'ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ' ಎಂದು ನಟಿ ರಕ್ಷಿತಾ ಪ್ರೇಮ್

ಆರ್‌ಸಿಬಿ (RCB) ಸಂಭ್ರಮಾಚರಣೆ ವೇಳೆ ವಿಧಾನಸೌಧದ ಬಳಿ ನಡೆದ ನೂಕುನುಗ್ಗಲಿನಲ್ಲಿ ಹಲವಾರು ಜನ ಸಾವನ್ನಪ್ಪಿದ್ದು ಹಲವರು ಪರಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಭೇಟಿ ಮಾಡಲು ಸ್ವತಃ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೇ ವಿರೋಧ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೂ ಕೂಡ ಗಾಯಾಳುಗಳ ಭೇಟಿಗೆ ಆಸ್ಪತ್ರೆಗೆ ಆಗಮಿಸಿದ್ದಾರೆ.

ಇದೀಗ, ಸ್ಯಾಂಡಲ್‌ವುಡ್ ನಟಿ ಹಾಗೂ ರಾಜಕೀಯದಲ್ಲೂ ಸಕ್ರಿಯರಾಗಿರುವ ರಕ್ಷಿತಾ ಪ್ರೇಮ್ ಅವರು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೊಂದು ಪೋಸ್ಟ್ ಮಾಡಿದ್ದಾರೆ. ಅದೀಗ ಭಾರೀ ವೈರಲ್ ಆಗುತ್ತಿದೆ. ಸರ್ಕಾರದ ಸರ್ಕಾರ 'ಸಂಭ್ರಮಾಚರಣೆ'ಯ ಪ್ಲಾನ್ ಸರಿಯಾಗಿ ಮಾಡಿಲ್ಲ, ಅದೊಂದು ರಾಜಕೀಯ ಪಕ್ಷದ ಸಂಭ್ರಮಾಚರಣೆ ರೀತಿ ಕಂಡುಬರುತ್ತಿತ್ತು' ಎಂಬ ಅರ್ಥದಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಹಾಗಿದ್ದರೆ ನಟಿ ರಕ್ಷಿತಾ ಪೋಸ್ಟ್‌ನಲ್ಲಿ ಏನಿದೆ? ಇಲ್ಲಿದೆ ಮಾಹಿತಿ..

'ಅತ್ಯಂತ ಕೆಟ್ಟ ರೀತಿಯಲ್ಲಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಇದೊಂದು ಸಂಭ್ರಮಾಚರಣೆ ರೀತಿಯಲ್ಲಿ ಇಲ್ಲವೇ ಇಲ್ಲ, ರಾಜಕೀಯ ಪಕ್ಷದ ಸಭೆಯಂತೆ ಇತ್ತು. ಯಾವುದೇ ರೀತಿಯಲ್ಲಿ ಇದು ಸೂಕ್ತ ರೀತಿಯಲ್ಲಿ ಇರಲಿಲ್ಲ. ಕ್ರೀಡೆ ಯಾವುದೇ ಪಕ್ಷದ ಸಂಭ್ರಮಾಚರಣೆ ಅಲ್ಲ, ಇದು ಯಾವುದೇ ವಿಧದಲ್ಲೂ ರಾಜಕೀಯಕ್ಕೆ ಸಂಬಂಧಪಟ್ಟಿಲ್ಲ' ಎಂದು ನಟಿ ರಕ್ಷಿತಾ ಪ್ರೇಮ್ ಅವರು ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್‌ ಬಹಳಷ್ಟು ವೈರಲ್ ಆಗುತ್ತಿದೆ.

