Asianet Suvarna News Asianet Suvarna News

ಚೀನಾದಲ್ಲೂ ಬಿಡುಗಡೆಯಾಗಲಿದೆ ಕೆಜಿಎಫ್‌

‘ಕೆಜಿಎಫ್‌’ ಚಿತ್ರ ನೂರು ಕೋಟಿ ಕ್ಲಬ್‌ ಸೇರಿದೆ. ಅಲ್ಲದೇ ಡಿಜಿಟಲ್‌ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದ ಸುಮಾರು ಐವತ್ತು ಕೋಟಿ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದಿದೆ. ಇನ್ನು ಕೆಲವೇ ದಿನಗಳಲ್ಲಿ ಚೀನಾ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ. 

Sandalwood movie KGF will be release in China
Author
Bengaluru, First Published Dec 29, 2018, 9:24 AM IST
  • Facebook
  • Twitter
  • Whatsapp

ಬೆಂಗಳೂರು (ಡಿ. 29): ‘ಕೆಜಿಎಫ್‌’ ಚಿತ್ರ ನೂರು ಕೋಟಿ ಕ್ಲಬ್‌ ಸೇರಿದೆ. ಅಲ್ಲದೇ ಡಿಜಿಟಲ್‌ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದ ಸುಮಾರು ಐವತ್ತು ಕೋಟಿ ಬಂದಿದೆ. ಕನ್ನಡ ಚಿತ್ರರಂಗಕ್ಕೆ ಕೀರ್ತಿ ತಂದಿದೆ. ಇನ್ನು ಕೆಲವೇ ದಿನಗಳಲ್ಲಿ ಚೀನಾ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್‌ ಆಗುವ ಸಾಧ್ಯತೆ ಇದೆ. ಇವೆಲ್ಲಾ ಸಾಧನೆಯ ಹಿಂದೆ ಇರುವ ಸರಳ, ಸಜ್ಜನ ನಿರ್ಮಾಪಕ ವಿಜಯ್‌ ಕಿರಗಂದೂರು. ಈ ಸಂದರ್ಭದಲ್ಲಿ ಅವರ ಜತೆ ಎಕ್ಸ್‌ಕ್ಲೂಸಿವ್‌ ಮಾತುಕತೆ.

ಇದಪ್ಪಾ ಕೆಜಿಎಫ್ ಹವಾ! ಯಶ್ ಸಾಧನೆ ಬಗ್ಗೆ ಸ್ಪೆಷಲ್ ವಿಡಿಯೋ ಮಾಡಿದ ತಮಿಳು ನಟ

‘ದಂಗಲ್‌’, ‘ಬಾಹುಬಲಿ’ ಸಿನಿಮಾಗಳು ಚೀನಾದಲ್ಲಿ ಬಿಡುಗಡೆಯಾಗಿ ಇತಿಹಾಸ ರಚಿಸಿವೆ. ಕೆಜಿಎಫ್‌ ಚೀನಾದಲ್ಲಿ ಬಿಡುಗಡೆ ಮಾಡುತ್ತೀರಾ?

ಮಾತುಕತೆ ನಡೆಯುತ್ತಿದೆ. ಆಲೋಚನೆ ಇದೆ. ಚೀನಾದಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾದರೆ ಒಂದು ಸಮಸ್ಯೆ ಇದೆ. ಅಲ್ಲಿನ ಸರ್ಕಾರ ಈ ಸಿನಿಮಾ ನೋಡಿ ಅನುಮತಿ ನೀಡಬೇಕು. ಸರಕಾರ ಒಪ್ಪಿದರೆ ಕೆಜಿಎಫ್‌ ಚೀನಾದಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪ್ರಯತ್ನ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ‘ಕೆಜಿಎಫ್‌’ ಚೀನಾದಲ್ಲಿ ಬಿಡುಗಡೆಯಾಗುವುದು ನಿಶ್ಚಿತ.

ಕೆಜಿಫ್‌ಗೆ ಇಷ್ಟುದೊಡ್ಡ ಮಟ್ಟದ ಸಕ್ಸಸ್‌ ಸಿಗಬಹುದು ಎನ್ನುವ ಅಂದಾಜಿತ್ತಾ?

ಕಾನ್ಫಿಡೆನ್ಸ್‌ ಇತ್ತು. ಚಿತ್ರದ ಮೇಕಿಂಗ್‌ ಅಂತಹದೊಂದು ನಿರೀಕ್ಷೆ ಹುಟ್ಟಿಸಿತ್ತು. ಆದ್ರೆ, ಇಷ್ಟುದೊಡ್ಡ ಮಟ್ಟದಲ್ಲಿ ಸಕ್ಸಸ್‌ ಸಿಗಬಹುದು ಎನ್ನುವ ಅಂದಾಜು ಖಂಡಿತಾ ಇರಲಿಲ್ಲ. ಈಗ ಕೆಜಿಎಫ್‌ ಎಲ್ಲರ ಕೈಮೀರಿ ಹೋಗಿ ಬೆಳೆದು ನಿಂತಿದೆ. ಇಂಡಿಯಾದ ಮೂಲೆ ಮೂಲೆಯಲ್ಲೂ ಸುದ್ದಿ ಆಗುತ್ತಿದೆ.

ಕನ್ನಡ ಅಂತ ಸ್ಪಷ್ಟವಾಗಿ ಉಚ್ಛರಿಸಲು ಬಾರದವರೂ ಕನ್ನಡ ಅಂತ ಉಚ್ಛರಿಸುತ್ತಿದ್ದಾರೆ. ಕರ್ನಾಟಕ ಎಂಬ ಹೆಸರನ್ನು ಹೇಳುತ್ತಿದ್ದಾರೆ. ಕನ್ನಡ ಸಿನಿಮಾವೊಂದು ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ ಸೇರಿ ಎಲ್ಲಾ ಕಡೆ ಸದ್ದು ಮಾಡಿ, ಕನ್ನಡ ಚಿತ್ರೋದ್ಯಮದತ್ತ ತಿರುಗಿ ನೋಡುವಂತೆ ಮಾಡಿದ್ದರ ಹಿಂದೆ ನಮ್ಮ ತಂಡದ ಪರಿಶ್ರಮದ ಜತೆಗೆ ರಾಜ್ಯದ ಜನ ನೀಡಿದ ಸಹಕಾರ, ಬೆಂಬಲವೇ ಕಾರಣ.

ಕೆಜಿಎಫ್‌ ಡಿಜಿಟಲ್‌ ಹಕ್ಕು 18 ಕೋಟಿಗೆ ಮಾರಾಟ

ಕೆಜಿಎಫ್‌ ಶೀರ್ಷಿಕೆಯ ಕತೆ ನಿಮಗೆ ಕನ್ವಿನ್ಸ್‌ ಆಗಿದ್ದು ಹೇಗೆ?

ಕೆಜಿಎಫ್‌ ಅಂದಾಕ್ಷಣ ಆರಂಭದಲ್ಲಿ ನಾನು ಕೂಡ ಇದೊಂದು ರೌಡಿ ಕತೆಯೋ, ಬರೀ ಗ್ಯಾಂಗ್‌ಸ್ಟರ್‌ ಕತೆಯೋ ಅಂತಂದುಕೊಂಡಿದ್ದೆ. ಆದ್ರೆ ಪ್ರಶಾಂತ್‌ ನೀಲ್‌ ನನಗೆ ಪೂರ್ಣ ಪ್ರಮಾಣದಲ್ಲಿ ಕತೆ ಹೇಳಿದಾಗ ಅದರೊಳಗಿನ ಬಂಗಾರದ ಕತೆಯ ರಹಸ್ಯ ಗೊತ್ತಾಯಿತು.

ಚಿನ್ನದ ಕತೆ ಅಂದಾಕ್ಷಣ ಪ್ರತಿಯೊಬ್ಬರಿಗೂ ಕುತೂಹಲ ಹುಟ್ಟುವುದು ಸಹಜ. ಕತೆ ಕೇಳುತ್ತಾ ಹೋದಾಗ ನನಗೂ ಅಂಥದ್ದೇ ಕ್ಯೂರಿಯಾಸಿಟಿ ಶುರುವಾಯಿತು. ಇದೊಂದು ಯೂನಿವರ್ಸಲ್‌ ಕತೆ ಅಂತ ಆಗಲೇ ಮೈಂಡ್‌ಗೆ ಬಂತು. ಈ ಕತೆಗೆ ಎಷ್ಟೇ ಬಂಡವಾಳ ಹಾಕಿದರೂ, ನಷ್ಟಆಗೋದಿಲ್ಲ ಎನ್ನುವ ಕಾನ್ಫಿಡೆನ್ಸ್‌ ಬಂತು.

ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಐಡಿಯಾ ಮೊದಲೇ ಇತ್ತಾ?

