Asianet Suvarna News Asianet Suvarna News

ಕಾಡಿನ ದೇವರು ಈ ಕಾಲದ ಜನಾರ್ದನ ಹೇಗಾದ ಎಂಬುದೇ ಕಾನನ ಜನಾರ್ದನ

ಜನಪ್ರಿಯ ಕಾದಂಬರಿಕಾರ ಕೆ ಎನ್‌ ಗಣೇಶಯ್ಯಅವರ ಶೋಧನಾತ್ಮಕ ಕಾದಂಬರಿ ‘ಕಾನನ ಜನಾರ್ದನ’ ಇಂದು(ಮಾ.13) ಬಿಡುಗಡೆಯಾಗುತ್ತಿದೆ. ಅಂಕಿತ ಪುಸ್ತಕ ಪ್ರಕಟಿಸಿರುವ ಈ ಕಾದಂಬರಿ ಮಹಾಶಿಲಾಯುಗ ಕಾಲದ ಬದುಕು, ಅದು ಬದಲಾವಣೆಗೆ ತೆರೆದುಕೊಂಡ ಬಗೆಯನ್ನು ಹೇಳುತ್ತದೆ. ಈ ಕಾದಂಬರಿ ಕುರಿತಾಗಿ ಗಣೇಶಯ್ಯನವರ ಜೊತೆ ನಡೆಸಿದ ಸಂದರ್ಶನ.
 

Kannan janardhanan novel KN Ganeshaiah exclusive interview vcs
Author
Bangalore, First Published Mar 13, 2022, 2:20 PM IST

ಪ್ರಿಯಾ ಕೆರ್ವಾಶೆ

ಕಾದಂಬರಿಯ ಆಶಯ ಏನು?

ಮೆಗಾ ಲಿಥಿಕ್‌ ಏಜ್‌ ಅಂತ ಕರೀತೀವಲ್ಲಾ, ಸುಮಾರು ಕ್ರಿ.ಪೂ 2000ನೇ ಇಸವಿಯ ಮಹಾಶಿಲಾಯುಗದ ಕಾಲಘಟ್ಟಈ ಕಾದಂಬರಿಯಲ್ಲಿ ಮುಖ್ಯವಾಗಿ ಬರುತ್ತೆ. ಆಗ ಉತ್ತರ ಭಾರತದಲ್ಲಿ ನಗರಗಳಿದ್ದವು, ನಾಗರೀಕತೆ ಇತ್ತು. ಆದರೆ ದಕ್ಷಿಣ ಭಾಗದಲ್ಲಿ ನೊಮ್ಯಾಡ್ಸ್‌ ಅಂದರೆ ಕಾಡಲ್ಲಿ ಅಲೆಮಾರಿಗಳಂತಿದ್ದವರೇ ಹೆಚ್ಚಿದ್ದರು. ಅವರು ದೇವರು ಅಂತ ಪೂಜಿಸುತ್ತಿದ್ದದ್ದು ಒಳ್ಳೆಯ ಕೆಲಸ ಮಾಡಿದ್ದ ಅವರ ಪೂರ್ವಜರನ್ನು. ಅಂಥಾ ಹಿನ್ನೆಲೆಯಿದ್ದ ನಾವು ರಾಮ, ಕೃಷ್ಣ ಇವರನ್ನೆಲ್ಲ ಈಗ ಪೂಜಿಸುತ್ತಿದ್ದೇವೆ. ಈ ಬದಲಾವಣೆ ಹೇಗಾಯ್ತು ಅನ್ನೋದರ ಬಗ್ಗೆ ಈ ಕಾದಂಬರಿ ಇದೆ. ದಕ್ಷಿಣದಲ್ಲಿ ನಿಧಾನಕ್ಕೆ ನಾಗರೀಕತೆಯ ಗಾಳಿ ಬೀಸತೊಡಗಿದಾಗ ಜನ ಮೆಟೀರಿಯಲಿಸಂನತ್ತ ಹೊರಳಬೇಕಾದಾಗ ಆ ಜನಜೀವನದ ಫ್ರಸ್ಪ್ರೇಶನ್‌ಗಳು, ನಂಬಿಕೆಗಳಲ್ಲಿ, ಬದುಕಿನ ಕ್ರಮದಲ್ಲಿ ಆದ ಬದಲಾವಣೆಗಳು ಇವನ್ನೆಲ್ಲ ಈ ಕಾದಂಬರಿಯಲ್ಲಿ ಹೇಳಿದ್ದೇನೆ. ಕಾನನ ಜನಾರ್ದನದಲ್ಲಿ ಕಾನನ ಅಂದರೆ ಕಾಡು, ಜನಾರ್ದನ ಅಂದರೆ ದೇವರು, ಕಾಡಿನ ದೇವರು ಇಂದಿನ ಜನಾರ್ದನ ಹೇಗಾದ ಅನ್ನುವುದನ್ನು ಸೂಚ್ಯವಾಗಿ ಕಾದಂಬರಿ ಹೇಳುತ್ತದೆ. ಈ ಕಾದಂಬರಿಯ ಒಳಗೊಂದು ಕಾದಂಬರಿ ಇದೆ. ಅದು ‘ಮಹಾವ್ಯೂಹ’. ಮೊದಲ ಕಾದಂಬರಿಯ ಪಾತ್ರ ಯಾವುದೋ ಸಮಸ್ಯೆಯ ಪರಿಹಾರಕ್ಕೆ ಆ ಕಾದಂಬರಿ ಓದಬೇಕಿರುತ್ತದೆ.

