Asianet Suvarna News Asianet Suvarna News

ಧಾರವಾಹಿ ಎಂಬ ಮನೋರಂಜನೆ ಮತ್ತು ಉದ್ಯಮ: ಗುಂಡ್ಕಲ್ ಅವರೊಂದಿಗೆ ಸಂದರ್ಶನ

ಸಿನಿಮಾ ನಂಬರ್‌ 1 ಎಂಬ ಭ್ರಮೆಯಲ್ಲಿದೆ. ನಿಜಕ್ಕೂ ಅದಕ್ಕೆ ಎರಡನೇ ಸ್ಥಾನವೇ. ಕನ್ನಡ ಸಿನಿಮಾ ಜಗತ್ತು ವರ್ಷಕ್ಕೆ 350 ಕೋಟಿ ವಹಿವಾಟು ನಡೆಸಿದರೆ ಕಿರುತೆರೆಯ ವಾರ್ಷಿಕ ಬಜೆಟ್‌ 700 ಕೋಟಿಯ ರುಪಾಯಿ. ರೆವೆನ್ಯೂ ದೃಷ್ಟಿಯಿಂದ ದುಪ್ಪಟ್ಟು. ಸಿನಿಮಾ 1 ಕೋಟಿ ಜನರನ್ನು ತಲುಪಿದರೆ ಕಿರುತೆರೆ 5 ಕೋಟಿ ಜನರನ್ನು ತಲುಪುತ್ತದೆ. ಕನ್ನಡದ ಒಂದು ಅತ್ಯುತ್ತಮ ಧಾರಾವಾಹಿ 1 ಕೋಟಿ ಜನರನ್ನು ತಲುಪುತ್ತೆ. ಒಂದು ಸೂಪರ್‌ಹಿಟ್‌ ಸಿನಿಮಾ ತಲುಪೋದು ಕೇವಲ 10 ಲಕ್ಷ ಜನರನ್ನು ಮಾತ್ರ. ಸಿನಿಮಾ ಜಗತ್ತು ಕಿರುತೆರೆಯನ್ನು ನೋಡ್ಲೇಬೇಕಿತ್ತು. ಯಾವತ್ತಿಗೂ ಆರ್ಥಿಕವಾಗಿಯೂ ಸಿನಿಮಾಕ್ಕಿಂತ ಕಿರುತೆರೆಯೇ ದೊಡ್ಡದು. ಡಿಜಿಟಲ್‌, ಸ್ಯಾಟಲೈಟ್‌ ಸೇರಿ ಬಹಳ ಹೆಚ್ಚು ಸಪೋರ್ಟ್‌ ಕಿರುತೆರೆಯಿಂದಲೇ ಸಿಗುತ್ತಿದೆ.

Colors Kannada business head Parameshwar Gundkal exclusive interview
Author
Bangalore, First Published Apr 21, 2019, 11:10 AM IST

ಪ್ರಿಯಾ ಕೆರ್ವಾಶೆ

ಕನ್ನಡ ಕಿರುತೆರೆ ಉದ್ಯಮವನ್ನು ಮಹತ್ತರವಾಗಿ ಬೆಳೆಸಿದವರು ನೀವು. ಈ ಚೇಂಜ್‌ ಹೇಗೆ ಸಾಧ್ಯವಾಯಿತು?

ಕಿರುತೆರೆ ಉದ್ಯಮವನ್ನು ಬೆಳೆಸಿದವನು ಅನ್ನುವ ಟೈಟಲ್‌ ತೆಗೆದುಕೊಳ್ಳುವ ಅರ್ಹತೆ ನನಗಿದೆ ಅಂತ ಅನಿಸಲ್ಲ. ಆದರೆ ಈ ಉದ್ಯಮ ಬೆಳೆಯುವ ಪ್ರೊಸೆಸ್‌ನಲ್ಲಿ ನಾನು ಅದೃಷ್ಟವಶಾತ್‌ ಮುಖ್ಯವಾದ ಜಾಗದಲ್ಲಿದ್ದೆ ಅಂತ ಹೇಳಬಹುದು. ಬದಲಾವಣೆ ಅಥವಾ ಬೆಳವಣಿಗೆ ತನ್ನಿಂತಾನೇ ಘಟಿಸುವುದು. ಕಿರುತೆರೆಯ ಬೆಳವಣಿಗೆಯಲ್ಲಿ ಕಥೆ ಮುಖ್ಯ ಪಾತ್ರ ವಹಿಸುತ್ತೆ.

