#FactCheck: ಜ್ಯೋತಿರಾಜ್ ಏಂಜೆಲ್ ಫಾಲ್ಸ್ ಹತ್ತಿದ್ದು ಹೌದಾ?
ಚಿತ್ರದುರ್ಗ ಕೋಟೆ ಅಭಿವೃದ್ಧಿ ಮಾಡುವ ಮಹತ್ವಾಕಾಂಕ್ಷಿ ಆಶಯದೊಂದಿಗೆ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಅಮೆರಿಕದ ಪ್ರಸಿದ್ಧ ಏಂಜೆಲ್ ಫಾಲ್ಸ್ ಹತ್ತುವ ಸಾಹಸಕ್ಕೆ ಮುಂದಾಗಿದ್ದರು. ಆದರೆ, ಕೆಲವು ಕಾರಣಗಳಿಂದ ಈ ಸಾಹಸವೆಸಗುವಲ್ಲಿ ವಿಫಲವಾಗಿದ್ದಾರೆ ಜ್ಯೋತಿರಾಜ್. ಆದರೂ, ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಸತ್ಯಾಸತ್ಯತೆ ಏನು?
ಬೆಂಗಳೂರು (ಮಾ.10): ಚಿತ್ರದುರ್ಗದ ಹೆಮ್ಮೆ ಸ್ಪೈಡರ್ ಮ್ಯಾನ್ ಖ್ಯಾತಿಯ ಜ್ಯೋತಿರಾಜ್ ಚಿತ್ರದುರ್ಗವನ್ನು ಅಭಿವೃದ್ಧಿ ಪಡಿಸುವ ಮಹತ್ವಾಕಾಂಕ್ಷೆಯೊಂದಿಗೆ ವೆನುಜುವೆಲಾದ ಏಂಜೆಲ್ಸ್ ಫಾಲ್ಸ್ ಹತ್ತಲು ಸನ್ನದ್ಧರಾಗಿದ್ದರು. ಜಗತ್ತಿನ ಅತಿ ಎತ್ತರದ ಪ್ರದೇಶದಿಂದ ಯಾವುದೇ ಅಡೆತಡೆಗಳಿಲ್ಲದೇ ನೇರವಾಗಿ ಭೂಮಿಗ ಸ್ಪರ್ಶಿಸುವ ಈ ಜಲಪಾತ ಏರುವ ಸಾಹಸ ಸುಲಭದ್ದಲ್ಲ. ಆದರೂ ಇಡೀ ಕನ್ನಡ ನಾಡು ಜ್ಯೋತಿರಾಜ್ ಅವರ ಸಾಹಸಕ್ಕೆ ಬೆನ್ನೆಲುಬಾಗಿ ನಿಂತು, ಅವರ ಯಶಸ್ಸಿಗಾಗಿ ಪ್ರಾರ್ಥಿಸಿದ್ದು ಸುಳ್ಳಲ್ಲ.
ತೂಕದ ಕಾರಣ ಜ್ಯೋತಿರಾಜ್ ಏಂಜೆಲ್ ಜಲಪಾತ ಹತ್ತಲು ಇನ್ನೂ ಸಮಯ ಬೇಕು ಎಂಬ ವಿಷಯ ಬಹಿರಂಗವಾಗಿದೆ. ಆದರೂ, ಸೋಷಿಯಲ್ ಮೀಡಿಯಾದಲ್ಲಿ '#ಷೇರ್ಮಾಡುವುದನ್ನುಮರೆಯಬೇಡಿ (ಸಾಧನೆ ಮಾಡದಿದ್ರೂ ಪರವಾಗಿಲ್ಲ ಬದುಕಿ ಬಾ ಬಡ ಜೀವವೇ). ನಮ್ಮ ರಾಜ್ಯದ ಮೀಡಿಯಾಗಳು ಟಿಆರ್‌ಪಿಗಾಗಿ ರಾಜಕೀಯದ ಹಾಗೂ ಚಿತ್ರ ನಟ ನಟಿಯರ ಮದುವೆ, ಮೊದಲ ರಾತ್ರಿ, ಬಸಿರು, ಸೀಮಾಂತ, ಅವರ ಮಕ್ಕಳು ತಿನ್ನುವ ಚಾಕೊಲೇಟ್, ಹಾಕುವ ಒಳ ಉಡುಪುಗಳವರೆಗೆ ಪ್ರಚಾರ ಮಾಡುವಲ್ಲಿ ನಿರತರಾಗಿವೆ. ಮಾಧ್ಯಮಗಳು ಮಾಡದ ಕೆಲಸವನ್ನು ನಾವು ಮಾಡೋಣ....' ಎಂಬ ಒಕ್ಕಣಿಕೆ ಇರೋ ಸಂದೇಶವೊಂದು ವಾಟ್ಸ್‌ಆ್ಯಪ್‌ನಲ್ಲಿ ಶೇರ್ ಆಗುತ್ತಿವೆ.
ಜ್ಯೋತಿರಾಜ್ ಏಂಜೆಲ್ ಫಾಲ್ಸ್ ಹತ್ತುವಲ್ಲಿ ವಿಫಲರಾಗಿದ್ದೇಕೆ?
