ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ಸಹೋದರಿ ಪಾತ್ರಕ್ಕೆ ಮೊದಲು ಬಾಲಿವುಡ್ ನಟಿ ಆಯ್ಕೆಯಾಗಿದ್ದರು. ಆರಂಭದಲ್ಲಿ ಖುಷಿಯಿಂದ ಒಪ್ಪಿಕೊಂಡ ನಟಿ, ಈ ಒಂದು ಕಾರಣಕ್ಕೆ ಇಷ್ಟವಿಲ್ಲದೇ ಚಿತ್ರದಿಂದ ಹೊರನಡೆದರು, ನಂತರ ನಿರ್ದೇಶಕಿ ಗೀತು ಮೋಹನ್‌ದಾಸ್ ಕಥೆಯ ಪ್ರಾಮುಖ್ಯತೆ ವಿವರಿಸಿದಾಗ ನಯನತಾರಾ ಈ ಪಾತ್ರವನ್ನು ಒಪ್ಪಿಕೊಂಡರು.

‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ (Toxic) ವಿಶ್ವಾದ್ಯಂತ ಅಬ್ಬರಿಸುತ್ತಿದೆ. ಈ ಚಿತ್ರದಲ್ಲಿ ಯಶ್ ಜೊತೆ ಬರೋಬ್ಬರಿ ಐವರು ಖ್ಯಾತ ನಟಿಯರು (ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್) ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.

ಆದರೆ, ಈ ಚಿತ್ರದಲ್ಲಿ ತಂದೆ-ಮಗನ ಸೆಂಟಿಮೆಂಟ್ ಜೊತೆಗೆ ಅಕ್ಕ-ತಮ್ಮನ ಬಾಂಧವ್ಯವೂ ಕಥೆಯ ಬಹುಮುಖ್ಯ ಭಾಗವಾಗಿದೆ. ಇದರಲ್ಲಿ ಯಶ್ (ರಾಯ ಪಾತ್ರ) ಅವರ ಸಹೋದರಿ ‘ಗಂಗಾ’ ಪಾತ್ರದಲ್ಲಿ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ನಟಿಸಿದ್ದಾರೆ. ಆದರೆ, ಈ ಪಾತ್ರಕ್ಕೆ ನಯನತಾರಾಗಿಂತ ಮೊದಲು ಆಯ್ಕೆಯಾಗಿದ್ದು ಬಾಲಿವುಡ್‌ನ ಖ್ಯಾತ ನಟಿ ಕರೀನಾ ಕಪೂರ್ (Kareena Kapoor)! ಆದರೆ, ಕರೀನಾ ಈ ಬಹುಕೋಟಿ ಪ್ರಾಜೆಕ್ಟ್‌ನಿಂದ ಕೊನೆ ಕ್ಷಣದಲ್ಲಿ ಹೊರನಡೆದಿದ್ದು ಯಾಕೆ? ಇಲ್ಲಿದೆ ತೆರೆಮರೆಯ ಇಂಟರೆಸ್ಟಿಂಗ್ ಕಥೆ!

ಕರೀನಾ ಕಪೂರ್ 'ಟಾಕ್ಸಿಕ್' ರಿಜೆಕ್ಟ್ ಮಾಡಿದ್ದೇಕೆ?

