Ninna Jothe Nanna Kathe serial: ಜನಪ್ರಿಯ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ'ಯಿಂದ 'ಅಂಜನಾ' ಖ್ಯಾತಿಯ ನಟಿ ಪೂಜಾ ಮಂಜುಳ ಅನಿರೀಕ್ಷಿತವಾಗಿ ಹೊರಬಿದ್ದಿದ್ದು, ಕಿರುತೆರೆಯಲ್ಲಿ ಭಾರೀ ಸಂಚಲನ ಮೂಡಿಸಿದೆ. "ಕೆಟ್ಟ ಜನರಿಂದ, ಕೆಟ್ಟ ಜಾಗದಿಂದ ಆಚೆ ಬಂದಿದ್ದೇ ದೇವರು ಕೊಟ್ಟ ವರ" ಎಂದು ಪೂಜಾ ಇಡೀ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ 'ನಿನ್ನ ಜೊತೆ ನನ್ನ ಕಥೆ' ತಂಡದಿಂದ ಪ್ರಮುಖ ನಟಿ ದಿಢೀರನೇ ಹೊರಬಂದಿದ್ದಾರೆ. ಹೌದು. ಸೀರಿಯಲ್ನಲ್ಲಿ 'ಅಂಜನಾ' ಎಂಬ ಪ್ರಮುಖ ಪಾತ್ರದ ಮೂಲಕ ಮನೆಮಾತಾಗಿದ್ದ ನಟಿ ಪೂಜಾ ಮಂಜುಳ, ಧಾರಾವಾಹಿಯನ್ನು ಅರ್ಧದಲ್ಲೇ ತೊರೆದಿದ್ದಾರೆ. ಆದರೆ, ಅವರು ಪ್ರಾಜೆಕ್ಟ್ನಿಂದ ಹೊರಬಂದಿರುವುದಕ್ಕಿಂತ ಹೆಚ್ಚಾಗಿ, ಅದಕ್ಕೆ ಅವರು ನೀಡಿರುವ ಕಟು ಕಾರಣವೇ ಈಗ ಕಿರುತೆರೆ ಅಂಗಳದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಖಾರವಾಗಿ ಬರೆದುಕೊಂಡಿರುವ ಪೂಜಾ, ಸೀರಿಯಲ್ ತಂಡದ ವಿರುದ್ಧ ನೇರ ಅಸಮಾಧಾನ ಹೊರಹಾಕಿದ್ದಾರೆ. "ನಾನು 'ನಿನ್ನ ಜೊತೆ ನನ್ನ ಕಥೆ' ಸೀರಿಯಲ್ ಅನ್ನು ಮುಂದುವರಿಸುತ್ತಿಲ್ಲ. ಕೆಲವೊಂದು ಸಲ ಕೆಟ್ಟ ಜನರಿಂದ, ಕೆಟ್ಟ ಜಾಗದಿಂದ ಆಚೆ ಬರೋದು ಒಳ್ಳೆಯದು. ಆ ಟೀಮ್ನಿಂದ ಆಚೆ ಬಂದಿರೋದೇ ದೇವರು ನನಗೆ ಕೊಟ್ಟಿರುವ ದೊಡ್ಡ ವರ. ಇಷ್ಟು ದಿನ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಕೆಟ್ಟವರಿಗೂ ಒಳ್ಳೆಯದೇ ಬಯಸೋಣ" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ನಟ-ನಟಿಯರು ಯಾವುದಾದರೂ ಧಾರಾವಾಹಿಯಿಂದ ಹೊರಬರುವಾಗ 'ಕಾಲ್ಶೀಟ್ ಸಮಸ್ಯೆ' ಅಥವಾ 'ವೈಯಕ್ತಿಕ ಕಾರಣ' ಎಂದು ನಯವಾಗಿ ಹೇಳುವುದು ವಾಡಿಕೆ. ಆದರೆ ಪೂಜಾ ಮಂಜುಳ ಯಾವುದೇ ಮುಲಾಜಿಲ್ಲದೆ, ತಾವು ಕೆಲಸ ಮಾಡುತ್ತಿದ್ದ ಸ್ಥಳವನ್ನು 'ಕೆಟ್ಟ ಪ್ಲೇಸ್' ಎಂದೂ, ಜೊತೆಗಿದ್ದವರನ್ನು 'ಕೆಟ್ಟ ಜನರು' ಎಂದೂ ಜರೆದಿರುವುದಕ್ಕೆ ಸೆಟ್ನಲ್ಲಿ ಆಂತರಿಕ ಕಲಹ ನಡೆದಿರಬಹುದಾ ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ನಿರ್ಮಾಣ ತಂಡ ಅಥವಾ ಸಹ-ಕಲಾವಿದರ ಜೊತೆಗಿನ ಕಹಿ ಅನುಭವವೇ ಈ ಆಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ. ಅಂಜನಾ ಪಾತ್ರದಲ್ಲಿ ತಮ್ಮ ನಟನೆಯಿಂದ ವೀಕ್ಷಕರ ಮನಗೆದ್ದಿದ್ದ ಪೂಜಾ ಅವರ ಈ ನಿರ್ಧಾರ ಅಭಿಮಾನಿಗಳಿಗೆ ತೀವ್ರ ಆಘಾತ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪೂಜಾ ಪರ ನಿಂತಿದ್ದು, "ಸ್ವಾಭಿಮಾನಕ್ಕಿಂತ ಯಾವುದೂ ದೊಡ್ಡದಲ್ಲ, ಮಾನಸಿಕ ನೆಮ್ಮದಿಗಾಗಿ ಹೊರಬಂದಿದ್ದು ಒಳ್ಳೆಯದೇ ಆಯಿತು" ಎಂದು ಧೈರ್ಯ ತುಂಬುತ್ತಿದ್ದಾರೆ. ನಟಿಯ ಈ ಗಂಭೀರ ಆರೋಪಕ್ಕೆ ಸೀರಿಯಲ್ ತಂಡ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಕಿರುತೆರೆ ವಲಯದಲ್ಲಿ ಮಾತ್ರ ಈ ವಿಚಾರ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದೆ.
