ದೇಶಾದ್ರಿ ಹೊಸ್ಮನೆ

ನಿಮ್ಮ ಹಿನ್ನೆಲೆ ಏನು? ನಿರ್ದೇಶನಕ್ಕೆ ಬಂದಿದ್ದು ಹೇಗೆ?

ಹುಟ್ಟಿಬೆಳೆದಿದ್ದೆಲ್ಲ ಬೆಂಗಳೂರು. ಸಿನಿಮಾ ಜಗತ್ತಿಗೆ ಕಾಲಿಟ್ಟು ಹಲವು ವರ್ಷಗಳೇ ಆದವು. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಆಸಕ್ತಿ ಇತ್ತು. ಆ ಕಾರಣಕ್ಕೆ ಓದಿನ ನಂತರ ನಿರ್ದೇಶಕ ಪವನ್‌ ಒಡೆಯರ್‌ ಬಳಿ ಸಹಾಯಕ ನಿರ್ದೇಶಕನಾಗಿ ಸೇರಿಕೊಂಡಿದ್ದೆ. ಒಂದಷ್ಟುಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿಯೂ ಕೆಲಸ ಮಾಡಿದೆ. ಆ ಅನುಭವದಲ್ಲಿ ನಾನೇ ಒಂದು ಚಿತ್ರ ನಿರ್ದೇಶಿಸಬೇಕೆಂದು ಹೊರಟಾಗ ಹುಟ್ಟಿಕೊಂಡಿದ್ದೇ ‘ಡಾಟರ್‌ ಆಫ್‌ ಪಾರ್ವತಮ್ಮ’ ಚಿತ್ರದ ಕತೆ.

ಶೀರ್ಷಿಕೆಯಲ್ಲೇ ಕ್ಯೂರಿಯಾಸಿಟಿ ಹುಟ್ಟಿಸುವ ಈ ಚಿತ್ರದ ವಿಶೇಷತೆಗಳೇನು?

ನಾಯಕಿ ಹರಿಪ್ರಿಯಾ ಅವರಿಗೆ ಇದು 25ನೇ ಚಿತ್ರ. ಹಾಗೆಯೇ ಹಿರಿಯ ನಟಿ ಸುಮಲತಾ ಇಲ್ಲಿ ಅಭಿನಯಿಸಿದ್ದೇ ಇನ್ನೊಂದು ವಿಶೇಷ. ಇವರಿಬ್ಬರ ಕಾಂಬಿನೇಷನ್‌ ಜತೆಗೆ ಕತೆ ಕೂಡ ಇಲ್ಲಿ ಮತ್ತೊಂದು ಆಕರ್ಷಣೆ. ಇದೊಂದು ರೊಮ್ಯಾಂಟಿಕ್‌ ಆ್ಯಕ್ಷನ್‌ ಸಿನಿಮಾ. ಒಂದು ಮರ್ಡರ್‌ ಕೇಸ್‌ ಇನ್ವೇಸ್ಟಿಗೇಷನ್‌ ಮೂಲಕ ಕತೆ ಸಾಗುತ್ತದೆ. ಅದೊಂದು ನೈಜ ಘಟನೆ. ಅದಕ್ಕೆ ರೊಮ್ಯಾನ್ಸ್‌, ಥ್ರಿಲ್ಲರ್‌, ಸಸ್ಪೆನ್ಸ್‌, ಆ್ಯಕ್ಷನ್‌ ಜತೆಗೆ ಸೆಂಟಿಮೆಂಟ್‌ ಎನ್ನುವ ಮಸಾಲೆ ಮಿಕ್ಸ್‌ ಆಗಿದೆ. ಮೇಕಿಂಗ್‌ ಕೂಡ ಅದ್ಭುತವಾಗಿ ಬಂದಿದೆ. ಚಿತ್ರದಲ್ಲಿ ಎರಡೇ ಹಾಡಿದ್ದರೂ, ಮಿಥುನ್‌ ಮುಕುಂದನ್‌ ಸಂಗೀತ ಸಂಯೋಜನೆ ಚಿತ್ರಕ್ಕೆ ಮೆರುಗು ನೀಡಿದೆ. ಇವೆಲ್ಲ ಪ್ರೇಕ್ಷಕರಿಗೆ ಇಷ್ಟವಾಗುತ್ತವೆ ಎನ್ನುವ ನಂಬಿಕೆಯಿದೆ.

