Asianet Suvarna News Asianet Suvarna News

ಅಭಿಷೇಕ್ ಅಂಬರೀಶ್ ಮನದಾಳದ ಮಾತುಗಳಿದು!

ಅಭಿಷೇಕ್‌ ಅಂಬರೀಷ್‌ ಅಭಿನಯಿಸಿರುವ ‘ಅಮರ್‌’ ಚಿತ್ರ ಇಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈ ಸಂದರ್ಭದಲ್ಲಿ ಬೆಳ್ಳಿತೆರೆಯ ಪ್ರವೇಶ ಮತ್ತು ‘ಅಮರ್‌’ ವಿಶೇಷತೆ ಕುರಿತು ಅಭಿಷೇಕ್‌ ಅಂಬರೀಶ್‌ ಜತೆ ಮಾತುಕತೆ.

Amar Abhishek Ambareesh Exclusive Interview
Author
Bangalore, First Published May 31, 2019, 9:03 AM IST

ದೇಶಾದ್ರಿ ಹೊಸ್ಮನೆ

‘ಅಮರ್‌’ ಬಿಡುಗಡೆಯ ಕ್ಷಣಗಳು ಹೇಗಿವೆ?

ಸಿನಿಮಾ ಅನ್ನೋದು ಹೊಸದಲ್ಲ. ಅಪ್ಪ, ಅಮ್ಮ ಸಿನಿಮಾ ಲೋಕದಲ್ಲೇ ಇದ್ದವರು. ಅದೇ ಪರಿಸರದಿಂದ ಬೆಳೆದವನು. ಆದರೂ ನಟನಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದೇನೆ ಅಂದಾಗ ನಡುಕ ಇರಲ್ವಾ? ಅಪ್ಪ ಇದ್ದಿದ್ದರೆ ಈ ಭಯ ಇರುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಯಾಕಂದ್ರೆ ಅವರಿದ್ದರೆ ನಂಗೆ ಏನೋ ಕಾನ್ಫಿಡೆನ್ಸ್‌. ಆದ್ರೂ, ಅವರ ಜಾಗದಲ್ಲೀಗ ಅಮ್ಮ ಇದ್ದಾರೆ. ಅವರ ಸುತ್ತ ದೊಡ್ಡ ಅಭಿಮಾನಿ ಬಳಗವಿದೆ. ಮೇಲಾಗಿ ಸಿನಿಮಾ ಚೆನ್ನಾಗಿಯೇ ಬಂದಿದೆ. ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆನ್ನುವ ವಿಶ್ವಾಸವೂ ಇದೆ. ಜನ ಸಿನಿಮಾ ನೋಡಿ ಮೆಚ್ಚಿಕೊಂಡಾಗ ಬಹುಶಃ ಆ ಭಯ ದೂರವಾಗಬಹುದೋ ಏನೋ. ಆ ಕ್ಷಣಕ್ಕೆ ಕಾಯುತ್ತಿದ್ದೇನೆ ಅಷ್ಟೆ.

Amar Abhishek Ambareesh Exclusive Interview

ನಿಮ್ಮ ಪ್ರಕಾರ ‘ಅಮರ್‌’ ಚಿತ್ರದ ವಿಶೇಷತೆಗಳೇನು?