"ಒಟ್ಟ್ನಲ್ಲಿ ಇಬ್ಬ್ರು ಅಂಜನಾ ಬದ್ಲಾಗಿದ್ದಾಯ್ತು, ಮೂರನೇ ಅವ್ರು ಯಾರ್ ಬರ್ತರೆ ನೋಡ್ಬೇಕು..."
ಕಿರುತೆರೆ ಪ್ರಿಯರಿಗೆ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಧಾರಿಗಳು ಬದಲಾಗುವುದು ಹೊಸತೇನಲ್ಲ. ಆದರೆ, 'ನಿನ್ನ ಜೊತೆ ನನ್ನ ಕಥೆ' ಸೀರಿಯಲ್ನಲ್ಲಿ 'ಅಂಜನಾ' ಎಂಬ ಒಂದೇ ಪಾತ್ರಕ್ಕೆ ಈಗಾಗಲೇ ಇಬ್ಬರು ನಟಿಯರು ಬಂದು ಹೋಗಿದ್ದಾರೆ. ಮೊದಲಿದ್ದ ನಟಿಯ ಬದಲಿಗೆ ಪೂಜಾ ಮಂಜುಳ ಬಂದಿದ್ದರು, ಈಗ ಅವರೂ ಕೂಡ ಅರ್ಧದಲ್ಲೇ ತಂಡವನ್ನು ತೊರೆದಿದ್ದಾರೆ.
ನೆಟ್ಟಿಗರು ಧಾರಾವಾಹಿ ತಂಡದ ಅಸ್ಥಿರತೆಯನ್ನು (Casting instability) ಕಂಡು ವ್ಯಂಗ್ಯವಾಡುತ್ತಿದ್ದಾರೆ.
"ಒಂದು ಪಾತ್ರಕ್ಕೆ ಪದೇಪದೇ ನಟಿಯರನ್ನು ಬದಲಾಯಿಸಿದರೆ ನಮಗೆ ಕಥೆಯ ಕನೆಕ್ಷನ್ ಸಿಗುವುದಾದರೂ ಹೇಗೆ? ಈಗ ಮೂರನೇ ಅಂಜನಾ ಆಗಿ ಯಾರು ಬರ್ತಾರೋ ನೋಡಬೇಕು!" ಎಂದು ವೀಕ್ಷಕರು ಸೀರಿಯಲ್ ತಂಡದ ಕಾಲೆಳೆಯುತ್ತಿದ್ದಾರೆ. ಇದು ಪ್ರೇಕ್ಷಕರಿಗೆ ಕಥೆಗಿಂತ ಪಾತ್ರ ಬದಲಾವಣೆಯೇ ದೊಡ್ಡ ತಲೆನೋವಾಗಿದೆ ಎಂಬುದನ್ನು ತೋರಿಸುತ್ತದೆ.
ಒಂದೆಡೆ ಪೂಜಾ ಮಂಜುಳಾ ಅವರು ತಂಡದ ವಿರುದ್ಧ 'ವಿಷಕಾರಿ ವಾತಾವರಣ' (Toxic environment) ಎಂದು ಗಂಭೀರ ಆರೋಪ ಮಾಡಿ ಭಾವನಾತ್ಮಕ ಬೆಂಬಲ ನಿರೀಕ್ಷಿಸಿದ್ದರೆ, ವೀಕ್ಷಕರು ಮಾತ್ರ ವಾಸ್ತವಿಕವಾಗಿ ಯೋಚಿಸುತ್ತಿದ್ದಾರೆ.
ಒಂದು ವರ್ಗದ ಪ್ರೇಕ್ಷಕರಿಗೆ "ಧಾರಾವಾಹಿಯಲ್ಲಿ ಪದೇಪದೇ ಕಲಾವಿದರು ಬದಲಾಗುತ್ತಿರುವುದು" ಬೇಸರ ತರಿಸಿದ್ದರೆ, ಮತ್ತೊಂದು ವರ್ಗಕ್ಕೆ "ಪೂಜಾ ಅವರ ನಟನೆ ಇಷ್ಟವಾಗದ ಕಾರಣ ಅವರು ಹೊರನಡೆದಿದ್ದೇ ಸರಿ" ಎಂಬ ಭಾವನೆ ಮೂಡಿದೆ. ಒಟ್ಟಿನಲ್ಲಿ, ಪೂಜಾ ಅವರ ಈ ನಿರ್ಗಮನ ಕಿರುತೆರೆ ವಲಯದಲ್ಲಿ ಕೇವಲ ವಿವಾದ ಮಾತ್ರವಲ್ಲದೆ, ಅವರ ನಟನಾ ಸಾಮರ್ಥ್ಯ ಮತ್ತು ಸೀರಿಯಲ್ನ ಭವಿಷ್ಯದ ಮೇಲೂ ದೊಡ್ಡ ಚರ್ಚೆಗೆ ಕಾರಣವಾಗಿದೆ.