ಟಿ ಎಸ್‌ ಛಾಯಾಪತಿ ಎಂಬ ಸ್ನೇಹಶೀಲ ಪ್ರಕಾಶಕ!

ಮೈಸೂರಿನಲ್ಲಿ ಮಾ.15ರಂದು ನಡೆಯಲಿರುವ ದ್ವಿತೀಯ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತವೆಂ ಸ್ಮಾರಕ ಗ್ರಂಥಮಾಲೆಯ ಟಿ.ಎಸ್‌.ಛಾಯಾಪತಿಯವರ ಕುರಿತು ಹಿರಿಯ ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿಯವರು ಬರೆದಿರುವ ಬರಹ.

T S Chayapathi talks about senior author H S Venkateshmurthy vcs

ಎಚ್ಚೆಸ್ವಿ

ನನ್ನ ಬಹುಕಾಲದ ಪ್ರಕಾಶಕಮಿತ್ರರಾದ ಟಿ.ಎಸ್‌.ಛಾಯಾಪತಿ ಅವರು ಪುಸ್ತಕ ಪ್ರಾಧಿಕಾರ ಈ ಬಾರಿ ಮೈಸೂರಿನಲ್ಲಿ ನಿಯೋಜಿಸಿರುವ ಪ್ರಕಾಶಕರ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಆಗಿರುವುದು ಅಭಿಮಾನದ ಸಂಗತಿಯಾಗಿದೆ. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಕರ್ಣಧಾರತ್ವ ವಹಿಸಿ ಗುಣ ಮತ್ತು ಗಾತ್ರದ ಮಹತ್ವದ ಪುಸ್ತಕಗಳನ್ನು ನಿರಂತರವಾಗಿ ಪ್ರಕಟಿಸುತ್ತಾ ಬಂದಿರುವ ಛಾಯಾಪತಿ ಲೇಖಕರ ಹಿತಾಸಕ್ತಿಗಳನ್ನು ಲಕ್ಷಿಸುತ್ತಾ, ಪುಸ್ತಕ ಪ್ರಕಟಣೆಯು ಉದ್ಯಮವೂ ಹೌದು ಕಲೆಯೂ ಹೌದು ಎಂದು ಸಾಬೀತು ಪಡಿಸಿದ ಕರ್ನಾಟಕದ ಮುಖ್ಯ ಪ್ರಕಾಶಕರಲ್ಲಿ ಒಬ್ಬರಾಗಿದ್ದಾರೆ.