ಯಾವತ್ತಿದ್ದರೂ ಕಥೆ ಎನ್ನುವುದೇ ಬೆಸ್ಟ್‌ ಎಂಟರ್‌ಟೈನ್‌ಮೆಂಟ್‌ ಎಂಬುದು ನನ್ನ ಅಭಿಪ್ರಾಯ. ಮನರಂಜನೆಯ ಯಾವ ವಿಧಾನ ತಗೊಂಡರೂ ಅಲ್ಲೊಂದು ಕತೆ ಇದೆ. ಸಿನಿಮಾ, ಸೀರಿಯಲ್‌, ರಿಯಾಲಿಟಿ ಶೋ ಈ ಎಲ್ಲದರ ಮೂಲ- ಭಾವನೆಗಳು, ಪಾತ್ರಗಳು ಮತ್ತು ಕಥೆಗಳು. ಹಾಗೆ ನೋಡಿದರೆ ಭಾವನೆಗಳೇ ಮುಖ್ಯ. ಆ ಭಾವನೆಗಳನ್ನು ಕಥೆಗಳು ಹುಟ್ಟಿಸುವ ಕಾರಣಕ್ಕೆ ಕಥೆಗಳು ಬಹಳ ಮುಖ್ಯ.

ಯಾರೋ ಒಬ್ಬ ಹುಬ್ಬಳ್ಳಿಯಲ್ಲಿ ರಸ್ತೆ ಬದಿಯಲ್ಲಿ ಬಾಳೆಹಣ್ಣು ಮಾರಿಕೊಂಡವನೊಬ್ಬ, ಮಾರ್ತಾ ಮಾರ್ತಾ ಸೂಪರ್‌ ಮಿನಿಟ್‌ ಪ್ರಾಕ್ಟೀಸ್‌ ಮಾಡಿ ಬೆಂಗಳೂರಿಗೆ ಬಂದು ಅಡಿಶನ್‌ನಲ್ಲಿ ಭಾಗವಹಿಸಿ ಒಂದು ಲಕ್ಷ ಅಥವಾ ಎರಡು ಲಕ್ಷ ಗೆದ್ದು ಬಿಟ್ಟರೆ, ಅವನ ಇಡೀ ವರ್ಷದ ಗಳಿಕೆಯನ್ನು ಒಂದು ನಿಮಿಷದಲ್ಲಿ ಗೆದ್ದುಬಿಟ್ಟ! ಇದರಲ್ಲಿ ನಮಗೆ ಗೊತ್ತಿಲ್ಲದೇ ಒಂದು ಕತೆ ಇದೆ, ಪಾತ್ರವನ್ನು ಕಾಣುತ್ತೇವೆ. ಪಾತ್ರಕ್ಕೆ ಪ್ರಯಾಣ ಇದೆ. ಪ್ರಯಾಣವನ್ನು ನೋಡಿದ್ದರಿಂದ ಸಂತೋಷವೋ ದುಃಖವೋ ಉಂಟಾಗಿ ನಮ್ಮೊಳಗೆ ತೃಪ್ತಿ ಸಿಕ್ಕಿತು.

ಸಾಮಾನ್ಯ ನಮ್ಮ ಓದು ಸಾಯಿಸುತೆಯಿಂದ ಆರಂಭವಾಗುತ್ತದೆ ಅಂತಿಟ್ಟುಕೊಂಡರೆ ಮುಂದೆ ತ್ರಿವೇಣಿ ಓದುತ್ತೇವೆ, ಆಮೇಲೆ ಯಂಡಮೂರಿ ಅವರ ಅನುವಾದಿತ ಬರಹ, ರವಿ ಬೆಳಗೆರೆ, ತೇಜಸ್ವಿ, ಲಂಕೇಶ್‌, ಅನಂತಮೂರ್ತಿ ..ಹೀಗೆ. ನಮ್ಮ ಓದು ಒಂದು ಲೆವೆಲ್‌ಗೆ ತಲುಪಿದ ಮೇಲೆ ಹಿಂದಿನದನ್ನು ಓದಬೇಕು ಅಂತ ಅನಿಸಲ್ಲ. ಕಿರುತೆರೆಯಲ್ಲೂ ಹೀಗೆ. ಸಾಹಿತ್ಯ ಜಗತ್ತಿನಲ್ಲಿರುವ ಹಾಗೇ ಇಲ್ಲೂ ಬಹಳ ಜನ ಜನಪ್ರಿಯವಾಗಿರುವ ಮಧ್ಯದ ಹಂತದಲ್ಲಿರುತ್ತಾರೆ. ಅವ್ರಲ್ಲೇ ಹ್ಯಾಪಿಯಾಗಿದ್ದಾರೆ ಅಂದರೆ ಅಲ್ಲೇ ಏನಾದರೂ ಮನರಂಜನೆ ನಾವು ನೀಡಬೇಕು. ನಾವು ಬ್ಯುಸಿನೆಸ್‌ಅನ್ನೂ ಮಾಡುತ್ತಿರುವ ಕಾರಣ ಅವರ ಇಷ್ಟವನ್ನು ಕಡೆಗಣಿಸಲಾಗುವುದಿಲ್ಲ. ಇಷ್ಟಿದ್ದರೂ ಕಿರುತೆರೆಯ ಕಥೆ ಹೇಳುವ ಪ್ರಕ್ರಿಯೆಯಲ್ಲಿ ಈ ಹತ್ತು ವರ್ಷಗಳಲ್ಲಿ ಸಾಕಷ್ಟುಪ್ರಯಾಣ ಆಗಿದೆ. ಅದು ಆಗಲೇ ಬೇಕಾಗಿದ್ದ ಬದಲಾವಣೆ. ನಾವೂ ಬೆಳವಣಿಯಲ್ಲಿ ನಾವೂ ಪಾತ್ರಗಳಾಗಿ ಇದ್ದೀವಿ.