ಕನ್ನಡದ ಜತೆಗೆ ತೆಲುಗಿಗೂ ಹೋಗ್ಬಹುದು ಅಂತಲೇ ಸಿನಿಮಾ ಶುರು ಮಾಡಿದ್ದೆವು. ಮೇಕಿಂಗ್‌ ಅದಕ್ಕನುಗುಣವಾಗಿಯೇ ನಡೆದಿತ್ತು. ಆ ನಂತರ ಅದು ಹಿಂದಿಯತ್ತ ಮುಖ ಮಾಡಿತು. ಅದಕ್ಕೆ ಕಾರಣ ನಿರ್ದೇಶಕ ರಾಜಮೌಳಿ. ಅವರ ಸಂಪರ್ಕದೊಂದಿಗೆ ಅನಿಲ್‌ ತದಾನಿ ಹಾಗೂ ಫರ್ಹಾನ್‌ ಅಖ್ತರ್‌ ಸಿಕ್ಕರು.

ಚಿತ್ರದ ಟ್ರೇಲರ್‌ ಜತೆಗೆ ಮೇಕಿಂಗ್‌ ನೋಡಿ, ಅಲ್ಲಿ ದೊಡ್ಡ ಮಟ್ಟದಲ್ಲಿ ವಿತರಿಸಲು ಆಸಕ್ತಿ ತೋರಿದರು. ಹಿಂದಿಯಲ್ಲೇ ಇಷ್ಟುಬೆಂಬಲ ಸಿಗುತ್ತಿದೆಯೆಂದರೆ, ತಮಿಳು, ಮಲಯಾಳಂಗೂ ಡಬ್‌ ಮಾಡಿ, ಯಾಕೆ ರಿಲೀಸ್‌ಗೆ ಅವಕಾಶ ಕೊಡಬಾರದು ಅಂತ ಹೇಳಿ ಕೆಲಸ ನಡೆಯಿತು.

ಯಶ್‌ ಮೇಲಿನ ನಂಬಿಕೆಯಿಂದಾಗಿಯೇ ಈ ಸಿನಿಮಾ ಮಾಡಲು ಸಾಧ್ಯವಾಯಿತು ಅಂತ ನೀವು ಹೇಳಿದ್ರಿ...

ನಾನೊಬ್ಬ ನಿರ್ಮಾಪಕ, ಅವರೊಬ್ಬ ನಟ ಅಂತಷ್ಟೇ ಕಾರಣಕ್ಕೆ ಈ ಸಿನಿಮಾ ಆಗಿದ್ದಲ್ಲ. ನಮ್ಮಿಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ಜತೆಗೆ ಫ್ಯಾಮಿಲಿ ಫ್ರೆಂಡ್ಸ್‌ ಕೂಡ. ಈ ಸಿನಿಮಾಕ್ಕೂ ಮೊದಲೇ ಆಗಾಗ ಸೇರುತ್ತಿದ್ದೆವು. ಸಿನಿಮಾದ ಮೇಲಿನ ಅವರ ಕಮಿಟ್‌ಮೆಂಟ್‌ ನನಗೆ ಗೊತ್ತಿತ್ತು.

ಹಾಗಾಗಿ ದೊಡ್ಡ ಮಟ್ಟದಲ್ಲೇ ಈ ಸಿನಿಮಾ ಮಾಡಲು ಮುಂದಾದೆ. ಅದಕ್ಕವರು ಎಲ್ಲಾ ರೀತಿಯಲ್ಲೂ ಸಾಥ್‌ ಕೊಟ್ಟರು. ಬರೀ ನಟನಾಗಿ ಮಾತ್ರ ಅವರು ಸೆಟ್‌ಗೆ ಬರುತ್ತಿರಲಿಲ್ಲ, ತಮ್ಮದೇ ನಿರ್ಮಾಣದ ಸಿನಿಮಾ ಅಂತ ಬಂದರು. ಮಳೆ, ಗಾಳಿ, ಬಿಸಿಲು ಎನ್ನದೇ ಸಿನಿಮಾಕ್ಕೆ ಕಷ್ಟಪಟ್ಟರು. ಎರಡು, ಎರಡೂವರೆ ವರ್ಷ ಬೇರೆ ಸಿನಿಮಾ ಒಪ್ಪಿಕೊಳ್ಳದೆ, ಕೆಜಿಎಫ್‌ಗಾಗಿ ಅಷ್ಟುಸಮಯ ಮೀಸಲಿಟ್ಟರು. ಅವರ ಮೇಲಿನ ಈ ನಂಬಿಕೆಯೇ ಇಷ್ಟುದೊಡ್ಡ ಸಿನಿಮಾ ಆಗಲು ಕಾರಣವಾಗಿದ್ದು ನಿಜವಲ್ಲವೇ?