'ಇಂಥಧ ಕಠಿಣವಾದ ಜಾಗವನ್ನ ಹತ್ತಿದ್ದು ಬೇರೆ ಯಾವುದೇ ದೇಶದ ವ್ಯಕ್ತಿಯಾಗಿದ್ದರೆ, ಅವನಿಗೆ ಸಿಗುತ್ತಿದ್ದ ಪ್ರಚಾರ ಊಹಿಸಲು ಅಸಾಧ್ಯ, ಆದರೆ ಜ್ಯೋತಿರಾಜ್ ಎಂಬ ಈ ಪ್ರತಿಭೆ ಕನ್ನಡದ ಸ್ಪೈಡರ್ ಮ್ಯಾನ್ ಎಂದೇ ಹೆಸರಾದ ನಮ್ ಚಿತ್ರದುರ್ಗದ ಹುಡುಗ. ನಿರಂತರ ಅಭ್ಯಾಸ ಕಠಿಣ ಪರಿಶ್ರಮದಿಂದ ಅಂಥ ಜಲಪಾತವನ್ನ ಪ್ರಾಣದ ಹಂಗು ತೊರೆದು ಏರಿಯೇ ಬಿಟ್ಟ, ಆದರೆ ಅವನಿಗೆ ಬೆಂಬಲ ಪ್ರೋತ್ಸಾಹ ಇರಲಿ, ಕನಿಷ್ಠ ಬದುಕಿದಾನ? ಸತ್ತಿದಾನ? ಅಂತ ಕೇಳುವವರೇ ಇಲ್ಲ, ಯಾವ ಪುರುಷಾರ್ಥಕ್ಕೆ ರಾಶಿ ರಾಶಿ ಭಾರತದ ನ್ಯೂಸ್ ಚಾನೆಲ್‌ಗಳು ಇವೆಯೋ ಥೂ..' ಎಂದು ವಿದ್ಯುನ್ಮಾನ ಮಾಧ್ಯಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಈ ಸಂದೇಶಕ್ಕೆ ಸಿಕ್ಕ ಸ್ಪಷ್ಟನೆ ಏನು?
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸಂದೇಶಕ್ಕೆ ಸಂಬಂಧಿಸಿದಂತೆ ಜ್ಯೋತಿರಾಜ್ ಸ್ನೇಹಿತ ಬಸವರಾಜ್ ಈ ರೀತಿಯ ಸ್ಪಷ್ಟನೆ ನೀಡಿದ್ದಾರೆ, 'ಕಳೆದ ಒಂದೆರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹರಿದಾಡ್ತಿರೋ ಪೋಸ್ಟ್ ಕೋತಿರಾಜ್ ಅಮೆರಿಕಾದಲ್ಲಿರುವ ಏಂಜೆಲ್ ಫಾಲ್ಸ್ ಅನ್ನು ಇಂದು ಮತ್ತು ನಾಳೆ ಏರಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಅದೆಲ್ಲಾ ಸುಳ್ಳು. ಸದ್ಯ ಕೋತಿರಾಜ್ ತಮ್ಮ ದೇಹದ ತೂಕ ಕಡಿಮೆ ಮಾಡಿಕೊಳ್ಳುವ ಸಲುವಾಗಿ ಉತ್ತರ ಕನ್ನಡದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದಷ್ಟು ಬೇಗ ವಾಪಾಸ್ ಬಂದು ಮಾದ್ಯಮದೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಏಪ್ರಿಲ್‌ನಲ್ಲಿ ಏಂಜೆಲ್ ಫಾಲ್ಸ್ ಹತ್ತು ಸಾಹಸಕ್ಕೆ ಮುಂದಾಗಲಿದ್ದಾರೆ,' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದ ವೈರಲ್ ಸುದ್ದಿಗೆ ಬ್ರೇಕ್ ಬಿದ್ದಂತಾಗಿದೆ.
"
ಈ ಸಂಬಂಧ ಮತ್ತಷ್ಟು ಸ್ಪಷ್ಟನೆ ಪಡೆಯಲು ಜ್ಯೋತಿರಾಜ್ ಅವರನ್ನು ಸಂಪರ್ಕಿಸಲು ಸುವರ್ಣನ್ಯೂಸ್.ಕಾಮ್ ಯತ್ನಿಸಿದ್ದು, ಚಿಕಿತ್ಸೆ ಪಡೆಯುತ್ತಿರುವ ಸಂಪರ್ಕಿಸಲು ಸಾಧ್ಯವಾಗಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋ ಮೆಸೇಜನ್ನು ಮತ್ತೊಬ್ಬರಿಗೆ ಶೇರ್ ಮಾಡಿಕೊಳ್ಳುವ ಮುನ್ನ #FactCheck ಮಾಡಿಕೊಳ್ಳಿ. ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯುವ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನದ್ದು ಎಂಬುವುದು ಸುವರ್ಣನ್ಯೂಸ್.ಕಾಮ್‌ನ ಕಳಕಳಿ.