ನಂದಗೋಕುಲದಿಂದ ಚಂದನವನದೆಡೆಗೆ ಕರಾವಳಿ ಪ್ರತಿಭೆ!
ತಮ್ಮ ಸ್ವಭಾವವನ್ನು ಹೋಲುವ ಪಾತ್ರ ಸಿಕ್ಕರೆ ಅಭಿನಯದಲ್ಲಿ ಹೆಚ್ಚಿನ ನೈಜತೆ ಮೂಡಿಸಲು ಸಾಧ್ಯ ಎನ್ನುತ್ತಾರೆ ಕಲಾವಿದೆ ಶ್ವೇತಾ ಅರೆಹೊಳೆ.
ದಿವ್ಯಶ್ರೀ ವಜ್ರದುಂಬಿ.
ವಿವೇಕಾನಂದ ಕಾಲೇಜು ಪುತ್ತೂರು
ಚಂದನವನಕ್ಕೆ ಕಾಲಿಡಲು ಸಜ್ಜಾಗಿರುವ ಕರಾವಳಿಯ ಬೆಡಗಿ ಶ್ವೇತ ಅರೆಹೊಳೆ ಮೂಲತಃ ಕುಂದಾಪುರದವರು. ಬಾಲ್ಯದಿಂದಲೇ ನೃತ್ಯ ನಾಟಕದೆಡೆಗೆ ವಿಶೇಷ ಒಲವು ಹೊಂದಿದ್ದ ಶ್ವೇತಾ, ತಮ್ಮ ತಂದೆ ಅರೆಹೊಳೆ ಸದಾಶಿವ ರಾವ್ ಮತ್ತು ತಾಯಿ ಗೀತ ಅರೆಹೊಳೆಯವರೊಡನೆ ಅತ್ಯಂತ ಉತ್ಸಾಹದಿಂದ ರಂಗಾಯಣ, ನೀನಾಸಂರಂತಹ ಜನಪ್ರಿಯ ತಂಡಗಳ ನಾಟಕ ಪ್ರದರ್ಶನಗಳನ್ನು ವೀಕ್ಷಿಸುತ್ತಾ ತಾನು ಕೂಡ ಮುಂದೊಂದು ದಿನ ವೇದಿಕೆಯಲ್ಲಿ ಅಭಿನಯಿಸಬೇಕೆನ್ನುವ ಹಟದೊಂದಿಗೆ ನಟನೆ ಮತ್ತು ನೃತ್ಯದೆಡೆಗೆ ಆಸಕ್ತಿ ಬೆಳೆಸಿಕೊಂಡರು.
ತಮ್ಮ ಪ್ರಾಥಮಿಕ , ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಉರ್ವದ ಕೆನರಾ ಕಾಲೇಜಿನಲ್ಲಿ ಪೂರೈಸಿದರು. ನಂತರ ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪೂರೈಸಿ ಪ್ರಸ್ತುತ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ ಅರೆಹೊಳೆ.
ನೃತ್ಯವೆಂದರೆ ಬಾಲ್ಯದಿಂದಲೇ ತನ್ಮಯಗೊಳಗಾಗುತ್ತಿದ್ದ ಶ್ವೇತಾ, ವಿಧ್ವಾನ್ ಯು ಕೆ ಪ್ರವೀಣ್ ರವಿ ಅವರ ಮಾರ್ಗದರ್ಶನದಲ್ಲಿ 5ನೇ ತರಗತಿಯಲ್ಲೇ ಭರತನಾಟ್ಯದ ಜ್ಯೂನೀಯರ್ ಪರೀಕ್ಷೆ ಬರೆದು 9ನೇ ತರಗತಿಯಲ್ಲಿ ಸೀನಿಯರ್ ಪರೀಕ್ಷೆ ಪೂರೈಸಿದರು.ತದನಂತರ ಗಾನ ನೃತ್ಯ ಅಕಾಡೆಮಿಯಲ್ಲಿ ವಿಧುಷಿ ವಿದ್ಯಾಶ್ರೀ ರಾಧಾಕೃಷ್ಣ ಅವರ ಶಿಷ್ಯೆಯಾಗಿ ರಂಗ ಪ್ರವೇಶ ಮತ್ತು ಪೂರ್ವ ವಿಧ್ವತ್ ಪೂರೈಸಿದ ಇವರು ಪ್ರಸ್ತುತ ಬೆಂಗಳೂರಿನ ಆಯನ ಡ್ಯಾನ್ಸರ್ಸ್ ಕಂಪೆನಿಯಲ್ಲಿ ತರಬೇತಿ ಪಡೆಯುವ ಜೊತೆಗೆ ವಿಧ್ವತ್ ಪೂರ್ಣಗೊಳಿಸುವ ತಯಾರಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ನಿರಂತರ ಪರಿಶ್ರಮದಿಂದ ಸಾಧನೆಯ ಗುರಿ ತಲುಪುವತ್ತ ಹೆಜ್ಜೆಯಿಡುತ್ತಿದ್ದಾರೆ.