ನಿಮ್ಮ ಹೆಚ್ಚಿನೆಲ್ಲ ಕೃತಿ ಐತಿಹಾಸಿಕ ಕುರುಹು, ಘಟನೆ, ಮಾತಿನಿಂದ ಪ್ರೇರಣೆ ಪಡೆದು ಶೋಧನೆಗೆ ತೊಡಗುತ್ತದೆ. ಈ ಕೃತಿಗೆ ಪ್ರೇರಣೆ?

ಅದು 1986ರ ಸುಮಾರು. ನಾನು, ನನ್ನ ಹೆಂಡತಿ ವೀಣಾ, ಬನಹಳ್ಳಿಯಲ್ಲೊಂದು ಉತ್ಖನನ ನೋಡಲು ಬಂದಿದ್ದೆವು. ಪ್ರಾಚ್ಯಶಾಸ್ತ್ರದ ಪ್ರಸಿದ್ಧ ವಿಜ್ಞಾನಿ ಕೃಷ್ಣಮೂರ್ತಿ ನಮ್ಮನ್ನಲ್ಲಿಗೆ ಕರೆದಿದ್ದರು. ಮೊದಲ ಬಾರಿಗೆ ನಾನು ಉತ್ಖನನ ನೋಡಿದ್ದು ಅಲ್ಲೇ. ಆ ಕುಳಿಗಳಲ್ಲಿ ಇಳಿಯುವಾಗ ಅಲ್ಲೊಂದು ಕಡೆ ಶಿಥಿಲಗೊಂಡ ಮಣ್ಣಿನ ಮಡಿಕೆ ಇತ್ತು. ಸುಮಾರು 3000 ವರ್ಷಗಳ ಹಿಂದಿನ ಆ ಮಡಿಕೆಯೊಳಗೆ ಮಗುವಿನ ಶವ ಇಟ್ಟು ಸಂಸ್ಕಾರ ಮಾಡಲಾಗಿದೆ ಎಂದು ಕೃಷ್ಣಮೂರ್ತಿಗಳಿಂದ ತಿಳಿಯಿತು. ಅವರಲ್ಲಿ ಶಿಲಾವ್ಯೂಹವನ್ನು ತೋರಿಸಿದ್ರು. ಅದು ಪುರಾತನ ಶವ ಸಂಸ್ಕಾರದ ಒಂದು ಬಗೆ. ಅವಾಗಿಂದ ಈ ವಿಚಾರ ಕಾಡುತ್ತಲೇ ಇತ್ತು. ಪೂರ್ವಜರು ಹಾಗೆ ಬದುಕ್ತಾ ಇದ್ರು. ಬರ್ತಾ ಬರ್ತಾ ನಾವು ಹೇಗೆ ಬದಲಾಗಿದ್ದೀವಿ, ಇವತ್ತು ಪಿತೃಪಕ್ಷ ಆಚರಣೆ ಮಾಡ್ತೀವಿ. ಮಗಳಿಗೆ ಹೇಳ್ತಿದ್ದೆ, ನನ್ನ ತಂದೆಯ ಸಂಸ್ಕಾರ ಮಾಡ್ತಿದ್ದಾಗ ಇದು ಮಹಾಶಿಲಾಯುಗದ ಮುಂದುವರಿಕೆ ಅನಿಸುತ್ತಿದ್ದೆ ಅಂತ. ಮೂರು ವರ್ಷಗಳಿಂದ ಈ ಕಾದಂಬರಿ ಬರೆಯುವ ಪ್ರಯತ್ನ ಮಾಡುತ್ತಿದೆ.

