ಶ್ರೀರಸ್ತು ಶುಭಮಸ್ತು ಸೀರಿಯಲ್ ಮುಗಿಯುವ ಹಂತದಲ್ಲಿದೆ. ಶಾರ್ವರಿಯ ಕುತಂತ್ರ ಬಯಲಾಗಿದ್ದು, ಸಮರ್ಥ್ ನಿರಪರಾಧಿ ಎಂದು ಸಾಬೀತಾಗಿದೆ. ಆದರೆ ಇದೀಗ ತುಳಸಿಯ ಹೂವಿನ ಮೇಲೆ ಎಲ್ಲರ ಕಣ್ಣು ನೆಟ್ಟಿದೆ, ಏನದು?
ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿಯುತ್ತಿದೆ. ಇನ್ನು ಮಾಧವ್ ಮತ್ತು ಅವಿಗೆ ತಿಳಿಯುವುದು ಒಂದೇ ಬಾಕಿ ಇದೆ. ಅದು ಕೂಡ ತಿಳಿಯುವ ಕಾಲವೂ ಕೂಡಿ ಬಂದಿದೆ. ಇನ್ನು ಎಳೆಯದಿದ್ದರೆ ಸೀರಿಯಲ್ ಇನ್ನು ಕೆಲವೇ ದಿನಗಳಲ್ಲಿ ಮುಗಿಸಬಹುದಾಗಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ. ಅದೇ ಇನ್ನೊಂದೆಡೆ, ಸಮರ್ಥ್, ಅವಿ-ಅಭಿ ಎಲ್ಲರೂ ಒಂದಾಗಿದ್ದಾರೆ. ಶಾರ್ವರಿಯ ಕುತಂತ್ರ ಬಹುತೇಕ ಎಲ್ಲರಿಗೂ ಗೊತ್ತಾಗಿ, ಅವರೆಲ್ಲರೂ ಶಾರ್ವರಿಯ ವಿರುದ್ಧ ಸಿಡಿದೆದ್ದಿದ್ದಾರೆ.
ವಿಷಯ ಗೊತ್ತಾಗುತ್ತಿದ್ದಂತೆಯೇ ಶಾರ್ವರಿ ತಪ್ಪಿಸಿಕೊಂಡಿದ್ದಾಳೆ. ಅವಳ ಹುಡುಕಾಟದಲ್ಲಿ ಕುಟುಂಬದವರು ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ ಸಮರ್ಥ್ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿಸಿಕೊಂಡಿರುವ ಶಾರ್ವರಿಯನ್ನು ಹುಡುಕುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಅದೇ ವೇಳೆ ಯಾರೋ ತಮಗೆ ಶಾರ್ವರಿಯ ಸುಳಿವು ಸಿಕ್ಕಿದೆ ಎಂದು ಸಮರ್ಥ್ಗೆ ಫೋನ್ನಲ್ಲಿ ಹೇಳಿದ್ದಾರೆ. ಸಮರ್ಥ್ ಆಕೆಯನ್ನು ಹುಡುಕಿ ಹೊರಟಿದ್ದಾನೆ. ಅದೇ ಇನ್ನೊಂದೆಡೆ, ಈ ಬಗ್ಗೆ ಮಾಧವ್ ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಆ ವ್ಯಕ್ತಿ ಹೇಳಿದ್ದು ನಿಜವೇ ಅಥವಾ ಸಮರ್ಥ್ನನ್ನು ಸಾವಿನ ಬಾಯಿಗೆ ನೂಕಲು ಶಾರ್ವರಿ ಮಾಡಿರುವ ಕುತಂತ್ರವೇ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಒಟ್ಟಿನಲ್ಲಿ ಸೀರಿಯಲ್ ಬಹುತೇಕ ಮುಗಿದಿದೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಎಲ್ಲಾ ಬಿಟ್ಟು ನೆಟ್ಟಿಗರು ತುಳಸಿಯ ಹೂವಿನ ಕಡೆ ಗಮನ ಹರಿಸಿದ್ದಾರೆ. ಸಹಸ್ರಾರು ಕೋಟಿಯ ಒಡತಿಯಾಗಿರುವ ತುಳಸಿಗೆ ಒರಿಜಿನಲ್ ಹೂವು ಧರಿಸಲು ಆಗಲ್ವಾ? ಯಾವಾಗ ನೋಡಿದ್ರೂ ಆರ್ಟಿಫಿಷಿಲ್ ಹೂವು ಧರಿಸೋದು ಯಾಕೆ ಎನ್ನುವುದು ಅವರ ಪ್ರಶ್ನೆ. ಕೃತಕ ಹೂವು ಧರಿಸೋದೇ ಆಗಿದ್ರೆ ಯಾಕೆ ಧರಿಸಬೇಕಿತ್ತು, ಇದೊಂದು ರೀತಿಯಲ್ಲಿ ವಿಚಿತ್ರ ಎನ್ನಿಸುತ್ತದೆ ಎಂದಿದ್ದಾರೆ. ಇದಕ್ಕೆ ಹಲವರು ಹಲವು ರೀತಿಯ ಕಮೆಂಟ್ ಹಾಕಿದ್ದಾರೆ.
