ಎರಡೂವರೆ ವರ್ಷಗಳಿಂದ ವೀಕ್ಷಕರನ್ನು ರಂಜಿಸಿದ್ದ ಸೀತಾರಾಮ ಸೀರಿಯಲ್ ಶೂಟಿಂಗ್ ಮುಗಿದಿದ್ದು, ಇನ್ನೇನು ಮುಕ್ತಾಯ ಆಗಲಿದೆ. ಅಷ್ಟಕ್ಕೂ ಸೀರಿಯಲ್ ಮುಗಿಸಲು ಕಾರಣವೇನು? ನಟ ಅಶೋಕ್ ಹೇಳಿದ್ದೇನು?
ಸೀತಾರಾಮ ಸೀರಿಯಲ್ನ ಕ್ಲೈಮ್ಯಾಕ್ಸ್ ಭಾಗ ಶುರುವಾಗಿದೆ. ಇನ್ನೇನು ಭಾರ್ಗವಿಯ ಕಿತಾಪತಿ, ರಾಮ್ಗೆ ಗೊತ್ತಾಗುವುದು ಒಂದು ಬಾಕಿ ಇತ್ತು. ಅದು ಕೂಡ ಬಹುತೇಕ ಗೊತ್ತಾಗಿದೆ. ಸುಬ್ಬಿಗೆ ಇದಾಗಲೇ ಸಿಹಿಯಿಂದ ಎಲ್ಲಾ ಗೊತ್ತಾಗಿರುವ ಹಿನ್ನೆಲೆಯಲ್ಲಿ, ಅವಳೇ ಸತ್ಯ ಹೇಳಿದ್ದಾಳೆ. ಸಿಹಿ ತನಗೆ ಕಾಣಿಸಿಕೊಳ್ಳುತ್ತಿದ್ದು, ಎಲ್ಲಾ ವಿಷಯಗಳನ್ನು ಹೇಳಿದ್ದಾಳೆ ಎಂದು ಸುಬ್ಬಿ ಕೂಡ ಹೇಳಿಯಾಗಿದೆ. ಸತ್ಯಜೀತ್ ವಾಣಿಯ ಕೊಲೆ ಮಾಡಿಲ್ಲ ಎನ್ನುವ ಸತ್ಯವೂ ತಿಳಿದಾಗಿದೆ. ಇದರ ಹಿಂದೆ ಭಾರ್ಗವಿಯ ಕೈವಾಡ ಇದೆ ಎನ್ನುವುದು ಸೀತಾಳಿಗೆ ಗೊತ್ತಾಗಿದ್ದು, ಆಕೆಯನ್ನು ಭಾರ್ಗವಿ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾಳೆ. ಮುಂದೆ ಏನಾಗಬಹುದು ಎಂದು ಎಲ್ಲರೂ ಊಹಿಸಿಯೇ ಇರುತ್ತಾರೆ. ಆದರೆ ಎರಡೂವರೆ ವರ್ಷಗಳಿಂದ ಶುರುವಾಗಿರುವ ಸೀತಾರಾಮ ಸೀರಿಯಲ್ ಇನ್ನೂ ಮುಂದುವರೆಸಿ ಎಂದು ಹಲವು ವೀಕ್ಷಕರು ಹೇಳುತ್ತಲೇ ಇದ್ದಾರೆ. ಕೆಲವು ಸೀರಿಯಲ್ಗಳು ನಾಲ್ಕೈದು ವರ್ಷ ಎಳೆಯುವುದು ಇದೆ. ಈ ಸೀರಿಯಲ್ ಅನ್ನು ಇಷ್ಟು ಬೇಗ ಮುಗಿಸಬೇಡಿ ಎನ್ನುವುದು ಅವರ ಮಾತು. ಆದರೆ ಈ ಸೀರಿಯಲ್ ಅನ್ನು ಯಾಕೆ ಮುಗಿಸುತ್ತಿದ್ದಾರೆ ಎನ್ನುವ ಬಗ್ಗೆ ಅಶೋಕ್ ಪಾತ್ರಧಾರಿಯಾಗಿರುವ ಅಶೋಕ್ ಶರ್ಮಾ ಅವರು ಸಂದರ್ಶನವೊಂದರಲ್ಲಿ ಸೂಚ್ಯವಾಗಿ ಹೇಳಿದ್ದಾರೆ. ಇದೇ ಕಾರಣ ಎಂದು ಅವರು ನೇರವಾಗಿ ಹೇಳದಿದ್ದರೂ ಸಂದರ್ಶಕರು ಕೇಳಿದ ಪ್ರಶ್ನೆಗೆ ಅವರು ಕೊಟ್ಟಿರುವ ಉತ್ತರದಿಂದ ಸೀರಿಯಲ್ ಮುಗಿಯಲು ಏನು ಕಾರಣ ಎನ್ನುವುದನ್ನು ಸುಲಭದಲ್ಲಿ ತಿಳಿಯಬಹುದಾಗಿದೆ.
