ಪ್ರೇಮದ ಊರಲಿ ಸಿನಿಮಾದಲ್ಲಿ ವಸಂತಾ ಕ್ಯಾರೆಕ್ಟರೇ ಇರಲಿಲ್ಲ. ಆ ಕ್ಯಾರೆಕ್ಟರ್ ಆರಂಭದಲ್ಲಿ ಬರೆದಿದ್ದರೂ ಒಂದು ಹಂತದಲ್ಲಿ ಅದನ್ನು ಡ್ರಾಪ್ ಮಾಡಿದ್ವಿ. ಸ್ಕ್ರಿಪ್ಟ್ ಚೇಂಜ್ ಆಗಿ ವಸಂತಾ ಬೇಡ ಎಂದಾಯ್ತು ಎಂದು ಆ ರೋಚಕ ಘಟನೆ ನೆನಪಿಸಿಕೊಂಡಿದ್ದಾರೆ ನಿರ್ದೇಶಕ ಮನೋಜ್ ಕುಮಾರ್ ಮತ್ತು ನಿರ್ಮಾಪಕ ದೇವೇಂದ್ರ ನಾಯ್ಡು. ಅವರು ಹೇಳಿದ್ದೇನು?
ಅತ್ಯಂತ ಕಡಿಮೆ ಬಜೆಟ್ನ ಸಿನಿಮಾ ಒಂದು, ರಕ್ತಪಾತ, ಸೆ*ಕ್ಸ್, ಲಾಂಗು, ಮಚ್ಚಿನ ಆರ್ಭಟ ಇಲ್ಲದೇ Gen Zಗಳೂ ಸೇರಿದಂತೆ ಎಲ್ಲಾ ವಯಸ್ಸಿನವರನ್ನು ಹೇಗೆ ಆಕರ್ಷಣೆ ಮಾಡಬಲ್ಲುದು, ಒಂದೊಳ್ಳೆ ಸಿನಿಮಾ ಕೊಟ್ಟರೆ, ಯಾವುದೇ ಪ್ರಚಾರವೂ ಇಲ್ಲದೇ ಕುಟುಂಬ ಸಹಿತವಾಗಿ ಹೇಗೆ ಒಂದು ಸಿನಿಮಾ ಕೇವಲ ಜನರ ಬಾಯಿಯಿಂದ ಬಾಯಿಗೆ ಪ್ರಚಾರ ಪಡೆದು ಸಕ್ಸಸ್ ಕಾಣಬಹುದು ಎನ್ನುವುದಕ್ಕೆ ಸಾಕ್ಷಿಯಾಗಿ ನಿಂತಿರೋದು ಪ್ರೇಮದ ಊರಲಿ ಸಿನಿಮಾ (Premada Oorali Movie). ಈ ಸಿನಿಮಾದ ದೊಡ್ಡ ಹೈಲೈಟ್ ಎಂದರೆ, ವಸಂತಾ ಪಾತ್ರ. ಈ ಪಾತ್ರದಿಂದಲೇ ಸಿನಿಮಾ ಗೆದ್ದಿರೋದು. ಬಹುಶಃ ಈ ಪಾತ್ರಕ್ಕೆ ಇರುವ ವಿಶೇಷತೆಯಿಂದಲೇ ಜನರಿಗೆ ಸಿನಿಮಾ ಸಿಕ್ಕಾಪಟ್ಟೆ ಹಿಡಿಸಿದ್ದು ಎಂದರೆ ತಪ್ಪಾಗಲಿಕ್ಕಿಲ್ಲ. ಬಾಲಿಶಃವಾಗಿ ವರ್ತಿಸುತ್ತಾ ಕೊನೆಯಲ್ಲಿ, ವಸಂತಾ ಪಾತ್ರ ಹೇಗೆ ಪ್ರಬುದ್ಧತೆ ಪಡೆದುಕೊಂಡಿತು ಎನ್ನುವುದರ ಜೊತೆಗೆ ಭಗ್ನಪ್ರೇಮಿಯಾಗಿಯೂ ಹೇಗೆ ಆಕೆ ಇಡೀ ಚಿತ್ರವನ್ನು ಆವರಿಸಿಕೊಂಡಳು ಎನ್ನುವುದೇ ಇಲ್ಲಿಯ ಹೈಲೈಟ್. ಎಷ್ಟೋ ಮಂದಿ ವಸಂತಾ ಪಾತ್ರವನ್ನು ತಮ್ಮ ಜೀವನಕ್ಕೆ ಹೋಲಿಸಿಕೊಂಡಿರುವ ಕಾರಣದಿಂದಲೇ ಚಿತ್ರ ಈ ಪರಿಯಲ್ಲಿ ಸಕ್ಸಸ್ ಕಾಣಲು ಒಂದು ಕಾರಣವೂ ಆಗಿದೆ.