ಸದ್ಯ, ಸಂಭ್ರಮಾಚರಣೆ ವೇಳೆ ನಡೆದ ಘಟನೆಯಿಂದ ಹತ್ತಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹದಿನೈದಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಳಿಕ, ಸಂಭ್ರಮಾಚರಣೆ ಕ್ಯಾನ್ಸಲ್ ಆಗಿದ್ದು, ಜನರು ಮನೆಗಳತ್ತ ಹೊರಟಾಗಲೂ ನೂಕುನುಗ್ಗಲು ಆಗುತ್ತಿದೆ. ಈ ಘಟನೆ ಇದೀಗ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ನಡುವಿನ ಕೆಸರೆರಚಾಟಕ್ಕೂ ಕಾರಣವಾಗಿದೆ. ಅಲ್ಲಿನ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವುದು ಕಂಡುಬರುತ್ತಿದೆ.

ಇನ್ನು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೇ ಇಂತಹ ಒಂದು ಕಾರ್ಯಕ್ರಮ ಆಯೋಜನೆ ಮಾಡಿರುವುದೇ ಕಾಲ್ತುಳಿತಕ್ಕೆ ಕಾರಣವಾಗಿದೆ. ರಾಜ್ಯ ಸರ್ಕಾರದ ನಾಯಕರ ಪ್ರಚಾರದ ಹುಚ್ಚಿಗಾಗಿ ಈ ಕಾಲ್ತುಳಿತ ಸಂಭವಿಸಿ 11 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹ ಮಾಡಿದ್ದಾರೆ.

ಇದು ಸಂಪೂರ್ಣವಾಗಿ ಸರ್ಕಾರದ ಬೇಜವಬ್ದಾರಿ ಆಗಿದೆ. ಇದಕ್ಕೆ ಸರ್ಕಾರವೇ ನೇರ ಹೊಣೆ. ನ್ಯಾಯಾಂಗ ತನಿಖೆ ಆಗಬೇಕು. ಯಾಕೆ ಇವತ್ತೇ ಕಾರ್ಯಕ್ರಮ ಆಗಬೇಕಿತ್ತಾ? ಪೊಲೀಸ್ ಇಲಾಖೆಯಿಂದ ಪರ್ಮಿಶನ್ ಸಹ ತೆಗೆದುಕೊಂಡಿಲ್ಲ. ವಿಧಾನಸೌಧದ ಮುಂದೆ ಸಹ ಕಾರ್ಯಕ್ರಮಕ್ಕೆ ಪೊಲೀಸರು ಒಪ್ಪಿಗೆ ನೀಡಿರಲಿಲ್ಲ. ಸಿಎಂ ಒತ್ತಾಯ ಮಾಡಿ ಅನುಮತಿ ಕೊಡಿಸಿದ್ದಾರೆ. ಇದಕ್ಕೆ ಸರಕಾರವೇ ನೇರ ಹೊಣೆ ಹೊರಬೇಕು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಮಾಯಕರ ಸಾವಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ 7 ಜನ ಹಾಗೂ ವೈದೇಹಿ ಆಸ್ಪತ್ರೆಯಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಇನ್ನು ಬಿದ್ದವರನ್ನು ಆಸ್ಪತ್ರೆ ಸೇರಿಸಲು ಸಹ ಯಾರೂ ಸಿದ್ಧ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಎಲ್ಲಿಯೂ ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಆದರೆ, ಸರ್ಕಾರದ ನಾಯಕರು ಪ್ರಚಾರದ ಹುಚ್ಚಿಗಾಗಿ ವಿಧಾನಸೌಧ ಮೆಟ್ಟಿಲ ಮೇಲೆ ಆರ್‌ಸಿಬಿ ತಂಡದ ಆಟಗಾರರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಇದರ ಬಗ್ಗೆ ಯಾವುದೇ ಸೂಕ್ತವಾದ ಕ್ರಮ ಕೈಗೊಂಡಿಲ್ಲ. ಅಲ್ಲಿ ಜನರು ನೂಕು ನುಗ್ಗಲಿನಲ್ಲಿ ಸಿಲುಕಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಚಪ್ಪಲಿ, ಕಲ್ಲುಗಳನ್ನು ತೂರಿದ್ದಾರೆ ಎಂದು ಸಹ ತಿಳಿಸಿದರು.