ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಮ್ಮ ಮುಂಬರುವ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಬಗ್ಗೆ ಹರಿದಾಡುತ್ತಿದ್ದ ಒಂದು ಸುದ್ದಿಗೆ ಖಡಕ್ ಆಗಿ ಇನ್ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಜೊತೆಗಿನ ಇಂಟಿಮೇಟ್ ದೃಶ್ಯಗಳನ್ನು ಕಡಿಮೆ ಮಾಡುವಂತೆ ನಿರ್ಮಾಪಕರಲ್ಲಿ ಮನವಿ ಮಾಡಿಕೊಂಡಿದ್ದಾರೆ ಎಂಬ ವರದಿಗಳನ್ನು ನಟಿ ಕಿಯಾರಾ ಅಡ್ವಾಣಿ ತಳ್ಳಿಹಾಕಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ, ಇವೆಲ್ಲಾ 'ಶುದ್ಧ ಸುಳ್ಳು' ಎಂದು ಹೇಳಿದ್ದಾರೆ. ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ತಮ್ಮ ಮುಂಬರುವ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಬಗ್ಗೆ ಹರಿದಾಡುತ್ತಿದ್ದ ಒಂದು ಸುದ್ದಿಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ.

Add Asianetnews Kannada as a Preferred SourcegooglePreferred

ಈ ಸಿನಿಮಾದಲ್ಲಿ ನಟ ಯಶ್ ಜೊತೆಗಿನ ಇಂಟಿಮೇಟ್ ದೃಶ್ಯಗಳನ್ನು ಕಡಿಮೆ ಮಾಡುವಂತೆ ನಿರ್ದೇಶಕರಿಗೆ ಮನವಿ ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿಯ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡ ಕಿಯಾರಾ, 'ಇದೆಲ್ಲಾ ಶುದ್ಧ ಸುಳ್ಳು' (absolute nonsense) ಎಂದು ಬರೆದುಕೊಂಡಿದ್ದಾರೆ.

'ಟಾಕ್ಸಿಕ್' ಸಿನಿಮಾ ಬಗ್ಗೆ

ಗೀತು ಮೋಹನ್‌ದಾಸ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಯಶ್ ಮತ್ತು ಗೀತು ಮೋಹನ್‌ದಾಸ್ ಸೇರಿ ಚಿತ್ರಕ್ಕೆ ಕಥೆ ಬರೆದಿದ್ದಾರೆ. 'ಟಾಕ್ಸಿಕ್' ಸಿನಿಮಾದಲ್ಲಿ ಯಶ್ ಜೊತೆಗೆ ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರಂತಹ ದೊಡ್ಡ ತಾರಾಬಳಗವೇ ಇದೆ.

'ಟಾಕ್ಸಿಕ್' ಬಿಡುಗಡೆ ಮುಂದೂಡಿಕೆ

ಇತ್ತೀಚೆಗೆ 'ಟಾಕ್ಸಿಕ್' ಚಿತ್ರತಂಡ ಸಿನಿಮಾದ ಬಿಡುಗಡೆ ದಿನಾಂಕವನ್ನು ಮುಂದೂಡಿರುವುದಾಗಿ ಘೋಷಿಸಿದೆ. ಈ ಮೊದಲು 2026ರ ಜೂನ್ 4 ರಂದು ಸಿನಿಮಾ ತೆರೆಗೆ ಬರುವುದಾಗಿ ಹೇಳಲಾಗಿತ್ತು. ಆದರೆ ಈಗ ಆ ದಿನಾಂಕಕ್ಕೆ ಸಿನಿಮಾ ರಿಲೀಸ್ ಆಗುವುದಿಲ್ಲ. KVN ಪ್ರೊಡಕ್ಷನ್ಸ್ ಮತ್ತು ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರ, ಮೊದಲು ಮಾರ್ಚ್ 19ಕ್ಕೆ ರಿಲೀಸ್ ಆಗಬೇಕಿತ್ತು, ನಂತರ ಜೂನ್ 4ಕ್ಕೆ ಮುಂದೂಡಲಾಗಿತ್ತು. ಸದ್ಯಕ್ಕೆ, ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿಲ್ಲ.

ಸಿನಿಮಾಕಾನ್‌ನಲ್ಲಿ (CinemaCon) ಈ ಚಿತ್ರವನ್ನು ಪ್ರದರ್ಶಿಸಿದಾಗ, ಜಾಗತಿಕ ವಿತರಕರು ಮತ್ತು ಸಿನಿಮಾ ಕ್ಷೇತ್ರದ ಗಣ್ಯರಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರತಂಡ ಹೇಳಿದೆ. ಇದೇ ಕಾರಣಕ್ಕೆ ಬಿಡುಗಡೆ ದಿನಾಂಕವನ್ನು ಮುಂದೂಡುವ ನಿರ್ಧಾರ ತೆಗೆದುಕೊಂಡಿದ್ದಾರಂತೆ. ಈ ಬಗ್ಗೆ ನಟ-ನಿರ್ಮಾಪಕ ಯಶ್ ವಿವರವಾದ ಹೇಳಿಕೆ ನೀಡಿದ್ದಾರೆ. ಸಿನಿಮಾಕಾನ್‌ನಲ್ಲಿ ಅಂತರಾಷ್ಟ್ರೀಯ ವಿತರಕರಿಂದ ಸಿಕ್ಕ ಉತ್ಸಾಹ, ಈ ಸಿನಿಮಾವನ್ನು ಜಾಗತಿಕ ಮಟ್ಟದಲ್ಲಿ ದೊಡ್ಡದಾಗಿ ತಲುಪಿಸಬೇಕು ಎಂಬ ನಮ್ಮ ನಂಬಿಕೆಯನ್ನು ಮತ್ತಷ್ಟು ದೃಢಪಡಿಸಿದೆ ಎಂದು ಅವರು ಹೇಳಿದ್ದಾರೆ.

"ನಾವು ಕೆಲವು ಸಿನಿಮಾಗಳನ್ನು ಮಾಡುತ್ತೇವೆ, ಆದರೆ ಇನ್ನು ಕೆಲವು ಸಿನಿಮಾಗಳು ನಾವು ಯಾಕೆ ಸಿನಿಮಾ ರಂಗವನ್ನು ಇಷ್ಟಪಟ್ಟೆವು ಎಂಬುದನ್ನು ನೆನಪಿಸುತ್ತವೆ. 'ಟಾಕ್ಸಿಕ್' ಅಂತಹ ಒಂದು ಪಯಣ. ಸಿನಿಮಾಕಾನ್‌ನಲ್ಲಿ ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಜಾಗತಿಕ ಪ್ರತಿಕ್ರಿಯೆ, ಈ ಸಿನಿಮಾ ವಿಶ್ವಾದ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿದೆ ಎಂಬ ನಮ್ಮ ನಂಬಿಕೆಯನ್ನು ನಿಜ ಮಾಡಿದೆ" ಎಂದು ಯಶ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಲಿದೆ.