ಖ್ಯಾತ ನಿರೂಪಕಿ ರಂಜಿನಿ ಹರಿದಾಸ್ ತಮ್ಮ ವೃತ್ತಿ ಬದುಕಿನಲ್ಲಿ ಎದುರಾದ ಕಹಿ ಘಟನೆಗಳನ್ನು ಹಂಚಿಕೊಂಡಿದ್ದಾರೆ. ಒಂಟಿಯಾಗಿ ಬದುಕುತ್ತಿರುವುದಕ್ಕೆ ಸಾಕಷ್ಟು ನಿಂದನೆಗಳನ್ನು ಎದುರಿಸಿದ್ದೇನೆ, ಕಷ್ಟಪಟ್ಟು ದುಡಿದು ಈ ಮಟ್ಟಕ್ಕೆ ಬಂದಿದ್ದೇನೆ ಎಂದು ರಂಜಿನಿ ಹೇಳಿದ್ದಾರೆ.

ಕೇರಳದ ನಂಬರ್ 1 ಆ್ಯಂಕರ್ ಯಾರು ಅಂತ ಕೇಳಿದ್ರೆ ಬರೋ ಉತ್ತರ ಒಂದೇ - ರಂಜಿನಿ ಹರಿದಾಸ್. ದೊಡ್ಡ ಜನಸಮೂಹವನ್ನು ಅತ್ಯುತ್ತಮವಾಗಿ ರಂಜಿಸುತ್ತಾ, ಶೋಗಳನ್ನು ಯಶಸ್ವಿಯಾಗಿ ನಡೆಸಿಕೊಡುವ ರಂಜಿನಿ ಅನೇಕರಿಗೆ ಸ್ಫೂರ್ತಿ. ಸುಮಾರು 30 ವರ್ಷಗಳಿಂದ ಈ ಕ್ಷೇತ್ರದಲ್ಲಿರುವ ರಂಜಿನಿ, ಇದೀಗ ತಮಗೆ ಎದುರಾದ ಕೆಟ್ಟ ಅನುಭವಗಳು ಮತ್ತು ಪ್ರಶ್ನೆಗಳ ಬಗ್ಗೆ ಮೌನ ಮುರಿದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅವರು ಈ ಎಲ್ಲಾ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ರಂಜಿನಿ ಹರಿದಾಸ್ ಹೇಳಿದ್ದೇನು?

ಶೋಗಾಗಿ ದುಬೈಗೆ ಹೋದಾಗ ನಾನು ಹೋಟೆಲ್‌ನಲ್ಲಿ ಉಳಿದುಕೊಳ್ಳುವುದಿಲ್ಲ. ಅದರಲ್ಲೂ ನನಗೆ ಕಂಫರ್ಟಬಲ್ ಇಲ್ಲದಿದ್ದರೆ, ಸ್ನೇಹಿತರ ಫ್ಲ್ಯಾಟ್‌ಗೆ ಹೋಗುತ್ತೇನೆ. ಒಮ್ಮೆ ಒಂದು ಶೋಗೆ ಹೋದಾಗ, ಅಲ್ಲಿನ ಪ್ರಮುಖ ತಾರೆಯರೂ ಇದ್ದರು. ಆಗ ಒಬ್ಬ ಸ್ಪಾನ್ಸರ್‌ಗೆ ನನ್ನನ್ನು ಭೇಟಿ ಮಾಡಬೇಕೆಂದು ಆಸೆಯಾಯಿತು. ನಾನು ಬೇರೇನೂ ಯೋಚಿಸದೆ ಅವರ ಜೊತೆ ಲಂಚ್‌ಗೆ ಹೋದೆ. ಆಗ ಆತ, 'ನಿನಗೆ ಫೋನ್ ಕೊಡಿಸುತ್ತೇನೆ' ಅಂತೆಲ್ಲಾ ಹೇಳಲು ಶುರುಮಾಡಿದ. ನನಗೆ ಇದೆಲ್ಲಾ ಹೊಸದು, ಹೀಗೂ ಇರುತ್ತದೆಯೇ ಎಂದು ಗೊತ್ತಿರಲಿಲ್ಲ. ನಾನು 'ಇಲ್ಲ' ಎಂದು ಹೇಳಿ ವಾಪಸ್ ಬಂದೆ.