ಆದರೆ ಇದೀಗ ನಿರ್ದೇಶಕ ಮನೋಜ್ ಕುಮಾರ್ (Manoj Kumar) ಹಾಗೂ ನಿರ್ಮಾಪಕ ದೇವೇಂದ್ರ ನಾಯ್ಡು (ದೇವೇಂದ್ರ ಮೇದರಮೆಟ್ಲ) ಅವರು ಆರಂಭದಲ್ಲಿ ಈ ಸಿನಿಮಾದಲ್ಲಿ ವಸಂತಾ ಪಾತ್ರ ಬರೆದೇ ಇರಲಿಲ್ಲ. ಇಲ್ಲಿ ಇದ್ದುದು ಕೇವಲ ಅಪ್ಪ-ಮಗನ ಸೆಂಟಿಮೆಂಟ್ ಮಾತ್ರ ಆಗಿತ್ತು. ವಸಂತಾ ಸಿನಿಮಾಕ್ಕೆ ಎಂಟ್ರಿ ಕೊಟ್ಟಿದ್ದು ಆಮೇಲೆ. ಮೊದಲಿಗೆ ಇಂಥ ಪಾತ್ರ ಸೃಷ್ಟಿಸುವ ಯೋಚನೆಯೇ ಇರಲಿಲ್ಲ ಎನ್ನುವ ಕುತೂಹಲದ ಅಂಶವೊಂದನ್ನು ತೆರೆದಿಟ್ಟಿದ್ದಾರೆ. ಇ-ಮಾಯೆ ಎನ್ನುವ ಯುಟ್ಯೂಬ್ ಚಾನೆಲ್ ಜೊತೆ ಮಾತನಾಡಿರುವ ಅವರು, ಸಿನಿಮಾದ ರೋಚಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಮೊದಲಿಗೆ ಮಾಡಿದ್ದ ಅಪ್ಪ-ಮಗನ ಸೆಂಟಿಮೆಂಟ್ ಕ್ಯಾರೆಕ್ಟರ್. ಕೊನೆಗೆ ಆ ಮನೆಯಲ್ಲಿ ಹೆಣ್ಣುಮಗಳು ಇಲ್ಲ. ಒಬ್ಬಳು ಬರಲಿ ಎನ್ನುವ ಯೋಚನೆ ಬಂತು. ಹೆಚ್ಚಾಗಿ ಹಳ್ಳಿಯ ಕಡೆಯಲ್ಲಿ ಯಾರದ್ದೋ ಮಗನೋ, ಮಗಳೋ ಬೇರೆಯವರ ಮನೆಗೆ ಹೋಗಿ ಮಾವ, ಚಿಕ್ಕಪ್ಪ, ತಾತಾ ಅಂತೆಲ್ಲಾ ಕರೆಯೋದು ಈಗಲೂ ಇದೆ. ಅಂಥ ಒಂದು ಹೆಣ್ಣುಮಗಳನ್ನು ಹಾಕೋಣ ಎನ್ನಿಸಿತು. ಪಂಚೆ ಉಟ್ಟುಕೊಂಡು ಷರ್ಟ್ ಹಾಕಿಕೊಳ್ಳುವ ಹೆಣ್ಣುಮಕ್ಕಳು ಈಗಲೂ ಇದ್ದಾರೆ. ಅಂಥ ಕ್ಯಾರೆಕ್ಟರ್ ಹಾಕೋಣ ಎಂದು ಯೋಚನೆ ಮಾಡಿ ಹಾಕಿಬಿಟ್ವಿ. ಆದರೆ ಅವಳ ಪಾತ್ರವನ್ನು ಹೇಗೆ ಕಾಣಿಸಬೇಕು ಎಂದು ತಿಳಿಯದೇ ಪರದಾಡಿಬಿಟ್ವಿ ಎಂದಿದ್ದಾರೆ ಮನೋಜ್ ಕುಮಾರ್.