ಅಷ್ಟಕ್ಕೂ, ಸೀರಿಯಲ್ ಶೂಟಿಂಗ್ ಎನ್ನುವುದು ಅಷ್ಟು ಸುಲಭದಲ್ಲಿ ಮುಗಿಯುವ ಮಾತಲ್ಲ. ಪ್ರತಿ ಬಾರಿಯೂ ರಿಯಲ್ ಹೂವು ತಂದು ಮುಡಿಸಿದರೆ, ಬಹುಶಃ ಸೀರಿಯಲ್ನ ಕಾಲು ಭಾಗದ ದುಡ್ಡು ಹೂವಿಗೇ ಬೇಕಾಗಬಹುದು. ಹೂವು ತಂದಿಟ್ಟರೆ ಇನ್ನೊಂದು ಶಾಟ್ ಬರುವವರೆಗೆ ಅದು ಬಾಡಿ ಹೋಗುವ ಸಂಭವವೇ ಹೆಚ್ಚು. ಒಂದೇ ಒಂದು ಸೀನ್ ಕೆಲವೊಮ್ಮೆ ದಿನಗಟ್ಟಲೇ ಶೂಟ್ ಮಾಡುವುದು ಇದೆ. ಆ ಸಂದರ್ಭದಲ್ಲಿ ರಿಯಲ್ ಹೂವು ನಟಿಯರಿಗೆ ಮುಡಿಸುವುದು ಸುಲಭದ ಮಾತಲ್ಲ. ಇದೇ ಕಾರಣಕ್ಕೆ ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ನಕಲಿ ಹೂವನ್ನೇ ಹಾಕಲಾಗುತ್ತದೆ. ಹಾಗಿದ್ದರೆ ಹೂವು ಮುಡಿದುಕೊಳ್ಳುವುದು ಯಾಕೆ ಎನ್ನುವುದು ಇನ್ನು ಕೆಲವರ ಪ್ರಶ್ನೆ. ಅದಕ್ಕೂ ಒಂದು ಕಾರಣ ಇದೆ. ಸಾಮಾನ್ಯವಾಗಿ ಸದೃಹಿಣಿ, ಒಳ್ಳೆಯವಳು ಎಂದು ತೋರಿಸುವ ಉದ್ದೇಶದಿಂದ ನಟಿಯರಿಗೆ ಕೆಲವೊಂದು ಸಿದ್ಧಸೂತ್ರಗಳನ್ನು ಸೀರಿಯಲ್ಗಳಲ್ಲಿ ಅಳವಡಿಸಲಾಗುತ್ತದೆ. ನಾಯಕಿ ಮತ್ತು ವಿಲನ್ಗಳಿಗೂ ಬೇರೆ ಬೇರೆ ರೀತಿಯ ಮೇಕಪ್ ಕೂಡ ಮಾಡುವುದು ಉಂಟು. ಅದನ್ನುಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ನಾಯಕಿ ಅಥವಾ ಆಕೆ ಸಗೃಹಿಣಿ ಎಂದು ತೋರಿಸಲು ಹೂವನ್ನು ಮುಡಿಸುವುದು ಸೀರಿಯಲ್ಗಳಲ್ಲಿ ಸಾಮಾನ್ಯ. ಶ್ರೀಮಂತರ ಮನೆಯೇ ಆಗಿರಲಿ, ಬಡವರ ಮನೆಯೇ ಆಗಿರಲಿ, ಅವರ ಮುಡಿಯಲ್ಲಿ ಮಲ್ಲಿಗೆ ಮಾಲೆ ಇದ್ದೇ ಇರುತ್ತದೆ. ಹಾಗೆ ಮುಡಿದಿದ್ದರೆ ಅವರು ಒಳ್ಳೆಯವರು ಅಥವಾ ಒಳ್ಳೆಯವರಂತೆ ನಟನೆ ಮಾಡುವವರು ಎಂದು ಸೀರಿಯಲ್ಗಳಲ್ಲಿ ತಿಳಿದುಕೊಳ್ಳಬೇಕು. ಅದಕ್ಕಾಗಿ ಎಲ್ಲವೂ ಅನಿವಾರ್ಯವೇ.