ಚಿತ್ರದಲ್ಲಿ ಇಂಥದ್ದೇ ಒಂದು ಸ್ಪೆಷಲ್‌ ಅಂತ ಹೇಳೋದಿಕ್ಕೆ ಆಗೋಲ್ಲ. ಮೊದಲಿಗೆ ಹೇಳೋದಾದ್ರೆ, ಇದೊಂದು ತುಂಬಾ ಎಮೋಷನಲ್‌ ಸಿನಿಮಾ. ಅಪ್ಪ ಕತೆ ಕೇಳಿದಾಗಲೇ ಅದ್ಭುತ ಅಂತ ಹೇಳಿದ್ದರು. ಆಮೇಲೆ ಸಂದೇಶ್‌ ನಾಗರಾಜ್‌ ಸರ್‌ ಕೂಡ ವಂಡರ್‌ಫುಲ್‌ ಅಂದಿದ್ದರು. ಅದಕ್ಕೆ ತಕ್ಕಂತೆ ನಿರ್ಮಾಪಕರು ಚಿತ್ರಕ್ಕೆ ಧಾರಾಳವಾಗಿ ಖರ್ಚು ಮಾಡಿದರು. ಅದ್ಭುತವಾದ ಮೇಕಿಂಗ್‌. ಹಾಗೆಯೇ ಬ್ಯೂಟಿಫುಲ್‌ ಲೊಕೇಷನ್ಸ್‌. ಜತೆಗೆ ಮೈ ನವಿರೇಳಿಸುವ ಆ್ಯಕ್ಷನ್ಸ್‌. ಸಾಂಗ್ಸ್‌ ಬಗ್ಗೆ ಹೇಳಲೇಬೇಕಿಲ್ಲ, ಈಗಾಗಲೇ ಅದರ ಸೌಂಡ್‌ ಎಷ್ಟಿದೆ ಅನ್ನೋದು ನಿಮಗೂ ಗೊತ್ತು. ಆರ್ಟಿಸ್ಟ್‌ ಅಂತ ಬಂದಾಗ ದರ್ಶನ್‌ ಸರ್‌ ಇದ್ದಾರೆಂದರೆ, ಇನ್ನೇನು ಬೇಕು? ಹೇಳೋದಿಕ್ಕೆ ಹೋದ್ರೆ ತುಂಬಾ ಇದೆ ಬಿಡಿ, ಜನ ಸಿನಿಮಾ ನೋಡ್ಲಿ.

ಶೂಟಿಂಗ್‌ ಸೆಟ್‌ನಲ್ಲಿ ಫಸ್ಟ್‌ ಡೇ, ಫಸ್ಟ್‌ ಸೀನ್‌ಗೆ ಕ್ಯಾಮರಾ ಎದುರಿಸಿದ ಅನುಭವ ಹೇಗಿತ್ತು?

ಅಯ್ಯೋ, ಅವತ್ತು ಫುಲ್‌ ನರ್ವಸ್‌. ಏನ್‌ ಹೇಳ್ತೀರಾ ಆ ಕತೆ. ಫಸ್ಟ್‌ ಡೇ, ಫಸ್ಟ್‌ ಸೀನ್‌ಗೆ ಕ್ಯಾಮರಾ ಮುಂದೆ ನಿಂತಾಗ ನಾನೇನೋ ರಾಂಗ್‌ ಲೈನ್‌ಗೆ ಬಂದು ಬಿಟ್ಟೆಅಂತೆನಿಸಿದ್ದು ಸುಳ್ಳಲ್ಲ. ಯಾಕಂದ್ರೆ, ಸುಧಾರಾಣಿ ಮೇಡಂ, ಚಿತ್ರದಲ್ಲಿ ನನ್ನ ತಂದೆ ಪಾತ್ರ ಮಾಡಿದ ರಾಜ್‌ ದೀಪಕ್‌ ಶೆಟ್ಟಿಅಲ್ಲಿದ್ರು. ಅವರೆಲ್ಲ ಅನುಭವಿ ಆ್ಯಕ್ಟರ್ಸ್‌. ಅವರ ಮುಂದೆ ನಾವ್‌ ಎಷ್ಟೇ ಪ್ಲಾನಿಂಗು, ಟ್ರೈನಿಂಗು ಅಂತ ಮಾಡ್ಕೊಂಡ್‌ ಹೋದ್ರು ಕಷ್ಟ. ಅಂತಹವರ ಮುಂದೆ ನಿಂತ್ರೆ ನಡುಕ ಬರಲ್ವಾ? ಏನೇನೋ ಯೋಚಿಸಿದೆ. ಆದ್ರೂ ಕಾನ್ಫಿಡೆನ್ಸ್‌ ಇತ್ತು. ಮುಂದೆ ಎಲ್ಲಾ ಸರಿ ಹೋಯ್ತು ಬಿಡಿ.

‘ಅಮರ್’ ಚಿತ್ರದ Exclusive ಫೋಟೋಸ್ ಇಲ್ಲಿವೆ!

ಹೀರೋ ಆಗುವ ಮುಂಚೆ ಯಾವುದಾದರೂ ನಾಟಕ ಅಥವಾ ಡಾಕ್ಯುಮೆಂಟ್ರಿಗಳಲ್ಲಿ ಆ್ಯಕ್ಟಿಂಗ್‌ ಮಾಡಿದ್ರಾ?

