18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ಚಾಂಪಿಯನ್ ಆಗುತ್ತಿದ್ದಂತೆಯೇ ಫ್ರಾಂಚೈಸಿಯು 2200 ಕೋಟಿ ರುಪಾಯಿ ಲಾಭ ಗಳಿಸಿದೆ. ಇದು ಹೇಗೆ ನೋಡೋಣ ಬನ್ನಿ
ಬೆಂಗಳೂರು: ಜೂನ್ 03, 2025ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಚಾಂಪಿಯನ್ ಆಗುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ 17 ಆವೃತ್ತಿಗಳಿಂದಲೂ ಕಪ್ ಗೆಲ್ಲಲು ವಿಫಲವಾಗುತ್ತಾ ಬಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊನೆಗೂ ಟ್ರೋಫಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಪಂಜಾಬ್ ಕಿಂಗ್ಸ್ ಎದುರಿನ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ರನ್ ರೋಚಕ ಜಯ ಸಾಧಿಸಿ ಬೀಗಿದೆ. ಆರ್‌ಸಿಬಿ ಚಾಂಪಿಯನ್ ಆಗುತ್ತಿದ್ದಂತೆಯೇ ರಜತ್ ಪಾಟೀದಾರ್ ಪಡೆ ಬರೋಬ್ಬರಿ 20 ಕೋಟಿ ರುಪಾಯಿ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಆದರೆ ಆರ್‌ಸಿಬಿ ತಂಡವು ಐಪಿಎಲ್ ಚಾಂಪಿಯನ್ ಆಗುವ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಲೀಕರು ಯುನೈಟೆಡ್ ಸ್ಪಿರಿಟ್ಸ್ ಫೈನಲ್ ದಿನವೇ ಬರೋಬ್ಬರಿ 2200 ಕೋಟಿ ರುಪಾಯಿ ಲಾಭ ತನ್ನದಾಗಿಸಿಕೊಂಡಿದೆ. ಇದು ಅಚ್ಚರಿ ಎನಿಸಿದ್ರೂ ಸತ್ಯ.
ಆರ್‌ಸಿಬಿ ಓನರ್ ಯಾರು?
2025ರ ಐಪಿಎಲ್ ಚಾಂಪಿಯನ್ ಆರ್‌ಸಿಬಿ ಫ್ರಾಂಚೈಸಿ ಮಾಲೀಕರು ದೇಶದ ಅತಿದೊಡ್ಡ ಮದ್ಯ ತಯಾರಿಕಾ ಕಂಪನಿಯಾದ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಒಡೆತನದ್ದಾಗಿದೆ. ಸದ್ಯ ಈ ಕಂಪನಿಯ ಸಿಇಒ ಹಾಗೂ ಎಂಡಿ ಪ್ರವೀಣ್ ಸೋಮೇಶ್ವರ್. ಸುಮಾರು 200 ವರ್ಷಗಳ ಹಳೆಯದಾದ ಯುನೈಟೆಡ್ ಸ್ಪಿರಿಟ್ ಕಂಪನಿಯು ಬ್ರಿಟೀಷ್ ಆಳ್ವಿಕೆಯ ಸಂದರ್ಭದಲ್ಲಿ ಮದ್ರಾಸ್ ಪ್ರಸಿಡೆನ್ಸಿಯಲ್ಲಿ ಆರಂಭವಾಯಿತು. ಈ ಕಂಪನಿಯು ದೇಶದ ಅತ್ಯಂತ ಅಗ್ಗದ ಮದ್ಯವಾದ ಮೆಕ್‌ಡೆವೆಲ್ಸ್ ಉತ್ಫಾದನೆ ಮಾಡುತ್ತದೆ. ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿಯನ್ನು ವಿದೇಶಿಗರು ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ವಿಜಯ್ ಮಲ್ಯ ಆರ್‌ಸಿಬಿ ಮಾಲೀಕರಾಗಿದ್ದರು. ಆರ್‌ಸಿಬಿಯನ್ನು ವಿಜಯ್ ಮಲ್ಯ ಖರೀದಿಸಿದ್ದರು. ಇದಾದ ನಂತರ ಈ ತಂಡವು ಡಿಯಾಗೊ(Diageo) ತೆಕ್ಕೆಗೆ ಹೋಯಿತು.
ಇದೆಲ್ಲಾ ಒಂದು ಕಡೆಯಾದರೇ, ಆರ್‌ಸಿಬಿ ಒಂದೇ ದಿನ 2200 ಕೋಟಿ ರುಪಾಯಿ ಲಾಭ ಗಳಿಸಿದ್ದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ. ಅಷ್ಟಕ್ಕೂ ಕೇವಲ ಒಂದು ಐಪಿಎಲ್ ಪಂದ್ಯದಿಂದ ಆರ್‌ಸಿಬಿ ಅಷ್ಟೊಂದು ಲಾಭ ಗಳಿಸಲು ಸಾಧ್ಯವೇ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿಯೂ ಮೂಡಿರಬಹುದು ಅಲ್ಲವೇ?