ನಂದಗೋಕುಲದಿಂದ ಚಂದನವನದೆಡೆಗೆ ಕರಾವಳಿ ಪ್ರತಿಭೆ!

ಇದರಲ್ಲಿ ಸಸ್ಯಾಹಾರ ಹಾಗೂ ಮಾಂಸಾಹಾರದ ಬಗ್ಗೆ ಚರ್ಚಿಸಿದ್ದೀರಿ. ವೃತ್ತಿಗೆ ತಕ್ಕಂತೆ ಆಹಾರ ಬದಲಾಯ್ತು ಅನ್ನುವುದು ನಿಮ್ಮ ಚಿಂತನೆಯಾ?

ನಮ್ಮ ವರ್ಣ ವ್ಯವಸ್ಥೆಯಲ್ಲಿನ ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣರು ವೈಶ್ಯರು ಸಸ್ಯಾಹಾರಿಗಳು, ಕ್ಷತ್ರಿಯರು, ಶೂದ್ರರು ಮಾಂಸಾಹಾರಿಗಳು. ಇದು ಹೇಗೆ ರೂಪುಗೊಂಡಿತು ಅನ್ನುವ ಬಗ್ಗೆ ಒಂದು ತರ್ಕವಿದೆ. ಈಗ ವೇಗನಿಸಂ, ವೆಜಿಟೇರಿಯನಿಸಂ ಹೆಚ್ಚಾಗುತ್ತಿರುವುದು ಕೂತಲ್ಲೇ ಕೆಲಸ ಮಾಡುವ ವರ್ಗದಲ್ಲಿ. ದೈಹಿಕ ಶ್ರಮವಿಲ್ಲದ ಕಾರಣ ಮಾಂಸಾಹಾರ ಅವರಿಗೆ ಜೀರ್ಣಿಸೋದು ಕಷ್ಟ, ಜೊತೆಗೆ ಹಿಂಸೆ ಮಾಡಬಾರದು ಅನ್ನೋ ಅವರ ಮನಸ್ಥಿತಿಯೂ ಕಾರಣ ಇರಬಹುದು. ನಾವು ವರ್ಣಾಶ್ರಮ ಕಾಲಕ್ಕೆ ಹೋದರೆ ಆಹಾರ ಪದ್ಧತಿಯನ್ನು ವೃತ್ತಿಗೆ ತಕ್ಕಂತೆ ರೂಪಿಸಿರಬೇಕು. ವೈಶ್ಯರು ಕೂತ್ಕೊಂಡು ವ್ಯಾಪಾರ ಮಾಡೋದು, ದೈಹಿಕ ಶ್ರಮದ ಕೆಲಸ ಇರಲ್ಲ. ಹೀಗಾಗಿ ಸಸ್ಯಾಹಾರ. ಅದೇ ಕ್ಷತ್ರಿಯ, ಆತ ಬೆಳೆ ತಿಂದ್ಕೊಂಡಿದ್ದರೆ ಕಷ್ಟ. ಈ ಬಗ್ಗೆ ಮಾತಾಡುವಾಗ ಸುಧಾಮೂರ್ತಿ ಒಂದು ಮಾತು ಹೇಳಿದರು. ಮಹಾರಾಷ್ಟ್ರದಲ್ಲಿ ಒಂದು ಗುಂಪಿದೆ. ಅವರು ಮೂಲತಃ ಬ್ರಾಹ್ಮಣರು. ಹೋರಾಟಕ್ಕೋಸ್ಕರ ಕ್ಷತ್ರಿಯರಾದರಂತೆ. ಅಲ್ಲಿನ ಗಂಡಸರು ಹೊರಗೆ ಯುದ್ಧಕ್ಕೆ ಹೋದಾಗ ನಾನ್‌ವೆಜ್‌ ತಿನ್ನುತ್ತಾರಂತೆ. ಮನೆಯಲ್ಲಿ ಸಸ್ಯಾಹಾರ ಸೇವನೆ. ಇದನ್ನೆಲ್ಲ ಯೋಚಿಸಿ ವರ್ಣಾಶ್ರಮದ ವೃತ್ತಿ ಆಧರಿಸಿ ಆಹಾರ ಕ್ರಮ ಬಂದಿದೆ ಅನಿಸಿತು.