ಇದು ಫಸ್ಟ್‌. ಆದ್ರೂ ಸ್ಕೂಲ್‌ನಲ್ಲಿ ಒಂದು ನಾಟಕದಲ್ಲಿ ಅಭಿನಯಿಸಿದ್ದ ನೆನಪು. ಅದೇನು ಸಿನಿಮಾಕ್ಕೆ ಬರೋ ತಯಾರಿ ಅಲ್ಲ ಬಿಡಿ. ನಂಗೇನು ಡ್ರಾಮಾದಲ್ಲಿ ಆ್ಯಕ್ಟ್ ಮಾಡ್ಬೇಕು ಅಂತ ಆಸಕ್ತಿ ಇರ್ಲಿಲ್ಲ. ಆದ್ರೂ ಅಂಬರೀಶ್‌ ಅವರ ಮಗ ಅಲ್ವಾ, ಹಾಗಾಗಿ ಸ್ಕೂಲ್‌ ಕಡೆಯವರೇ ಫೋರ್ಸ್‌ ಮಾಡಿ, ‘ರಾಮಾಯಣ’ಅನ್ನೋ ನಾಟಕದಲ್ಲಿ ಸೇರಿಸ್ಕೊಂಡಿದ್ರು. ಅದ್ರಲ್ಲಿ ನಾನು ರಾವಣನ ಪಾತ್ರ ಮಾಡಿದ್ದು. ಆಗ್ಲೆ ಸಿಕ್ಕಾಪಟ್ಟೆಹೈಟು, ವ್ಹೈಟು ಇದ್ದೆ ಅಲ್ವಾ , ‘ಲೇ ರಾವಣ ಆಗೋದಿಕ್ಕೆ ನೀನೇ ಕಣೋ ಬೆಸ್ಟ್‌’ ಅಂತ ಫ್ರೆಂಡ್ಸು, ಮೇಷ್ಟು್ರ ಫೋರ್ಸ್‌ ಮಾಡಿದ್ರು. ಅದಕ್ಕಾಗಿ ಬಣ್ಣ ಹಚ್ಚಿದ್ದೆ.

ಅಮರ್‌ ಸಿನಿಮಾಕ್ಕೆ ಹೀರೋ ಆಗ್ತೀನಿ ಅಂದಾಗ ಪ್ರಾಕ್ಟಿಸ್‌ಗೋಸ್ಕರ ಯಾವುದಾದ್ರೂ ಪಾತ್ರ ನೋಡಿ ಕಲಿತಿದ್ದು ಇತ್ತಾ?

ಹಾಗೇನು ಇಲ್ಲ, ಆ ರೀತಿ ನಾನು ಯಾವುದೋ ಒಂದು ಪಾತ್ರ ನೋಡ್ಕೊಂಡು ಆ್ಯಕ್ಟಿಂಗ್‌ ಪ್ರಾಕ್ಟಿಸ್‌ ಖಂಡಿತಾ ಮಾಡಿಲ್ಲ. ಹಾಗೆ ನೋಡೋದಾದ್ರೆ ನಟನೆಗೆ ನಮ್ಮಪ್ಪನೇ ನಂಗೆ ಸ್ಫೂರ್ತಿ. ಅವರೇ ಒಂದು ಕ್ಯಾರೆಕ್ಟರ್‌ ಅಲ್ವಾ, ಅವರಿಗಿಂತ ಇನ್ನಾವುದು ಪಾತ್ರ ಬೇಕಿಲ್ಲ. ಅವರನ್ನೇ ನೋಡಿ, ಅವರ ಮ್ಯಾನರಿಸಂ ನೋಡುತ್ತಾ ನಟನೆಯ ಕೆಲವು ಅಂಶಗಳನ್ನು ಕಲಿತುಕೊಂಡೆ. ಅದು ಈ ಸಿನಿಮಾಕ್ಕೆ ತುಂಬಾ ಹೆಲ್ಪ್‌ ಆಯ್ತು. ಜತೆಗೆ ಈ ಸಿನಿಮಾದ ಪಾತ್ರಕ್ಕೆ ಏನೇಲ್ಲ ಬೇಕಿತ್ತೋ ಅದನ್ನು ಪ್ರಾಕ್ಟಿಸ್‌ ಮೂಲಕ ಕಲಿತುಕೊಂಡೆ.