ಇನ್ನೊಂದು ಶೋ ಮುಗಿದ ಮೇಲೆ 'ಡಿನ್ನರ್' ಎಂದು ಹೇಳಿ ನಮ್ಮನ್ನು ಎಲ್ಲೋ ಬೇರೆಡೆಗೆ ಕರೆದೊಯ್ದರು. ಸುತ್ತಲೂ ನೀರು, ಮಧ್ಯದಲ್ಲಿ ಒಂದು ಜಾಗ. ಅಲ್ಲಿ ಅವರ ಜನರನ್ನು ಕರೆಸಿ ಪಾರ್ಟಿ ಮಾಡುತ್ತಿದ್ದರು. ಮದ್ಯಪಾನ ಎಲ್ಲವೂ ಇತ್ತು. ನಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸ್ವಲ್ಪ ಸಮಯದ ನಂತರ ನನಗೆ ಅಲ್ಲಿನ ವಾತಾವರಣ ಸರಿ ಎನಿಸಲಿಲ್ಲ. ನನ್ನ ಜೀವನದಲ್ಲಿ ಅತೀ ಹೆಚ್ಚು ಕೋಪ ಮಾಡಿಕೊಂಡ ದಿನ ಅದು. ಅಕ್ಷರಶಃ ನಾನು ದುರ್ಗಿ ಅವತಾರ ತಾಳಿದ್ದೆ. ದೊಡ್ಡ ಗಲಾಟೆಯನ್ನೇ ಮಾಡಿದೆ. 'ಇದು ಕೇರಳ ಅಲ್ಲ, ದುಬೈ. ಒಂದೇ ಒಂದು ಫೋನ್ ಕಾಲ್ ಮಾಡಿದರೆ ಪೊಲೀಸ್ ಬರುತ್ತಾರೆ' ಎಂದು ಎಚ್ಚರಿಕೆ ನೀಡಿದೆ. ಆ ಘಟನೆಯನ್ನು ನಾನೆಂದಿಗೂ ಮರೆಯಲಾರೆ. ನಾವೇ ಗಟ್ಟಿ ಧ್ವನಿಯಲ್ಲಿ ಮಾತನಾಡಿ ಅಲ್ಲಿಂದ ಪಾರಾಗಬೇಕಾಯಿತು.

ಕಣ್ಣೂರಿನಲ್ಲಿ ಒಂದು ಜಾಹೀರಾತಿನ ಶೂಟಿಂಗ್ ಮುಗಿದಿತ್ತು. ನಾನು ಹೊರಡುತ್ತೇನೆ ಎಂದು ಹೇಳಿದಾಗ, ಒಬ್ಬ ವ್ಯಕ್ತಿ ಹಣ ತಂದುಕೊಟ್ಟ. 'ನೀವು ಇವತ್ತು ಇಲ್ಲೇ ಇರುವುದಿಲ್ಲವೇ?' ಎಂದು ಕೇಳಿದ. ಯಾಕೆ ಎಂದು ಕೇಳಿದ್ದಕ್ಕೆ, 'ಅದೂ ಕೂಡ ಡೀಲ್‌ನ ಒಂದು ಭಾಗ' ಎಂದ. ಅವನ ಪ್ರಕಾರ, ನಾನು ಅವನ ಜೊತೆ ಮಲಗಬೇಕಿತ್ತು. ನಾನು ಅವನನ್ನು ಮತ್ತು ಕೋ-ಆರ್ಡಿನೇಟರ್‌ನನ್ನು ಒಟ್ಟಿಗೆ ನಿಲ್ಲಿಸಿ ಪ್ರಶ್ನಿಸಿದೆ. ಇಬ್ಬರೂ ತಬ್ಬಿಬ್ಬಾದರು. ನಂತರ ಅವನ ಮನೆಗೆ ಹೋದಾಗ, ಅದೊಂದು ದೊಡ್ಡ ಕುಟುಂಬ ಎಂದು ತಿಳಿಯಿತು. ಒಂದು ಕುಟುಂಬವನ್ನು ಹಾಳು ಮಾಡುವುದು ಬೇಡ ಎಂದು ಸುಮ್ಮನಾದೆ. ಒಂದೆಡೆ ಸಭ್ಯಸ್ಥ, ಇನ್ನೊಂದೆಡೆ ಹೀನ ಮನಸ್ಥಿತಿ. ನನ್ನ ಬಳಿ ಹೀಗೆ ಕೇಳಲು ಅವನಿಗೆಷ್ಟು ಧೈರ್ಯ. ಅವನನ್ನು ಬೆದರಿಸಿ ಅಲ್ಲಿಂದ ಹೊರಟೆ. ನಾನು ಯಾರ ಜೊತೆಗಾದರೂ ಮಲಗಬೇಕಾದರೆ, ಅದು ನನ್ನ ವೈಯಕ್ತಿಕ ಇಷ್ಟ. ಅದಕ್ಕೆ ನೀವು ಹಣ ಕೊಡಲು ಸಾಧ್ಯವಿಲ್ಲ.

