ ತಂದೆತಾಯಿಗೆ ಜೀರ್ಣಿಸಿಕೊಳ್ಳಲು ಕಷ್ಟ.
ಪುಟ್ಟ ಪಾಪುವಿಗೆ ಕೂದಲುದುರುವುದು ಬಹಳ ಸಾಮಾನ್ಯ ವಿಷಯ. ಅದರಲ್ಲೂ ಮೊದಲ ಕೆಲ ತಿಂಗಳು ಬಹಳಷ್ಟು ಮಕ್ಕಳಿಗೆ ಕೂದಲುದುರುತ್ತದೆ. ಆದರೆ, ಕೆಲ ಮಕ್ಕಳಿಗೆ ಮಾತ್ರ ಕುದುರುದುರಲು ಕೆಲ ವೈದ್ಯಕೀಯ ಕಾರಣಗಳಿರುತ್ತವೆ.
ನಿಮ್ಮ ಮಗು ಹುಟ್ಟುವಾಗ ತಲೆ ತುಂಬಾ ಕೂದಲಿದ್ದಿರಬಹುದು, ಅಷ್ಟೇ ಏಕೆ ಮೈ ತುಂಬಲೂ ಕೂದಲು ಹೊಂದಿರಬಹುದು. ದಿನಗಳೆದಂತೆಲ್ಲ ಮೈಮೇಲಿರುವ ಈ ಕೂದಲುದುರುವುದು ಸಾಮಾನ್ಯ. ಅದರಿಂದ ಖುಷಿಯಾಗುತ್ತದೆ. ಆದರೆ ತಲೆಕೂದಲೂ ಉದುರುತ್ತಲ್ಲಾ, ಅದನ್ನು ನೋಡಿಕೊಂಡಿರುವುದು ಚಿಂತೆಗೀಡು ಮಾಡುತ್ತದೆ. ಆದರೆ, ಐದು ತಿಂಗಳವರೆಗೆ ಕೂದಲುದುರುವುದು ಸಂಪೂರ್ಣ ನಾರ್ಮಲ್. ಆದರೆ, ಅಪರೂಪದ ಪ್ರಕರಣಗಳಲ್ಲಿ ಮಕ್ಕಳಿಗೆ ಈ ಕಾರಣಗಳಿಗಾಗಿಯೂ ಕೂದಲು ಉದುರಬಹುದು.
ಕೂದಲಿನ ಅಂದ ಹೆಚ್ಚಾಗಬೇಕೆ? ಬಿಯರ್ ಬಳಸಿ!
1. ಫಂಗಲ್ ಇನ್ಫೆಕ್ಷನ್
ಮಕ್ಕಳಲ್ಲಿ ಕೂದಲುದುರಲು ಬಹಳ ಸಾಮಾನ್ಯ ಕಾರಣವೆಂದರೆ ಫಂಗಲ್ ಇನ್ಫೆಕ್ಷನ್. ಇದನ್ನು ರಿಂಗ್‌ವಾರ್ಮ್ ಅಥವಾ ಟಿನೀ ಕ್ಯಾಪಿಟಸ್ ಎನ್ನಲಾಗುತ್ತದೆ. ಹೀಗಾದಾಗ, ಅಲ್ಲಲ್ಲಿ ಕೂದಲುದುರಿ ಪ್ಯಾಚ್ ಆಗುವಂತೆ ಕಂಡುಬರುತ್ತದೆ. ಈ ಪ್ಯಾಚ್‌ಗಳು ಕೆಂಪಾಗಿದ್ದು, ಒಣಪದರವಾಗಿರಬಹುದು. ಕೆಲವೊಮ್ಮೆ ಈ ಪ್ಯಾಚ್‌ಗಳನ್ನು ಕಪ್ಪು ಚುಕ್ಕೆಗಳು ಕವರ್ ಮಾಡಿರಬಹುದು. ಇದರ ಚಿಕಿತ್ಸೆ ಸಾಮಾನ್ಯವಾಗಿ 8 ವಾರ ತೆಗೆದುಕೊಳ್ಳುತ್ತದೆ. ಬಾಯಿಗೆ ಹಾಕುವ ಡ್ರಾಪ್ಸ್ ಹಾಗೂ ಆ್ಯಂಟಿ ಫಂಗಲ್ ಶಾಂಪೂ ಹೊಂದಿರುತ್ತದೆ.