ಇದು ಕತೆಗೆ ಪೂರಕವಾಗಿ ಬಂತಾ ಅಥವಾ ನಿಮಗಿದನ್ನು ಜನರಿಗೆ ತಿಳಿಸುವ ತುಡಿತವಿದ್ದು ಇಲ್ಲಿ ತಂದಿರಾ?

ಕತೆಯಲ್ಲಿನ ಮುಖ್ಯ ಅಂಶ ಗಮನಿಸಿ; ನಮ್ಮಲ್ಲಿದ್ದದ್ದು ಚೌಡಮ್ಮ, ಗಂಗಮ್ಮ ಥರದ ದೇವರು. ಆ ಹೊತ್ತಿಗೆ ನಮ್ಮಲ್ಲಿ ವರ್ಣಾಶ್ರಮ ಇತ್ತಾ? ಇರಲಿಲ್ಲ. ಕ್ರಮೇಣ ಅವರೂ ವರ್ಣವ್ಯವಸ್ಥೆಗೆ ಒಳಪಟ್ಟರು. ಅಂದಾಗ ಅವರ ಆಹಾರ ಪದ್ಧತಿಯೂ ಬದಲಾಗಿರುತ್ತದೆ. ಕಾಡಲ್ಲಿ ಅಂಡಲೆಯುತ್ತಾ, ಬೇಟೆ ಆಡುತ್ತಿದ್ದ ಜನರಲ್ಲಿ ಕೆಲವರು ಸಸ್ಯಾಹಾರಿಗಳಾದರು. ಕತೆಗೆ ಪೂರಕವೇ ಅಲ್ವಾ. ಈ ಬದಲಾವಣೆಗೆ ಒಂದು ತರ್ಕ ಇರಬೇಕಲ್ವಾ.

Dear Sathya ಚಿತ್ರದ ನನ್ನ ಲುಕ್‌ ನನಗಿಷ್ಟ: ಸಂತೋಷ್‌

ಹಸುವನ್ನು ಪವಿತ್ರ ಅಂತ ಪೂಜಿಸುವ ಬಗ್ಗೆ, ಹಸುವಿನ ಮಾಂಸ ಸೇವನೆ ಬಗ್ಗೆಯೂ ಹೇಳಿದ್ದೀರಿ, ಇದರ ಔಚಿತ್ಯ ಏನು?

