72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಇದರೊಂದಿಗೆ 4 ಕನ್ನಡ ಹಾಗೂ 1 ತುಳು ಸಿನಿಮಾಗಳಿಗೂ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. 5 ದಶಕಗಳ ಕಾಲ ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಅವರು ಸಲ್ಲಿಸಿದ ಸೇವೆಗೆ ಈ ಅತ್ಯುನ್ನತ ಗೌರವ ಒಲಿದಿದೆ.

ಬೆಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಂಗಳವಾರ ಅಂದರೆ ಸೆ.22ರಂದು ಗುಜರಾತ್‌ನ ಕೆವಾಡಿಯಾದ ಏಕತಾ ನಗರದಲ್ಲಿ ಮಂಗಳವಾರ ನಡೆಯಲಿದೆ. ಈ ವೇಳೆ ಕನ್ನಡದ ಹಿರಿಯ ನಟ ಅನಂತ್‌ ನಾಗ್‌ ಅವರಿಗೆ ಚಿತ್ರರಂಗದ ಮೇರು ಗೌರವವಾದ ದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಉಳಿದಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗೆದ್ದ ಕನ್ನಡದ 4, ತುಳು 1 ಸಿನಿಮಾಗೆ ಇದೇ ವೇಳೆ ಗೌರವಿಸಲಾಗುತ್ತದೆ. ಭಾರತೀಯ ಚಿತ್ರರಂಗದಲ್ಲಿ ಸುದೀರ್ಘ 5 ದಶಕ ಸಲ್ಲಿಸಿದ ಸೇವೆಗಾಗಿ ಕನ್ನಡದ ಮೇರು ನಟ ಅನಂತ್‌ ನಾಗ್‌ ಅವರಿಗೆ ಇತ್ತೀಚೆಗಷ್ಟೇ 2024ನೇ ಸಾಲಿನ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿತ್ತು.

ಚಿತ್ರರಂಗದಲ್ಲಿ ಅವರ ಅನುಪಮ ಸೇವೆ ಗಮನಿಸಿ ಕಳೆದ ವರ್ಷವಷ್ಟೇ ಕೇಂದ್ರ ಸರ್ಕಾರ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿತ್ತು. ಅದರ ಬೆನ್ನಲ್ಲೇ ಭಾರತೀಯ ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಸೇವೆಗಾಗಿ ನೀಡುವ ಅತ್ಯುನ್ನತ ಗೌರವವೂ ಹಿರಿಯ ನಟನನ್ನು ಹುಡುಕಿಕೊಂಡು ಬಂದಿದೆ. 5 ದಶಕಗಳಿಗೂ ಹೆಚ್ಚಿನ ತಮ್ಮ ಸುದೀರ್ಘ ಅಭಿನಯ ಪಯಣದಲ್ಲಿ ಅನಂತ್ ನಾಗ್ 7 ಭಾಷೆಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಅವರು, ‘ಮಿಂಚಿನ ಓಟ’, ‘ಹಂಸಗೀತೆ’, ‘ಅಂಕುರ್’ ಮತ್ತು ‘ಮಂಥನ್’ ಮುಂತಾದ ಸಾರ್ವಕಾಲಿಕ ಯಶಸ್ವಿ ಹಾಗೂ ಕಲಾತ್ಮಕ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಕನ್ನಡಕ್ಕೆ 4, ತುಳುಗೆ 1 ಗೌರವ:

ಕನ್ನಡದ ಮಿಥ್ಯ ಸಿನಿಮಾ ಅತ್ಯುತ್ತಮ ಚಲನಚಿತ್ರ ಎಂದು ಘೋಷಣೆ ಆಗಿತ್ತು. ಇದರಲ್ಲಿ ಅಭಿನಯಿಸಿದ್ದ ಅತೀಶ್ ಶೆಟ್ಟಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಗೆದ್ದಿದ್ದಾರೆ. ಜತೆಗೆ ಈ ಚಿತ್ರದ ಪೋಷಕ ನಟಿ ರೂಪಶ್ರೀ ವರ್ಕಾಡಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿ ಗೆದ್ದಿದ್ದರು. ಜತೆಗೆ ಕೆಂಚನೂರು ಪ್ರದೀಪ್‌ ಅವರ ಪುಸ್ತಕಕ್ಕೆ ಅತ್ಯುತ್ತಮ ಸಿನಿಮಾ ಪುಸ್ತಕ ವಿಭಾಗದ ಪ್ರಶಸ್ತಿ ಲಭಿಸಿತ್ತು. ಉಳಿದಂತೆ ಕರಾವಳಿ ದೈವರಾಧನೆ ಕಥೆ ಹೊಂದಿರುವ, ಶಿವಧ್ವಜ್ ಅವರ ಇಂಬು ಅತ್ಯುತ್ತಮ ತುಳು ಸಿನಿಮಾ ಪ್ರಶಸ್ತಿ ಗೆದ್ದಿದೆ.