ಈ ಬದಲಾವಣೆಯ ದಾರಿಯಲ್ಲಿ ನೀವು ಅನುಭವಿಸಿದ ಸಂತೋಷ ಮತ್ತು ಸಂಕಟಗಳು ಏನು?

ವೈಯುಕ್ತಿಕವಾಗಿ ಹೇಳುವುದಾದರೆ ಕಥೆ ನನ್ನನ್ನು ಗಾಢವಾಗಿ ತಟ್ಟುವ, ಕಾಡುವ ಬಹಳ ಪ್ರೀತಿಸುವ ವಿಷಯ. ಊಟಕ್ಕಿಂತ ಹೆಚ್ಚು ಇಷ್ಟಪಡ್ತೀನಿ. ಮೊದಲು ಪತ್ರಕರ್ತನಾಗಿದ್ದಾಗ ಕಥೆ ಬರೆದು ಬದುಕುವ ಸ್ಥಿತಿ ಇರಲಿಲ್ಲ. ಆದರೆ ಆ ಸಾಧ್ಯತೆ ವಿಶ್ಯುವಲ್‌ ಮೀಡಿಯಾದಲ್ಲಿ ಇದೆ ಅಂತ ತಿಳಿದಾಗ ನಾನು ಆ ಮಾಧ್ಯಮವನ್ನು ಆಯ್ಕೆ ಮಾಡುವ ತೀರ್ಮಾನಕ್ಕೆ ಬಂದೆ. ಆರಾಮವಾಗಿ ಬದುಕಬೇಕು ಎಂಬ ನನ್ನ ಸ್ವಾರ್ಥ ಮತ್ತು ಮಹತ್ವಾಕಾಂಕ್ಷೆ ಇದರ ಹಿಂದೆ ಇತ್ತು. ಅದು 2008ನೇ ಇಸವಿ. ಆಗ ನಾಲ್ಕೈದು ಚಾನೆಲ್‌ಗಳಿದ್ದವು. ಇಂದಿಗೂ ನಾವೇ ಸೇರಿಸಿದ ಕಲರ್ಸ್‌ ಸೂಪರ್‌ ಚಾನೆಲ್‌ ಬಿಟ್ಟರೆ ಅಷ್ಟೇ ಚಾನೆಲ್‌ಗಳಿವೆ. ದೃಶ್ಯ ಮಾಧ್ಯಮದಲ್ಲಿ ಕತೆ ಹೇಳುವ ಜಗತ್ತು ವೈಯುಕ್ತಿಕವೂ ಹೌದು, ಟೀಮ್‌ವರ್ಕ್ ಹೌದು. ಒಬ್ಬ ಕಂಡ ಕನಸನ್ನು ಜನರಿಗೆ ದಾಟಿಸಬೇಕು ಅಂದರೆ ಅದಕ್ಕೆ ನೂರಾರು ಜನರ ಟೀಮ್‌ವರ್ಕ್ ಬೇಕು. ಆರಂಭದ ದಿನಗಳಲ್ಲಿ ಇದಕ್ಕೆ ಒಗ್ಗಿಕೊಳ್ಳಲು ಒದ್ದಾಡಿದೆ. ಆಮೇಲೆ ಹೋಗ್ತಾ ಹೋಗ್ತಾ ಸುಲಭವಾಯ್ತು. ತೇಜಸ್ವಿ ಅವರು ಹೇಳಿದ ಹಾಗೆ ಯಾವುದನ್ನೇ ಅರ್ಥ ಮಾಡಿಕೊಳ್ಳಬೇಕು ಅಂದರೆ ನೀನು ಅದನ್ನು ಕಲಿಯುತ್ತ ಹೋಗಬೇಕು ಅನ್ನುವ ಹಾಗೆ ನಾನೂ ಪ್ರತಿಯೊಂದನ್ನೂ ಕಲಿಯಲು ಶುರುವಾಡಿದೆ. ಹೀಗೆ ಈ ಜಗತ್ತು ನನಗೆ ಅರ್ಥವಾಗಲು ಈ ಹತ್ತು ವರ್ಷಗಳು ಬೇಕಾದವು. ಇನ್ನೊಂದು ಅಂಶ ಅಂದರೆ ಒಬ್ಬ ಬರಹಗಾರ ತಲೆ ಖರ್ಚು ಮಾಡುವುದು ಬಿಟ್ಟು ಬೇರೇನೂ ಖರ್ಚಿಲ್ಲದೇ ತೊಡಗಿಸಿಕೊಳ್ಳುವ ಕಥೆಗಾರಿಕೆ ಜಗತ್ತಿನಿಂದ, ಸಾಮೂಹಿಕವಾದ ಎಲ್ಲ ರೀತಿಯಲ್ಲೂ ಟೀಮ್‌ ಮಾಡಬೇಕಾಗಬೇಕಾದ ಹಣ ಸುರಿಯಬೇಕಾದ ಜಗತ್ತಿಗೆ ಶಿಫ್ಟ್‌ ಆಗುವಾಗ ಆಗುವ ಎಲ್ಲ ತಲ್ಲಣಗಳೂ ನನಗೂ ಆದವು. 2008 ರಿಂದ 2019ರಲ್ಲಿ ಚಾನೆಲ್‌ಗಳು ಅಷ್ಟೇ ಇವೆ. ಮಾರುಕಟ್ಟೆಗಾತ್ರ ಬದಲಾಗಿದೆ, ಕತೆ ಹೇಳುವ ರೀತಿ ಕಲರ್‌ಫುಲ್‌ ಆಗಿದೆ, ಗ್ಲಾಸಿಯಾಗಿದೆ. ಇನ್‌ವೆಸ್ಟ್‌ಮೆಂಟ್‌ ಹೆಚ್ಚಿದೆ, ರಿಟರ್ನೂ ಹೆಚ್ಚಿದೆ. ಎಲ್ಲಕ್ಕಿಂತ ಮುಖ್ಯವಾಗಿ ಕಿರುತೆರೆ ಜನರಿಗೆ ತಲುಪುವುದೂ ಹೆಚ್ಚಾಗಿದೆ.

