ಸೀರಿಯಲ್​ಗಳಲ್ಲಿ ಹೀರೋಗಳು ಪೆದ್ದರು, ಮೂರ್ಖರು, ಮುಗ್ಧರು ಆಗಿದ್ದರೆ, ಲೇಡಿಗಳೇ ವಿಲನ್​ ಯಾಕಾಗಿರುತ್ತಾರೆ? ಸೀರಿಯಲ್​ ಪ್ರೇಮಿಗಳ ಪ್ರಶ್ನೆಗೆ ಸೀತಾರಾಮ ರಾಮ್​ ಉತ್ತರ ಕೇಳಿ...

ಬಹುತೇಕ ಎಲ್ಲಾ ಸೀರಿಯಲ್​ಗಳಲ್ಲಿ ನಾಯಕರು ಅಥ್ವಾ ಹೀರೋಗಳು ಎಂದರೆ ಮೂರ್ಖರು, ಪೆದ್ದು, ಮುಗ್ಧರು ಇಂಥ ಕ್ಯಾರೆಕ್ಟರ್​ ಇದ್ದರೆ, ವಿಲನ್​ ವಿಷ್ಯಕ್ಕೆ ಬಂದರೆ ಲೇಡಿಗಳೇ ವಿಲನ್​ಗಳು! ಇದು ಸಿನಿಮಾದ ತದ್ವಿರುದ್ಧ. ವಿಲನ್​ಗಳ ಬಂಡವಾಳ ಬಯಲಾಗಿದ್ದರೂ, ಅದನ್ನು ಪೆದ್ದು ನಾಯಕನಿಗೆ ಮಾತ್ರ ಅರ್ಥ ಆಗೋದೇ ಇಲ್ಲ ಎನ್ನುವುದನ್ನೇ ಬಹುತೇಕ ಸೀರಿಯಲ್​ಗಳು ಹೇಳುವುದು ಉಂಟು. ಅಮೃತಧಾರೆಯಲ್ಲಿ ಶಕುಂತಲಾ ಬಗ್ಗೆ ಗೌತಮ್​ಗೆ ಇನ್ನೂ ಗೊತ್ತಾಗಿಲ್ಲ, ಸೀತಾರಾಮದಲ್ಲಿ ಭಾರ್ಗವಿ ಬಗ್ಗೆ ರಾಮ್​ಗೆ ವಿಷಯ ಸೀರಿಯಲ್​ ಮುಗಿಯುವ ತನಕವೂ ಗೊತ್ತಾಗಿರಲಿಲ್ಲ. ಶ್ರೀರಸ್ತು ಶುಭಮಸ್ತುವಿನಲ್ಲಿ ಶಾರ್ವರಿ ಬಗ್ಗೆ ಎಲ್ಲರಿಗೂ ಗೊತ್ತಾದ ಬಳಿಕ ಈಗಷ್ಟೇ ಮಾಧ​ವ್​ಗೆ ತಿಳಿದಿದೆ. ಬ್ರಹ್ಮಗಂಟುವಿನಲ್ಲಿ ಸೌಂದರ್ಯ ಬಗ್ಗೆ ಚಿರುಗೆ ವಿಷ್ಯ ಇನ್ನೂ ಗೊತ್ತಾಗದೇ ಮತ್ತೊಂದು ಮದುವೆಗೆ ರೆಡಿಯಾಗಿದ್ದಾನೆ. ಹೀಗೆ ಹೀರೋಗಳು ಎಂದರೆ ಮೂರ್ಖರು ಎಂದು ತೋರಿಸುವ ಸೀರಿಯಲ್​ಗಳು ಸುತ್ತಿ ಸುತ್ತಿ ಒಂದೇ ರೀತಿಯ ಕಥೆಗಳನ್ನೇ ನೀಡುತ್ತಿವೆ.

ಆದ್ದರಿಂದ ಬಹುತೇಕ ವೀಕ್ಷಕರ ಪ್ರಶ್ನೆಯೂ ಅದೇ ಆಗಿದೆ. ಏಕೆ ಹೀಗೆ ಎನ್ನುವುದು. ಸಿನಿಮಾಗಳಿಗಿಂತಲೂ ಸೀರಿಯಲ್​ ಏಕೆ ಭಿನ್ನ ಎನ್ನುವ ಬಗ್ಗೆ ಸೀತಾರಾಮ ಸೀರಿಯಲ್​ ರಾಮ್​ ಅರ್ಥಾತ್​ ಗಗನ್​ ಚಿನ್ನಪ್ಪ ಅವರು ಇದೀಗ ಉತ್ತರಿಸಿದ್ದಾರೆ. ಎಫ್​ಡಿಎಫ್​ಎಸ್​ ಯುಟ್ಯೂಬ್​ ಚಾನೆಲ್​ಗೆ ನೀಡಿರೋ ಸಂದರ್ಶನದಲ್ಲಿ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಎಲ್ಲಾ ಸೀರಿಯ್​ಗಳಂತೆಯೇ ಸೀತಾರಾಮದಲ್ಲಿಯೂ ಗಗನ್​ ಅವರು ತುಂಬಾ ಮುಗ್ಧರು. ಭಾರ್ಗವಿ ಚಿಕ್ಕಿಯಲ್ಲಿಯೇ ತನ್ನ ತಾಯಿಯನ್ನು ಕಂಡವ ರಾಮ್​. ತನ್ನ ತಾಯಿಯ ಸಾವಿಗೆ ಇವಳೇ ಕಾರಣ ಎನ್ನೋದು ಕೊನೆಯವರೆಗೂ ತಿಳಿಯಲೇ ಇಲ್ಲ. ಅತ್ತ ಗೆಳೆಯ ಅಶೋಕ್​ ಭಿನ್ನ ಭಿನ್ನ ರೀತಿಯಲ್ಲಿ ಹೇಳಲು ಪ್ರಯತ್ನಿಸಿದರೂ, ರಾಮ್​ ಅವನಿಗೆ ಬೈದು ಅವನನ್ನು ದೂರಮಾಡಿಕೊಂಡನೇ ವಿನಾ ಭಾರ್ಗವಿಯ ವಿರುದ್ಧ ಒಂದೂ ಮಾತು ಕೇಳಲು ಆತ ಇಷ್ಟಪಟ್ಟಿರಲಿಲ್ಲ.