ಎರಡೂವರೆ ವರ್ಷ ಅಂದ್ರೆ ತಮಾಷೆಯಲ್ಲ, ಯಾವತ್ತಾದರೂ ನಿಮ್ಗೆ ಸಿನಿಮಾದ ವೆಚ್ಚ ಭಾರವಾಯಿತು, ಸಾಕಪ್ಪಾ ಅಂತನಿಸಿತ್ತಾ?

ಬಜೆಟ್‌ ಬಗ್ಗೆ ನಾನೆಂದಿಗೂ ತಲೆ ಕೆಡಿಸಿಕೊಂಡಿರಲಿಲ್ಲ. ಯಾಕಂದ್ರೆ ಕತೆ ಏನು ಅಂತ ಗೊತ್ತಿತ್ತು. ನಿರ್ದೇಶಕ ಪ್ರಶಾಂತ್‌ ನೀಲ್‌ ಮೇಲೆ ನಂಬಿಕೆಯಿತ್ತು. ಇಷ್ಟಾಗಿಯೂ ಲೇಟ್‌ ಆಗುತ್ತಿದೆಯೋ, ಏನೋ ಅಂತ ಸಣ್ಣದಾಗಿ ಅನ್ನಿಸುವುದಕ್ಕೆ ಶುರುವಾಗಿತ್ತು. ಆದ್ರೆ, ಚಿತ್ರದ ಮೇಕಿಂಗ್‌ ಸ್ಟೈಲ್‌ ನೋಡಿದಾಗ ಅದಕ್ಕಷ್ಟು ಟೈಮ್‌ ಅಗತ್ಯವಿದೆ ಎಂದೆನಿಸಿತ್ತು.

ನಿರ್ಮಾಣದ ನಿಮ್ಮ ಸ್ಟೈಲೇ ಬೇರೆ, ನಿರ್ದೇಶಕರಿಗೇ ಹೆಚ್ಚು ಸ್ವತಂತ್ರ ಕೊಟ್ಟು ಸುಮ್ಮನಿರುತ್ತೀರಿ, ಇದು ಹೇಗೆ?

ನಾನು ಸ್ಕ್ರಿಪ್ಟ್  ಹಂತದಲ್ಲಿ ಜೊತೆ ಇರುತ್ತೇನೆ. ಸ್ಕ್ರಿಪ್ಟ್  ಪೈನಲ್‌ ಆಗ ಮೇಲೆ, ಶೂಟಿಂಗ್‌ ಟೈಮ್‌ನಲ್ಲಿ ನಾನು ಇಂಟರ್‌ಫಿಯರ್‌ ಆಗೋದಿಲ್ಲ. ಆ ಕೆಲಸ ಏನಿದ್ದರೂ ನಿರ್ದೇಶಕರದು. ನಂದೇನಿದ್ದರೂ, ಸಿನಿಮಾ ಶೂಟಿಂಗ್‌ ಮುಗಿದು, ಎಡಿಟಿಂಗ್‌ ಟೇಬಲ್‌ಗೆ ಬಂದ ಮೇಲೆ ಕೆಲಸ. ಅದನ್ನು ಯಾವ ರೀತಿ ರಿಲೀಸ್‌ ಮಾಡ್ಬೇಕು, ಅದಕ್ಕೆ ಪ್ರಚಾರ ಹೇಗಿರಬೇಕು ಅನ್ನೋದು ಮಾತ್ರ ನನ್ನ ಜವಾಬ್ದಾರಿ.

ಮಂಡ್ಯ ಲೋಕಸಭೆಗೆ ಕೆಜಿಎಫ್ ಕಿಂಗ್ ಸ್ಪರ್ಧೆ?

ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ನಲ್ಲಿನ ಈ ಸಕ್ಸಸ್‌ ಮೂಲಕ ನಿಮ್ಗೆ ಸಿಗುತ್ತಿರುವ ರೆಸ್ಪಾನ್ಸ್‌ ಹೇಗಿದೆ? ಅಲ್ಲಿ ಸಿನಿಮಾ ಮಾಡುವ ಬಗ್ಗೆ ಯಾರಾದರೂ ಅಪ್ರೋಚ್‌ ಮಾಡಿದ್ದಾರಾ?

