ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎಂದುಕೊಳ್ಳುವಾಗಲೇ ಮತ್ತೊಬ್ಬಳು ವಿಲನ್ ಎಂಟ್ರಿಯಾಗಿದೆ. ಏನಿದು ಟ್ವಿಸ್ಟ್?
ಶ್ರೀರಸ್ತು ಶುಭಮಸ್ತು ಸೀರಿಯಲ್ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ ಎಂದೇ ಅಂದುಕೊಳ್ಳಲಾಗಿತ್ತು. ಇದಕ್ಕೆ ಕಾರಣ, ಶಾರ್ವರಿಯೇ ಕೊಲೆಗಾತಿ ಎನ್ನುವ ವಿಷಯ ಒಬ್ಬೊಬ್ಬರಾಗಿ ಎಲ್ಲರಿಗೂ ತಿಳಿದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಶಾರ್ವರಿ ತಪ್ಪಿಸಿಕೊಂಡಿದ್ದಾಳೆ. ಅವಳ ಹುಡುಕಾಟದಲ್ಲಿ ಕುಟುಂಬದವರು ಮುಂದಾಗಿದ್ದಾರೆ. ಅದೇ ಇನ್ನೊಂದೆಡೆ, ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ಕೋರ್ಟ್ ಸಮರ್ಥ್ನನ್ನು ನಿರಪರಾಧಿ ಎಂದು ತೀರ್ಪು ನೀಡಿದೆ. ತಪ್ಪಿಸಿಕೊಂಡಿರುವ ಶಾರ್ವರಿಯನ್ನು ಹುಡುಕುವಂತೆ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಮನೆಯ ಒಳಿತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವ ತುಳಸಿ ಹಾಗೂ ಎಲ್ಲರನ್ನೂ ಸರ್ವನಾಶ ಮಾಡಲು ಏನು ಬೇಕಾದರೂ ಮಾಡಲು ಪಣ ತೊಟ್ಟಿರುವ ಶಾರ್ವರಿ... ಈ ಇಬ್ಬರು ಸೊಸೆಯಂದಿರ ನಡುವಿನ ಕಥೆಯ ಬಹುತೇಕ ಮುಗಿಯುವ ಹಂತಕ್ಕೆ ಬಂದು ತಲುಪಿದೆ. ಕುಟುಂಬ, ಪತಿ, ಮಕ್ಕಳು ಎಂದು ಬಂದರೆ ಯಾವುದಕ್ಕೂ ಜಗ್ಗದೇ, ಕುಗ್ಗದೇ ಮುನ್ನುಗ್ಗುವವಳು ತುಳಸಿ. ಆದರೆ ಏನೇ ಆದರೂ ಸೈ. ಗಂಡನ ಇಡೀ ಕುಟುಂಬವನ್ನೇ ನಾಶ ಮಾಡಿ ನೆಮ್ಮದಿಯ ಉಸಿರು ಬಿಡುವ ತವಕದಲ್ಲಿದ್ದಾಳೆ ಶಾರ್ವರಿ.
ಅಬ್ಬಾ, ಅಂತೂ ಒಂದು ಸೀರಿಯಲ್ ಮುಗಿಸುತ್ತಾರೆ ಎಂದುಕೊಂಡಿದ್ದರು ಬಹುತೇಕ ವೀಕ್ಷಕರು. ಆದರೆ ಆದದ್ದೇ ಬೇರೆ. ಸೀರಿಯಲ್ ಟಿಆರ್ಪಿ ಹೆಚ್ಚಿಗೆ ಇದ್ದಾಗ ಯಾವುದೇ ಕಾರಣಕ್ಕೂ ಸೀರಿಯಲ್ ಮುಗಿಸೋ ಛಾನ್ಸೇ ಇಲ್ಲ. ಏನಾದರೊಂದು ಟ್ವಿಸ್ಟ್ ತುರುಕಿ ತುರುಕಿ ಮತ್ತೊಂದಷ್ಟು ವರ್ಷ ಎಳೆಯುವುದು ಎಲ್ಲಾ ಭಾಷೆಗಳಲ್ಲಿಯೂ ನಡೆದುಕೊಂಡೇ ಬಂದಿದೆ. ಅದಕ್ಕೆ ಕನ್ನಡ ಸೀರಿಯಲ್ಗಳೂ ಹೊಸದೇನಲ್ಲ. ಆದ್ದರಿಂದ ಶಾರ್ವರಿ ಏನೋ ಸಿಕ್ಕಿಬಿಟ್ಟು, ಅವಳನ್ನು ಪೊಲೀಸರು ಅರೆಸ್ಟ್ ಮಾಡಿ ಜೈಲಿಗೆ ತಳ್ಳಿದರೆ ಅಲ್ಲಿಗೆ ಸೀರಿಯಲ್ ಮುಗಿಯತ್ತೆ ಎಂದುಕೊಂಡ ವೀಕ್ಷಕರ ಲೆಕ್ಕಾಚಾರ ತಲೆಕೆಳಗಾಗಿದೆ. ಏಕೆಂದ್ರೆ ಒಬ್ಬಳು ವಿಲನ್ ತಪ್ಪಿಸಿಕೊಂಡ ನಡುವೆಯೇ ಇನ್ನೊಬ್ಬ ವಿಲನ್ ಎಂಟ್ರಿ ಕೊಟ್ಟಿದ್ದಾಳೆ!