ಡಾ ಜಿ.ಎಸ್‌.ಶಿವರುದ್ರಪ್ಪನವರ ಮನೆಯಲ್ಲಿ ದಶಕಗಳ ಹಿಂದೆ ನಾನು ಛಾಯಾಪತಿ ಅವರನ್ನು ಮೊದಲು ಕಂಡಿದ್ದು. ನೀಳ ಕಾಯದ ಮೆಲುಮಾತಿನ ಈ ವ್ಯಕ್ತಿ ತ.ಸು.ಶಾಮರಾಯರ ಮಗನೆಂಬುದು ತಿಳಿದು ಅವರಲ್ಲಿ ನಿವ್ರ್ಯಾಜವಾದ ಒಂದು ಗೌರವ ಭಾವ ನನ್ನಲ್ಲಿ ಉದಿಸಿತು. ಅವರ ಮಾಲೀಕತ್ವದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ ತನ್ನ ಹಿರಿಮೆಯಿಂದ ನನ್ನ ಗೌರವಾದರಗಳಿಗೆ ಪಾತ್ರವಾಗಿತ್ತು. ಆ ಸಂಸ್ಥೆಯಿಂದ ನನ್ನ ಯಾವುದಾದರೂ ಪುಸ್ತಕ ಪ್ರಕಟವಾಗಬೇಕೆಂಬ ಆಸೆ ನನಗಿತ್ತಾದರೂ ನಾನೇ ಮುಂದೆ ಬಿದ್ದು ಛಾಯಾಪತಿ ಅವರನ್ನು ಕೇಳಲು ಸಂಕೋಚ ಪ್ರವೃತ್ತಿಯ ಮನಸ್ಸು ಹಿಂಜರಿದಿತ್ತು. ಮುಂದೆ ಒಮ್ಮೆ ತವೆಂ ಸ್ಮಾರಕ ಗ್ರಂಥಮಾಲೆಯ ಛಾಯಾಪತಿಯವರು ತಾವಾಗಿಯೇ ಸಂಪರ್ಕಿಸಿ ನನ್ನ ಪುಸ್ತಕವೊಂದನ್ನು ಪ್ರಕಟಿಸಲು ಮುಂದೆ ಬಂದಾರೆಂದು ನಾನಂತೂ ಕನಸು ಮನಸಲ್ಲೂ ಎಣಿಸಿರಲಿಲ್ಲ. ಆದರೆ 2009ನೇ ಇಸವಿ ಏಪ್ರಿಲ್‌ 21ರ ಬೆಳಿಗ್ಗೆ ದೂರವಾಣಿ ಮೂಲಕ ಛಾಯಾಪತಿ ನನ್ನನ್ನು ಸಂಪರ್ಕಿಸಿ ನನ್ನ ಪುಸ್ತಕವೊಂದನ್ನು ಪ್ರಕಟಿಸುವ ಅಭಿಲಾಷೆ ವ್ಯಕ್ತಪಡಿಸಿದರು. ಸಂತೋಷದಿಂದ ನಾನು ಅನುಮತಿಯನ್ನು ನೀಡಿದೆ. ತೂಗುಮಂಚ ಎಂಬ ನನ್ನ ಗೀತೆಗಳ ಸಂಗ್ರಹ ತವೆಂ ಸ್ಮಾರಕ ಗ್ರಂಥಮಾಲೆಯಿಂದ ಹೊರಬಂತು. ಆ ಹೊತ್ತಗೆ ಅದೆಷ್ಟುಅಂದವಾಗಿ ಪ್ರಕಟವಾಗಿತ್ತೆಂದರೆ ಸ್ವಯಂ ಜಿಎಸ್‌ಎಸ್‌ ನನಗೆ ಫೋನ್‌ ಮಾಡಿ ಅಭಿನಂದನೆ ಹೇಳಿದರು. ಆನಂತರ ನಿರಂತರವಾಗಿ ಛಾಯಾಪತಿಯವರು ನನ್ನ ಕೃತಿಗಳನ್ನು ಪ್ರಕಟಿಸುತ್ತಾ ಬಂದಿದ್ದಾರೆ. ಜಿಎಸ್‌ಎಸ್‌, ಕಣವಿ, ಹಾಮಾ ನಾಯಕ, ನಿಸಾರ್‌ ಅಹಮದ್‌, ತಾರಾನಾಥ್‌ ಮೊದಲಾದವರ ಪುಸ್ತಕಗಳನ್ನು ಪ್ರಕಟಿಸಿರುವ ಗ್ರಂಥಮಾಲೆಯಲ್ಲಿ ನನ್ನ ಕೃತಿಗಳೂ ಪ್ರಕಟವಾಗುತ್ತಿರುವುದು ನನಗೆ ಅಭಿಮಾನದ ಸಂಗತಿಯಾಗಿದೆ.