ಸಿನಿಮಾರಂಗ ತಿರುಗಿ ನೋಡುವಂತೆ ಮನರಂಜನಾ ಉದ್ಯಮವನ್ನು ವಿಸ್ತರಿಸಲಿಕ್ಕೆ ಕಿರುತೆರೆಗೆ ಹೇಗೆ ಸಾಧ್ಯವಾಯಿತು?

ಯಾವತ್ತಿಗೂ ಕನ್ನಡದ ಕಿರುತೆರೆ ಸಿನಿಮಾಕ್ಕಿಂತ ದೊಡ್ಡದೇ. ಸಿನಿಮಾ ನಂಬರ್‌ 1 ಎಂಬ ಭ್ರಮೆಯಲ್ಲಿದೆ. ನಿಜಕ್ಕೂ ಅದಕ್ಕೆ ಎರಡನೇ ಸ್ಥಾನವೇ. ಕನ್ನಡ ಸಿನಿಮಾ ಜಗತ್ತು ವರ್ಷಕ್ಕೆ 350 ಕೋಟಿ ವಹಿವಾಟು ನಡೆಸಿದರೆ ಕಿರುತೆರೆಯ ವಾರ್ಷಿಕ ಬಜೆಟ್‌ 700 ಕೋಟಿಯ ರುಪಾಯಿ. ರೆವೆನ್ಯೂ ದೃಷ್ಟಿಯಿಂದ ದುಪ್ಪಟ್ಟು. ಸಿನಿಮಾ 1 ಕೋಟಿ ಜನರನ್ನು ತಲುಪಿದರೆ ಕಿರುತೆರೆ 5 ಕೋಟಿ ಜನರನ್ನು ತಲುಪುತ್ತದೆ. ಕನ್ನಡದ ಒಂದು ಅತ್ಯುತ್ತಮ ಧಾರಾವಾಹಿ 1 ಕೋಟಿ ಜನರನ್ನು ತಲುಪುತ್ತೆ. ಒಂದು ಸೂಪರ್‌ಹಿಟ್‌ ಸಿನಿಮಾ ತಲುಪೋದು ಕೇವಲ 10 ಲಕ್ಷ ಜನರನ್ನು ಮಾತ್ರ. ಸಿನಿಮಾ ಜಗತ್ತು ಕಿರುತೆರೆಯನ್ನು ನೋಡ್ಲೇಬೇಕಿತ್ತು. ಯಾವತ್ತಿಗೂ ಆರ್ಥಿಕವಾಗಿಯೂ ಸಿನಿಮಾಕ್ಕಿಂತ ಕಿರುತೆರೆಯೇ ದೊಡ್ಡದು. ಡಿಜಿಟಲ್‌, ಸ್ಯಾಟಲೈಟ್‌ ಸೇರಿ ಬಹಳ ಹೆಚ್ಚು ಸಪೋರ್ಟ್‌ ಕಿರುತೆರೆಯಿಂದಲೇ ಸಿಗುತ್ತಿದೆ. ತುಂಬ ಹಿಂದೆಯೇ ಸಿನಿಮಾ ಕಿರುತೆರೆಯತ್ತ ಬರಬೇಕಿತ್ತು. ಈಗಲಾದರೂ ಬಂದಿದೆ, ಸಂತೋಷ.