ಹೌದು. ಶಾರ್ವರಿಯ ಪುತ್ರಿ ನಿಧಿ ಒಳ್ಳೆಯವಳಾದಂತೆ ತೋರಿಸಲಾಗಿತ್ತು. ತುಳಸಿಯನ್ನೂ ಆಕೆ ಅಮ್ಮನಂತೆಯೇ ಪ್ರೀತಿಸಲು ಶುರು ಮಾಡಿದ್ದಳು. ತುಳಸಿಗೆ ಅವಮಾನ ಆದಾಗ ತಾನೂ ಮದುವೆಯನ್ನೇ ಧಿಕ್ಕರಿಸಿದವಳು. ಈಗ ಮದುವೆಯಾಗಿ ಗಂಡನ ಮನೆಗೆ ಹೋದವಳು, ವಿಷಯ ತಿಳಿದು ವಾಪಸ್ ಆಗಿದ್ದಾಳೆ. ತನ್ನ ಅಮ್ಮ ಇಷ್ಟೆಲ್ಲಾ ಅನ್ಯಾಯ ಮಾಡಿರುವುದನ್ನು ತಿಳಿದ ಅವಳು ಎಲ್ಲರನ್ನೂ ತಬ್ಬಿಕೊಂಡು ರೋದಿಸಿದ್ದಾಳೆ. ಅಮ್ಮನಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾಳೆ. ಸೀರಿಯಲ್ ಮುಗಿಯೋ ಹೊತ್ತಿನಲ್ಲಿ ನಿಧಿಯ ಎಂಟ್ರಿ ಆಗಿದ್ದರಿಂದ ಅವಳನ್ನೂ ತೋರಿಸಿದರು ಎಂದುಕೊಂಡು ಧಾರಾವಾಹಿ ಮುಗಿಯೋದು ಗ್ಯಾರೆಂಟಿ ಅಂದುಕೊಂಡ್ರೆ ನಿಧಿ ವರಸೆ ಬದಲಿಸಿದ್ದಾಳೆ.
ಒಬ್ಬಳೇ ಕೂತು, ತನ್ನ ತಾಯಿಯ ಪರವಾಗಿ ಮಾತನಾಡಿದ್ದಾಳೆ. ಹೇಗಾದರೂ ಮಾಡಿ ಆಕೆಯನ್ನು ಹುಡುಕಿ ಕರೆತರಬೇಕು. ಈ ಮನೆಯ ಯಜಮಾನಿಯಾಗಿ ಆಕೆ ಮೆರೆಯುವುದನ್ನು ತಾನು ಕಣ್ಣಾರೆ ನೋಡಬೇಕು ಎಂದು ಹೇಳಿದ್ದಾಳೆ. ಈ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ವೀಕ್ಷಕರು ಸುಸ್ತಾಗಿ ಹೋಗಿದ್ದಾರೆ. ಹಾಗಿದ್ರೆ ಇನ್ನೊಂದೆರಡು ವರ್ಷ ಸೀರಿಯಲ್ ಎಳಿಯೋದು ಗ್ಯಾರೆಂಟಿ ಎನ್ನುತ್ತಿದ್ದಾರೆ. ಅಷ್ಟಕ್ಕೂ ಇದಾಗಲೇ ಶಾರ್ವರಿ ಎಲ್ಲರನ್ನು ಕೊಲ್ಲಲು ಸಂಚು ರೂಪಿಸುತ್ತಲೇ ಇದ್ದಾಳೆ. ತುಳಸಿಯ ತುಲಾಭಾರದ ಸಮಯದಲ್ಲಿ ಆಕೆಯ ಮೈಮೇಲೆ ಹೂವು ಹಾಕುತ್ತಿದ್ದಂತೆಯೇ ಅದರಲ್ಲಿ ಚಾಕು ಇರಿಸಿದ್ದಳು. ಆದರೆ ತುಳಸಿ ಬಚಾವಾಗಿದ್ದಾಳೆ. ಕೊನೆಗೂ ಎಲ್ಲರನ್ನೂ ಸಾಯಿಸುವ ಬಗ್ಗೆ ಮಾತನಾಡಿದ್ದಾಳೆ. ಆದರೆ, ಈಗ ನಿಧಿಯ ಪ್ರವೇಶದಿಂದ ಮತ್ತಷ್ಟುಟ್ವಿಸ್ಟ್ ಬಂದಿದೆ!