ಕಲಾ ಜಗತ್ತಿನ ಕಡೆಗಿನ ನಂಟು ಬಾಲ್ಯದಿಂದಲೇ ಚಿಗುರೊಡೆದ ಪರಿಣಾಮ ರಂಗ ಮಂಟಪದಲ್ಲಿ ಬಣ್ಣ ಹಚ್ಚುವ ಕನಸು ಹಂತ ಹಂತವಾಗಿ ಬೆಳೆಯಿತು. ಬಾಲ್ಯದಿಂದಲೇ ನಾಟಕ ,ರಂಗ ಭೂಮಿಯ ಕಡೆಗೆ ಆಸಕ್ತಿ ಹುಟ್ಟಿಕೊಂಡಿತು. ಶಾಲ ದಿನಗಳಲ್ಲಿ ನಾಟಕಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡು, ನಂತರದ ದಿನಗಳಲ್ಲಿ ತಮ್ಮದೇ ನಾಟಕ ತಂಡವೊಂದನ್ನು ಕಟ್ಟಿಕೊಂಡು ರಂಗ ಭೂಮಿಗೆ ಹೊಸತೊಂದು ಕೊಡುಗೆ ಕೊಟ್ಟರು . ನಂದ ಗೋಕುಲ ನಾಟಕ ತಂಡದ ಮೂಲಕ ಕಲಾ ಲೋಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಳ್ಳುವುದರ ಜೊತೆಗೆ ಅನೇಕ ಪ್ರತಿಭೆಗಳಿಗೂ ವೇದಿಕೆಯಾದರು.
ತಮ್ಮ ನಂದ ಗೋಕುಲ ತಂಡ ದಿಂದ ಪುತಿನಾ ಅವರ ಗೋಕುಲ ನಿರ್ಗಮನ,ಡ. ಶ್ರೀ ಪಾಧ್ ಭಟ್ ನಿರ್ದೇಶನ ದಲ್ಲಿ ಕಂಸಾಯನ ನಾಟಕ , ಪ್ರಶಾಂತ್ ಉದ್ಯವರ ನಿರ್ದೇಶನದಲ್ಲಿ ಉಡಿ ಯೊಳಗಣ ಕಿಚ್ಚು,ರೋಹಿತ್ ಬೈಕಾಡಿ ನಿರ್ದೇಶನದಲ್ಲಿ 'ಗೆಲ್ಲಿಸ ಬೇಕು ಅವಳ' ಎನ್ನುವ ಏಕ ವ್ಯಕ್ತಿ ನಾಟಕ ಪ್ರದರ್ಶನ, ಜಯಶ್ರೀ ಇಡ್ಕಿದು ನಿರ್ದೇಶನದ ಬಿರುಗಾಳಿ ನಾಟಕ ಗಳಲ್ಲಿ ಅಭಿನಯಿಸಿ ಪಾತ್ರಕ್ಕೆ ಜೀವ ತುಂಬುವ ಜೊತೆಗೆ ರಂಗ ಗೀತೆ, ಸ್ಟೇಜ್ ಸೆಟ್ಟಿಂಗ್, ನಟನೆಯಂತಹ ರಂಗ ಮಂಟಪದ ವಿವಿಧ ವಿಭಾಗಗಳಲ್ಲಿ ಪರಿಣಿತಿ ಹೊಂದಿದಿರುವುದು ಶ್ಲಾಘನೀಯ.
ನಂದ ಗೋಕುಲ ತಂಡದ ಆಶ್ರಯದಲ್ಲಿ ಹಲವು ನಿರ್ದೇಶಕರಿಂದ ಪಡೆದ ತರಬೇತಿ ಸಿನಿಮಾ ರಂಗದತ್ತ ಹೆಜ್ಜೆ ಇರಿಸುವಲ್ಲಿ ಸಹಕಾರಿಯಾಯಿತು. ಕಳೆದ ಮೂರು ವರ್ಷಗಳಿಂದ ಮಂಜುನಾಥ್ ಕುಲಾಲ್ ಐರೋಡಿ ಇವರಿಂದ ಬಡಗುತಿಟ್ಟು ಯಕ್ಷ ಗಾನ ತರಬೇತಿಯನ್ನು ಪಡೆದುಕೊಳ್ಳುತಿದ್ದಾರೆ.