ಮಾನದಂಡದಲ್ಲಿ ಅನ್ಯಾಯ, ಟೀಮ್‌ ಕಟ್ಟುವ ಕಷ್ಟ, ಗುಣಮಟ್ಟದ ನಷ್ಟ

  • ಇವತ್ತಿನ ತಲೆಮಾರಿನ ಸಣ್ಣ ಪಟ್ಟಣದ ಹುಡುಗರು ಬಹುಶಃ ಧಾರಾವಾಹಿಯ ಮೂಲಕ ಕನ್ನಡ ಕಲಿಯುತ್ತಿದ್ದಾರೆ. ಅವರು ಪತ್ರಿಕೆ ಓದಲ್ಲ. ಆದರೆ ಕನ್ನಡದ ಗುಣಮಟ್ಟಪತ್ರಿಕೆಗಳ ಥರ ಇರದೇ ಬಹಳ ಸಿಲ್ಲಿಯಾಗಿದೆ ಅನಿಸಬಹುದು. ಆದರೆ ಇದು ಇವತ್ತಿನ ಜಗತ್ತು. ಇದನ್ನು ಜೀರ್ಣಿಸಿಕೊಳ್ಳಲೇಬೇಕು. ಅಗ್ನಿಸಾಕ್ಷಿಯನ್ನು ಒಂದು ಕೋಟಿ ಜನ ನೋಡ್ತಾರೆ ಅಂದ್ರೆ ಅಷ್ಟುಜನ ಕನ್ನಡವನ್ನು ಗ್ರಹಿಸುತ್ತಾರೆ. ಆ ಕನ್ನಡ ಬೆಟರ್‌ ಆಗ್ಬೇಕಿತ್ತಾ ಅಂದರೆ, ಆಗ್ಬೇಕಿತ್ತು, ಆಗಬಹುದು, ಆಗುತ್ತೆ! ಹಾಗೆ ನೋಡಿದರೆ ಬಹಳ ದೊಡ್ಡ ಜವಾಬ್ದಾರಿ ಕನ್ನಡದ ಎಲ್ಲ ದೃಶ್ಯಮಾಧ್ಯಮಕ್ಕಿವೆ. ಆದರೆ ಈ ಶಿಫ್ಟ್‌ಅನ್ನು ಯಾರೂ ಗುರುತಿಸಿದ ಹಾಗಿಲ್ಲ.
  • ಬರವಣಿಗೆಯನ್ನು ವೃತ್ತಿಯಾಗಿ ಸ್ವೀಕರಿಸುವವರಿಗೆ, ಅತ್ಯುತ್ತಮವಾಗಿ ಬರೆಯುವವರಿಗೆ ದುಡ್ಡನ್ನು ಡಿಮ್ಯಾಂಡ್‌ ಮಾಡಿ ಕೇಳುವ ಸ್ಥಿತಿ ಇದೆ, ಅವರು ಕೇಳಿದಷ್ಟನ್ನು ನೀಡುವ ಶಕ್ತಿ ಕಿರುತೆರೆ ಹಾಗೂ ಸಿನಿಮಾ ಮಾಧ್ಯಮಕ್ಕಿದೆ. ಅವರ ಐಡಿಯಾವನ್ನು ಖರೀದಿಸುವ ತಾಕತ್ತೂ ಇದಕ್ಕಿದೆ.