ಚಿತ್ರದ ಟೈಟಲ್‌ ಸಾಕಷ್ಟುಸುದ್ದಿ ಆಗಿದ್ದು ಯಾಕೆ?

ಟೈಟಲ್‌ನಲ್ಲಿ ಯಾವುದೇ ಕನ್‌ಫä್ಯಸ್‌ನ ಇಲ್ಲ. ಕೆಲವರು ಹಾಗ್ಯಾಕೆ ಅಂದುಕೊಂಡರೋ ಗೊತ್ತಿಲ್ಲ. ಪಾರ್ವತಮ್ಮ ಅವರ ಹೆಸರನ್ನ ಪ್ರಚಾರಕ್ಕೆ ಬಳಸಿಕೊಳ್ಳುವ ತಂತ್ರವಿದು ಅನ್ನೋದು ಅವರ ವಾದ. ನಿಜ ಹೇಳ್ಬೇಕಂದ್ರೆ, ನಿರ್ಮಾಪಕಿ ಪಾರ್ವತಮ್ಮ ಅವರಿಗೂ, ಚಿತ್ರದ ಟೈಟಲ್‌ಗೂ ಯಾವುದೇ ಕನೆಕ್ಷನ್‌ ಇಲ್ಲ. ಪಾರ್ವತಮ್ಮ ಚಿತ್ರದ ಪ್ರಮುಖ ಪಾತ್ರಧಾರಿ. ಅದನ್ನು ಹೆಚ್ಚು ಫೋಕಸ್‌ ಮಾಡ್ಬೇಕಿತ್ತು. ಜತೆಗೆ ಕತೆಗೆ ತಕ್ಕಂತೆ ಒಂದು ಪವರ್‌ಫುಲ್‌ ಟೈಟಲ್‌ ಬೇಕಿತ್ತು. ಆಗ ಚಿತ್ರ ತಂಡ ಯೋಚಿಸುತ್ತಿದ್ದಾಗ ಮನಸ್ಸಲ್ಲಿ ಹೊಳೆದ ಶೀರ್ಷಿಕೆಯೇ ‘ಡಾಟರ್‌ ಆಫ್‌ ಪಾರ್ವತಮ್ಮ’ ಅದಕ್ಕೂ ಚಿತ್ರದ ಕತೆಗೆ ಇರುವ ಕನೆಕ್ಷನ್‌ ಏನು ಅನ್ನೋದು ಚಿತ್ರ ನೋಡಿದಾಗ ಗೊತ್ತಾಗುತ್ತದೆ. ಒಂದು ಪವರ್‌ಫುಲ್‌ ಹೆಸರು ಚಿತ್ರಕ್ಕೆ ಟೈಟಲ್‌ ಆಗಿದ್ದು ಹೆಮ್ಮೆ ಇದೆ.

ಹರಿಪ್ರಿಯಾ ಅವರ ಪಾತ್ರ, ಲುಕ್‌ ಎಲ್ಲವೂ ವಿಭಿನ್ನ ಎನ್ನುವುದರ ಬಗ್ಗೆ ಹೇಳಿ...

