ಹಾಲಿವುಡ್‌ನ 'ಸ್ಟ್ರೀಟ್ ಫೈಟರ್' ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ವಿದ್ಯುತ್ ಜಮ್ವಾಲ್ 15 ನಿಮಿಷ ಉಸಿರು ಬಿಗಿಹಿಡಿದು, 20 ನಿಮಿಷ ಕಣ್ಣು ಮುಚ್ಚದೇ ನಿಂತು ಅಚ್ಚರಿ ಮೂಡಿಸಿದ್ದಾರೆ.
ಬಾಲಿವುಡ್‌ನ ಆಕ್ಷನ್ ಸ್ಟಾರ್ ವಿದ್ಯುತ್ ಜಮ್ವಾಲ್ (Vidyut Jammwal) ತಮ್ಮ ಸಾಹಸ ದೃಶ್ಯಗಳು ಹಾಗೂ ಫಿಟ್‌ನೆಸ್‌ಗೆ ಹೆಸರುವಾಸಿ. ಆದರೆ ಈ ಬಾರಿ ಅವರು ವೇದಿಕೆಯೊಂದರ ಮೇಲೆ ಮಾಡಿದ ಸಾಹಸ ಅಲ್ಲಿದ್ದ ಜನರನ್ನು ಹಾಗೂ ಅಭಿಮಾನಿಗಳಿಗೆ ದಿಗ್ಭ್ರಮೆ ಮೂಡಿಸಿದ್ದಾರೆ. ತಮ್ಮ ಹಾಲಿವುಡ್ ಪಾದಾರ್ಪಣೆಯ (Debut) ಬಹುನಿರೀಕ್ಷಿತ 'ಸ್ಟ್ರೀಟ್ ಫೈಟರ್' (Street Fighter) ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿದ್ಯುತ್ ಜಮ್ವಾಲ್ ಸುಮಾರು 15 ನಿಮಿಷಗಳ ಕಾಲ ನಿರಂತರವಾಗಿ ಉಸಿರು ಬಿಗಿಹಿಡಿದು, 20 ನಿಮಿಷಗಳ ಕಾಲ ಕಣ್ಣು ರೆಪ್ಪೆ ಮುಚ್ಚದೇ ನಿಂತು ಎಲ್ಲರನ್ನೂ ಬೆರಗುಗೊಳಿಸಿದ್ದಾರೆ.
ಈ ಇವೆಂಟ್‌ಗೆ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳು ಹಾಗೂ ಪ್ರೇಕ್ಷಕರು ಆರಂಭದಲ್ಲಿ ನಟ ಯಾವುದೋ ಆಳವಾದ ಧ್ಯಾನದಲ್ಲಿದ್ದಾರೆ (Meditation) ಎಂದು ಭಾವಿಸಿದ್ದರು. ಆದರೆ ಸಮಯ ಕಳೆದಂತೆ ಪ್ರತಿಯೊಬ್ಬರ ಕಣ್ಣುಗಳು ಅವರ ಮೇಲೆಯೇ ನೆಟ್ಟವು. ಸುಮಾರು 15 ನಿಮಿಷಗಳ ನಂತರ ವಿದ್ಯುತ್ ಅವರ ಕಾಲುಗಳಲ್ಲಿ ಸಣ್ಣಗೆ ಕಂಪನ (Trembling) ಕಾಣಿಸಿಕೊಂಡಿತು ಮತ್ತು ಅವರ ಕಣ್ಣುಗಳಿಂದ ನೀರು ಬರಲು ಪ್ರಾರಂಭಿಸಿತು. ಆಗಷ್ಟೇ ಅಲ್ಲಿದ್ದವರಿಗೆ ನಟ ಇಷ್ಟೊಂದು ಸುದೀರ್ಘ ಸಮಯದಿಂದ ಉಸಿರು ಬಿಗಿಹಿಡಿದು ನಿಂತಿದ್ದರು ಎಂದು ಗೊತ್ತಾಗಿದೆ. ಇದನ್ನು ಕಂಡು ಎಲ್ಲರೂ ತೀವ್ರ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಯೋಗ ಹಾಗೂ ಸಮರಕಲೆಗಳಲ್ಲಿ (Martial Arts) ಅಪಾರ ಪಳಗಿರುವ ವಿದ್ಯುತ್ ಅವರಿಗೆ ಈ ಕಠಿಣ ಸಾಧನೆ ಸಾಧ್ಯವಾಗಿದೆ. ಇದೇ ಕಾರಣಕ್ಕೆ ಅವರಿಗೆ ಈ ಚಿತ್ರದಲ್ಲಿ 'ಧಲ್ಸಿಮ್' (Dhalsim) ಎಂಬ ಪ್ರಮುಖ ಪಾತ್ರ ಸಿಕ್ಕಿದೆ.