  • ಕಿರುತೆರೆಯ ಕಾರ್ಯಕ್ರಮವನ್ನು ಅಳೆಯುವ ಮಾನದಂಡದಲ್ಲಿ ಬಹಳಷ್ಟುಮಿತಿಗಳಿದ್ದವು. ಆ ಇತಿಮಿತಿಗಳ ನಡುವೆಯೇ ಆ ಮಾನದಂಡವನ್ನು ನಾವು ಒಪ್ಪಿಕೊಳ್ಳಬೇಕಿತ್ತು, ಅದು ಸರಿಯಾಗಿದೆ ಅಂತ. ಇಂತಿಪ್ಪ ಮಾನದಂಡದಲ್ಲಿ ಅನ್ಯಾಯವೂ ಆಗಿಬಿಟ್ಟರೆ ತುಂಬ ದೊಡ್ಡ ಸವಾಲದು. ಸ್ವಲ್ಪ ಮಟ್ಟಿಗೆ ಸರಿಹೋದರೂ ಪೂರ್ತಿ ಸರಿಹೋಗಿದೆ ಅಂತ ಹೇಳಕ್ಕಾಗಲ್ಲ.
  • ಕಿರುತೆರೆಗೆ ಒಂದು ಲೆವೆಲ್‌ನಲ್ಲಿ ಬರವಣಿಗೆಯೂ ಆಗಬೇಕು. ತಂತ್ರಜ್ಞಾನವೂ ಬೇಕು. ಬರವಣಿಗೆ, ತಂತ್ರಜ್ಞಾನ ಭಿನ್ನ ಧ್ರುವಗಳು. ಇವು ಜೊತೆಜೊತೆಗೆ ಹೋಗಬೇಕಾದ ಸವಾಲು ಕಿರುತೆರೆಯದು. ಇವೆರಡನ್ನೂ ಬಲ್ಲವರ ಟೀಮ್‌ ಕಟ್ಟೋದು ಬಹಳ ಕಷ್ಟದ ಸವಾಲು.
  • ಆರು ಕೋಟಿ ಮೂವತ್ತು ಲಕ್ಷ ಕನ್ನಡಿಗರಲ್ಲಿ ಐದು ಕೋಟಿ ಜನರನ್ನು ಟಿವಿ ತಲುಪುತ್ತದೆ. ಕಲ​ರ್‍ಸ್ನಂಥ ಚಾನೆಲ್‌ ನಾಲ್ಕೈದು ಕೋಟಿ ಜನರನ್ನು ತಲುಪುತ್ತೆ. ರಾಜ್ಯದ ಜನ ಅವರಿಗೆ ಏನು ಬೇಕೋ ಡಿಮ್ಯಾಂಡ್‌ ಮಾಡದೇ ಸಿಕ್ಕಿದ್ದರಲ್ಲೇ ತೃಪ್ತಿ ಪಡುತ್ತಿದ್ದಾರೆ. ಗುಣಮಟ್ಟದ ಸೀರಿಯಲ್‌ಗಳಿಗೆ ಡಿಮ್ಯಾಂಡ್‌ ಮಾಡಿದ್ದರೆ, ಇಂಥದ್ದನ್ನೆಲ್ಲ ನೋಡಲ್ಲ ಅಂತ ಹಠತೊಟ್ಟರೆ ನಾವು ಸಾಹಿತಿಗಳ ಕೈಕಾಲಿಗೆ ಬಿದ್ದಾದರೂ ಅವರನ್ನು ಕಿರುತೆರೆಗೆ ತರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿತ್ತು. ಮುಂದಾದರೂ ಅದು ಸೃಷ್ಟಿಯಾಗುತ್ತದೆ ಅನ್ನುವ ವಿಶ್ವಾಸವಿದೆ.
  • ಸೀರಿಯಲ್‌ಗೆ ಬರೆಯುವುದು ಬಹಳ ಸುಲಭ ಅಲ್ಲ. ಸಾಹಿತ್ಯಕ್ಕಿಂತ ಬಹಳ ಕಷ್ಟಇದೆ. ಜನಪ್ರಿಯವಾಗಿದ್ದನ್ನು ಮಾಡುವುದು ಬಹಳ ಕಷ್ಟ.

