SRK Watch Gift: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಗ್ಲೋಬಲ್ ಪಾಪ್ ಐಕಾನ್ ಲೇಡಿ ಗಾಗಾ ಅವರ ಒಂದು ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡ್ತಿದೆ.
2011ರಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್, ಪಾಪ್ ತಾರೆ ಲೇಡಿ ಗಾಗಾಗೆ ತಮ್ಮ ವಾಚ್ ಅನ್ನು ಗಿಫ್ಟ್ ಆಗಿ ಕೊಡಲು ಮುಂದಾಗಿದ್ದರು. ಆದರೆ ಲೇಡಿ ಗಾಗಾ ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು. ಈ ಹಳೆಯ ವಿಡಿಯೋ ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಾರುಖ್ ಪದೇ ಪದೇ ವಾಚ್ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದು, ಗಾಗಾ 'ಬೇಡ' ಎಂದು ಹೇಳಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಗ್ಲೋಬಲ್ ಪಾಪ್ ಐಕಾನ್ ಲೇಡಿ ಗಾಗಾ ಅವರ ಒಂದು ಹಳೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡ್ತಿದೆ. 2011ರಲ್ಲಿ ಲೇಡಿ ಗಾಗಾ ಭಾರತಕ್ಕೆ ಬಂದಿದ್ದಾಗ ನಡೆದ ಒಂದು ಸಂದರ್ಶನದ ತುಣುಕು ಇದು. ಇದರಲ್ಲಿ ಶಾರುಖ್ ತಮ್ಮ ವಾಚ್ ಅನ್ನು ಲೇಡಿ ಗಾಗಾಗೆ ಗಿಫ್ಟ್ ಆಗಿ ಕೊಡಲು ಪದೇ ಪದೇ ಪ್ರಯತ್ನಿಸುವುದನ್ನು ನೋಡಬಹುದು. ಆದರೆ ಗಾಗಾ ಅದನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ. ದಶಕದ ಹಿಂದಿನ ಈ ವಿಡಿಯೋ ಈಗ ರೆಡ್ಡಿಟ್ ಸೇರಿದಂತೆ ಹಲವು ಕಡೆ ವೈರಲ್ ಆಗಿದೆ.
ಪದೇ ಪದೇ ವಾಚ್ ಕೊಡಲು ಬಂದ ಶಾರುಖ್
ಈ ಸಂದರ್ಶನದ ವೇಳೆ ಶಾರುಖ್ ಖಾನ್, ಲೇಡಿ ಗಾಗಾ ಕಡೆ ಬಾಗಿ ತಮ್ಮ ಕೈಯಲ್ಲಿದ್ದ ವಾಚ್ ಅನ್ನು ಉಡುಗೊರೆಯಾಗಿ ನೀಡಲು ಮುಂದಾಗುತ್ತಾರೆ. ಗಾಗಾ ಬೇಡವೆಂದರೂ, 'ತೆಗೆದುಕೊಳ್ಳಿ' ಎಂದು ಒತ್ತಾಯಿಸುತ್ತಾರೆ. ರೆಡ್ಡಿಟ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಒಬ್ಬರು, “ಶಾರುಖ್ ನಿಜಕ್ಕೂ ಲೇಡಿ ಗಾಗಾಗೆ ಮುಜುಗರ ಉಂಟುಮಾಡಿದರು” ಎಂದು ಕ್ಯಾಪ್ಶನ್ ಬರೆದಿದ್ದಾರೆ.