ಇವರ ಈ ಸಾಧನೆಗಳನ್ನು ಹಲವಾರು ಸಂಘ ಸಂಸ್ಥೆಗಳು ಗುರುತಿಸಿದೆ. ರಾಜ್ಯ ಚುಟುಕು ಸಾಹಿತ್ಯ ಪರಿಷತ್ ನಿಂದ ನಾಟ್ಯ ಕಿಶೋರಿ ಪುರಸ್ಕಾರ, ಶಿರಸಿಯ ವಿಶ್ವ ಶಾಂತಿ ಪ್ರತಿಷ್ಠಾನದಿಂದ ಆಯೋಜಿಸಲಾದ ನಮ್ಮನೆ ಹಬ್ಬದಲ್ಲಿ ನಮ್ಮನೆ ಪುರಸ್ಕಾರ, ಪ್ರಜಾವಾಣಿಯವರ ಯಂಗ್ ಅಚಿವರ್ ಆಫ್ 2020 ಪುರಸ್ಕಾರಗಳಿಗೆ ಭಾಜನವಾಗಿದ್ದಾರೆ ಕುಂದಾಪುರದ ಹೆಮ್ಮೆಯ ಕಲಾವಿದೆ ಶ್ವೇತ ಅರೆಹೊಳೆ.
ರಂಗ ಭೂಮಿಯ ನಂಟು ಈ ಕರಾವಳಿಯ ಬೆಡಗಿಯನ್ನು ಇದೀಗ ಚಂದನವನಕ್ಕೆ ಪರಿಚಯಿಸಲು ಸಿದ್ದವಾಗಿದೆ. ಮಾರ್ಚ್ 11ರಂದು ರಾಜ್ಯದಾದ್ಯಂತ ಬಿಡುಗಡೆಗೆ ಸಜ್ಜಾಗಿರುವ, ನಿರ್ದೇಶಕ ಗುರು ಅವರ ನಿರ್ದೇಶನ ದಲ್ಲಿ ಮೂಡಿ ಬಂದಿರುವ ಹರೀಶ ವಯಸ್ಸು 36 ಇವರ ಚೊಚ್ಚಲ ಸಿನಿಮಾ. ಮೊದಲ ಬಾರಿ ಕ್ಯಾಮರಾ ಎದುರಿಸಿದ ಅನುಭವದ ಬಗ್ಗೆ ಮಾತನಾಡುತ್ತಾ ಚಿತ್ರ ತಂಡ ನೀಡಿದ ಪ್ರೋತ್ಸಾಹದ ಬಗ್ಗೆ ಸಂತಸದಿಂದ ಮಾತನಾಡುತ್ತಾರೆ ಶ್ವೇತಾ. ಸಿನಿಮಾದಲ್ಲಿ ಜವಾಬ್ಧಾರಿಯುತ ಹುಡುಗಿಯೊಬ್ಬಳ ಪಾತ್ರ ನಿರ್ವಹಿಸಿರುವ ಶ್ವೇತ , ತಂಡದ ಸಹಕಾರ ಹಾಗು ಆತ್ಮೀಯತೆ ಚೊಚ್ಚಲ ಸಿನಿಮವಾದರೂ ಆತ್ಮವಿಶ್ವಾಸದಿಂದ ನಟಿಸುವ ವಾತಾವರಣ ನಿರ್ಮಿಸಿತ್ತು ಎನ್ನುತ್ತಾರೆ ಅರೆಹೊಳೆ.
ವೀರೇಂದ್ರ ಶೆಟ್ಟಿ ಅವರ ನಿರ್ದೇಶನದ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಮೂಡಿಬರಲಿರುವ 'ಮಗನೇ ಮಹಿಷಾ' ಎಂಬ ಚಿತ್ರದ ಒಂದು ಹಾಡಿಗೆ ನೃತ್ಯ ಸಂಯೋಜನೆ ಕೂಡ ಮಾಡಿದ್ದಾರೆ. ಹೀಗೆ ಕಲಾ ಲೋಕದಲ್ಲಿ ವಿಂಚಲು ಸಜ್ಜಾಗಿರುವ ಈ ಹುಡುಗಿಗೆ ಮುಂದೆ ತಮ್ಮ ನಂದ ಗೋಕುಲ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ ಉತ್ತಮ ಕಲಾವಿದೆಯಾಗಿ ಹೊರ ಹೊಮ್ಮ ಬೇಕು ಅನ್ನೋ ಮಹದಾಸೆ ಇದೆ. ಇವರ ಎಲ್ಲಾ ಕನಸುಗಳಿಗೂ ಉತ್ತಮ ವೇದಿಕೆ ಸಿಕ್ಕು ಇವರ ಪ್ರತಿಭೆಗೆ ಇನ್ನಷ್ಟು ಅವಕಾಶಗಳು ಒದಗಿ ಬರಲಿ ಎಂಬುದೇ ಎಲ್ಲರ ಆಶಯ.