ಆರ್‌ ಕೇಶವಮೂರ್ತಿ

ನಿಮ್ಮ ಹಿನ್ನೆಲೆ ಏನು? ನೀವು ಚಿತ್ರರಂಗಕ್ಕೆ ಬಂದಿದ್ದು ಹೇಗೆ?

ಕೋಲಾರ ಜಿಲ್ಲೆಯ ಮಾಲೂರು ತಾಲೂಕು. ನಮ್ಮ ಭಾಗದಲ್ಲಿ ಸಿನಿಮಾಗಳ ಪ್ರಭಾವ ಹೆಚ್ಚು. ನನಗೂ ಸಿನಿಮಾ ಆಸಕ್ತಿ ಮೂಡಿದ್ದು ಇದರಿಂದಲೇ. ಆದರೆ, ನಾನು ಬಂದಿದ್ದು ಕನ್ನಡದ ಕಿರುತೆರೆ ಕ್ಷೇತ್ರಕ್ಕೆ. ಆಗ ಡಿಡಿ1ನಲ್ಲಿ ‘ಶಿವ’ ಹಾಗೂ ‘ತುಳಸಿ’ ಎನ್ನುವ ಧಾರಾವಾಹಿಗಳು ಬರುತ್ತಿದ್ದವು. ಅದರಲ್ಲಿ ನಟಿಸುವ ಮೂಲಕ ನಾನು ಬಣ್ಣದ ಜಗತ್ತಿಗೆ ಬಂದೆ.

ಅಭಿಷೇಕ್ ಅಂಬರೀಶ್ ಮನದಾಳದ ಮಾತುಗಳಿದು!

ನಟನೆಯತ್ತ ಮುಖ ಮಾಡಿದಾಗ ಅವಕಾಶಗಳು ನಿಮ್ಮನ್ನು ಗುರುತಿಸಿದ್ವಾ?

ಆಗ ಈಗಿನಂತೆ ವರ್ಷಕ್ಕೆ ನೂರಾರು ಸಿನಿಮಾಗಳು ಬರುತ್ತಿರಲಿಲ್ಲ. ಧಾರಾವಾಹಿಗಳ ಸಂಖ್ಯೆ ಕೂಡ ಕಡಿಮೆ. ಹೀಗಾಗಿ ಅವಕಾಶಗಳಿಗಾಗಿ ಅಲೆದಾಟ ಇದ್ದೇ ಇತ್ತು. ಆದರೆ, ನನ್ನ ಔಟ್‌ ಲುಕ್‌ ನನಗೆ ಪ್ಲಸ್‌ ಪಾಯಿಂಟ್‌ ಆಗಿ ಸಣ್ಣ ಪುಟ್ಟಪಾತ್ರಗಳನ್ನು ಮಾಡಿಕೊಂಡಿದ್ದವನಿಗೆ ಖಳನಾಯಕನ ಪಟ್ಟದೊರೆಯುವಂತೆ ಮಾಡಿತು.

ಅದು ಹೇಗೆ? ಕಿರುತೆರೆಯಿಂದ ಹಿರಿತೆರೆಗೆ ಕರೆದುಕೊಂಡು ಬಂದ ಚಿತ್ರ ಯಾವುದು?

ತೆಲುಗಿನ ವಿಲನ್‌ ರಾಮಿರೆಡ್ಡಿ ಅವರನ್ನು ನೋಡಿರಬಹುದು. ಕನ್ನಡದಲ್ಲೂ ನಟಿಸಿದ್ದಾರೆ. ನಾನೂ ಕೂಡ ಅವರ ಹಾಗೆ ಬೋಳು ತಲೆ, ಗಡ್ಡ ಬಿಟ್ಟುಕೊಂಡು ಅವರಂತೆ ಕಾಣುತ್ತೇನೆ ಎನ್ನುವ ಕಾರಣಕ್ಕೆ ನೆಗೆಟಿವ್‌ ಪಾತ್ರಗಳನ್ನು ಕೊಟ್ಟರು. ನಾನು ಹಿರಿತೆರೆಗೆ ಬಂದಿದ್ದು ಪುನೀತ್‌ರಾಜ್‌ಕುಮಾರ್‌ ನಟನೆಯ ‘ವಂಶಿ’ ಚಿತ್ರದಿಂದ. ಮಾರ್ಕೆಟ್‌ನಲ್ಲಿ ರೌಡಿಸಂ ಮಾಡಿಕೊಂಡಿರುವವನ ಪಾತ್ರದಲ್ಲಿ ಕಾಣಿಸಿಕೊಂಡೆ. ಇಲ್ಲಿಂದ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದೇನೆ.