ವಸಂತಾಳನ್ನು ಡ್ರಾಪ್ ಮಾಡಿದ್ವಿ
ಹಾಗೂ ಹೀಗೂ ಮಾಡಿ ಇಂಟರ್ವೆಲ್ವರೆಗೆ ಅವಳ ಕ್ಯಾರೆಕ್ಟರ್ ಹಾಕಿದ್ವಿ. ಮುಂದೇನು? ಅಂತ್ಯ ಏನು ಎಂದು ತಿಳಿಯದೇ ಒದ್ದಾಡಿದ್ವಿ. ಏನು ಮಾಡಿದರೂ ಸ್ಟೋರಿ ಮುಂದೆ ಹೋಗಲೇ ಇಲ್ಲ. ವಸಂತಾ ಕ್ಯಾರೆಕ್ಟರ್ ಸ್ಕ್ರಿಪ್ಟ್ನಿಂದಲೇ ತೆಗೆದುಬಿಟ್ವಿ. ಅಂತ್ಯ ಏನು ಮಾಡೋದು ತಿಳಿಯದೇ, ವೀಕ್ಷಕರಿಗೆ ಏನೇನೋ ಕೊಡಲು ಆಗಲ್ಲ ಎನ್ನಿಸಿತು. ಅವಳ ಪಾತ್ರ ಎಂಟ್ರಿ ಕೊಟ್ಟಾಗ ಮನರಂಜನೆ ವಿಷ್ಯದಲ್ಲಿ ಚೆನ್ನಾಗಿತ್ತು ಎನ್ನಿಸಿದರೂ ಇಂಟರ್ವೆಲ್ ಬಳಿಕ ಅವಳಿಗೆ ಏನು ಮಾಡಬೇಕು ಎನ್ನೋದು ಗೊತ್ತಾಗದೇ ಕ್ಯಾರೆಕ್ಟರ್ ಅನ್ನೇ ಬಿಟ್ಟುಬಿಟ್ವಿ ಎಂದಿದ್ದಾರೆ ಮನೋಜ್. ಕೊನೆಗೆ ಇದ್ದಕ್ಕಿದ್ದಂತೆಯೇ ಏನೋ ಒಂದು ಹೊಳೆದು ಅದನ್ನು ನಿರ್ಮಾಪಕರಿಗೆ ಹೇಳಿದೆ ಎಂದರು.
ಕನ್ವಿನ್ಸ್ ಮಾಡಿದ ನಿರ್ದೇಶಕ
ಆ ಬಳಿಕ ಆದ ಘಟನೆಯನ್ನು ನೆನಪಿಸಿಕೊಂಡ ನಿರ್ಮಾಪಕ ದೇವೇಂದ್ರ ನಾಯ್ಡು, ನಾನು ವಸಂತಾ ಕ್ಯಾರೆಕ್ಟರ್ ಒಪ್ಪಲೇ ಇಲ್ಲ. ಬಜೆಟ್ ಹೆಚ್ಚಾಗುತ್ತದೆ. ಕಥೆನೂ ಏನು ಎಂದು ಪರಿಪೂರ್ಣ ಎನ್ನಿಸುವುದಿಲ್ಲ. ನಾಯಕಿ-ನಾಯಕಿಯ ಚೈಲ್ಡ್ಹುಡ್ ಇಟ್ಕೊಂಡು ಏನೋ ಒಂದು ಕಥೆ ಮಾಡಿದ್ರಾಯ್ತು ಎಂದೆ. ಆದರೆ ಮನೋಜ್ ಅವರು ಒಂದು ಕಥೆ ಹೇಳಿ ವಸಂತಾ ಕ್ಯಾರೆಕ್ಟರ್ ಬೇಕೇ ಬೇಕು ಎಂದು ಅದೆಷ್ಟು ನನ್ನನ್ನು ಕನ್ವಿನ್ಸ್ ಮಾಡಿದ್ರು ಎಂದರೆ ಬಿಡಲೇ ಇಲ್ಲ. ನಾನು ಬೇಡ ಎಂದರೂ ಕೇಳಿದೇ ಬೇಕೇ ಬೇಕು ಎಂದು ಅವರು ಈ ಸ್ಟೋರಿ ಬರೆದರು. ಹೀಗೆ ಮತ್ತೆ ಸ್ಕ್ರಿಪ್ಟ್ ಬದಲಾಗಿ ವಸಂತಾ ಬಂದಳು ಎಂದು ನೆನಪಿಸಿಕೊಂಡಿದ್ದಾರೆ.