ಮೊದಲು ರೆಸ್ಪಾನ್ಸ್‌ ಬಗ್ಗೆ ಹೇಳುತ್ತೇನೆ. ಕನ್ನಡ್‌ ಅನ್ನುತ್ತಿದ್ದ ಮಂದಿ ಕನ್ನಡ ಎನ್ನುವ ಹಾಗೆ ಮಾಡಿದ ಈ ಸಿನಿಮಾ. ತುಂಬಾ ಒಳ್ಳೆಯ ವಿಮರ್ಶೆಗಳು ಸಿಕ್ಕಿವೆ. ರವೀನಾ ಟಂಡನ್‌, ರಾಮ್‌ ಗೋಪಾಲ್‌ ವರ್ಮ ಸಿನಿಮಾ ನೋಡಿ ಮೆಚ್ಚಿದ್ದಾರೆ. ಎಲ್ಲಾ ಚಿತ್ರಮಂದಿರಗಳಲ್ಲೂ ಅದ್ಭುತ ಕಲೆಕ್ಷನ್‌ ಇದೆ. ನಮ್ಮ ನಿರೀಕ್ಷೆ ನಿಜವಾಗಿದೆ.

ತಮಿಳು ಹಾಗೂ ಮಲಯಾಳಂನಲ್ಲೂ ಪರದೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು ಅಲ್ಲೆಲ್ಲ ಸಿನಿಮಾ ಮಾಡುವ ಬಗ್ಗೆ ಯಾರು ಸಂಪರ್ಕ ಮಾಡಿಲ್ಲ. ಬಂದರೆ ಏನ್‌ ಮಾಡುವುದು ನಾನಿನ್ನು ಡಿಸೈಡ್‌ ಮಾಡಿಲ್ಲ. ಕನ್ನಡದಲ್ಲೇ ನನ್ನ ಪ್ರಯತ್ನ ಮುಂದುವರೆಯುತ್ತೆ.

ವಿದೇಶಗಳಲ್ಲಿ ರಿಲೀಸ್‌ ಪ್ಲ್ಯಾನ್‌ ಹೇಗಿದೆ?

ಸದ್ಯಕ್ಕೀಗ ಕೆಜಿಎಫ್‌ ಅಮೆರಿಕ, ಇಂಗ್ಲೆಂಡ್‌, ಕೆನಡಾ ಹಾಗೂ ಯುರೋಪ್‌ ದೇಶಗಳಲ್ಲಿ ರಿಲೀಸ್‌ ಆಗಿದೆ. ಅಲ್ಲಿ ಒಳ್ಳೆಯ ಓಪನಿಂಗ್‌ ಸಿಕ್ಕಿದೆ. ಇನ್ನು ಇದೇ ವಾರ ದುಬೈನಲ್ಲಿ ರಿಲೀಸ್‌ ಆಗುತ್ತಿದೆ. ಜತೆಗೀಗ ಚೀನಾದಲ್ಲೂ ರಿಲೀಸ್‌ ಮಾಡಲು ಮಾತುಕತೆ ನಡೆದಿದೆ.

ಪುನೀತ್‌ ಅಭಿನಯದ ‘ಯುವರತ್ನ’ ಚಿತ್ರವೂ ಕೆಜಿಎಫ್‌ ಮಾದರಿಯಲ್ಲೇ ತೆರೆಗೆ ಬರುತ್ತಾ?

ಇಲ್ಲ, ಸದ್ಯಕ್ಕೀಗ ಅಂತಹ ಪ್ಲ್ಯಾನ್‌ ಇಲ್ಲ. ಸದ್ಯಕ್ಕೆ ನಾವೇನು ಆ ರೀತಿ ಯೋಚಿಸಿಲ್ಲ. ಅದು ಮಾತ್ರವಲ್ಲ, ಮುಂದಿನ ಯಾವ ಸಿನಿಮಾವಾದರೂ ಸರಿ, ಅದರ ಕತೆ, ಮೇಕಿಂಗ್‌ ನೋಡಿಕೊಂಡೇ ಅದನ್ನು ರಿಲೀಸ್‌ ಮಾಡಲಾಗುತ್ತೆ.

ಕನ್ನಡ ಮಾರುಕಟ್ಟೆಯ ಅಗಾಧ ಸಾಧ್ಯತೆಯನ್ನು ತೋರಿಸಿರುವ ನೀವು, ಈ ಸಾಹಸದ ಬಗ್ಗೆ ಹೇಳೋದೇನು?