ವೈದೇಹಿ ಎನ್ನುವುದು ಅವರ ಪಾತ್ರದ ಹೆಸರು. ವೃತ್ತಿಯಲ್ಲಿ ಸಿಐಡಿ ಆಫೀಸರ್‌. ಎರಡು ಶೇಡ್‌ನಲ್ಲಿದೆ ಆ ಪಾತ್ರ. ಒಂದು ಲುಕ್‌ ಫ್ಲ್ಯಾಷ್‌ಬ್ಯಾಕ್‌ನಲ್ಲಿ ಬಂದರೆ, ಮತ್ತೊಂದು ಲುಕ್‌ ಪ್ರೆಸೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಕಾಲೇಜು, ಪ್ರೀತಿ-ಪ್ರೇಮ ಅಲ್ಲಿಂದ ಉದ್ಯೋಗ ಅಂತ ತನ್ನದೇ ಕಮಿಟ್‌ಮೆಂಟ್‌ನಲ್ಲಿ ಖಡಕ್‌ ಆಗಿ ಕಾಣಿಸಿಕೊಳ್ಳುವ ವೈದೇಹಿ, ಅಮ್ಮನ ವಿಚಾರದಲ್ಲಿ ಎಷ್ಟುಭಾವನಾತ್ಮಕ ಹುಡುಗಿ ಅನ್ನೋದು ಅವರ ಪಾತ್ರದ ಮತ್ತೊಂದು ವಿಶೇಷ. ಅವರು ಸಾಕಷ್ಟುಸಿನಿಮಾ ಮಾಡಿದ್ದರೂ ಈ ತನಕ ಇಂತಹ ಪಾತ್ರದಲ್ಲಿ ಅಭಿನಯಿಸಿಲ್ಲ. ಈಗಾಗಲೇ ಪೋಸ್ಟರ್‌, ಟ್ರೇಲರ್‌ಗಳಲ್ಲಿ ಕಂಡಂತೆ ಅದೊಂದು ಟಾಮ್‌ಬಾಯ್‌ ಲುಕ್‌ನಲ್ಲಿದೆ. ಹಾಗೆಯೇ ಆ್ಯಕ್ಷನ್‌ ಸೀನ್‌ಗಳಲ್ಲೂ ಅಬ್ಬರಿಸಿದ್ದಾರೆ. ಆರ್‌ಎಕ್ಸ್‌ ಬೈಕ್‌ ಚಲಾಯಿಸಿ, ಲೇಡಿ ಸ್ಟಾರ್‌ ತರಹ ಮಿಂಚಿದ್ದಾರೆ. ಇದು ಅವರ ಪಾತ್ರದ ವಿಭಿನ್ನತೆ ಮತ್ತು ವಿಶೇಷತೆ.

ಹರಿಪ್ರಿಯಾ ಅಭಿಮಾನಿಗಳು ಬೇಜಾರಾಗಿದ್ದಾರೆ!

ನಿರ್ದೇಶನದ ಚೊಚ್ಚಲ ಸಿನಿಮಾದಲ್ಲೇ ಈ ಬಗೆಯ ಕತೆ ಹೊಳೆದಿದ್ದು ಹೇಗೆ?

ಸಹಾಯಕ ನಿರ್ದೇಶಕನಾಗಿದ್ದಲೇ ಕತೆ ಬರೆಯುವ ಸಾಹಸ ನಡೆದಿತ್ತು. ಆಗ ಬರೆದವೆಲ್ಲ ಸಿನಿಮಾ ಆಗಲಿಲ್ಲ. ಆದರೆ ನಾನೇ ಸ್ವತಂತ್ರ ನಿರ್ದೇಶಕನಾಗುವ ಸಾಹಸದಲ್ಲಿ ಕತೆ ಬರೆಯಲು ಕುಳಿತಾಗ ಒಂದು ನೈಜ ಘಟನೆ ಕಣ್ಣ ಮುಂದೆ ಬಂತು. ಅದರ ಸಣ್ಣದೊಂದು ಎಳೆಯನ್ನೇ ಆಧರಿಸಿ, ಕತೆ ಬರೆಯಲು ಕುಳಿತೆ. ಘಟನೆಯನ್ನೇ ಸಿನಿಮಾ ಮಾಡಲು ಹೊರಟರೆ ಅದೊಂದು ಡಾಕ್ಯುಮೆಂಟರಿ ಆದೀತೆಂಬ ಭಯವಿತ್ತು. ಹಾಗಾಗಿ ಆ ಕತೆಗೆ ಒಂದಷ್ಟುಕಮರ್ಷಿಯಲ್‌ ಅಂಶಗಳನ್ನು ಸೇರಿಸಿಕೊಂಡೆ. ಕತೆ ಮೂಲ ಎಳೆಯ ಜತೆಗೆ ರೊಮ್ಯಾನ್ಸ್‌, ಆ್ಯಕ್ಷನ್‌, ಸೆಂಟಿಮೆಂಟ್‌ ಹದವಾಗಿ ಬೆರೆತಿವೆ. ಸುಂದರವಾದ ಚಿತ್ರಿಕೆ ಆಗಿವೆ ಎನ್ನುವ ವಿಶ್ವಾಸವಿದೆ.

ಸುಮಲತಾ ಮತ್ತು ಹರಿಪ್ರಿಯಾ ಕಾಂಬಿನೇಷನ್‌ ಚಿತ್ರದ ಹೈಲೈಟ್‌ ಅನ್ನೋದು ಹೇಗೆ?