ಗಾಗಾ ನಿರಂತರ ನಿರಾಕರಣೆ
ಈ ಚರ್ಚೆಯ ಸಮಯದಲ್ಲಿ, 'ನೀವು ಶಾರುಖ್ ಖಾನ್ ಜೊತೆ ಡೇಟ್ ಮಾಡಲು ಇಷ್ಟಪಡುತ್ತೀರಾ?' ಎಂದು ಗಾಗಾರನ್ನು ಕೇಳಲಾಯಿತು. ಅದಕ್ಕೆ ಅವರು, “ಹೌದು, ಯಾಕಿಲ್ಲ? ಆದರೆ ನಿಮಗೆ ಮದುವೆಯಾಗಿದೆಯೇ? ಹಾಗಿದ್ರೆ ಖಂಡಿತ ಇಲ್ಲ” ಎಂದು ಉತ್ತರಿಸುತ್ತಾರೆ. ಆಗ ಶಾರುಖ್, “ನನಗೆ ಮದುವೆಯಾಗಿದೆ ಅಂತ ಇವರಿಗೆ ಯಾರು ಹೇಳಿದ್ದು?” ಎಂದು ತಮಾಷೆ ಮಾಡುತ್ತಾರೆ. ನಂತರ ಗಾಗಾ, “ನಾನೊಬ್ಬಳು ಒಳ್ಳೆಯ ಹುಡುಗಿ… ನಾನು ಒಬ್ಬ ವ್ಯಕ್ತಿಯ ಜೊತೆ ಮಾತ್ರ ಇರುತ್ತೇನೆ. ಈ ವಿಷಯದಲ್ಲಿ ನಾನು ಹಳೆ ಕಾಲದವಳು. ಹಾಗಾಗಿ ಖಂಡಿತ ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸುತ್ತಾರೆ. ಇದಕ್ಕೆ ಶಾರುಖ್, “ನೋಡಿ, ನನ್ನೆಲ್ಲಾ ಆಸೆಗೆ ತಣ್ಣೀರೆರಚಿದಿರಿ” ಎಂದು ಪ್ರತಿಕ್ರಿಯಿಸುತ್ತಾರೆ. ಇದರ ನಂತರವೇ ಶಾರುಖ್ ತಮ್ಮ ವಾಚ್ ಅನ್ನು ಗಾಗಾಗೆ ನೀಡಲು ಮುಂದಾಗಿದ್ದು. “ನನ್ನ ವಾಚ್ ನಿಮಗೇ ಕೊಡುತ್ತೇನೆ” ಎಂದು ಅವರು ಹೇಳುತ್ತಾರೆ.
ಗಾಗಾಗೆ ಮುಜುಗರ ಉಂಟು ಮಾಡಿದ್ರಾ ಶಾರುಖ್?
ಶಾರುಖ್ ವಾಚ್ ಕೊಡಲು ಬಂದಾಗ ಗಾಗಾ ತಕ್ಷಣವೇ, “ಬೇಡ, ಬೇಡ. ನೀವು ನನಗೆ ಏನೂ ಕೊಡೋದು ಬೇಡ. ನನಗೆ ನಿಮ್ಮ ವಾಚ್ ಬೇಡ. ದಯವಿಟ್ಟು, ದಯವಿಟ್ಟು” ಎಂದು ನಿರಾಕರಿಸುತ್ತಾರೆ. ಅವರು ಪದೇ ಪದೇ ಬೇಡ ಎಂದರೂ ಶಾರುಖ್ ಕೇಳುವುದಿಲ್ಲ. ಸೋಫಾದಲ್ಲಿ ಅವರ ಹತ್ತಿರಕ್ಕೆ ಬಾಗಿ ವಾಚ್ ತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾರೆ. ಆದರೂ ಗಾಗಾ, “ಬೇಡ… ನನಗೆ ಅದು ಬೇಡ” ಎನ್ನುತ್ತಲೇ ಇರುತ್ತಾರೆ. ಕೊನೆಗೆ ಈ ಮಾತುಕತೆ ಮುಗಿಸಲು, “ಅದನ್ನು ನಿಮ್ಮ ಅಭಿಮಾನಿಗೆ ಕೊಡಿ” ಎಂದು ಸಲಹೆ ನೀಡುತ್ತಾರೆ. ಅದಕ್ಕೆ ಶಾರುಖ್, “ಹಾಗಿದ್ರೆ ನಾನು ನಿಮಗೆ ಕೊಡುತ್ತೇನೆ, ನೀವು ಅದನ್ನು ಅಭಿಮಾನಿಗೆ ಕೊಡಿ” ಎಂದು ಹೇಳುತ್ತಾರೆ.
ಆದರೆ, ಇದೇ ಸಂದರ್ಭದಲ್ಲಿ ಲೇಡಿ ಗಾಗಾ, ಶಾರುಖ್ ಅವರ ಸೌಜನ್ಯದ ಬಗ್ಗೆಯೂ ಮಾತನಾಡಿದ್ದರು. “ತೆರೆಮರೆಯಲ್ಲಿ ಅವರು ನನಗಾಗಿ ಕಾಫಿ ಹಿಡಿದುಕೊಳ್ಳಲು ಪ್ರಯತ್ನಿಸುತ್ತಿದ್ದರು. ಅವರು ತುಂಬಾ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಅವರೊಬ್ಬ ದೊಡ್ಡ ಸ್ಟಾರ್. ನನಗೆ ತುಂಬಾ ಮುಜುಗರವಾಯಿತು” ಎಂದು ಹೇಳಿಕೊಂಡಿದ್ದರು.