‘ಅಮರ್’ ರಿಲೀಸ್‌ಗೂ ಮುನ್ನ 1 ಲಕ್ಷಕ್ಕೆ ಟಿಕೆಟ್ ಖರೀದಿಸಿದ ಅಭಿಮಾನಿ

ಆ್ಯಕ್ಟಿಂಗ್‌ ಟ್ರೈನಿಂಗ್‌ ಅಂತ ನೀವು ಪಡೆದ ಅನುಭವ ಈ ಸಿನಿಮಾಕ್ಕೆ ಎಷ್ಟರಮಟ್ಟಿಗೆ ಅನುಕೂಲವಾಯಿತು?

ಒಂದೇ ಸಂದರ್ಭಕ್ಕೆ ಎಲ್ಲದೂ ಬಳಕೆ ಆಗೋದು ಕಷ್ಟ. ಕತೆಗೆ ಪೂರಕವಾಗಿ ನನ್ನ ಪಾತ್ರಕ್ಕೆ ಏನೇನು ಬೇಕಿತ್ತೋ ಅಷ್ಟುಇಲ್ಲಿ ಬಳಕೆ ಆಯಿತು. ವಿಶೇಷವಾಗಿ ಆ್ಯಕ್ಷನ್‌ ಸನ್ನಿವೇಶಗಳಿಗೆ ತರಬೇತಿ ಬೇಕೇ ಬೇಕು. ಅದು ಇಲ್ಲಿ ಹೆಚ್ಚು ಅನುಕೂಲ ಎನಿಸಿತು. ಎಷ್ಟೇಯಾದ್ರೂ, ಇದು ಸಿನಿಮಾ , ಕಲಿಕೆಯ ಸಮುದ್ರದ ಹಾಗೆ. ಎಷ್ಟೇ ಕಲಿತರೂ, ಇನ್ನೇನೋ ಬೇಕು ಎನಿಸುತ್ತೆ. ಈಗ ನಾನಿಲ್ಲಿಗೆ ಬಂದ ಸ್ಟುಡೆಂಟ್‌. ಕಲಿತಿದ್ದು ಏನೇ ಇದ್ದರೂ ಕಲಿಯೋದು ಸಾಕಷ್ಟಿದೆ. ಕ್ರಮೇಣ ಕಲಿತಿದ್ದನ್ನು ಬಳಕೆ ಮಾಡುತ್ತಾ, ಕಲಿಯೋದನ್ನು ಕಲಿಯುತ್ತಾ ಹೋಗುತ್ತೇನೆ.

ಚಿತ್ರದಲ್ಲಿನ ನಿಮ್ಮ ಪಾತ್ರದ ಬಗ್ಗೆ ಹೇಳಿ..

ಪಾತ್ರ ಏನು ಅಂತ ನಾನು ಹೇಳೋದಿಲ್ಲ. ಆದ್ರೆ ಒಬ್ಬ ಹೊಸ ನಟನನ್ನು ಹೀರೋ ಆಗಿ ಪರಿಚಯಿಸುವುದಕ್ಕೆ ಒಂದು ಪಾತ್ರ ಹೇಗಿರಬೇಕೋ ಅದಕ್ಕೆ ತಕ್ಕನಾಗಿದೆ ಈ ಪಾತ್ರ. ಅದರಲ್ಲಿ ಏನಿಲ್ಲ ಹೇಳಿ? ಆ್ಯಕ್ಷನ್‌, ರೊಮಾನ್ಸ್‌, ಸೆಂಟಿಮೆಂಟ್‌ ಎಲ್ಲಾ ಬಗೆಯ ಕಮರ್ಷಿಯಲ್‌ ಎಲಿಮೆಂಟ್ಸ್‌ ಕೂಡ ಅಲ್ಲಿವೆ. ನಾನಿನ್ನು ಹೊಸಬ. ಅಲ್ಟಿಮೇಟ್‌ ಅಂತ ಹೇಳಲಾರೆ, ಪ್ರೇಕ್ಷಕರಿಗೆ ಇಷ್ಟವಾಗುವ ಹಾಗೆ ನಟಿಸಿದ್ದೇನೆನ್ನುವ ನಂಬಿಕೆಯಿದೆ.

ಶೂಟಿಂಗ್‌ ಕ್ಷಣಗಳು ಹೇಗಿದ್ದವು?