ಕಾಡಿನ ದೇವರು ಈ ಕಾಲದ ಜನಾರ್ದನ ಹೇಗಾದ ಎಂಬುದೇ ಕಾನನ ಜನಾರ್ದನ

ಜಿಎಸ್‌ಎಸ್‌ ಅವರ ಸೌಂದರ್ಯ ಸಮೀಕ್ಷೆ ಗ್ರಂಥ ಮೊದಲ ಮುದ್ರಣದಲ್ಲಿ ಲೇಖಕರಿಗೆ ಅತೃಪ್ತಿ ತಂದಿತ್ತಂತೆ. ಅದಕ್ಕಾಗಿಯೇ ಎರಡನೇ ಮುದ್ರಣದಲ್ಲಿ ಅತ್ಯಂತ ಕಲಾತ್ಮಕವಾಗಿ, ಧ್ವನಿಪೂರ್ಣ ಮುಖಚಿತ್ರದೊಂದಿಗೆ ಕೃತಿಯನ್ನು ಪ್ರಕಟಿಸಿದಾಗಲೇ ಛಾಯಾಪತಿ ಸಮಾಧಾನ ಪಡೆದದ್ದು. ಈಗ ನೋಡಿ! ಪುಸ್ತಕ ಅದ್ಭುತವಾಗಿ ಅಚ್ಚಾಗಿದೆ ಎಂದು ಜಿಎಸೆಸ್‌ ಅವರ ಬೆನ್ನು ತಟ್ಟಿದ್ದನ್ನು ಛಾಯಾಪತಿ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಾರೆ. ಲೇಖಕರ ಕೃತಿಗಳನ್ನು ಪ್ರಕಟಿಸಿದರೆ ಸಾಲದು ಅವರು ಬಯಸಿದಂತೆ ಪುಸ್ತಕ ಅಂದವಾಗಿ ಮುದ್ರಣಗೊಳ್ಳಬೇಕು- ಇದು ಛಾಯಾಪತಿಯವರ ಅಪೇಕ್ಷೆ. ಕವಿ ನಿಸಾರ್‌ ಅಹಮದರಿಗೆ ತಮ್ಮ ಪುಸ್ತಕ ಮೈಸೂರಿನ ವೆಸ್ಲಿ ಪ್ರೆಸ್ಸಿನಲ್ಲಿ ಮುದ್ರಣಗೊಳ್ಳಬೇಕೆಂಬ ಅಪೇಕ್ಷೆ. ಹೆಚ್ಚು ವೆಚ್ಚವಾದರೂ ಚಿಂತೆಯಿಲ್ಲ, ಅಲ್ಲೇ ಮುದ್ರಣ ಮಾಡಿಸೋಣ ಎಂದು ನಿಸಾರರ ಕೃತಿಯನ್ನು ಮುದ್ರಣ ಮಾಡಿಸಿ ಪ್ರಕಟಿಸಿದ್ದನ್ನು ನಿಸಾರರೂ ನನ್ನೆದುರು ಹೇಳಿ ಛಾಯಾಪತಿಯವರನ್ನು ಮೆಚ್ಚಿಕೊಂಡಿದ್ದುಂಟು. ಕಳೆದ ಎರಡು ದಶಕಗಳ ಕಾಲಾವಧಿಯಲ್ಲಿ ತವೆಂ ಸ್ಮಾರಕ ಗ್ರಂಥಮಾಲೆಯಿಂದ ನನ್ನ ಹತ್ತಕ್ಕೂ ಮಿಕ್ಕು ಕೃತಿಗಳನ್ನು ಛಾಯಾಪತಿ ಪ್ರಕಟಿಸಿದ್ದಾರೆ. ಬೃಹತ್‌ ಗಾತ್ರದ ಸಮಸ್ತ ನಾಟಕಗಳು, ಸಮಗ್ರ ಮಕ್ಕಳ ಸಾಹಿತ್ಯ ಗ್ರಂಥಗಳನ್ನಂತೂ ನಾನು ಮರೆಯುವಂತೆಯೇ ಇಲ್ಲ.

ನಂದಗೋಕುಲದಿಂದ ಚಂದನವನದೆಡೆಗೆ ಕರಾವಳಿ ಪ್ರತಿಭೆ!

ಅವರ ಪ್ರಕಟಣ ಸಾಹಸವು ಮುಂದೆಯೂ ಅವಿರತವಾಗಿ ನಡೆಯಲಿ ಎಂದು ಹಾರೈಸುವೆ.

Latest Videos
Follow Us:
Download App:
  • android
  • ios