Shah Rukh Khan: ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಶಾರುಖ್ ಖಾನ್ ಭಾಗವಹಿಸಿದ್ದರು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬರು 'ನನ್ನ ಗಂಡನಿಗಿಂತ ನಿಮ್ಮನ್ನೇ ಹೆಚ್ಚು ಪ್ರೀತಿಸುತ್ತೇನೆ' ಎಂದಿದ್ದಾರೆ. ಇದಕ್ಕೆ ಶಾರುಖ್ ಕೊಟ್ಟ ಉತ್ತರ ಸಖತ್ ವೈರಲ್ ಆಗಿದೆ. ಏನಿದು ಘಟನೆ? ಇಲ್ಲಿದೆ ಡೀಟೇಲ್ಸ್.

ಕಿಂಗ್ ಖಾನ್ ಶಾರುಖ್ ಅಂದ್ರೆನೆ ಅವರ ಮಾತುಗಾರಿಕೆಗೆ ಫಿದಾ ಆಗೋರೆ ಹೆಚ್ಚು. ತಮ್ಮ ಹಾಸ್ಯ ಪ್ರಜ್ಞೆಯಿಂದಲೇ ಅಭಿಮಾನಿಗಳ ಮನಗೆಲ್ಲೋ ಶಾರುಖ್, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದನ್ನೇ ಸಾಬೀತುಪಡಿಸಿದ್ದಾರೆ. 'ಡಂಕಿ' ಸಿನಿಮಾದ ನಂತರ ಶಾರುಖ್ ಬೆಳ್ಳಿತೆರೆಯಿಂದ ದೂರ ಉಳಿದಿದ್ದರೂ, ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಲೇ ಇರುತ್ತಾರೆ. ಕಳೆದ ವಾರವಷ್ಟೇ ಅವರು ಸುಪ್ರಿಯಾ ಸುಳೆ ಅವರ ಮಗಳ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಐಕಾನಿಕ್ ಹಾಡುಗಳಿಗೆ ಹೆಜ್ಜೆ ಹಾಕಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೀಗ, ಮಂಗಳೂರಿನಲ್ಲಿ ನಡೆದ ರಿಯಲ್ ಎಸ್ಟೇಟ್ ಕಾರ್ಯಕ್ರಮವೊಂದರಲ್ಲಿ ಶಾರುಖ್ ತಮ್ಮ ಸ್ಟಾರ್ ಗತ್ತಿನಿಂದ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದು ಮಾತ್ರವಲ್ಲದೆ, ತಮ್ಮ ಕೆಲವು ಹಿಟ್ ಹಾಡುಗಳಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ವೇಳೆ, ಗುಂಪಿನಲ್ಲಿದ್ದ ಮಹಿಳೆಯೊಬ್ಬರು, 'ನಾನು ನನ್ನ ಗಂಡನಿಗಿಂತ ನಿಮ್ಮನ್ನೇ ಹೆಚ್ಚು ಪ್ರೀತಿಸುತ್ತೇನೆ' ಎಂದು ಹೇಳಿದ್ದಾರೆ. ಇದಕ್ಕೆ ಶಾರುಖ್ ಕೊಟ್ಟ ಉತ್ತರ ಕೇಳಿದ್ರೆ ನೀವು ಕೂಡಾ ನಗದೆ ಇರಲಾರಿರಿ.

ಅಭಿಮಾನಿಗೆ ಶಾರುಖ್ ಕೊಟ್ಟ ತಮಾಷೆಯ ಉತ್ತರ

ಇದನ್ನು ಕೇಳಿ ನಕ್ಕ ಶಾರುಖ್, 'ಯೆ ಸಬ್ ಅಕೇಲೆ ಮೆ ಬತಾನಾ ಚಾಹಿಯೇ ನಾ' (ಇದನ್ನೆಲ್ಲಾ ಖಾಸಗಿಯಾಗಿ ಹೇಳಬೇಕಿತ್ತು) ಎಂದು ತಮಾಷೆ ಮಾಡಿದ್ದಾರೆ. ನಂತರ, 'ಇದು ನಿಮ್ಮ ಪ್ರೀತಿಯ ಮಾತು ಅಂತ ನನಗೆ ಗೊತ್ತು, ನಿಮ್ಮ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ನಿಮ್ಮ ಪತಿ ಕೂಡ ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ನಿಮ್ಮ ಪತಿಯನ್ನೂ, ನಿಮ್ಮ ಕುಟುಂಬವನ್ನೂ ಪ್ರೀತಿಸುತ್ತೇನೆ. ತುಂಬಾ ಧನ್ಯವಾದಗಳು' ಎಂದು ಹೇಳಿದ್ದಾರೆ. ಇದೇ ವೇಳೆ ಕನ್ನಡದಲ್ಲಿ 'ನಮಸ್ಕಾರ' ಎಂದು ಹೇಳಿ ಅಭಿಮಾನಿಗಳ ಮನಗೆದ್ದಿದ್ದಾರೆ.

ಜನರನ್ನುದ್ದೇಶಿಸಿ ಮಾತನಾಡಿದ ಶಾರುಖ್, 'ಧನ್ಯವಾದ ಮಂಗಳೂರು! ಇಲ್ಲಿಗೆ ಬರುವಾಗ ನಾನೇನು ನಿರೀಕ್ಷಿಸಬೇಕು ಎಂದು ತಿಳಿದಿರಲಿಲ್ಲ. ಆದರೆ ಏರ್‌ಪೋರ್ಟ್‌ನಿಂದ ಇಲ್ಲಿಗೆ ಬರುವ ದಾರಿಯುದ್ದಕ್ಕೂ ನೀವು ತೋರಿದ ಪ್ರೀತಿ, ಉತ್ಸಾಹ ಅದ್ಭುತವಾಗಿತ್ತು' ಎಂದಿದ್ದಾರೆ. ಅಂದಹಾಗೆ, ಶಾರುಖ್ ಹುಟ್ಟಿದ್ದು ನವದೆಹಲಿಯಲ್ಲಾದರೂ, ತಮ್ಮ ಜೀವನದ ಮೊದಲ ಐದು ವರ್ಷಗಳನ್ನು (1965 ರಿಂದ 1970) ಮಂಗಳೂರಿನಲ್ಲೇ ಕಳೆದಿದ್ದರು. ಅವರು ತಮ್ಮ ಅಜ್ಜ ಇಫ್ತಿಕಾರ್ ಅಹ್ಮದ್ ಅವರೊಂದಿಗೆ ವಾಸಿಸುತ್ತಿದ್ದರು.

ಮುಂದಿನ ಸಿನಿಮಾ

ಸಿನಿಮಾ ವಿಚಾರಕ್ಕೆ ಬಂದರೆ, ಶಾರುಖ್ ಖಾನ್ ಮುಂದೆ 'ಕಿಂಗ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಕೂಡ ನಟಿಸುತ್ತಿದ್ದು, ಶಾರುಖ್ ಪುತ್ರಿ ಸುಹಾನಾ ಖಾನ್‌ಗೆ ಇದು ಮೊದಲ ಸಿನಿಮಾ ಆಗಲಿದೆ.