ಕಳೆದ ಅಕ್ಟೋಬರ್ ನಲ್ಲಿ ರಜನಿ ಅಭಿನಯದ 'ದರ್ಬಾರ್'' ಶೂಟಿಂಗ್ ಮುಗೀತು. ಕೂಡಲೇ ಅರವತ್ತೊಂಬತ್ತರ ಹರೆಯದ ಈ ನಟ ಹೊರಟು ನಿಂತದ್ದು ಹಿಮಾಲಯಕ್ಕೆ. ಇದೇನು ಹೊಸತಲ್ಲ. ಹಲವಾರು ವರ್ಷಗಳಿಂದ ತಲೈವಾ ಪಾಲಿಸಿಕೊಂಡು ಬರುತ್ತಿರುವ ನಿಯಮ ಇದು. ಪ್ರತೀ ಸಿನಿಮಾ ಶೂಟಿಂಗ್ ಮುಗಿದಾದ ಮೇಲೆ ಒಮ್ಮೆ ಹಿಮಾಲಯಕ್ಕೆ ಹೋಗಿ ಬರದಿದ್ದರೆ ಅವರಿಗೆ ನೆಮ್ಮದಿ ಇರೋದಿಲ್ಲ.

'ಪ್ರತೀ ಸಿನಿಮಾದ ಶೂಟಿಂಗ್ ಬಳಿಕ ನಾನು ಹಿಮಾಲಯಕ್ಕೆ ಹೋಗುತ್ತೇನೆ. ಮೊದಲೆಲ್ಲ ಒಂಟಿಯಾಗಿ ಹೋಗ್ತಿದೆ. ಮೊನ್ನೆ ಮಗಳು ಜೊತೆಗಿದ್ದಳು. ಒಂಟಿಯಾಗಿ ಹೋದಾಗ ಹಿಮಾಲಯ ತಪ್ಪಲಿನ ಹಳ್ಳಿಗಳ ಸುತ್ತಾಡುತ್ತೇನೆ. ಈ ಸುತ್ತಾಟವೇ ಧ್ಯಾನದಂತಿರುತ್ತದೆ. ಹಿಮಾಲಯದ ಗುಹೆಗಳಲ್ಲಿ ಕೂತು ಕಣ್ಮುಚ್ಚಿದರೆ ನಾನು ನಾನಾಗೋದಿಲ್ಲ' ಇದು ತಲೈವಾ ನುಡಿ. ಈ ಸೂಪರ್ ಸ್ಟಾರ್ ಹಿಮಾಲಯಕ್ಕೆ ಹೋದರೆ ಬರಿಗಾಲಲ್ಲಿ ಓಡಾಡುತ್ತಾರೆ. ಲಕ್ಸುರಿ ಅನಿಸುವ ಯಾವ ವಸ್ತುಗಳೂ ಅವರ ಬಳಿ ಇರೋದಿಲ್ಲ. ಬಹಳ ಸರಳವಾಗಿ ಅಲ್ಲಿ ದಿನ ಕಳೆಯುತ್ತಾರೆ. ಮನಸ್ಸಿಗೆ ತೃಪ್ತಿಯಾಗುವಷ್ಟು ದಿನ ಅಲ್ಲಿದ್ದು ಮರಳುತ್ತಾರೆ.

ಸಂಭಾವನೆಯಲ್ಲಿ ರಜನೀಕಾಂತ್ ಹಿಂದಿಕ್ಕಿದ ವಿಜಯ್

ರಜನೀಕಾಂತ್ಗೆ ಈಗ ಅರವತ್ತೊಂಬತ್ತರ ಹರೆಯ. ಮೊನ್ನೆ ದರ್ಬಾರ್ ನಲ್ಲಿ ರಜನಿ ಅಬ್ಬರಿಸಿದ ರೀತಿ ನೋಡಿದರೆ ಅವರಿಗೆ ಎಪ್ಪತ್ತು ಸಮೀಪಿಸಿತು ಅನ್ನೋದನ್ನು ನಂಬೋದು ಕಷ್ಟ. ಅವರ ಈ ಚೈತನ್ಯದ ಹಿಂದಿರೋದು ಹಿಮಾಲಯದ ಆ ನಿಗೂಢ ವ್ಯಕ್ತಿಯಾ ಅನ್ನೋದು ಪ್ರಶ್ನೆ.