ನಮ್ಮಂತವರನ್ನು ಹೆಚ್ಚಾಗಿ ಕರೆಯುವ ಒಂದು ಪದವೆಂದರೆ 'ವೇಶ್ಯೆ'. ಯಶಸ್ವಿ ಮಹಿಳೆ ಒಂಟಿಯಾಗಿ ಬದುಕುವುದು ನೋಡಲು ಜನರಿಗೆ ಕಷ್ಟ. ನಾವು ಬೇರೆಯವರ ಜೊತೆ ಮಲಗಿ ಹಣ ಸಂಪಾದಿಸುತ್ತೇವೆ ಎಂದು ಅವರು ಭಾವಿಸುತ್ತಾರೆ. ಹಾಗೆ ಹಣ ಮಾಡುವುದು ಸುಲಭ. ಕಷ್ಟಪಟ್ಟು ದುಡಿಯುವುದು ಕಷ್ಟ. ನನಗೆ ಮದುವೆಯಾಗಿಲ್ಲ, ಮಕ್ಕಳಿಲ್ಲ. ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿಯುತ್ತಿದ್ದೇನೆ. ಹಾಗೆ ಮಾಡಿದರೆ ನಾವು ಕೆಟ್ಟವರಾದೆವಾ? ನಾವು ಕೆಲಸ ಮಾಡುತ್ತಿದ್ದೇವೆ, ಬೇರೆಯವರ ಜೊತೆ ಮಲಗುವುದಲ್ಲ. ಅದಕ್ಕಾಗಿಯೇ ಇಷ್ಟು ವರ್ಷಗಳಿಂದ ಈ ಕ್ಷೇತ್ರದಲ್ಲಿ ಉಳಿದುಕೊಂಡಿದ್ದೇನೆ.

ನನ್ನ ಒಂದು ನಕಲಿ ವಿಡಿಯೋ ಬಂದಿತ್ತು. ಆದರೆ ಅದರಲ್ಲಿ ಇದ್ದಿದ್ದು ನಾನಲ್ಲ. ಹಾಗೆಯೇ ನನ್ನ ಮಾಜಿ ಪ್ರಿಯಕರನ ಜೊತೆಗಿನ ಫೋಟೋ ಇಟ್ಟುಕೊಂಡು 'ಇವಳು ವೇಶ್ಯೆ' ಎಂದು ಈಗಲೂ ಕಮೆಂಟ್ ಮಾಡುತ್ತಾರೆ. ಒಮ್ಮೆ ಎಲ್ಲರಿಗೂ ಗೊತ್ತಿರುವ ಒಬ್ಬ ನಟ, ನನ್ನ ಒಳ್ಳೆಯ ಸ್ನೇಹಿತ, ಶರ್ಟ್ ಇಲ್ಲದ ಫೋಟೋ ಕಳುಹಿಸಿ, ನನಗೂ ಕಳುಹಿಸಲು ಹೇಳಿದ. ನಾನು ಆಸಕ್ತಿ ಇಲ್ಲವೆಂದು ಹೇಳಿದೆ. ಇನ್ನೊಮ್ಮೆ ಸಂಗೀತ ಕ್ಷೇತ್ರದ ಪ್ರಮುಖರೊಬ್ಬರು, ನಾನು ಅವರ ಜೊತೆ ಮಲಗಬೇಕೆಂದು ಕೇಳಿದರು. ನಾನು ಆಗುವುದಿಲ್ಲವೆಂದು ಹೇಳಿದೆ. ಈಗಲೂ ಶೋ ಕೋ-ಆರ್ಡಿನೇಟರ್‌ಗಳು ಇಂತಹ ಬೇಡಿಕೆಗಳನ್ನು ಇಡುತ್ತಾರೆ. ಇದೇ ಪ್ರಪಂಚ. ನನಗೆ ಹೀಗಾದರೆ, ಇನ್ನು ಬೇರೆಯವರ ಕಥೆ ಏನಾಗಿರಬೇಡ ಎಂದು ನಾನು ಯೋಚಿಸುತ್ತೇನೆ.