ಅವರಿಬ್ಬರು ಇಲ್ಲಿ ಅಮ್ಮ-ಮಗಳು. ನಾಯಕಿ ವೈದೇಹಿ ಪಾತ್ರಕ್ಕೆ ಹರಿಪ್ರಿಯಾ ಸೂಕ್ತ ಆಗಬಲ್ಲರು ಅಂತ ನಾವು ಅವರನ್ನು ಭೇಟಿ ಮಾಡಿದ್ದೆವು. ಆ ಸಂದರ್ಭದಲ್ಲೇ ಅಮ್ಮನ ಪಾತ್ರಕ್ಕೆ ಹರಿಪ್ರಿಯಾ ಅವರೇ ಸೂಚಿಸಿದ ಹೆಸರು ಸುಮಲತಾ. ಪಾತ್ರದ ಬಗ್ಗೆ ಕೇಳಿದಾಗ ಅವರು ಒಂದೇ ಮಾತಿನಲ್ಲಿ ಓಕೆ ಅಂದರು. ಇವರಿಬ್ಬರ ಪಾತ್ರಗಳೇ ಇಲ್ಲಿ ವಿಶೇಷವಾಗಿವೆ. ಓದು ಮುಗಿದ ನಂತರ ಉದ್ಯೋಗದಲ್ಲೇ ಕಳೆದು ಹೋಗುವ ಮಗಳು. ವೈದೇಹಿಗೆ ಸದಾ ಕರ್ತವ್ಯ ನಿಷ್ಟೆ. ಆದರೆ ಬೆಳೆದು ದೊಡ್ಡವಳಾದ ಮಗಳಿಗೆ ಮದುವೆ ಮಾಡಿ,ಆಕೆಯ ಬದುಕಲ್ಲಿ ಸಂತೋಷ ಕಾಣುವ ಹಂಬಲ ಅಮ್ಮನದು. ಆ ನಡುವಿನ ತುಡಿತ, ಒದ್ದಾಟವೇ ಇಲ್ಲಿ ಭಾವನಾತ್ಮಕ ಅಂಶ. ಇಬ್ಬರ ಪಾತ್ರವೂ ಇಲ್ಲಿ ನೈಜವಾಗಿ ಬಂದಿದೆ.

ನಟ ಡಾಲಿ ಧನಂಜಯ್‌, ಈ ಚಿತ್ರಕ್ಕೆ ಹಾಡು ಬರೆದಿದ್ದು ಹೇಗೆ?

ಪವನ್‌ ಒಡೆಯರ್‌ ಜರ್ಸಿ ಸಿನಿಮಾ ನಿರ್ದೇಶಿಸುತ್ತಿದ್ದಾಗ ನಾನು ಆ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿದ್ದೆ. ಅದರ ನಾಯಕ ನಟ ಧನಂಜಯ್‌. ಆ ಸಮಯದಲ್ಲಿ ಆವರೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಕ್ಕಿತ್ತು. ಅವರು ಪುಸ್ತಕ ಓದುವ, ಬರೆಯುವ ಅಭ್ಯಾಸಗಳ ಬಗ್ಗೆ ಅಲ್ಲಿಯೇ ತಿಳಿದಿತ್ತು. ಅಲ್ಲಿಂದ ಅವರೊಂದಿಗೆ ಒಳ್ಳೆಯ ಒಡನಾಟವೂ ಇತ್ತು. ಈ ಸಿನಿಮಾಕ್ಕೆ ಒಳ್ಳೆಯ ಸಾಹಿತ್ಯ ಬೇಕೆಂದುಕೊಂಡಿದ್ದಾಗ ಅವರಿಂದಲೇ ಒಂದು ಹಾಡು ಬರೆಸಿದರೆ ಒಳ್ಳೆಯದು ಅಂತ ಆಲೋಚಿಸಿ, ಭೇಟಿ ಮಾಡಿದ್ದೆ. ಅವರು ಸಿಕ್ವೆನ್ಸ್‌ ಕೇಳಿದರು. ಟ್ಯೂನ್‌ ಕೇಳಿದರು. ಅದ್ಭುತವಾದ ಸಾಹಿತ್ಯದಲ್ಲಿ ಚಿತ್ರಕ್ಕೆ ಥೀಮ್‌ ಸಾಂಗ್‌ ಬರೆದು ಕೊಟ್ಟರು. ಅದೀಗ ಸಾಕಷ್ಟುಮೆಚ್ಚುಗೆಯೂ ಆಗಿದೆ.

ಚಿತ್ರದ ಮೇಕಿಂಗ್‌ ಬಗ್ಗೆ ಹೇಳಿ?