ಇದಕ್ಕೆ ಕಾರಣ ಕೊಟ್ಟಿರುವ ಗಗನ್​ ಅವರು, ನೋಡಿ ಸೀರಿಯಲ್​ಗಳು ಸಿನಿಮಾಗಳಂತೆ ಅಲ್ಲ. ಸೀರಿಯಲ್​ ಯಾವತ್ತಿದ್ರೂ ಟಾರ್ಗೆಟ್​ ಮಾಡುವುದು ಮಹಿಳೆಯರನ್ನು. ಏಕೆಂದರೆ ಸೀರಿಯಲ್​ ನೋಡುಗರಲ್ಲಿ ಬಹುದೊಡ್ಡ ವರ್ಗ ಮಹಿಳೆಯರದ್ದೇ ಇದೆ. ಆದ್ದರಿಂದ ಅವರನ್ನು ಹಿಡಿದಿಟ್ಟುಕೊಳ್ಳುವುದು ಸೀರಿಯಲ್​ಗೆ ಇರುವ ಸವಾಲು. ಪುರುಷರು ಸೀರಿಯಲ್​ ನೋಡುವುದಿಲ್ಲ ಎಂದೇನಲ್ಲ. ಆದರೆ ಮಹಿಳೆಯರಿಗೆ ಹೋಲಿಸಿದರೆ ಇವರ ಪಾಲು ಅತಿ ಕಡಿಮೆ. ಆದ್ದರಿಂದ ಪುರುಷರನ್ನು ಪೆದ್ದು ಮಾಡಿ ನಾಯಕಿಯನ್ನು ಹೀರೋ ಮಾಡಿದರಷ್ಟೇ ಮಹಿಳೆಯರಿಗೆ ಖುಷಿ ಕೊಡುತ್ತದೆ. ವಿಲನ್​ ಕೂಡ ಲೇಡಿ ಆಗಿರುವ ಕಾರಣ, ಇನ್ನಷ್ಟು ಕುತೂಹಲ ಮೂಡಿಬರುತ್ತದೆ. ನಾಯಕ ಪೆದ್ದು ಆದರೆ ಅವರಿಗೂ ನೋಡಲು ಖುಷಿ ಇರುತ್ತದೆ ಎಂದಿದ್ದಾರೆ.

ಅಷ್ಟಕ್ಕೂ ಈಗಾಗಲೇ ಮಾಡಿರುವ ಕೆಲವೊಂದು ಅಧ್ಯಯನಗಳ ಪ್ರಕಾರ, ಮಹಿಳೆಯರು ಸೀರಿಯಲ್​ಗಳಲ್ಲಿರುವ ಪಾತ್ರಗಳನ್ನೇ ತಮ್ಮ ಮೈಮೇಲೆ ಆಹ್ವಾನಿಸಿಕೊಂಡು ಆ ಪಾತ್ರದೊಳಗೆ ತಾವು ಹೊಕ್ಕು ಅದೇ ತಾವು ಎಂದು ತಿಳಿದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ. ವಿಲನ್​ ಕ್ಯಾರೆಕ್ಟರ್​ನಲ್ಲಿ ತಮಗೆ ಆಗದ ಯಾರನ್ನೋ ಕಲ್ಪಿಸಿಕೊಳ್ಳುವುದು, ಆಕೆಗೆ ಕೊನೆಗೆ ಶಿಕ್ಷೆಯಾದಾಗ, ನಿಜಕ್ಕೂ ತಮ್ಮ ಜೀವನದ ಆ ವಿಲನ್​ಗೇ ಶಿಕ್ಷೆಯಾದಷ್ಟೇ ಖುಷಿಯಾಗುವುದು, ನಾಯಕಿ ಸಕ್ಸಸ್​ ಕಂಡಾಗ ತಾನೇ ಕಂಡಷ್ಟು ಖುಷಿಯಾಗುವುದು ನಡೆದೇ ಇರುತ್ತದೆ. ಸೀರಿಯಲ್​ಗಳನ್ನು ತದೇಕ ಚಿತ್ತದಿಂದ ನೋಡುವ ಮಹಿಳಾ ಪ್ರೇಮಿಗಳನ್ನೇ ನೋಡುತ್ತಿದ್ದರೆ, ಅವರ ಹಾವ ಭಾವ ಹೇಗಿರುತ್ತದೆ, ಅಲ್ಲಿಯ ಪಾತ್ರಗಳ ಬದಲಾವಣೆ ಆದಂತೆ ಹೇಗೆ ಅದರೊಳಗೆ ಹೊಕ್ಕು ನೋಡುತ್ತಿರುತ್ತಾರೆ, ಹೇಗೆ ತಾವೇ ಮುಂದಿನ ಕಥೆಯ ನಿರ್ದೇಶನವನ್ನೂ ಮಾಡಿಬಿಡುತ್ತಿರುತ್ತಾರೆ ಎನ್ನುವುದನ್ನು ನೋಡಬಹುದು. ಇದು ಬಹುತೇಕ ಮನೆಗಳ ಕಥೆ! ಅದನ್ನೇ ಗಗನ್​ ಈಗ ಹೇಳಿದ್ದಾರೆ.

YouTube video player