ಬಾಲ್ಯದಲ್ಲೇ ಕ್ರೀಡೆಯತ್ತ ಗಮನ; ಹಾಲಿವುಡ್-ಬಾಲಿವುಡ್ ವ್ಯತ್ಯಾಸ ಹಂಚಿಕೊಂಡ ನಟ
ವೇದಿಕೆಯಲ್ಲಿ ತಮ್ಮ ಪಾತ್ರ ಹಾಗೂ ಹಾಲಿವುಡ್ ಪಯಣದ ಬಗ್ಗೆ ಮಾತನಾಡಿದ ವಿದ್ಯುತ್, ಬಾಲಕನಾಗಿದ್ದಾಗ ನಾನು ಎಂದಿಗೂ ವೀಡಿಯೊ ಗೇಮ್‌ಗಳನ್ನು ಆಡಲಿಲ್ಲ, ಏಕೆಂದರೆ ನನ್ನ ಗಮನವೆಲ್ಲಾ ಕ್ರೀಡೆಗಳ ಮೇಲಿತ್ತು. ಬಹುಶಃ ಅದೇ ಶ್ರಮ ಇಂದು ನನ್ನನ್ನು 'ಸ್ಟ್ರೀಟ್ ಫೈಟರ್' ಸಿನಿಮಾದಲ್ಲಿ ಅಭಿನಯಿಸುವಂತೆ ಮಾಡಿದೆ. ಈ ಪಾತ್ರಕ್ಕಾಗಿ ನಾನು ಬಹಳ ಪರಿಶ್ರಮಪಟ್ಟಿದ್ದೇನೆ ಎಂದರು. ಈ ಚಿತ್ರದಲ್ಲಿ ಪಾಪ್ ಸ್ಟಾರ್ 50 ಸೆಂಟ್ ಹಾಗೂ ಡಬ್ಲ್ಯೂಡಬ್ಲ್ಯೂಇ (WWE) ರೆಸ್ಲರ್‌ಗಳ ಜೊತೆ ನಟಿಸುವ ಅವಕಾಶ ಸಿಕ್ಕಿದ್ದನ್ನು ಅವರು ಸ್ಮರಿಸಿದರು.
ಹಾಲಿವುಡ್ ಮತ್ತು ಬಾಲಿವುಡ್‌ನ ಕೆಲಸದ ಸಂಸ್ಕೃತಿಯ ನಡುವಿನ ವ್ಯತ್ಯಾಸವನ್ನು ಹಂಚಿಕೊಂಡ ಅವರು, ಹಾಲಿವುಡ್‌ನಲ್ಲಿ ಸಮಯದ ಪಾಲನೆಗೆ ಅತ್ಯಂತ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಎಷ್ಟೇ ದೊಡ್ಡ ಸ್ಟಾರ್ ಆಗಿರಲಿ, ಸೆಟ್‌ಗೆ ಸಮಯಕ್ಕೆ ಸರಿಯಾಗಿ ತಲುಪುತ್ತಾರೆ ಹಾಗೂ ಸೆಟ್‌ನಲ್ಲಿರುವ 300ಕ್ಕೂ ಹೆಚ್ಚು ಸಿಬ್ಬಂದಿ ಅದೇ ಶಿಸ್ತನ್ನು ಪಾಲಿಸುತ್ತಾರೆ. ಯಾರಾದರೂ ಒಂದು ನಿಮಿಷ ತಡವಾಗಿ ಬಂದರೂ, 'ನೀವು ಆಸ್ಪತ್ರೆಯಲ್ಲಿದ್ದೀರಾ ಹೇಗೆ?' ಎಂದು ಪ್ರೊಡಕ್ಷನ್ ಕಡೆಯಿಂದ ಕರೆ ಬರುತ್ತದೆ" ಎಂದು ತಮಾಷೆಯಾಗಿ ಹೇಳಿದರು.