ಪರಭಾಷೆ ಸಿನಿಮಾಗಳ ಮುಂದೆ ನಾವೇನು ಅಂತ ತೋರಿಸಿಕೊಳ್ಳಬೇಕಾದ್ರೆ, ಇಂತಹ ಪ್ರಯತ್ನಗಳು ಆಗಬೇಕು. ಅದಕ್ಕೊಂದು ದಾರಿ ಮಾಡಿಕೊಟ್ಟಿದೆ ಕೆæಜಿಎಫ್‌. ವರ್ಷಕ್ಕೆ ನಾಲ್ಕೈದು ಸಿನಿಮಾಗಳಾದರೂ, ಇಂತಹ ಪ್ರಯತ್ನದಲ್ಲಿ ಗೆದ್ದರೆ, ಕನ್ನಡದ ಮಾರುಕಟ್ಟೆತಾನಾಗಿಯೇ ತೆರೆದುಕೊಳ್ಳುತ್ತದೆ. ಶಕ್ತಿಯಿರುವ ನಿರ್ಮಾಪಕರು ಯೂನಿವರ್ಸಲ್‌ ಕತೆಗಳು ಸಿಕ್ಕಾಗ ಇಂತಹ ಚಿಂತನೆ ಮಾಡಲಿ. ಒಬ್ಬರಾಗದಿದ್ದರೂ, ಜಂಟಿ ಪ್ರಯತ್ನದಲ್ಲಾದರೂ ಈ ರೀತಿಯ ಸಿನಿಮಾ ಮಾಡಲಿ.

ಒಟ್ಟು ಕಲೆಕ್ಷನ್‌ ವಿವರ

ಕನ್ನಡ, ಹಿಂದಿ ಜತೆಗೆ ಚಿತ್ರ ಬಿಡುಗಡೆ ಆದ ಅಷ್ಟುಭಾಷೆಗಳಿಂದಲೂ ಈ ತನಕ ಆದ ಒಟ್ಟು ಕಲೆಕ್ಷನ್‌ ಸುಮಾರು . 100 ಕೋಟಿ. ಅದಕ್ಕಿನ್ನು ಓವರ್‌ಸೀಸ್‌ ಕಲೆಕ್ಷನ್‌ ಸೇರಿಲ್ಲ. ಅದು ಇಷ್ಟುಬೇಗ ಲೆಕ್ಕಕ್ಕೆ ಸಿಗೋದಿಲ್ಲ. ಜತೆಗೆ ಡಿಜಿಟಲ್‌ ಮತ್ತು ಸ್ಯಾಟಲೈಟ್‌ ರೈಟ್ಸ್‌ ಕೂಡ ಸೇಲ್‌ ಆಗಿದೆ. ರೆಕಾರ್ಡ್‌ ಬ್ರೇಕ್‌ ಎನ್ನುವಷ್ಟುಮೊತ್ತಕ್ಕೆ ಮಾರಾಟವಾಗಿದೆ.

ಎಲ್ಲಾ ಭಾಷೆಯ ಡಿಜಿಟಲ್‌ ರೈಟ್ಸ್‌ ಅಮೆಜಾನ್‌ ಪ್ರೈಮ್‌ ಪಾಲಾಗಿದೆ . ಕನ್ನಡ ಮತ್ತು ತಮಿಳು ಸ್ಯಾಟಲೈಟ್‌ ಹಕ್ಕುಗಳನ್ನು ಕಲರ್ಸ್‌ ಸಂಸ್ಥೆ ಪಡೆದುಕೊಂಡಿದೆ. 12 ಕೋಟಿ ನೀಡು ಖರೀದಿಸಿದ್ದು ನಮಗೆ ಸಂತಸ ತಂದಿದೆ. ತೆಲುಗು ಮತ್ತು ಮಲಯಾಳಂ ಸ್ಯಾಟಲೈಟ್‌ ರೈಟ್ಸ್‌ ನಮ್ಮ ಬಳಿಯೇ ಇದೆ. ಡಿಜಿಟಲ್‌ ಮತ್ತು ಸ್ಯಾಟಲೈಟ್‌ ಹಕ್ಕು ಮಾರಾಟದಿಂದಲೇ ಸಮಾರು . 46 ಕೋಟಿ ಸಂಗ್ರಹವಾಗಿದೆ ಎನ್ನಲಾಗಿದೆ.

-ಸಂದರ್ಶನ : ದೇಶಾದ್ರಿ ಹೊಸ್ಮನೆ 

Follow Us:
Download App:
  • android
  • ios