2. ದೈಹಿಕ ಹಾನಿ
ಹೊಸತಾಗಿ ತಂದೆತಾಯಿಯಾದವರಿಗೆ ಕೆಲವೊಮ್ಮೆ ತಾವು ತಪ್ಪು ಮಾಡುವುದರ ಅರಿವಾಗುವುದಿಲ್ಲ. ಅವರು ಅವರ ಮಗುವಿನ ಕೂದಲನ್ನು ಬಹಳಷ್ಟು ಟೈಟ್ ಆಗಿ ಕಟ್ಟುತ್ತಿರಬಹುದು. ಆ ಮೃದು ಕೋಮಲ ಕೂದಲನ್ನು ಗಟ್ಟಿಯಾಗಿ ಕಟ್ಟಿದಾಗ ಕೂದಲ ಬುಡಕ್ಕೆ ಶಾಕ್ ಆಗುತ್ತದೆ. ಇದರಿಂದ ಕೂದಲುದುರುತ್ತದೆ. ನಿಮ್ಮ ಮಗುವಿಗೆ ಕೂದಲುದುರುವುದು ಕಂಡುಬಂದಲ್ಲಿ ಕೂದಲನ್ನು ಕಟ್ಟುವುದು ಬಿಡಿ.
ಕೂದಲು ಹಣ್ಣಾಗ್ತಾ ಇದ್ಯಾ? ಅಯ್ಯೋ ತಲೆ ಬಿಸಿ ಏಕೆ, ಹೀಗ್ ಮಾಡಿ
3. ಅಲೋಪೇಸಿಯಾ ಅರಿಯಾಟಾ
ನಿಮ್ಮ ಮಗುವು 6 ತಿಂಗಳಿಗಿಂತ ದೊಡ್ಡದಾಗಿದ್ದು ತಲೆಯಲ್ಲಿ ಅಲ್ಲಲ್ಲಿ ಪ್ಯಾಚ್ ಆಗುತ್ತಿದ್ದರೆ ಅದು ಅಲೋಪೇಸಿಯಾ ಅರಿಯಾಟಾ ಇರಬಹುದು. ಇದಕ್ಕಾಗಿ ವೈದ್ಯರ ಬಳಿ ತೋರಿಸಿ. ಇದೊಂದು ಆಟೋ ಇಮ್ಯೂನ್ ಕಂಡಿಶನ್ ಆಗಿದ್ದು, ರೋಗ ನಿರೋಧಕ ವ್ಯವಸ್ಥೆಯು ಹೇರ್ ಫೋಲಿಕಲ್ ಮೇಲೆ ನಡೆಸುವ ದಾಳಿಯಾಗಿದೆ. ಇದರಿಂದ ಕೂದಲುದುರುತ್ತದೆ. ಈ ಪ್ಯಾಚ್‌ಗಳು ಬಹಳ ಮೃದುವಾಗಿದ್ದು, ಕೂದಲು ತುಂಡಾದ ಯಾವುದೇ ಲಕ್ಷಣಗಳಿರುವುದಿಲ್ಲ. ಕುಟುಂಬದಲ್ಲಿ ಯಾರಿಗಾದರೂ ಇದ್ದರೆ ಇದು ಮಗುವಿನಲ್ಲೂ ಕಾಣಿಸಬಹುದು. ಐವರಲ್ಲಿ ಒಂದು ಮಗುವಿಗೆ ಕಾಣಿಸಬಹುದು. ನಿಧಾನವಾಗಿ ಕೂದಲು ಮರಳುತ್ತದಾದರೂ ಬಹಳ ವರ್ಷಗಳ ಕಾಲ ಹಿಡಿಯಬಹುದು. ದುರದೃಷ್ಟವೆಂದರೆ, ಇದಕ್ಕೆ ಇನ್ನೂ ಯಾವುದೇ ಚಿಕಿತ್ಸೆಗಳಿಲ್ಲ. ಆದರೆ, ಕೂದಲು ಹುಟ್ಟುವಂತೆ ಮಾಡಲು ಬೇರೇನಾದರೂ ದಾರಿಗಳಿವೆಯೇ ನೋಡಲು ಚರ್ಮರೋಗ ತಜ್ಞರನ್ನು ಕಾಣಬಹುದು.
