ಲವ್ ವಿಷಯ ಮಾತನಾಡುವಾಗ ನಟಿ ವೈಷ್ಣವಿ ಗೌಡ ಎಡವಟ್ಟು ಮಾಡಿಕೊಂಡು ಪೇಚಿಗೆ ಸಿಲುಕಿದ್ದ ವಿಡಿಯೋ ಈಗ ವೈರಲ್ ಆಗ್ತಿದೆ. ಸುದೀಪ್ ಪ್ರಶ್ನೆಗೆ ನಟಿ ಕಕ್ಕಾಬಿಕ್ಕಿಯಾಗಿದ್ದೇಕೆ?
ಸೀತಾರಾಮ ಸೀತಾ ಉರ್ಫ್ ವೈಷ್ಣವಿ ಗೌಡ ಅವರು ಈಗ ಮದ್ವೆ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ಅವರು ಛತ್ತೀಸಗಢದ ಅನುಕೂಲ್ ಮಿಶ್ರಾ ಎನ್ನುವವರ ಜೊತೆ ಮದುವೆಯಾಗಿರುವ ನಟಿ, ಈಗ ಹೊಸದಾಗಿ ಮದ್ವೆಯಾಗಿರುವ ಕಾರಣ ಬಣ್ಣದ ಲೋಕದಿಂದ ಸ್ವಲ್ಪ ವಿರಾಮ ತೆಗೆದುಕೊಂಡರೂ ರೀಲ್ಸ್ಗೇನೂ ಕಡಿಮೆ ಇಲ್ಲ. ಆಗೀಗ ಸೋಷಿಯಲ್ ಮೀಡಿಯಾದಲ್ಲಿ ನಟಿ ಕಾಣಿಸಿಕೊಂಡು ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ನಟಿಯ ಹಳೆಯ ವಿಡಿಯೋ ಒಂದು ಮತ್ತೆ ವೈರಲ್ ಆಗಿದ್ದು, ಇದರಲ್ಲಿ ಕಿಚ್ಚ ಸುದೀಪ್ ಪ್ರಶ್ನೆಗೆ ನಟಿ ಕಕ್ಕಾಬಿಕ್ಕಿಯಾಗಿರೋದನ್ನು ನೋಡಬಹುದು.
ಅಷ್ಟಕ್ಕೂ ಇದು ಮದುವೆಗೂ ಮುನ್ನದ ವಿಡಿಯೋ ಆಗಿದೆ. ಬಿಗ್ಬಾಸ್ನಲ್ಲಿ ವೈಷ್ಣವಿ ಗೌಡ ಅವರೂ ಒಮ್ಮೆ ಸ್ಪರ್ಧಿಸಿದ್ದರು. ಆ ಸಮಯದ ವಿಡಿಯೋ ಇದಾಗಿದೆ. ಇದರಲ್ಲಿ ಆಗ ವೈಷ್ಣವಿ ಅವರ ಮದುವೆಯದ್ದೇ ಹಾಟ್ ಟಾಪಿಕ್ ಆಗಿತ್ತು. ನಟಿ ಯಾಕೆ ಇನ್ನೂ ಮದುವೆಯಾಗಿಲ್ಲ ಎಂದು ಕೇಳುವವರು ಹೆಚ್ಚುಮಂದಿ ಇದ್ದರು. ಅದಾಗಲೇ ನಟಿ ಅಗ್ನಿಸಾಕ್ಷಿಯ ಸನ್ನಿಧಿ ಮೂಲಕ ಫೇಮಸ್ ಆಗಿದ್ದರು. ಆ ಸಮಯದಲ್ಲಿ ಸುದೀಪ್ ಅವರು, ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದರು. ಅದು ಬಿಗ್ಬಾಸ್-8ರ ಹೊತ್ತಾಗಿತ್ತು. ಅದಾಗಲೇ ಕೋವಿಡ್ನಿಂದ ಲಾಕ್ಡೌನ್ ಎಲ್ಲಾ ನಡೆದ ಕಾರಣ, ಬಿಗ್ಬಾಸ್ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಸ್ಪರ್ಧಿಗಳು ಮನೆಗೆ ಹೋಗಿದ್ದರು. ಸುಮಾರು 43 ದಿನಗಳ ಗ್ಯಾಪ್ ಆಗಿತ್ತು. ಆ ಸಮಯದಲ್ಲಿ ವೈಷ್ಣವಿ ಅವರಿಗೆ ಮದುವೆ ಆಫರ್ಸ್ ಬಂದಿದ್ದವು.