ಎಫ್ಡಿಎಫ್ಎಸ್ ಯುಟ್ಯೂಬ್ ಚಾನೆಲ್ಗೆ ಅವರು ನೀಡಿರುವ ಸಂದರ್ಶನದಲ್ಲಿ ಈ ವಿಷಯವನ್ನು ಅವರು ರಿವೀಲ್ ಮಾಡಿದ್ದಾರೆ. ಸೀತಾರಾಮ ಸೀರಿಯಲ್ ಮುಗಿಯುತ್ತಿರುವ ಬಗ್ಗೆ ನೋವನ್ನೂ ತೋಡಿಕೊಂಡಿರುವ ಅಶೋಕ್ ಅವರು ಈ ಎರಡೂವರೆ ವರ್ಷಗಳಲ್ಲಿ ಹೇಗೆ ನಟ-ನಟಿಯರು ಕನೆಕ್ಟ್ ಆಗಿದ್ವಿ, ಹೇಗೆ ದೂರವಾಗುವುದು ಬೇಸರವಾಗುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಸೀತಾರಾಮ ಸೀರಿಯಲ್ ಟಿಆರ್ಪಿ ಕಳೆದುಕೊಳ್ಳುತ್ತಿರುವ ಕಾರಣ, ಈ ಸೀರಿಯಲ್ ಮುಗಿಸಲು ಕಾರಣ ಎನ್ನುವಂಥ ಪ್ರಶ್ನೆಗೆ ಅಶೋಕ್ ಅವರು ನೇರವಾಗಿ ಉತ್ತರ ಹೇಳದಿದ್ದರೂ ಕೆಲವೊಮ್ಮೆ ರಿಸ್ಕ್ ತೆಗೆದುಕೊಂಡಾಗ ಹೀಗೆ ವರ್ಕ್ಔಟ್ ಆಗುವುದಿಲ್ಲ. ಲೈಫ್ನಲ್ಲಿಯೂ ಹಾಗೆಯೇ ಅಲ್ವಾ, ಏನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ಅಷ್ಟಕ್ಕೂ ಆ ರಿಸ್ಕ್ ಏನು ಎಂದು ನೋಡುವುದಾದರೆ, ಸೀರಿಯಲ್ ವೀಕ್ಷಕರಿಗೆ ತಿಳಿದಿರುವಂತೆ ಅದು ಸಿಹಿಯ ಸಾವು. ಸಿಹಿಯನ್ನು ಅಪಘಾತದಲ್ಲಿ ಯಾವಾಗ ಸಾಯಿಸಲಾಯಿತೋ ಆಗಲೇ ಬಹುತೇಕ ಮಂದಿ ಸೀರಿಯಲ್ ನೋಡುವುದನ್ನೇ ಬಿಟ್ಟರು. ಅದೇ ಇನ್ನೊಂದೆಡೆ, ಸೀರಿಯಲ್ ಟೈಮಿಂಗ್ ಬದಲಾವಣೆಯಿಂದ ಟಿಆರ್ಪಿ ಕೂಡ ಕುಸಿದಿತ್ತು. ಸಿಹಿಯ ಸಾವಿನ ಬಳಿಕ ಜನರು ಇದನ್ನು ಮತ್ತೆ ನೋಡಲು ಇಷ್ಟಪಟ್ಟಿರಲಿಲ್ಲ ಎನ್ನುವುದು ಒಂದುಕಡೆಯಾದರೆ, ಈಗ ಪ್ರಸಾರ ಆಗ್ತಿದ್ದ ಸಮಯದಲ್ಲಿ ನೋಡಲು ಬಹಳಷ್ಟು ಮಂದಿಗೆ ಆಗುತ್ತಿರಲಿಲ್ಲ ಎನ್ನುವುದೂ ಮತ್ತೊಂದು ಕಾರಣ. ಹೀಗೆ ಸಿಹಿಯ ಪಾತ್ರದ ಜೊತೆ ತುಂಬಾ ಕನೆಕ್ಟ್ ಆಗಿದ್ದ ವೀಕ್ಷಕರು, ಸಿಹಿಯಿಂದಾಗಿಯೇ ಸೀರಿಯಲ್ ನೋಡುತ್ತಿದ್ದ ಜನರು ಸೀರಿಯಲ್ ಕೈಬಿಟ್ಟರು. ಅದನ್ನು ಮೇಲಕ್ಕೆ ಎತ್ತಲು ಸಾಕಷ್ಟು ಸರ್ಕಸ್ ಮಾಡಿದರೂ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಸಿಗಲಿಲ್ಲ. ಇದೇ ಕಾರಣಕ್ಕೆ ಸೀರಿಯಲ್ ಮುಗಿಸಲಾಗಿದೆ ಎಂದು ಅಶೋಕ್ ಅವರ ಮಾತುಗಳಿಂದ ತಿಳಿಯಬಹುದಾಗಿದೆ.
ಅದೇನೇ ಇದ್ದರೂ ಒಂದು ಒಳ್ಳೆಯ ರೀತಿಯಲ್ಲಿ ಸೀರಿಯಲ್ ಮುಕ್ತಾಯ ಕಾಣಲಿದೆ ಎನ್ನುವುದು ಸಮಾಧಾನ. ಮೂರು ವರ್ಷಗಳವರೆಗೆ ಒಂದೇ ಟೀಮ್ನಲ್ಲಿ ಕೆಲಸ ಮಾಡುತ್ತಿದ್ದರೆ, ಅವರೇ ಕುಟುಂಬದ ಸದಸ್ಯರು ಎನ್ನಿಸಿಕೊಳ್ಳುವ ಕಾರಣ, ಅವರನ್ನು ಬಿಟ್ಟುಹೋಗುವುದು ಕಲಾವಿದರಿಗೆ ನೋವಿನ ಮಾತೇ. ಇದಾಗಲೇ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಅವರು ಶೇರ್ ಮಾಡಿಕೊಂಡಿದ್ದ ವಿಡಿಯೋದಲ್ಲಿ ಸಿಹಿ ಮತ್ತು ರಾಮ್ ಪಾತ್ರಧಾರಿಗಳು ತುಂಬಾ ಭಾವುಕ ಆಗಿದ್ದನ್ನು ನೋಡಬಹುದು. ಇಬ್ಬರೂ ತುಂಬಾ ಕಣ್ಣೀರು ಹಾಕಿದರು ಎಂದು ಈ ಸಂದರ್ಶನದಲ್ಲಿ ಅಶೋಕ್ ಅವರೂ ಹೇಳಿದ್ದಾರೆ. ಅಂದಹಾಗೆ ಅಶೋಕ್ ಅವರ ನಿಜವಾದ ಹೆಸರು ಕೂಡ ಅಶೋಕ್ ಶರ್ಮಾ ಆಗಿದೆ. ಅಶೋಕ್ ಅವರ ನಿಜವಾದ ಹೆಸರು ಅಶೋಕ್ ಶರ್ಮಾ. ಅವರು ಸಿನಿಮಾ, ಸೀರಿಯಲ್ ಕಲಾವಿದ, ಗಾಯಕನಾಗಿಯೂ ಗಮನ ಸೆಳೆದಿದ್ದಾರೆ.