ಟ್ಟಹೆಂಗಸು ಒಳ್ಳೆ ಹುಡುಗಿಗೆ ಕಾಟ ಕೊಡುವ ಸೀನ್‌ ಬದಲಾಗೇ ಇಲ್ಲ!

ಕನ್ನಡದ ಜನಪ್ರಿಯ ಕತೆಗಾರರಲ್ಲಿ ಹೆಚ್ಚಿನವರಾರ‍ಯರೂ ದೃಶ್ಯ ಮಾಧ್ಯಮಕ್ಕೆ ಬರಲಿಲ್ಲ. ಅವರು ಮುದ್ರಣ ಜಗತ್ತಿನಲ್ಲೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಟಿ.ವಿ ಇಂದು ಕೋಟ್ಯಂತರ ಜನರನ್ನು ತಲುಪುತ್ತಿದೆ. ಪುಸ್ತಕವನ್ನು ಓದುವವರ ಸಂಖ್ಯೆ ಬಹಳ ಕಡಿಮೆ ಇದೆ. ದೃಶ್ಯಮಾಧ್ಯಮ ಮತ್ತು ಕತೆಗಾರರ ಮುಖಾಮುಖಿಗೆ ಇನ್ನೂ ಸಂದರ್ಭ ಒದಗಿಬಂದಿಲ್ಲ. ಇದರಿಂದ ಟಿವಿ ಜಗತ್ತಿಗೆ ಹೊಸ ಬರಹಗಾರರನ್ನು ರೆಡಿ ಮಾಡುವ ಹೊಣೆಗಾರಿಕೆಯೂ ಬಿತ್ತು. ಇದು ಬಹಳ ಕಷ್ಟಹಂತ. ನಾನೆದುರಿಸಿದ ಅತಿದೊಡ್ಡ ಸಂಕಟವಿದು. ಹಾಗಾಗಿಯೇ ಇವತ್ತಿಗೂ ಟಿವಿ ಜಗತ್ತಿನ ಬರವಣಿಗೆ ತುಸು ಬಾಲಿಶವಾಗಿಯೇ ಇದೆ. ಹತ್ತು ವರ್ಷಗಳ ನಂತರವೂ ಕಿರುತೆರೆ ಜಗತ್ತಿನಲ್ಲಿ ಒಬ್ಬ ಕೆಟ್ಟಹೆಂಗಸು, ಕೈಲಾಗದ ಬಹಳ ಒಳ್ಳೆಯ ಹೆಣ್ಣುಮಗಳಿಗೆ ಹಿಂಸೆ ನೀಡುವ ಅದರಾಚೆಗೆ ಯಾವ ಕ್ರಿಯೇಟಿವಿಟಿಯನ್ನೂ ತೋರಿಸದ ಧಾರಾವಾಹಿಗಳು ಇವತ್ತಿಗೂ ಉಳಿದುಕೊಂಡಿವೆ. ಅದರ ಬಗ್ಗೆ ನನಗೇನು ಸಮಾಧಾನವಿಲ್ಲ. ಕನ್ನಡ ಸಾಹಿತ್ಯ ಜಗತ್ತು ಕಿರುತೆರೆಯ ಜೊತೆಗೆ ಬೆರೆತರೆ ಅವರಿಗೂ ಆರ್ಥಿಕ ಬಲ ಬರ್ತಿತ್ತು, ಕಿರುತೆರೆಯ ಆಕಾಶ ಇನ್ನಷ್ಟುವಿಸ್ತರಿಸುತ್ತಿತ್ತು.

ಶ್ರೇಷ್ಠ ಬರಹಗಾರರನ್ನು ಸ್ವೀಕರಿಸಲು ಕಿರುತೆರೆ ಸಿದ್ಧವಿದೆಯಾ?