ಯಾಕೆ ಕೇಳ್ತೀರಾ ಬಿಡಿ ಆ ಕತೆ, ಕೇರಳದಲ್ಲಿ ಶೂಟಿಂಗ್‌ ನಡೆಯುವಾಗ ಮಳೆಯಲ್ಲಿ ತೊಯ್ದು, ಜ್ವರ ಬಂದಾಗಲೂ ಶೂಟಿಂಗ್‌ ಮಾಡಿದ್ದೇವೆ. ಅದು ಅಪ್ಪ-ಅಮ್ಮನಿಗೆ ಗೊತ್ತೇ ಆಗದ ಹಾಗೆ ಶೂಟಿಂಗ್‌ ಮುಗಿಸಿಕೊಂಡು ಬಂದೆವು. ಅಷ್ಟೇ ಕಷ್ಟಊಟಿಯಲ್ಲೂ ಇತ್ತು. ಅದೆಲ್ಲ ಸಿನಿಮಾಕ್ಕಾಗಿ ಎದುರಿಸಿದ ಕಷ್ಟ. ಉದ್ದೇಶ ಸಿನಿಮಾ ಚೆನ್ನಾಗಿ ಬರಬೇಕು ಅನ್ನೋದೇ ಆಗಿತ್ತು. ಅದನ್ನು ನಿಭಾಯಿಸುವುದಕ್ಕೆ ನಾನು ರೆಡಿಯಿದ್ದೆ. ನಿರ್ದೇಶಕರು ಬೇಡ ಎಂದಾಗಲೂ ನಾನ್‌ ರೆಡಿ ಅಂತಲೇ ಹೇಳುತ್ತಿದ್ದೆ. ಆಗ ಅದು ಕಷ್ಟಅಂತೆನಿಸುತ್ತಿತ್ತು. ಈಗ ಸಿನಿಮಾವನ್ನು ಸ್ಕ್ರೀನ್‌ ಮೇಲೆ ನೋಡುವಾಗ ಕಣ್ಣು ತುಂಬಿಕೊಳ್ಳುತ್ತವೆ.

ರಾಜಕೀಯ ಮರೆತು ಅಭಿಷೇಕ್, ಸುಮಲತಾಗೆ ನಿಖಿಲ್ ವಿಶ್

ಅಂಬರೀಶ್‌ ಅವರು ಅರ್ಧ ಸಿನಿಮಾ ನೋಡಿದ್ರಂತೆ, ಹೇಗಿತ್ತು ಅವರ ರೆಸ್ಪಾನ್ಸ್‌?

ಅವರು ಸಿನಿಮಾ ನೋಡುವಾಗ ಅವರ ಜತೆ ನಾನಿರಲಿಲ್ಲ. ಫೋನ್‌ ಸ್ವಿಚ್‌ ಮಾಡ್ಕೊಂಡು ಹೊರಗಡೆ ಇದ್ದೆ. ಅವರು ಸಿನಿಮಾ ನೋಡಿ ಮನೆಗೆ ಹೋದ್ರು. ಅವರೇನೋ ಹೇಳ್ತಾರೆ, ನನ್ನ ಆ್ಯಕ್ಟಿಂಗ್‌ ಮೆಚ್ಚಿಕೊಳ್ತಾರೆ, ಆ ಮಾತು ಹೇಳ್ತಾರೆ ಅಂತಲೇ ಕಾಯುತ್ತಿದ್ದೆ. ಆದ್ರೆ ಅವರು ಏನನ್ನು ಹೇಳಲೇ ಇಲ್ಲ. ನಾನೇ ಫೋನ್‌ ಮಾಡಿ ಎಲ್ಲಿದ್ದೀರಾ ಅಂದೆ. ಲ್ಯಾಂಡ್‌ಲೈನ್‌ಗೆ ಕಾಲ್‌ ಮಾಡಿ, ಎಲ್ಲಿದ್ದೀರಾ ಅಂತೀಯಾ ಅಂತ ಘರ್ಜಿಸಿದ್ರು. ಮತ್ತೆ ಯಡವಟ್ಟು. ಕೊನೆಗೆ ನಾನೇ ಕೇಳಿದಾಗ ಚೆನ್ನಾಗಿದೆ. ಸಿನಿಮಾ ಚೆನ್ನಾಗಿದೆ ಬಂದಿದೆ ಅಂತ ಮೆಚ್ಚಿಕೊಂಡ್ರು. ಮನೆಯಲ್ಲಿ ಅಮ್ಮ ಒಳ್ಳೆಯ ಕ್ರಿಟಿಕ್‌. ಅಪ್ಪ ಕಾನ್ಫಿಡೆನ್ಸ್‌ ನೀಡುತ್ತಿದ್ದರು. ಈಗಲೂ ಅಮ್ಮ ಸಿನಿಮಾ ನೋಡಿ ಏನ್‌ ಹೇಳ್ತಾರೋ ಅಂತ ಕಾಯುತ್ತಿದ್ದೇನೆ. ಅವರು ಬೆಸ್ಟ್‌ ಅಂದ್ರೆ, ನಿಜಕ್ಕೂ ಸಂತಸ.

