‘ದಿ ಪ್ಯಾರಡೈಸ್’ ಹೊಸ ಪೋಸ್ಟರ್‌ನಲ್ಲಿ ನಾನಿ ಜೊತೆ ಕಯಾದು ಲೋಹರ್ ಕಾಣಿಸಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಿರುವ ಅವರ ಲುಕ್ ವಿಲನ್ ಪಾತ್ರದ ಸುಳಿವು ನೀಡಿದೆಯಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ.

ಟಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರಾಗಿರುವ ನಾನಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಪ್ಯಾರಡೈಸ್’. ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿರುವ ಬೆನ್ನಲ್ಲೇ, ಚಿತ್ರತಂಡ ಕಯಾದು ಲೋಹರ್ ಜೊತೆಗಿನ ಹೊಸ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ. ಈ ಪೋಸ್ಟರ್ ಇದೀಗ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಟಾಲಿವುಡ್‌ನಲ್ಲಿ ತಮ್ಮ ವಿಭಿನ್ನ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ನಟ ನಾನಿ ಅವರನ್ನು ‘ನ್ಯಾಚುರಲ್ ಸ್ಟಾರ್’ ಎಂದೇ ಕರೆಯಲಾಗುತ್ತದೆ.

ತೆಲುಗು ಮಾತ್ರವಲ್ಲದೆ ತಮಿಳು ಸೇರಿದಂತೆ ಹಲವು ಭಾಷೆಗಳಲ್ಲೂ ನಾನಿ ಅಭಿನಯದ ಸಿನಿಮಾಗಳು ಬಿಡುಗಡೆಯಾಗಿವೆ. 2025ರಲ್ಲಿ ನಾನಿ ಅಭಿನಯದ ‘ಹಿಟ್ 3’ ಸಿನಿಮಾ ಬಿಡುಗಡೆಯಾಗಿತ್ತು. ಇದೀಗ ಅದರ ಬಳಿಕ ನಾನಿ ನಟಿಸಿರುವ ಬಹು ದೊಡ್ಡ ಸಿನಿಮಾ ‘ದಿ ಪ್ಯಾರಡೈಸ್’ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವನ್ನು ನಿರ್ದೇಶಕ ಶ್ರೀಕಾಂತ್ ಓಡೆಲಾ ನಿರ್ದೇಶಿಸುತ್ತಿದ್ದು, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಸಂಸ್ಥೆ ನಿರ್ಮಿಸುತ್ತಿದೆ.

ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದು, ಈಗಾಗಲೇ ಸಿನಿಮಾದಿಂದ ಎರಡು ಹಾಡುಗಳು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಸಿನಿಮಾದ ಹಾಡುಗಳು ಸದ್ಯ ಟ್ರೆಂಡಿಂಗ್‌ನಲ್ಲಿದ್ದು, ‘ದಿ ಪ್ಯಾರಡೈಸ್’ ಚಿತ್ರದ ಮೇಲಿನ ನಿರೀಕ್ಷೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೆಪ್ಟೆಂಬರ್ 24, 2026ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇದೀಗ ಹೊಸ ಸ್ಪೆಷಲ್ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ.

ನಾನಿ ಜೊತೆ ಕಯಾದು ಲೋಹರ್: ವಿಲನ್ ಪಾತ್ರನಾ?

ಹೊಸ ಪೋಸ್ಟರ್‌ನಲ್ಲಿ ನಟ ನಾನಿ ಜೊತೆ ನಟಿ ಕಯಾದು ಲೋಹರ್ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಕಯಾದು ಲೋಹರ್ ಸಿಗರೇಟ್ ಸೇದುತ್ತಿರುವ ರೀತಿಯಲ್ಲಿ ಕಾಣಿಸಿಕೊಂಡಿದ್ದು, ಅವರನ್ನು ನೋಡಿದಾಗ ಸಿನಿಮಾದಲ್ಲಿ ಅವರು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಆದರೆ ಪೋಸ್ಟರ್‌ನ ಕೆಳಭಾಗದಲ್ಲಿ ಚಿತ್ರತಂಡ ಹಂಚಿಕೊಂಡಿರುವ ಸಾಲು ಮತ್ತಷ್ಟು ಕುತೂಹಲ ಮೂಡಿಸಿದೆ.

ಅವರ ಪ್ರೀತಿ ನೀವು ಇದುವರೆಗೆ ನೋಡಿರದ ರೀತಿಯದ್ದಾಗಿರುತ್ತದೆ ಎಂಬ ಅರ್ಥದ ಸಾಲನ್ನು ಚಿತ್ರತಂಡ ಪೋಸ್ಟರ್‌ನಲ್ಲಿ ಬರೆದಿದೆ. ಹೀಗಾಗಿ ಕಯಾದು ಲೋಹರ್ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿದ್ದಾರಾ? ಅಥವಾ ನಾನಿ ಜೊತೆಗಿನ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಈ ಪ್ರಶ್ನೆಗೆ ಸಿನಿಮಾದ ಬಿಡುಗಡೆಯ ಬಳಿಕವೇ ಸ್ಪಷ್ಟ ಉತ್ತರ ಸಿಗಲಿದೆ.

‘ದಿ ಪ್ಯಾರಡೈಸ್’ ಟ್ರೇಲರ್ ಬರಲ್ವಾ?

‘ದಿ ಪ್ಯಾರಡೈಸ್’ ಸಿನಿಮಾ ಆ್ಯಕ್ಷನ್ ಹಾಗೂ ಗ್ಯಾಂಗ್‌ಸ್ಟರ್ ಹಿನ್ನೆಲೆಯ ಕಥೆಯನ್ನು ಹೊಂದಿರುವ ಬೃಹತ್ ಚಿತ್ರವಾಗಿದೆ. ಸಿನಿಮಾದಲ್ಲಿ ನಾನಿ ಮತ್ತು ಕಯಾದು ಲೋಹರ್ ಜೊತೆಗೆ ಕೀರ್ತಿ ಸುರೇಶ್, ಮೋಹನ್ ಬಾಬು ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

ಸೆಪ್ಟೆಂಬರ್ 24, 2026ರಂದು ಸಿನಿಮಾ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ನಡುವೆ ಸಿನಿಮಾದ ಟ್ರೇಲರ್ ಕುರಿತು ಕೂಡ ಕುತೂಹಲ ಹೆಚ್ಚಾಗಿದೆ. ಆದರೆ ‘ದಿ ಪ್ಯಾರಡೈಸ್’ ಸಿನಿಮಾಗೆ ಟ್ರೇಲರ್ ಬಿಡುಗಡೆ ಮಾಡುವುದಿಲ್ಲ ಎಂಬ ಮಾತು ಚಿತ್ರರಂಗದ ವಲಯಗಳಲ್ಲಿ ಕೇಳಿಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಹೀಗಾಗಿ ಟ್ರೇಲರ್ ಬಿಡುಗಡೆಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.