ದಿಶ್‌ ಎಂಟರ್‌ಟೈನರ್‌ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ಶಶಿಧರ್‌, ವಿಜಯಲಕ್ಷ್ಮಿ ಕೃಷ್ಣೇಗೌಡ, ಸಂದೀಪ್‌ ಶಿವಮೊಗ್ಗ ಹಾಗೂ ಶ್ವೇತ ಮಧುಸೂದನ್‌ ಇದರ ನಿರ್ಮಾಪಕರು. ನನ್ನಂತಹ ಹೊಸಬನ ಮೇಲೆ ನಂಬಿಕೆ ಇಟ್ಟು ಅವರು ನಿರ್ಮಾಣಕ್ಕೆ ಬಂದಿದ್ದು ಕತೆಯ ಕಾರಣಕ್ಕೆ. ಅವರಿಗೆ ಕತೆ ಹಿಡಿಸಿತ್ತು. ಒಳ್ಳೆಯ ಸಿನಿಮಾ ಮಾಡಬಹುದೆನ್ನುವ ನಂಬಿಕೆ ಹುಟ್ಟಿತು. ಅದೇ ನಂಬಿಕೆಯಲ್ಲಿ ಕತೆಗೆ ತಕ್ಕಂತೆ ಬಂಡವಾಳ ಹೂಡಿದ್ದಾರೆ. ಯಾವುದರಲ್ಲೂ ಕೊರತೆ ಮಾಡಿಲ್ಲ. ಚಿತ್ರಕ್ಕೆ ಬಹುತೇಕ ಬೆಂಗಳೂರಿನಲ್ಲೇ ಚಿತ್ರೀಕರಣ ಆಗಿದೆ. ಪಾತ್ರಗಳಿಗೆ ತಕ್ಕಂತೆ ಕಲಾವಿದರ ಆಯ್ಕೆ ವಿಚಾರದಿಂದ ಹಿಡಿದು ಚಿತ್ರೀಕರಣ, ಪೋಸ್ಟ್‌ ಪ್ರೊಡಕ್ಷನ್‌, ಪ್ರಮೋಷನ್‌ವರೆಗೂ ಪ್ಲ್ಯಾನ್‌ ಪ್ರಕಾರ ಆಗಿದೆ. ಸಿನಿಮಾ ಬಗ್ಗೆ ಅಷ್ಟುಕಾಳಜಿ, ಪ್ರೀತಿ ನಿರ್ಮಾಪಕರಲ್ಲಿದೆ.

ಪ್ರತಿ ವಾರ ಬಿಡುಗಡೆ ಆಗುವ ಐದಾರು ಸಿನಿಮಾಗಳ ನಡುವೆ ಪ್ರೇಕ್ಷಕ ನಿಮ್ಮ ಸಿನಿಮಾವನ್ನು ಯಾಕೆ ನೋಡಬೇಕು?

ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವ ಮಾತಿನಂತೆ ನಾವು ಮಾಡಿದ ಸಿನಿಮಾ ನಮಗೆಲ್ಲ ಚೆನ್ನಾಗಿಯೇ ಇರುತ್ತೆ. ಅದೇ ನಂಬಿಕೆ, ವಿಶ್ವಾಸ ನಮಗೂ ಇದೆ. ಪ್ರತಿಯೊಬ್ಬರಿಗೂ ಇದು ಸಹಜವಾಗಿಯೇ ಇರುತ್ತೆ. ಆದರೂ, ನಮ್ಮ ಸಿನಿಮಾದ ಮೇಲಿನ ವಿಶ್ವಾಸಕ್ಕಿರುವ ಕಾರಣಗಳು ಹಲವಾರು. ಕತೆ ಅದ್ಭುತವಾಗಿದೆ. ಅದರ ನಿರೂಪಣೆ ರೀತಿ ಭಿನ್ನವಾಗಿದೆ. ಸುಮಲತಾ ಹಾಗೂ ಹರಿಪ್ರಿಯಾ ಇಲ್ಲಿನ ಹೈಲೈಟ್ಸ್‌. ಜತೆಗೆ ಸೂರಜ್‌ ಗೌಡ ಸೇರಿ ಹಲವರು ಇದ್ದಾರೆ. ಸಂಗೀತ ಸೊಗಸಾಗಿದೆ. ಅಚ್ಚುಕಟ್ಟಾಗಿ ತೆರೆಗೆ ತಂದಿದ್ದೇವೆ.