ಅಂಬರೀಶ್‌ ಅಭಿಮಾನಿಗಳ ಪಾಲಿಗೆ ನೀವೀಗ ಯಂಗ್‌ ರೆಬೆಲ್‌ ಸ್ಟಾರ್‌. ಇದನ್ನು ಹೇಗೆ ಪರಿಗಣಿಸುತ್ತೀರಿ?

ಜವಾಬ್ದಾರಿ ಅನ್ನೋದಕ್ಕಿಂತ ಅದು ನನಗೊಂದು ಧೈರ್ಯ ಮತ್ತು ಕಾನ್ಫಿಡೆನ್ಸ್‌. ಯಾಕಂದ್ರೆ, ವಿತೌಟ್‌ ಅಂಬರೀಶ್‌ ನಾನೇನು ಅಲ್ಲ. ಅವರಿಲ್ಲದ ಅಭಿಷೇಕ್‌ ಒಂಥರ ಡಮ್ಮಿ, ವೇಸ್ಟ್‌. ಅಂಬರೀಶ್‌ ಅನ್ನೋದೇ ನಂಗೊಂದು ಸ್ಟೆ್ರಂತ್‌. ಧೈರ್ಯ, ಕಾನ್ಫಿಡೆನ್ಸ್‌, ಐಡೆಂಟಿಟಿ, ಎಲ್ಲವೂ. ಇನ್ನು ಜವಾಬ್ದಾರಿ ಅಂತ ಬಂದ್ರೆ,ಅಪ್ಪನ ಮುಂದೆ ನಾನೇನು ಅಲ್ಲ. ಅವರ ಸ್ಥಾನದಲ್ಲಿ ನಾನು ಅನ್ನೋದು ತಮಾಷೆ. ಅವರ ಹಾಗೆ ಬದುಕೋದು ಕಷ್ಟ. ಅವರೇ ಬೇರೆ, ಅವರ ಗತ್ತು, ಗಾಂಭಿರ್ಯ, ನಡೆ, ನುಡಿಯೇ ಬೇರೆ. ಏನೋ ಅವರ ವ್ಯಕ್ತಿತ್ವದಲ್ಲಿ ಸ್ವಲ್ಪನಾದ್ರೂ ಇರೋಣ, ಅಭಿಮಾನಿಗಳ ಋುಣ ತೀರಿಸೋಣ ಅನ್ನೋದು ಜವಾಬ್ದಾರಿ ಅನ್ನಿ.

ಇಮಿಟೇಟ್‌ ಮಾಡೋದಾದ್ರೆ,ನಿಮ್ಮ ತಂದೆಯವರ ಯಾವ ಪಾತ್ರ ಇಷ್ಟ?

ನೋ ವೇ.. ಚಾನ್ಸೆ ಇಲ್ಲ. ಯಾಕಂದ್ರೆ ಅಪ್ಪನ ಇಮಿಟೇಟ್‌ ಮಾಡೋದಿಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅವರದ್ದೇ ಒಂದು ಯುನಿಕ್‌ಸ್ಟೈಲ್‌ ಇದೆ. ಅವರ ಮ್ಯಾನರಿಸಂ ಇದೆ. ಕಣ್ಣಲೇ ಒಂದು ಸ್ಪಾರ್ಕ್ ಇದೆ. ಕಣ್ಣಲ್ಲೇ, ಕೈಯಲ್ಲೇ ಮಾತು. ಅವರು ಒಂದ್ಸಲ್‌ ಗರ್ಜಿಸಿದ್ರೆ ಮನೆಯಲ್ಲಿ ಭೂ ಕಂಪ.

Follow Us:
Download App:
  • android
  • ios