ನಿಮ್ಮನ್ನು ಗುರುತಿಸಿದ ಚಿತ್ರಗಳು ಯಾವುವು?

ಪ್ರಶಾಂತ್‌ ನೀಲ್‌ ನಿರ್ದೇಶನದ ‘ಉಗ್ರಂ’ ಚಿತ್ರ. ಶ್ರೀಮುರಳಿ ಉಗ್ರಂ ಮಂಜು ಜತೆ ಫೈಟ್‌ ಮಾಡುವ ಮುನ್ನ ಆವಾಜ್‌ ಹಾಕಿ ಫೈಟ್‌ ಮಾಡಕ್ಕೆ ಬರುವ ಪಾತ್ರ ನನ್ನದು. ‘ಲೂಸಿಯಾ’ ಚಿತ್ರದಲ್ಲಿ ಸಿನಿಮಾ ನಿರ್ಮಾಪಕನ ಪಾತ್ರ ನನ್ನದು. ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರದಲ್ಲಿ ಮಾಡಿದ ಪೊಲೀಸ್‌ ಪಾತ್ರ. ರವಿಚಂದ್ರನ್‌ ಜತೆಗೆ ಮಾಡಿದ ‘ದೃಶ್ಯ’ ಚಿತ್ರದಲ್ಲಿನ ಚಿತ್ರಮಂದಿರದ ಮಾಲೀಕನ ಪಾತ್ರ. ‘ರಾಜಣ್ಣನ ಮಗ’ ಚಿತ್ರದಲ್ಲಿನ ಕಾಮಿಡಿ ವಿಲನ್‌ ಪಾತ್ರಗಳು ಹೀಗೆ ಹಲವು ಚಿತ್ರಗಳು, ಪಾತ್ರಗಳು ನನಗೆ ಹೆಸರು ತಂದುಕೊಟ್ಟಿವೆ. ಎಲ್ಲಕ್ಕಿಂತ ಮುಖ್ಯವಾಗಿ ‘ಉಗ್ರಂ’ ನನಗೆ ಬದುಕು ನೀಡಿತು.

ಧಾರವಾಹಿ ಎಂಬ ಮನೋರಂಜನೆ ಮತ್ತು ಉದ್ಯಮ: ಗುಂಡ್ಕಲ್ ಅವರೊಂದಿಗೆ ಸಂದರ್ಶನ

ನೀವು ರೆಡ್ಡಿ ಆಗಿದ್ದು ಹೇಗೆ? ನಿಮ್ಮ ಪ್ಲಸ್‌ ಪಾಯಿಂಟ್‌ಗಳೇನು?

ನಾಲ್ಕೈದು ಚಿತ್ರಗಳಲ್ಲಿ ರೆಡ್ಡಿ ಪಾತ್ರವನ್ನೇ ಮಾಡಿದೆ. ಜತೆಗೆ ನಮ್ಮ ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರು ನನ್ನ ರಾಮಿರೆಡ್ಡಿಗೆ ಹೋಲಿಕೆ ಮಾಡಿ ನಾರಾಯಣ ಮೂರ್ತಿ ಬದಲಿಗೆ ರೆಡ್ಡಿ ಅಂತಲೇ ಕರೆದರು. ಅಲ್ಲಿಂದ ಉಗ್ರಂ ರೆಡ್ಡಿ ಆದೆ. ನನ್ನ ಧ್ವನಿ ಹಾಗೂ ಔಟ್‌ ಲುಕ್‌ ನನ್ನ ಪ್ಲಸ್‌ ಪಾಯಿಂಟ್‌. ಈ ಕಾರಣಕ್ಕೆ ‘ಕೆಜಿಎಫ್‌’ ಚಿತ್ರದಲ್ಲಿನ ವಿಲನ್‌ ಪಾತ್ರಗಳಿಗೆ ನಾನೇ ವಾಯ್‌್ಸ ಕೊಟ್ಟಿದ್ದೇನೆ.