ಕಾಡಿನಲ್ಲಿದ್ದವರ ಬದುಕು ಮಾನ್ಸೂನ್‌ ಮಳೆಯಾಧರಿತ ಕೃಷಿ ಬದುಕಿಗೆ ಹೊರಳಿಕೊಂಡಾಗ ಗೋವುಗಳ ಅವಲಂಬನೆ ಬೆಳೆಯುತ್ತದೆ. ಮಳೆ ಬಂದಾಗ ಜೋಡೆತ್ತಿನ ಸಹಾಯದಿಂದ ಉತ್ತು ಬಿತ್ತಿದರೆ ಮಾತ್ರ ಆತನಿಗೆ ಆಹಾರ. ಹೀಗಾಗಿ ತನ್ನ ಸರ್ವೈವಲ್‌ನಲ್ಲಿ ಗೋವನ್ನು ಬಹುಮುಖ್ಯ ಅಂತ ಪರಿಗಣಿಸಿ ಅದನ್ನು ಪೂಜಿಸುವ ಪರಂಪರೆ ಬಂದಿರುತ್ತದೆ. ನಾನ್‌ವೆಜ್‌ ತಿನ್ನುವವರಲ್ಲೂ ಹಸುವಿನ ಮಾಂಸ ತಿನ್ನುವವರು, ಹಸುವಿನ ಮಾಂಸ ತಿನ್ನದವರು ಅನ್ನೋ ವಿಭಾಗೀಕರಣ ಇದೆ. ಗೋವನ್ನು ತನ್ನ ಬದುಕಿಗೆ ಆಧಾರ ಅಂತ ಪೂಜಿಸುವಾಗ ಇದನ್ನುತಿನ್ನುವುದು ಸರಿಯಲ್ಲ ಅನ್ನುವ ಮನಸ್ಥಿತಿಯೇ ಈ ಗೋಮಾಂಸ ತಿನ್ನಬಾರದು ಎಂಬುದಕ್ಕೂ ಕಾರಣವಾಗಿರಬೇಕು. ನಾನಿಲ್ಲಿ ಮಾಂಸ ತಿನ್ನಬಾರದು, ಸಸ್ಯವನ್ನೇ ತಿನ್ನಬೇಕು ಅಂತ ಹೇಳಿಲ್ಲ. ಪರಿಸ್ಥಿತಿ ಹೀಗಾಗಿರಬಹುದು ಅಂತ ತರ್ಕಿಸಿದ್ದೇನೆ.

ಇಂಥಾ ಸೂಕ್ಷ್ಮ ವಿಚಾರಗಳನ್ನು ಜನ ಸ್ವೀಕರಿಸೋದರ ಬಗ್ಗೆ?

ನಾನಿಲ್ಲಿ ಪ್ರಶ್ನೆಗಳನ್ನು ಎತ್ತಿದ್ದೇನೆಯೇ ಹೊರತು ಯಾವುದನ್ನೂ ದೂಷಿಸಿಲ್ಲ. ಸರಿ, ತಪ್ಪು ಅಂತ ಜಡ್ಜ್‌ಮೆಂಟ್‌ ಕೊಡುತ್ತಿಲ್ಲ. ಹಾಗೆ ನೋಡಿದರೆ ಮುಕ್ಕೋಟಿ ದೇವರನ್ನು ಪೂಜಿಸುವುದರಿಂದ ಕಲಹದ ಸೂಚನೆ ಸಿಕ್ಕಾಗ ಅವತಾರದ ಪರಿಕಲ್ಪನೆ ಬಂದಿರುತ್ತೆ. ವಿಷ್ಣು ಇಷ್ಟೆಲ್ಲ ಅವತಾರಗಳನ್ನೆತ್ತಿದ ಅನ್ನುವುದು ಇಂಟಲಿಜೆನ್ಸ್‌ ವೇ ಆಫ್‌ ಪ್ರೆಸೆಂಟಿಂಗ್‌ ಗಾಡ್‌. ಇಂಥಾ ಮನಸ್ಥಿತಿಯ ಕಾರಣಕ್ಕೆ ನಮ್ಮ ದೇಶದಲ್ಲಿ ಅಂತರ್‌ ಕಲಹಗಳು ಆಗಿಲ್ಲ. ಇದನ್ನೇ ಕಾದಂಬರಿಯಲ್ಲಿ ಹೇಳಿದ್ದು. ಹೀಗಾಗಿ ವಿವಾದದ ಪ್ರಶ್ನೆ ಬರೋದಿಲ್ಲ.

ಡೆಲಿವರಿ ಬಾಯ್ಸ್‌ಗೆ ಫಸ್ಟ್‌ ಡೇ ಫಸ್ಟ್‌ ಶೋ ಫ್ರೀ 'Dear Sathya' ನಟ ಆರ್ಯನ್ ಸಂತೋಷ್‌ ಜೊತೆ ಚಿಟ್ ಟಾಟ್

ಪತ್ತೇದಾರಿ ಗುಣ ನಿಮ್ಮ ಕೃತಿಗಳ ಅನನ್ಯತೆ. ಅದು ಇದರಲ್ಲೂ ಇದೆಯಾ?