4. ಟೆಲೋಜನ್ ಎಫ್ಲೂವಿಯಮ್
ಕೂದಲ ಬೆಳವಣಿಗೆ ಒಂದು ಸೈಕಲ್. ಇದು ಕೂದಲು ಬೆಳೆವ ಆ್ಯಕ್ಟಿವ್ ಫೇಸ್‌ನಿಂದ ಶುರುವಾಗಿ, ನಂತರ ಟ್ರಾನ್ಸಿಶನಲ್ ಫೇಸ್ಗೆ ಹೋಗಿ ಕಡೆಯಲ್ಲಿ ರೆಸ್ಟಿಂಗ್ ಫೇಸ್ ತಲುಪುತ್ತದೆ. ಈ ಕಡೆಯ ಫೇಸನ್ನೇ ಟೆಲೋಜನ್ ಎನ್ನುವುದು. ಇದರಲ್ಲಿ ಹೇರ್ ಫೋಲಿಕಲ್‌ಗಳು ತೆಪ್ಪಗಿರುತ್ತವೆ. ಅಂದರೆ ನಿದ್ರಾ ಸ್ಥಿತಿಯಲ್ಲಿರುವಂತೆ, ಆಗ ಕೂದಲ ಬೆಳವಣಿಗೆ ಇರುವುದಿಲ್ಲ. ಟೆಲೋಜನ್ ಎಫ್ಯೂವಿಯಮ್ ಆದಾಗ, ಹೊಸ ಕೂದಲು ತಕ್ಷಣವೇ ಕಟ್ಟ ಕಡೆಯ
ಟೆಲೋಜನ್ ಸ್ಟೇಜ್ ತಲುಪಿಬಿಡುತ್ತದೆ. ಇದರಿಂದ ಸಿಕ್ಕಾಪಟ್ಟೆ ಕೂದಲುದುರುತ್ತದೆ. ಮಕ್ಕಳಲ್ಲಿ ಏನಾದರೂ ಶಸ್ತ್ರಚಿಕಿತ್ಸೆ ಆಗಿದ್ದರೆ, ಅತಿಯಾದ ಜ್ವರ ಕಾಡಿದ್ದರೆ ಅಥವಾ ಭಾವನಾತ್ಮಕ ಒತ್ತಡದಿಂದಲೂ ಹೀಗಾಗಬಹುದು. ಇದಕ್ಕೆ ಚಿಕಿತ್ಸೆಯೇನೂ ಇಲ್ಲವಾದರೂ, ಕೆಲ ಸಮಯದ ಬಳಿಕ ಕೂದಲು ಮತ್ತೆ ಹುಟ್ಟುತ್ತದೆ. ಹೀಗಾಗಿ, ಕಾದು ನೋಡುವುದೊಂದೇ ಆಯ್ಕೆ.
5. ಮಲಗುವ ಭಂಗಿ
ಮಗುವಿನ ತಲೆಯಲ್ಲಿ ಯಾವುದೋ ಒಂದು ಜಾಗದಲ್ಲಿ ಮಾತ್ರ ಕೂದಲು ಉದುರಿದೆಯೇ? ಬಹುಷಃ ತಲೆಯ ಹಿಂಭಾಗ ಅಥವಾ ಯಾವುದೋ ಒಂದು ಬದಿಯಲ್ಲಿ ಕೂದಲುದುರಿದ್ದರೆ ಆಗ ನಿಮ್ಮ ಮಗು ಹೇಗೆ ಮಲಗುತ್ತದೆ ಎಂಬುದನ್ನು ಗಮನಿಸಿ. ಅಂಗಾತ ಮಲಗುತ್ತಿದ್ದರೆ ಅಥವಾ ಬದಿಗೆ ತಿರುಗಿ ಮಲಗುತ್ತಿದ್ದರೆ, ಆ ಭಾಗದ ಎಳೆಯ ತ್ವಚೆ ಹಾನಿಗೊಂಡು ಕೂದಲು ಉದುರಬಹುದು. ಇನ್ನೂ ಕೆಲವೊಮ್ಮೆ ಮಗು ಆಡುವಾಗ ಪದೇ ಪದೇ ತಲೆಯನ್ನು ಯಾವುದೋ ಮ್ಯಾಟ್‌ಗೆ ತಿಕ್ಕುವುದು ಮಾಡುತ್ತಿದ್ದರೆ ಅದರಿಂದಲೂ ಕೂದಲುದುರುತ್ತಿರಬಹುದು.
6. ಮೆಡಿಕಲ್ ಕಂಡಿಶನ್ಸ್
ಅಪರೂಪದ ಪ್ರಕರಣಗಳಲ್ಲಿ ಮಗುವಿನ ಕೂದಲುದುರುವಿಕೆ ಅದಕ್ಕೆ ಐರನ್ ಕೊರತೆಯಾಗಿರುವುದರ ಫಲವಾಗಿರಬಹುದು. ಅಥವಾ ಥೈರಾಯ್ಡ್ ಏರುಪೇರು ಹಾಗೂ ಇತರೆ ವೈದ್ಯಕೀಯ ಕಾರಣಗಳಿಗಾಗಿ ಕೂದಲುದುರುತ್ತಿರಬಹುದು.