ವಾಪಸ್ ಬಿಗ್ಬಾಸ್ಗೆ ಬಂದ ಮೇಲೆ ಇದನ್ನೇ ಸುದೀಪ್ ಕೇಳಿದ್ದರು. ‘43 ದಿನ ಬಿಗ್ಬಾಸ್ನಿಂದ ಹೊರಗಡೆ ಇದ್ರಿ, ಅಂದಾಜು ಎಷ್ಟು ಪ್ರಪೋಸಲ್ ಬಂದಿರಬಹುದು’ ಎಂದು ಕೇಳಿದ್ದರು. ಆಗ ವೈಷ್ಣವಿ, ‘200ರಿಂದ 300 ಬಂದಿರಬಹುದು ಎಂದಾಗ ಸುದೀಪ್ ಶಾಕ್ ಆದರು. ಅಷ್ಟೊಂದಾ? ಒಂದನ್ನೂ ಒಪ್ಪಲಿಲ್ವಾ ಎಂದು ಕೇಳಿದ್ರು. ಅದಕ್ಕೆ ವೈಷ್ಣವಿ, ಒಂದನ್ನೂ ನೋಡಬೇಕು ಅಂತಲೇ ಅನ್ನಿಸಲಿಲ್ಲ ಸಾರ್. ನಾನು ಯಾವಾಗಲೂ ಮನಸ್ಸಿನ ಮಾತು ಕೇಳುತ್ತೇನೆ. ಸೋ ಯಾವುದು ಕನೆಕ್ಟ್ ಆಗಲೇ ಇಲ್ಲ’ ಎಂದಿದ್ದರು. ಇನ್ನೂ ಸ್ಪಷ್ಟನೆ ಕೊಡಲು ಹೋಗಿ ಎಡವಟ್ಟು ಮಾಡಿಕೊಂಡರು, ಲವ್ ಆಗ್ಬೇಕು ಎಂದ್ರೆ ಕಣ್ಣಲ್ಲಿ ಕಣ್ಣಿಟ್ಟು ನೋಡಲೇಬೇಕೆಂದು ಇಲ್ಲ ಎನ್ನುತ್ತಲೇ ಏನೋ ಹೇಳಲು ಹೋದರು.
ಇನ್ನು ಹೇಳಿ-ಕೇಳಿ ಅವರು ಸುದೀಪ್. ಕೇಳಬೇಕೆ? ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕೆಂದು ಇಲ್ಲ ಅಂದ್ಮೇಲೆ ಇನ್ನೇನು ನೋಡ್ಬೇಕು ಲವ್ ಆಗಲು ಕೇಳಿದ್ರು, ಬಳಿಕ ತಾವೂ ಜೋರಾಗಿ ನಕ್ಕರು. ಇದನ್ನು ಕೇಳಿ ಅರೆಕ್ಷಣ ವೈಷ್ಣವಿ ಕೂಡ ಏನೂ ಹೇಳಲಾಗದೇ ಕಕ್ಕಾಬಿಕ್ಕಿಯಾಗಿಬಿಟ್ಟರು. ಅವರ ಬಾಯಿಯಿಂದ ಮಾತೇ ಹೊರಡಲಿಲ್ಲ. ಅದರ ವಿಡಿಯೋ ಇದೀಗ ಮತ್ತೆ ವೈರಲ್ ಆಗ್ತಿದೆ. ಬಿಗ್ಬಾಸ್ 12 ಶುರುವಾಗುವ ಬಗ್ಗೆ ಸುದ್ದಿ ಸಿಗುತ್ತಲೇ ಹಳೆಯ ವಿಡಿಯೋಗಳೆಲ್ಲಾ ಮತ್ತೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಮೇಲೆ ಬರುತ್ತಿದೆ.