ಕಿರುತೆರೆ ಉದ್ಯಮ ಆಗಿರುವುದರಿಂದ ಉದ್ಯಮದಲ್ಲಿ ಲಾಭ ಇಲ್ಲದೇ ಇರುವ ಯಾವುದಕ್ಕೂ ಜಾಗ ಇಲ್ಲ. ಸಾಹಿತಿಯೊಬ್ಬ ಕಿರುತೆರೆಯಲ್ಲಿ ಅರ್ಥಪೂರ್ಣವಾದುದನ್ನು ಮಾಡುತ್ತಾ ಅದರಲ್ಲಿ ಲಾಭವನ್ನೂ ಮಾಡದೇ ಹೋದರೆ ಅದು ಸಾಹಿತಿಯ ಸೋಲೇ ಹೊರತು ಉದ್ಯಮ ಅವರನ್ನು ಸರಿಯಾಗಿ ನೋಡ್ಕೊಳ್ಳಿಲ್ಲ ಅಂತಾಗಲ್ಲ. ಉದಾಹರಣೆಗೆ ಟಿ.ಎನ್‌ ಸೀತಾರಾಮ್‌ ಅವರಂಥವರಿಗೆ ತಮ್ಮ ಬರವಣಿಗೆಯನ್ನು ಕಿರುತೆರೆಯಲ್ಲಿ ಹೇಳುತ್ತಲೇ ಅದನ್ನು ಲಾಭದಾಯಕವಾಗಿಯೂ ಮಾಡಿಕೊಂಡು ಹೋಗುವುದು ಸಾಧ್ಯವಾಯ್ತು. ಹಾಗಿದ್ದರೆ ಉಳಿದವರಿಗೆ ಯಾಕೆ ಸಾಧ್ಯ ಆಗಲ್ಲ. ಅವಕಾಶ ಎಲ್ಲರಿಗೂ ಇತ್ತು, ಸಾಧ್ಯವೂ ಇತ್ತು. ಆದರೆ ಇದು ಉಳಿದವರಿಗೆ ಸಾಧ್ಯವಾಗಿಲ್ಲ. ಇದು ಅವರ ತಪ್ಪಲ್ಲ. ಇದಕ್ಕೆ ಸೂಕ್ತ ಸಂದರ್ಭ ಸೃಷ್ಟಿಯಾಗಿಲ್ಲ ಅಷ್ಟೇ. ಇದರಿಂದ ಸಾಹಿತ್ಯಕ್ಕೂ, ಕಿರುತೆರೆಗೂ ನಷ್ಟವಾಯ್ತು.

80 ದಶಕದ ಸಾಹಿತ್ಯ ಜಗತ್ತಿನ ಪ್ರತಿಬಿಂಬ

80 ರ ದಶಕದ ಸಾಹಿತ್ಯದಲ್ಲಿ ಸಾಯಿಸುತೆ, ಯಂಡಮೂರಿ ಬಹಳ ಜನಪ್ರಿಯರಾಗಿದ್ದರು. ಅವರ ಪ್ರತಿಗಳು ಬಹಳ ಸೇಲ್‌ ಆಗುತ್ತಿದ್ದವು. ಈ ಹೊತ್ತಿಗೆ ಲಂಕೇಶ್‌ ಪತ್ರಿಕೆ ಬಂತು, ತೇಜಸ್ವಿಯಂಥವರು ಬಂದರು. ಒಂದು ಕಡೆ ಜನಪ್ರಿಯ ಕತೆಗಳು ಇನ್ನೊಂದು ಕಡೆ ಬೌದ್ಧಿಕವಾದ ಕತೆಗಳು ಇದ್ದವು. ಎರಡೂ ಇದ್ದವು. ಕಿರುತೆರೆ ಈಗ ಈ ಫೇಸ್‌ನಲ್ಲಿದೆ. ಜನಪ್ರಿಯವಾಗಿದ್ದನ್ನು ಕೊಡುವ ಹಂತದಲ್ಲಿದೆ. ಬೌದ್ಧಿಕವಾದದ್ದನ್ನು ಕೊಡುವ ಹಂತಕ್ಕೆ ಅದು ಬಂದೇ ಬರುತ್ತೆ.

ಇವತ್ತು ಕಿರುತೆರೆ ಕನ್ನಡವನ್ನು ದಾಟಿಸುವ ಬಹುಮುಖಿ ಕೆಲಸವನ್ನು ಮಾಡುತ್ತಿದೆ. ಬರಹದ ಕನ್ನಡ ಸೋಲುತ್ತಿರುವ ಕಡೆ ಕಿರುತೆರೆ ಕನ್ನಡ ಗೆಲ್ಲುತ್ತಿದೆ ಹೊಸ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದೆ. ಈ ಪ್ರಾದೇಶಿಕ ಭಾಷೆಗಳನ್ನು ಬಲ ಪಡಿಸುವ ಕೆಲಸವನ್ನು ಹೊಸ ಮಾಧ್ಯಮದ ಜೊತೆ ಸೇರಿ ಮಾಡುವ ಪ್ರಕ್ರಿಯೆ ಹೇಗೆ ಅನಿಸುತ್ತಿದೆ?

ಇದನ್ನು ಜವಾಬ್ದಾರಿಯ ಥರ ನಿರ್ವಹಿಸುತ್ತೇವೆ. ಆದರೆ ಇದು ಲಾಭದಾಯಕವಲ್ಲ.

Follow Us:
Download App:
  • android
  • ios