ಆಟಗಾರರನ್ನು ಖರೀದಿಸಲು, ತಂಡ ಕಟ್ಟಲು, ಕೋಚ್‌ಗಳಿಗೆ ಹಾಗೂ ಸಹಾಯಕ ಸಿಬ್ಬಂದಿಗಳಿಗಾಗಿ ಆರ್‌ಸಿಬಿ ಫ್ರಾಂಚೈಸಿಯು ಕೋಟಿಗಟ್ಟಲೇ ಹಣ ಖರ್ಚು ಮಾಡುತ್ತದೆ. ಅದೇ ರೀತಿ ಐಪಿಎಲ್ ಓನರ್‌ಗಳು ಮ್ಯಾಚ್ ಟಿಕೆಟ್, ಸ್ಪಾನ್ಸರ್‌ಶಿಪ್ ಹಾಗೂ ಮೀಡಿಯಾ ರೈಟ್ಸ್‌ನಿಂದ ಕೋಟಿಗಟ್ಟಲೇ ಹಣವನ್ನು ಜೇಬಿಗಿಳಿಸಿಕೊಳ್ಳುತ್ತದೆ.
ಇನ್ನು ಮೀಡಿಯಾ ರಿಪೋರ್ಟ್‌ಗಳನ್ನು ನಂಬುವುದಾದರೇ, ಐಪಿಎಲ್ ಪಂದ್ಯದ 80% ಮ್ಯಾಚ್ ಟಿಕೆಟ್‌ನ ದುಡ್ಡು ತಂಡದ ಮಾಲೀಕರಿಗೆ ಸೇರುತ್ತದೆ. ಉದಾಹರಣಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ 1.32 ಲಕ್ಷ ಮಂದಿಯ ವೀಕ್ಷಕರ ಸಾಮರ್ಥ್ಯವನ್ನು ಹೊಂದಿತ್ತು. ಫೈನಲ್ ಪಂದ್ಯಕ್ಕೆ ಬಹುತೇಕ ಸ್ಟೇಡಿಯಂ ಹೌಸ್ ಫುಲ್ ಆಗಿತ್ತು. ಒಂದು ವೇಳೆ ಕೇವಲ ಒಂದು ಲಕ್ಷ ಮಂದಿಯೇ ಸ್ಟೇಡಿಯಂಗೆ ಬಂದಿದ್ದರೂ, ಸರಾಸರಿ 3 ಸಾವಿರ ರುಪಾಯಿ ಟಿಕೆಟ್ ಮೊತ್ತವಿದ್ದರೂ ಟಿಕೆಟ್ ಮಾರಾಟದಿಂದಲೇ ಸುಮಾರು 30 ಕೋಟಿ ರುಪಾಯಿ ಕಲೆಕ್ಷನ್ ಆಗಲಿದೆ. ಇದರಲ್ಲಿ 80% ಅಂದರೆ 24 ಕೋಟಿ ರುಪಾಯಿ ಫ್ರಾಂಚೈಸಿ ಪಾಲಾಗಲಿದೆ. ಆದರೆ 2200 ಕೋಟಿ ಲಾಭ ಹೇಗೆ ಎನ್ನುವ ಪ್ರಶ್ನೆ ನಿಮಗೆ ಮೂಡಬಹುದು.
2025ರ ಐಪಿಎಲ್ ಫೈನಲ್ ಪಂದ್ಯಕ್ಕೂ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಕಂಪನಿಯ ಷೇರಿನಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿತು. ಮಂಗಳವಾರ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಸರಿಸುಮಾರು 2% ಏರಿಕೆ ಕಂಡಿತು. ಆಗ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಷೇರಿನ ಬೆಲೆ 1579.05 ಇದ್ದ ಷೇರಿನ ಬೆಲೆ ಒಂದು ಹಂತದಲ್ಲಿ 1609.60 ಏರಿಕೆ ಕಂಡಿತು. ಒಂದೇ ದಿನವೇ ಪ್ರತಿ ಷೇರಿನಲ್ಲಿ 29.75 ರುಪಾಯಿ ಏರಿಕೆ ಕಂಡಿತು. ದಿ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್ ಮಂಗಳವಾರ ಆರಂಭದ ಮಾರ್ಕೆಟ್ ಕ್ಯಾಪ್ 1,12,688.47 ರುಪಾಯಿ ಇತ್ತು. ಮಂಗಳವಾರದ ಷೇರು ಮಾರುಕಟ್ಟೆಯ ದಿನದಂತ್ಯಕ್ಕೆ ಈ ಷೇರಿನ ಮಾರ್ಕೆಟ್ ಕ್ಯಾಪ್ 1,14,852.34 ರುಪಾಯಿಗೆ ತಲುಪಿತು. ಈ ಮೂಲಕ ಕೇವಲ 24 ಗಂಟೆಯೊಳಗೆ ಯುಎಸ್‌ಬಿ ಷೇರು 2,164 ಕೋಟಿ ರುಪಾಯಿ ಲಾಭ ಗಳಿಸಿತು.