ಚಿತ್ರರಂಗದಲ್ಲಿ ನೆಲೆಯೂರುವ ವಿಶ್ವಾಸ ಮೂಡಿಸಿದ ಘಟನೆಗಳೇನು?

ವಂಶಿ ಚಿತ್ರದಲ್ಲಿ ಸಿಟಿ ಮಾರ್ಕೆಟ್‌ನಲ್ಲಿ ಫೈಟ್‌ ಮಾಡುತ್ತಿದ್ದಾಗ ಅಪ್ಪು ಅವರು ಕರೆದು, ‘ರೀ ನೀವು ನಿಜವಾದ ರೌಡಿನಾ, ಮಾರ್ಕೆಟ್‌ನಲ್ಲೇ ಇರುತ್ತೀರಿ, ನೋಡಕ್ಕೆ ಎಷ್ಟುಕರಾಬ್‌ ಆಗಿದ್ದೀರಿ. ನೋಡಿದ್ರೆ ಭಯ ಆಗುತ್ತೆ’ ಅಂಥ ನನ್ನ ಪಾತ್ರ ನೋಡಿ ಮೆಚ್ಚಿಕೊಂಡರು. ಆ ನಂತರ ಅವರ ಜತೆ ಹಲವು ಚಿತ್ರಗಳಲ್ಲಿ ನಟಿಸಿದೆ. ‘ರಾಮ್‌’ ಹಾಗೂ ‘ರಾಜ್‌’ ಚಿತ್ರಗಳಲ್ಲಿ ಅವರೇ ಕರೆದು ಪಾತ್ರ ಕೊಟ್ಟರು. ಇದು ನನ್ನ ವಿಶ್ವಾಸ ಹೆಚ್ಚಿಸಿತು.

ನಿಮ್ಮ ನಟನೆಯ ಯಾವ ಚಿತ್ರಗಳು ಬಿಡುಗಡೆ ಆಗಬೇಕಿದೆ?

ದರ್ಶನ್‌ ಅವರೊಂದಿಗೆ ‘ಒಡೆಯ’, ಹರಿಸಂತು ನಿರ್ದೇಶನದ ‘ಬಿಚ್ಚುಗತ್ತಿ’, ಚಿರಂಜೀವಿ ಸರ್ಜಾ ಜತೆ ‘ಸಿಂಗ’ ಸೇರಿದಂತೆ ಏಳೆಂಟು ಸಿನಿಮಾಗಳಿವೆ.

ಹಾಗಿದ್ದರೆ ತುಂಬಾ ಬ್ಯುಸಿ ವಿಲನ್‌ ಆಗಿದ್ದೀರಿ?

ಹಾಗೇನು ಇಲ್ಲ. ಯಾಕೆಂದರೆ ನನ್ನ ತುಂಬಾ ಹಳಬ ಅಂತ ನೋಡುತ್ತಾರೆ. ಯಾಕೆಂದರೆ ಬಹು ಬೇಗ ಎಲ್ಲ ಹೀರೋಗಳ ಜತೆ ನಟಿಸಿದ್ದೇನೆ. ಹೊಸಬರ ಚಿತ್ರಗಳಲ್ಲಿ ಮುಖ್ಯ ವಿಲನ್‌, ಸ್ಟಾರ್‌ಗಳ ಚಿತ್ರಗಳಲ್ಲಿ ಸೈಡ್‌ ವಿಲನ್‌ ಪಾತ್ರ ಸಿಗುತ್ತಿವೆ ಅಷ್ಟೆ. ಆದರೂ ಚಿತ್ರರಂಗ ಬಿಟ್ಟು ಹೋಗಲಾರೆ. ಯಾಕೆಂದರೆ ನನ್ನ ಸಿನಿಮಾದವನು ಅಂತ ಗುರುತಿಸಿದ್ದಾರೆ. ನಾವೇ ಈಗ ಒಂದು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ಚಿತ್ರದ ಹೆಸರು ‘ಮನೆಗೊಬ್ಬ ಮಂಜುನಾಥ’.

ಆ ಪಾರ್ವತಮ್ಮ ಬೇರೆ ಈ ಪಾರ್ವತಮ್ಮನೇ ಬೇರೆ!