ವರದಿಗಳ ಪ್ರಕಾರ, ಗೀತು ಮೋಹನ್‌ದಾಸ್ ಮೊದಲು 'ಗಂಗಾ' ಪಾತ್ರಕ್ಕಾಗಿ ಕರೀನಾ ಕಪೂರ್ ಅವರನ್ನು ಸಂಪರ್ಕಿಸಿದ್ದರು. ಕರೀನಾ ಕೂಡ ಈ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಸ್ವತಃ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು. ಆದರೆ ಚಿತ್ರೀಕರಣ ಆರಂಭವಾಗುವ ಹೊತ್ತಿಗೆ ಕರೀನಾ ಚಿತ್ರದಿಂದ ಹಿಂದೆ ಸರಿದರು. ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಯಶ್ ಎದುರು 'ಸಹೋದರಿ' ಪಾತ್ರದಲ್ಲಿ ನಟಿಸಲು ಕರೀನಾ ಅವರಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. 'ಯಶ್ ಜೊತೆ ನಟಿಸುವುದಾದರೆ ನಾಯಕಿಯಾಗಿ (Heroine) ರೊಮ್ಯಾಂಟಿಕ್ ಪೇರ್ ಆಗಿ ನಟಿಸುತ್ತೇನೆ, ತಂಗಿ ಪಾತ್ರ ಮಾಡುವುದಿಲ್ಲ' ಎಂದು ಅವರು ಚಿತ್ರತಂಡಕ್ಕೆ ಸ್ಪಷ್ಟಪಡಿಸಿ ಪ್ರಾಜೆಕ್ಟ್‌ನಿಂದ ಹೊರಬಂದರು ಎಂಬ ಮಾತು ಸಿನಿವಲಯದಲ್ಲಿ ಕೇಳಿಬಂದಿದೆ.

ನಯನತಾರಾ ಎಂಟ್ರಿ ಕೊಟ್ಟಿದ್ದು ಹೇಗೆ?

ಕರೀನಾ ಕಪೂರ್ ಹೊರನಡೆದ ನಂತರ ಚಿತ್ರತಂಡ ಲೇಡಿ ಸೂಪರ್‌ಸ್ಟಾರ್ ನಯನತಾರಾ ಅವರನ್ನು ಸಂಪರ್ಕಿಸಿತು. ಆರಂಭದಲ್ಲಿ ನಯನತಾರಾ ಕೂಡ ಸಹೋದರಿಯ ಪಾತ್ರವೆಂಬ ಕಾರಣಕ್ಕೆ ಕೊಂಚ ಹಿಂಜರಿದಿದ್ದರು.

ಆದರೆ ನಿರ್ದೇಶಕಿ ಗೀತು ಮೋಹನ್‌ದಾಸ್, 'ಗಂಗಾ' ಪಾತ್ರದ ಗಾಂಭೀರ್ಯ, ಅದರ ತೀವ್ರತೆ (Intensity) ಮತ್ತು ಸಂಪೂರ್ಣ ಕಥೆಯನ್ನು ಆ ಪಾತ್ರವೇ ಹೇಗೆ ಮುನ್ನಡೆಸುತ್ತದೆ ಎಂಬುದನ್ನು ನಯನತಾರಾಗೆ ವಿವರಿಸಿದರು. ಕಥೆಯ ಗಟ್ಟಿತನ ಮತ್ತು ಪಾತ್ರಕ್ಕಿರುವ ಪ್ರಾಮುಖ್ಯತೆಯನ್ನು ಅರಿತ ನಯನತಾರಾ, ತಕ್ಷಣವೇ ಈ ಪಾತ್ರ ಮಾಡಲು ಗ್ರೀನ್ ಸಿಗ್ನಲ್ ನೀಡಿದರು.

ಯಶ್ ಡಬಲ್ ರೋಲ್ & ನಯನತಾರಾ ಕಾಂಬಿನೇಷನ್ ಕ್ರೇಜ್!

ಚಿತ್ರದಲ್ಲಿ ಯಶ್ ‘ರಾಯ’ ಮತ್ತು ಆತನ ಮಗ 'ರೂಮಿ / ಟಿಕೆಟ್' ಎಂಬ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಯನ ಅಕ್ಕನಾಗಿ ಗಂಗಾ ಆಗಿ ನಯನತಾರಾ ಅವರ ಆಕ್ಷನ್ ಮತ್ತು ಎಮೋಷನಲ್ ದೃಶ್ಯಗಳು ಚಿತ್ರದ ಹೈಲೈಟ್ ಆಗಿವೆ. ಕರೀನಾ ಕಪೂರ್ ಬಿಟ್ಟ ಈ ಪಾತ್ರಕ್ಕೆ ನಯನತಾರಾ ಅವರೇ ಅತ್ಯಂತ ಪರ್ಫೆಕ್ಟ್ ಚಾಯ್ಸ್ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.