ಇಲ್ಲೂ ಆ ಪ್ರಯತ್ನ ಮಾಡಿದ್ದೇನೆ. ‘ಮಹಾವ್ಯೂಹ’ ಅಂತ ಕಾದಂಬರಿ ಬರೆದು ಅದಕ್ಕೆ ಓದುಗರು ಆಸಕ್ತಿ ತೋರಿಸಲಿ ಅಂತ ‘ಕಾನನ ಜನಾರ್ದನ’ ಇನ್ನೊಂದು ಕಾದಂಬರಿ ಸೇರಿಸಿದೆ. ಒಂದು ರೀತಿಯಲ್ಲಿ ಕಾನನ ಜನಾರ್ದನ ಈ ಮಹಾವ್ಯೂಹಕ್ಕೆ ಹೊದಿಕೆ ಇದ್ದ ಹಾಗೆ.

ಇತಿಹಾಸಕ್ಕೆ ಕಾದಂಬರಿ ರೂಪ ಕೊಡುವುದು ಹೆಚ್ಚು ಜನರಿಗೆ ವಿಚಾರ ತಲುಪಿಸುವ ಉದ್ದೇಶದಿಂದಲಾ?

ಹೌದು. ಇಡೀ ಇತಿಹಾಸವನ್ನು ಎಲ್ಲರೂ ಓದಲಿಕ್ಕಾಗಲ್ಲ. ಕಾದಂಬರಿ ಮೂಲಕ ಸಾರಾಂಶ ರೂಪದಲ್ಲಿ ಹೇಳುತ್ತೇನೆ. ಈ ಕಾದಂಬರಿಯಲ್ಲಿ ಉದ್ದೇಶಪೂರ್ವಕವಾಗಿ ಬೆಳೆಗಳ ಬಗ್ಗೆ ಬರೆದಿದ್ದೇನೆ. ನಾವು ರಾಗಿ ತಿಂತೀವಿ. ರಾಗಿ ದೇವರು, ರಾಗಿ ತಿನ್ನದವನು ಮನುಷ್ಯನೇ ಅಲ್ಲ ಅಂತೀವಿ. ಉತ್ತರ ಕರ್ನಾಟಕದ ಜನ ಜೋಳ ಪೂರ್ವಜರಿಂದ ಬಂದ ನಮ್ಮ ಆಹಾರ ಸಂಸ್ಕೃತಿ ಅಂತಾರೆ. ಆದರೆ ಈ ಕಾದಂಬರಿಯ ಕಾಲಘಟ್ಟದಲ್ಲಿ ಆ ಬೆಳೆಗಳೆಲ್ಲ ಇಲ್ಲಿರಲೇ ಇಲ್ಲ. ಮುಂದೆ ಉಗಾಂಡ, ಸೌತ್‌ ಆಫ್ರಿಕಾದಿಂದ ನಮ್ಮ ನೆಲಕ್ಕೆ ಬಂತು. ಅದು ಹೇಗೆ ಅನ್ನೋದಕ್ಕೆ ಸಾಕ್ಷಿಗಳು, ಮ್ಯಾಪ್‌ ಇತ್ಯಾದಿ ಆಕರ ಕೊಟ್ಟಿದ್ದೀನಿ.

ದಶಕಗಳಿಂದ ಬರೆಯುತ್ತಿದ್ದೀರಿ, ನಿಮ್ಮ ಓದುಗ ವಲಯ ವಿಸ್ತಾರವಾಗುತ್ತಿದೆಯಾ?

ಜನ ನನ್ನ ಕೃತಿ ಓದೋದು ಗೊತ್ತು. ಹೆಚ್ಚು ಜನ ಕೃತಿ ಓದಲಿ ಅಂತ ಆಸೆ ಇದೆ. ಆದರೆ ನನಗೆ ಹೊಟ್ಟೆಪಾಡಿಗೆ ಕೃತಿ ಬರೆಯುವ ಅಗತ್ಯ ಇಲ್ಲ. ನನ್ನ ಖುಷಿಗಾಗಿ ಬರೆಯೋದು. ಹೀಗಾಗಿ ಈ ಲೆಕ್ಕಾಚಾರಗಳೆಲ್ಲ ಗೊತ್ತಿಲ್ಲ.

Follow Us:
Download App:
  • android
  • ios