ಗುಂಗುರು ಸುಂದರಿ ಆಗ್ಬೇಕಾ, ಕಷ್ಟವಲ್ಲ ಬಿಡಿ
ನೀವೇನು ಮಾಡಬೇಕು?
ಮಗುವಿನ ಕೂದಲುದುರುತ್ತಿದ್ದರೆ, ರೆಡ್‌ನೆಸ್ ಅಥವಾ ಸ್ಕಾಲ್ಪ್ ಫ್ಲೇಕಿಯಾಗಿರುವುದು ಮತ್ತಿತರೆ ಲಕ್ಷಣಗಳಿಗೆ ಗಮನ ಕೊಡಿ. ಬಹುತೇಕ ಪ್ರಕರಣಗಳಲ್ಲಿ ಚಿಂತಿಸುವಂಥದ್ದು ಏನೂ ಇರುವುದಿಲ್ಲ. ಯಾವುದು ನಾರ್ಮಲ್, ಯಾವುದು ಅಲ್ಲ ಎಂದು ಪತ್ತೆ ಹಚ್ಚುವುದು ಹೇಗೆ? ನಿಮ್ಮ ಮಗುವಿಗೆ 6 ತಿಂಗಳಾದ ಬಳಿಕವೂ ಕೂದಲು ಉದುರುತ್ತಲೇ ಇದ್ದರೆ ಆಗ ವೈದ್ಯರನ್ನು ಕಾಣಬೇಕು.
ಇದಲ್ಲದೆ ಕೂದಲುದುರುವಿಕೆ ಕಡಿಮೆ ಮಾಡಲು ಹೀಗೆ ಮಾಡಬಹುದು;
ಟಮ್ಮಿ ಟೈಂ: ದಿನದಲ್ಲಿ ಕೆಲ ಸಮಯವಾದರೂ ಮಗುವು ಹೆೊಟ್ಟೆಯ ಮೇಲೆ ಮಲಗುವುದು, ಓಡಾಡುವುದು ಮಾಡುವಂತೆ ನೋಡಿಕೊಳ್ಳಿ. ಇದರಿಂದ ತಲೆಕೂದಲು ಒತ್ತಡವಿಲ್ಲದೆ ಸ್ವಲ್ಪ ಹೊತ್ತು ಉಸಿರಾಟವಾಡಲು ಸಮಯ ಸಿಗುತ್ತದೆ. ಇದು ಅವರ ದೈಹಿಕ ಬೆಳವಣಿಗೆಗೂ ಸಹಕಾರಿ.
ಬಾಚುವುದು ಕಡಿಮೆ ಮಾಡಿ: ಮಗುವಿಗೆ ದಿನಾ ಬಾಚಣಿಕೆಯಿಂದ ಬಾಚಬೇಕೆಂದೇನಿಲ್ಲ. ತುಂಬಾ ಕೂದಲಿದ್ದು ಸಿಕ್ಕುಸಿಕ್ಕಾಗುತ್ತಿದ್ದರೆ ಮಾತ್ರ ಮಗುವಿಗಾಗಿಯೇ ಸಿಗುವ ಬಾಚಣಿಕೆ ಬಳಸಿ ದಿನಕ್ಕೊಂದು ಬಾರಿ ಹಗುರವಾಗಿ ಬಾಚಿ. ಪದೇ ಪದೇ ತಲೆ ಬಾಚುವುದರಿಂದ ಕೂಡಾ ಅವರ ಮೃದುವಾದ ನೆತ್ತಿಯಿಂದ ಕೂದಲು ಉದುರಬಹುದು.
ಪ್ರತಿ ದಿನ ತಲೆಸ್ನಾನ ಬೇಡ: ಮಗುವಿನ ತಲೆಕೂದಲಿಗೆ ಮೈಲ್ಡ್ ಆಗಿರುವ ಶಾಂಪೂ ಬಳಸಿ. ಎರಡು ಮೂರು ದಿನಗಳಿಗೊಮ್ಮೆ ತಲೆ ಸ್ನಾನ ಮಾಡಿಸಿದರೂ ಸಾಕು.
ಮಗು ಮಲಗಿದಾಗ ಪೊಸಿಶನ್ ಬದಲಿಸಿ: ಮಗು ನಿದ್ದೆ ಮಾಡಿದಾಗ ಆಗಾಗ ಅದನ್ನು ಬೇರೆ ರೀತಿಯಲ್ಲಿ ತಿರುಗಿಸಿ ಮಲಗಿಸಿ. ಇದರಿಂದ ಒಂದೇ ಕಡೆಯ ಕೂದಲ ಮೇಲೆ ಒತ್ತಡ ಬೀಳುವುದಿಲ್ಲ.