ರಂಗಭೂಮಿಯ ಗರಡಿಯಲ್ಲಿ ಅರಳಿದ ಪ್ರತಿಭೆ ಅನಂತ್

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯ ಕೊಂಕಣಿ ಕುಟುಂಬದಲ್ಲಿ 1948ರ ಸೆಪ್ಟೆಂಬರ್ 4ರಂದು ಜನಿಸಿದ ಅನಂತ್ ನಾಗರಕಟ್ಟೆ, ಮುಂಬೈನಲ್ಲಿ ಶಿಕ್ಷಣ ಮುಗಿಸಿ ರಂಗಭೂಮಿಯತ್ತ ಆಕರ್ಷಿತರಾದರು. ಖ್ಯಾತ ರಂಗಕರ್ಮಿ ಸತ್ಯದೇವ್ ದುಬೆ ಗರಡಿಯಲ್ಲಿ ಪಳಗಿದ ಅನಂತ್, ಕೊಂಕಣಿ, ಮರಾಠಿ ಹಾಗೂ ಹಿಂದಿ ನಾಟಕಗಳಲ್ಲಿ ಮಿಂಚಿದರು. 1974ರಲ್ಲಿ ಶ್ಯಾಮ್ ಬೆನೆಗಲ್ ಅವರ ಪ್ರಸಿದ್ಧ ‘ಅಂಕುರ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ‘ನಿಶಾಂತ್’, ‘ಮಂಥನ್’, ‘ಭೂಮಿಕಾ’ ಮತ್ತು ‘ಕಲಿಯುಗ್’ ಮುಂತಾದ ಮೇರು ಕೃತಿಗಳಲ್ಲಿ ಅಮೋಘ ಅಭಿನಯ ನೀಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು.

ಕನ್ನಡ ಬೆಳ್ಳಿಪರದೆಯ ‘ಕ್ಲಾಸ್’ ನಾಯಕ

ಪಿ.ವಿ. ನಂಜರಾಜ ಅರಸ್ ಅವರ ‘ಸಂಕಲ್ಪ’ (1973) ಮೂಲಕ ಕನ್ನಡ ಪ್ರವೇಶಿಸಿದ ಅನಂತನಾಗ್, ನಂತರ ‘ಬಯಲು ದಾರಿ’, ‘ಹಂಸಗೀತೆ’ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದರು. ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ನಾ ನಿನ್ನ ಬಿಡಲಾರೆ’ ಮುಂತಾದ ವಿಭಿನ್ನ ಜಾನರ್‌ನ ಚಿತ್ರಗಳ ಮೂಲಕ . ‘ಚಾಕೋಲೇಟ್ ಹೀರೋ’ ಪಟ್ಟವನ್ನು ಕಳಚಿಹಾಕಿ ‘ಮಿಂಚಿನ ಓಟ’, ‘ಆಕ್ಸಿಡೆಂಟ್’, ‘ಬರ’ ಚಿತ್ರಗಳಲ್ಲಿ ಗಂಭೀರ ಪಾತ್ರಗಳನ್ನು ನಿರ್ವಹಿಸಿ ತಮ್ಮ ನಟನಾ ಸಾಮರ್ಥ್ಯವನ್ನು ಪರಿಚಯಿಸಿದರು. ‘ಬೆಳದಿಂಗಳ ಬಾಲೆ’ ಚಿತ್ರದ ರೇವಂತ್ ಪಾತ್ರವಂತೂ ಇಂದಿಗೂ ಕ್ಲಾಸಿಕ್.

ಹಾಸ್ಯ ಮತ್ತು ವಿಡಂಬನೆಯ ರಾಜಕುಮಾರ

ಅನಂತನಾಗ್ ಅವರ ಕಾಮಿಡಿ ಟೈಮಿಂಗ್ ಭಾರತೀಯ ಚಿತ್ರರಂಗದಲ್ಲೇ ವಿಶಿಷ್ಟ. ಮುಖದಲ್ಲಿ ಗಂಭೀರತೆ ಕಾಪಾಡಿಕೊಂಡೇ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುವ ಅವರ ಶೈಲಿ ಅನನ್ಯ. ‘ಗೌರಿ ಗಣೇಶ’, ‘ಗಣೇಶನ ಮದುವೆ’, ‘ಉಂಡೂಹೋದ ಕೊಂಡೂಹೋದ’ ‘ಉದ್ಭವ’, ‘ಯಾರಿಗೂ ಹೇಳ್ಬೇಡಿ’, ‘ಗೋಲ್‌ಮಾಲ್ ರಾಧಾಕೃಷ್ಣ’ ಚಿತ್ರಗಳು ಸಾರ್ವಕಾಲಿಕ ಜನಪ್ರಿಯ. ರಾಜಕೀಯ ಹಾಗೂ ಸಾಮಾಜಿಕ ಬೂಟಾಟಿಕೆಯನ್ನು ವಿಡಂಬಿಸುವ ಪಾತ್ರಗಳಿಗೆ ಅವರಷ್ಟು ಜೀವ ತುಂಬಿದವರು ವಿರಳ.

ಶಂಕರ್ - ಅನಂತ್‌ ಜೋಡಿಯ ಬೆರಗು

ಸಹೋದರ ಶಂಕರ್ ನಾಗ್ ಅವರೊಂದಿಗೆ ಅನಂತನಾಗ್ ಕಟ್ಟಿದ ಸಿನಿಕನಸುಗಳು ಕನ್ನಡ ಚಿತ್ರರಂಗದ ಸ್ವರ್ಣಯುಗ. ಆರ್.ಕೆ. ನಾರಾಯಣ್ ಅವರ ಕಥೆಗಳನ್ನು ಆಧರಿಸಿ ಶಂಕರ್ ನಾಗ್ ನಿರ್ದೇಶಿಸಿದ ರಾಷ್ಟ್ರಮಟ್ಟದ ಪ್ರಸಿದ್ಧ ಧಾರಾವಾಹಿ ‘ಮಾಲ್ಗುಡಿ ಡೇಸ್’ನಲ್ಲಿ ಅನಂತ್ ಅವರ ಪಾತ್ರಗಳು ಇಂದಿಗೂ ಹಸಿರಾಗಿವೆ.