ಬಾಲಿವುಡ್ ಸ್ಟಾರ್ ಜೊತೆ ಫೈಟ್ ಪ್ರಶ್ನೆಗೆ 'ಶಟ್ ಅಪ್' ಅಂದಿದ್ದೇಕೆ?
ಕಾರ್ಯಕ್ರಮದ ವೇಳೆ ವರದಿಗಾರರೊಬ್ಬರು 'ಬಾಲಿವುಡ್‌ನ ಯಾವ ನಟನ ಜೊತೆ ಫೈಟ್ ಮಾಡಲು ಬಯಸುತ್ತೀರಿ?' ಎಂದು ಪ್ರಶ್ನೆ ಕೇಳಲು ಮುಂದಾದರು. ಪ್ರಶ್ನೆ ಪೂರ್ಣಗೊಳ್ಳುವ ಮುನ್ನವೇ ಮುಗುಳ್ನಗುತ್ತಾ ತಡೆದ ವಿದ್ಯುತ್, "ಹೋಲಿಕೆ ಮಾಡುವ ಇಂತಹ ಪ್ರಶ್ನೆಗಳನ್ನು ಯಾವಾಗ ನಿಲ್ಲಿಸುತ್ತೀರಿ? ಹಾಲಿವುಡ್‌ನಲ್ಲಿ ನಿಮ್ಮ ಸ್ನೇಹಿತ ಸಾಧಿಸಿದ ಯಶಸ್ಸಿನ ಬಗ್ಗೆ ಪ್ರಶ್ನಿಸಿ ಮತ್ತು ಅವರು ಇದನ್ನು ಹೇಗೆ ಸಾಧಿಸಿದರು ಎಂದು ಕೇಳಿ" ಎಂದರು. ಮುಂದುವರಿದು ಹಾಸ್ಯದ ಧಾಟಿಯಲ್ಲಿ, "ಶಟ್ ಅಪ್! ಸ್ನೇಹಿತನಂತಹ ಪ್ರಶ್ನೆ ಕೇಳಿ" ಎಂದು ತಮಾಷೆ ಮಾಡಿದರು. ನಂತರ, ವರದಿಗಾರ ಮರಳಿ ಯಾರ ಜೊತೆ ಫೈಟ್ ಮಾಡಲು ಇಷ್ಟಪಡುತ್ತೀರಿ ಎಂದು ಕೇಳಿದಾಗ, "ನೀವು ನನ್ನನ್ನು ಯಾರ ವಿರುದ್ಧ ನಿಲ್ಲಿಸಲು ಬಯಸುತ್ತೀರೋ ಅವರ ಹೆಸರನ್ನು ನನಗೆ ಮೆಸೇಜ್ ಮಾಡಿ, ನಾನು ಯಾರ ಜೊತೆಗಾದರೂ ಫೈಟ್ ಮಾಡಲು ಸಿದ್ಧ" ಎಂದು ಸವಾಲಿನ ಉತ್ತರ ನೀಡಿದರು.
ಅಕ್ಟೋಬರ್ 16ಕ್ಕೆ ಬಿಡುಗಡೆ
ವಿದ್ಯುತ್ ಜಮ್ವಾಲ್ ಅಭಿನಯದ ಈ ಬಹುನಿರೀಕ್ಷಿತ 'ಸ್ಟ್ರೀಟ್ ಫೈಟರ್' ಸಿನಿಮಾವು ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನೋವಾ ಸೆಂಪಿನಿಯೋ, ಆಂಡ್ರ್ಯೂ ಕೋಜಿ, ಕಲಿನಾ ಲಿಯಾಂಗ್, ಡಬ್ಲ್ಯೂಡಬ್ಲ್ಯೂಇ ದೈತ್ಯ ಸ್ಟಾರ್ ರೋಮನ್ ರೇನ್ಸ್ (ಜೋ ಅನೋಆಯ್), ಡೇವಿಡ್ ಡೆಸ್ಟ್‌ಮಾಲ್ಚಿಯನ್, ಕೋಡಿ ರೋಡ್ಸ್, ಎರಿಕ್ ಆಂಡ್ರೆ, ಆಂಡ್ರ್ಯೂ ಶುಲ್ಜ್, 50 ಸೆಂಟ್ ಮತ್ತು ಜೇಸನ್ ಮೊಮೋವಾ ಮುಂತಾದ ಹಾಲಿವುಡ್‌ನ ತಾರಾಗಣವೇ ಜೊತೆಯಾಗಿ ಅಭಿನಯಿಸಿದೆ.