ಹಿಮಾಲಯದ ಆ ನಿಗೂಢ ಸಂತ
ಇವರು ಮಹಾವತಾರ ಬಾಬಾಜಿ. ಸಾವಿರಾರು ವರ್ಷಗಳಿಂದ ಹಿಮಾಲಯದಲ್ಲಿ ಇರುವ ನಿಗೂಢ ಸಂತ. ಪರಮಹಂಸ ಯೋಗಾನಂದರ ಮಹಾಗುರು ಇವರು. ಬಾಬಾಜಿ ಅವರ ಬಗ್ಗೆ ಚರಿತ್ರೆಯಲ್ಲಿ ಏನೂ ದಾಖಲೆ ಸಿಗೋದಿಲ್ಲ. ಆದರೆ ಆಧ್ಯಾತ್ಮದ ಹುಡುಕಾಟದಲ್ಲಿರುವ ಸಾಧಕರಿಗೆ ಇವರು ಸ್ಪೂರ್ತಿ ನೀಡುತ್ತಲೇ ಇರುವ ಚೈತನ್ಯ. ಯೋಗಿಗಳ ಪರಂಪರೆಯಲ್ಲಿ ಸದಾ ಮರೆಯದ ಹೆಸರು. ಮಹಾವತಾರ ಬಾಬಾಜಿ ಬಗ್ಗೆ ಪರಮಹಂಸ ಯೋಗಾನಂದರು ಬರೆದ 'ಅಟೋಬಯೋಗ್ರಫಿ ಆಫ್ ಎ ಯೋಗಿ' ಕೃತಿಯಲ್ಲಿ ಮಹಾವತಾರ ಬಾಬಾಜಿಯ ಬಗ್ಗೆ ಉಲ್ಲೇಖ ಇದೆ. ಈ ಚೈತನ್ಯ ಇಂದಿಗೂ ಭೂಮಿಯ ಮೇಲೆ ಕೆಲವೇ ಕೆಲವು ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂಬ ಮಾತಿದೆ. ಹಾಗೆ ಬಾಬಾಜಿ ಕೃಪೆಗೆ ಒಳಗಾದವರಲ್ಲಿ ರಜನಿಕಾಂತ್ ಅವರೂ ಒಬ್ಬರು. ಹದಿನೆಂಟು ವರ್ಷದ ಹಿಂದೆ ರಜನಿ 'ಬಾಬಾ' ಎಂಬ ಹೆಸರಿನ ಸಿನಿಮಾ ಮಾಡಿದರು. ಈ ಸಿನಿಮಾದ ಕತೆ, ನಿರ್ಮಾಣ ಎಲ್ಲವೂ ರಜನೀಕಾಂತ್ ಅವರದೇ. ನಟಿಸಿದ್ದೂ ಅವರೇ. 'ಬಾಬಾ' ಸಿನಿಮಾ ಮಹಾವತಾರ ಬಾಬಾಜಿ ಅವರಿಗೆ ಸಂಬಂಧಿಸಿದ್ದು. ಈ ಸಿನಿಮಾದಲ್ಲಿ ತಮಗೂ ಬಾಬಾಜಿಯ ಅನುಗ್ರಹ ಸಿಕ್ಕಿದ್ದು ಹೇಗೆ ಅನ್ನೋದನ್ನು ರಜನೀಕಾಂತ್ ಹೇಳಿದ್ದಾರೆ.

ಅಭಿಷೇಕ್ ಚಿತ್ರದಲ್ಲಿ ಭಿಕ್ಷುಕನ ಪಾತ್ರ ಮಾಡಲು ರಜನಿಕಾಂತ್ ಸೈ!...

ಬಾಬಾಜಿ ಬಗ್ಗೆ ರಜನಿಗೆ ತಿಳಿದದ್ದು ಹೇಗೆ?
ಬಹಳ ಹಿಂದೆ ರಜನೀಕಾಂತ್ ಅಮೆರಿಕಾಕ್ಕೆ ಹೋಗಿದ್ದಾಗ ಅಲ್ಲೊಬ್ಬ ಸ್ವಾಮೀಜಿ ಪರಮಹಂಸ ಯೋಗಾನಂದರ 'ಲೈಫ್ ಆಫ್ ಎ ಯೋಗಿ' ಪುಸ್ತಕ ಓದಲು ಕೊಡುತ್ತಾರೆ. ಎಷ್ಟೋ ವರ್ಷಗಳ ಕಾಲ ಈ ಪುಸ್ತಕ ರಜನಿ ಸಂಗ್ರಹದಲ್ಲಿರುತ್ತದೆ. ಆದರೆ ಅವರು ಓದೋದಿಲ್ಲ. ಒಮ್ಮೆ ತೀವ್ರವಾಗಿ ಈ ಪುಸ್ತಕ ಓದಬೇಕು ಅಂತನಿಸಿ ಓದಲಾರಂಭಿಸುತ್ತಾರೆ. ಇದು ಅವರ ಬದುಕನ್ನೇ ಬದಲಿಸಿದ ಕೃತಿ. ಆ ಬಳಿಕದಿಂದಲೇ ರಜನಿ ಹಿಮಾಲಯಕ್ಕೆ ಹೋಗಲಾರಂಭಿಸಿದ್ದು. ಅವರಿಗೆ ಧ್ಯಾನದಲ್ಲಿ ಬಾಬಾಜಿಯ ದರ್ಶನವಾಗಿದ್ದು. ಹಿಮಾಲಯಕ್ಕೆ ಹೋಗಲೂ ತನಗೆ ಬಾಬಾಜಿಯೇ ಪ್ರೇರಣೆ ಅನ್ನುತ್ತಾರೆ ತಲೈವಾ. ಆ ನಿಗೂಢ ವ್ಯಕ್ತಿ ಈ ಸೂಪರ್ ಸ್ಟಾರ್ ಗೆ ಧ್ಯಾನದಲ್ಲಿ ಕಾಣಿಸಿಕೊಂಡು ಅನುಗ್ರಹಿಸುತ್ತಾರೆ ಎಂಬ ಮಾತೂ ಇದೆ.

ಹಿಮಾಲಯದ ಆ ಅನುಭವ, ಅನಿರ್ವಚನೀಯ ಆನಂದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ, ಅಲ್ಲಿಂದ ಬಂದ ಕೆಲವು ದಿನ ನಾನು ನಾನಾಗಿರುವುದಿಲ್ಲ. ಧ್ಯಾನಸ್ಥ ಸ್ಥಿತಿ ಮನಸ್ಸನ್ನು ಆವರಿಸಿರುತ್ತದೆ ಅನ್ನುತ್ತಾರೆ ರಜನಿ. ಈ ಅನುಭವದ ಬಳಿಕ ಅವರ ಬದುಕಿನ ರೀತಿಯೇ ಬದಲಾಗಿದೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಬಹಳ ಸರಳವಾಗಿ ಋಷಿಯಂತೆ ಬದುಕುತ್ತಿದ್ದಾರೆ.